ಪಿಯು ನಂತರ ಯಾವ ಪದವಿ ಸೂಕ್ತ ? 1. ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಮುಂದೆ, ಎಂಬಿಬಿಸ್ ಅಥವಾ ಬಿ.ಎಸ್ಸಿ ಮಾಡಲು ಆಸಕ್ತಿ ಇದೆ. ಆದರೆ, ಯಾವುದೇ ತಯಾರಿ ನಡೆಸಿರುವುದಿಲ್ಲ. ಈ ಕಡಿಮೆ ಅವಧಿಯಲ್ಲಿ ನಾನು ಯಾವ ರೀತಿ ಓದಬೇಕು? ಈ ಪದವಿಗಳಲ್ಲಿ ಯಾವುದು ಉತ್ತಮ ಎಂದು ನನಗೆ ತಿಳಿಯುತ್ತಿಲ್ಲ. ಮಾರ್ಗದರ್ಶನ ಮಾಡಿ. ಸಂತೋಷ್ ಜಿ, ಕಾರಿಗನೂರು, ಹೊಸಪೇಟೆ. ನಿಮಗೆ ವೈದ್ಯಕೀಯ ವೃತ್ತಿಯಲ್ಲಿ ಆಸಕ್ತಿಯಿದ್ದರೆ ಈಗಲೂ ಕಾಲ ಮಿಂಚಿಲ್ಲ. ಈ ವೃತ್ತಿಯಲ್ಲಿ ಯಶಸ್ವಿಯಾಗಲು ಸೇವಾ ಮನೋಭಾವ, ಜ್ಞಾಪಕ ಶಕ್ತಿ, ಪ್ರಾಮಾಣಿಕತೆ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಅತ್ಯಗತ್ಯ. ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಮಗ್ರ ಮತ್ತು ಆಳವಾದ ಓದುವಿಕೆ, ಏಕಾಗ್ರತೆ, ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಹಿಂದಿನ ವರ್ಷಗಳ ರ‍್ಯಾಂಕ್ ಮತ್ತು ಅಂಕಗಳ ಆಧಾರದ ಮೇಲೆ, ನಾನಾ ಕಾಲೇಜುಗಳಲ್ಲಿ ಸೀಟ್ ಲಭಿಸಿದ ಮಾಹಿತಿಯನ್ನು ಪರಿಶೀಲಿಸಿ, ನಿಮ್ಮ ಗುರಿ ಮತ್ತು ಕಾರ್ಯತಂತ್ರವನ್ನು ನಿರ್ಧರಿಸಬೇಕು. ನಿಮಗಿರುವ ಎರಡು ಆಯ್ಕೆಗಳಲ್ಲಿ, ಮೊದಲ ಆದ್ಯತೆ ಎಂಬಿಬಿಎಸ್ ಆಗಿರಲಿ. ಪರಿಣಾಮಕಾರಿ ಓದುವಿಕೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: ://../?=3PzmKRaJHmk 2. ನಾನು ಬಿಎ ಅಂತಿಮ ವರ್ಷದ ವಿದ್ಯಾರ್ಥಿ. ಬಿಎ ಮುಗಿದ ನಂತರ ಅರ್ಥಶಾಸ್ತ್ರದಲ್ಲಿ ಎಂಎ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ಹೀಗೆ ಮಾಡಿದರೆ ಉಪನ್ಯಾಸಕರಾಗಬಹುದೇ? ಅಥವಾ, ಬೇರೆ ಆಯ್ಕೆಗಳಿವೆಯೇ ಹೆಸರು, ಊರು ತಿಳಿಸಿಲ್ಲ. ಎಂಎ ನಂತರ ಬಿ.ಇಡಿ ಮಾಡಿ, ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಪ್ರೌಢಶಾಲೆಗಳಲ್ಲಿ/ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಬಹುದು. ಶಿಕ್ಷಕ ವೃತ್ತಿಯನ್ನು ಅನುಸರಿಸಲು ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. ಅರ್ಥಶಾಸ್ತ್ರದಲ್ಲಿ ಎಂಎ ಮಾಡಿದ ನಂತರ ಬ್ಯಾಂಕಿಂಗ್, ಹಣಕಾಸು, ಸಂಶೋಧನೆ ಮತ್ತು ವಿಶ್ಲೇಷಣೆ, ಬಂಡವಾಳ ಹೂಡಿಕೆ, ಮಾಧ್ಯಮ, ವಿಷಯಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿಯೂ ಅವಕಾಶಗಳಿವೆ ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದ ಇಲಾಖೆಗಳಲ್ಲಿಯೂ ವೃತ್ತಿಯನ್ನು ಅರಸಬಹುದು. 3 . ನಾನು 2021ರಲ್ಲಿ ಎಂ.ಕಾಂ ಪದವಿ ‍ಪೂರ್ಣಗೊಳಿಸಿದ್ದೆನೆ. ಪಿಡಿಒ ಅಧಿಕಾರಿಯಾಗಿ ಸೇವೆ ಮಾಡಬೇಕೆಂದು ಇಚ್ಛಿಸುತ್ತೇನೆ. ಈಗಾಗಲೇ ತಯಾರಿ ಪ್ರಾರಂಭಿಸಿದ್ದೇನೆ. ನನ್ನ ತಂದೆ-ತಾಯಿಯರು ಸ್ಪರ್ಧಾತ್ಮಕ ಪರೀಕ್ಷೆಯ ಆಸೆಯನ್ನು ಬಿಟ್ಟು 1 ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿ, ಮದುವೆಯಾಗು ಎಂದು ಸಲಹೆ ನೀಡುತ್ತಿದ್ದಾರೆ. ನಾನು ಹೇಗೆ ಮುಂದುವರಿದರೆ ಉತ್ತಮ? ಬಿ.ಛಾಯ, ಶಿವಮೊಗ್ಗ. ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಕೌಶಲಗಳನ್ನು ಗಮನಿಸಿ ಯಾವ ವೃತ್ತಿ ನಿಮಗೆ ಸರಿಹೊಂದುತ್ತದೆ ಎಂದು ಇನ್ನೊಮ್ಮೆ ಪರಿಶೀಲಿಸಿ. ವೃತ್ತಿಯ ಆಯ್ಕೆ, ವೈಯಕ್ತಿಕ ಮತ್ತು ವೃತ್ತಿಪರ ಬದುಕಿನ ಧ್ಯೇಯಗಳು ಮತ್ತು ನಿಮ್ಮ ಸನ್ನದ್ಧತೆಯ ಬಗ್ಗೆ ಮನೆಯವರಿಗೆ ಮನವರಿಕೆ ಮಾಡಿ, ಒಮ್ಮತದ ನಿರ್ಧಾರಕ್ಕೆ ಬರಲು ಪ್ರಯತ್ನಿಸಿ. ಹಾಗೂ, ಶಿಕ್ಷಕಿಯಾಗಬೇಕಾದರೆ ಬಿ.ಇಡಿ ಕೋರ್ಸ್ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆನ್ನುವುದು ನಿಮ್ಮ ಗಮನದಲ್ಲಿರಲಿ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: ://../@ 4. ನಾನು ಬಿಕಾಂ 2ನೇ ವರ್ಷದ ವಿದ್ಯಾರ್ಥಿ. ನನಗೆ ಎಂಬಿಎ ಮಾಡುವ ಆಸೆಯಿದೆ. ಆದರೆ, ಮನೆಯಲ್ಲಿ ಅದಕ್ಕೆ ಭವಿಷ್ಯವಿಲ್ಲ; ಸಿಇಟಿ ಓದು ಅಂತಿದ್ದಾರೆ. ಮಾರ್ಗದರ್ಶನ ಮಾಡಿ‌. ಊರು, ಹೆಸರು ತಿಳಿಸಿಲ್ಲ. ಉದ್ಯಮದ ಜವಾಬ್ದಾರಿಗಳನ್ನು ನಿರ್ವಹಿಸಲು ಸಮಗ್ರವಾದ ತಿಳುವಳಿಕೆಯನ್ನು-ಮಾರುಕಟ್ಟೆಯ ನಿರ್ವಹಣೆ, ಹಣಕಾಸಿನ ಆಡಳಿತ, ಆಯವ್ಯಯ ಶಾಸ್ತ್ರ, ಬಂಡವಾಳ ಪೂರೈಕೆ, ಉತ್ಪಾದನೆ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆ-ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಈ ಕೋರ್ಸಿನಲ್ಲಿ ಕಲಿಸುವ ಅನೇಕ ತತ್ವಗಳು, ಸೂತ್ರಗಳು ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನದಲ್ಲೂ ಉಪಯುಕ್ತ. ಹಾಗಾಗಿ, ಎಂಬಿಎ ಪದವೀಧರರಿಗೆ ಖಾಸಗಿ ಕ್ಷೇತ್ರದಲ್ಲಿ ಬೇಡಿಕೆಯಿದೆ. ಎಂಬಿಎ ನಂತರ ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್‌ಶ್ಯೂರೆನ್ಸ್‌, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ವಂತ ಉದ್ಯಮವನ್ನು ಆರಂಭಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: ://../?=WHZTFCmu3zg ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.