ಶಿಕ್ಷಣ: ಅನುಭವದ ಕಲಿಕೆಯ ವಿಜ್ಞಾನ ಮೇಳ ಬೇರೆ ಬೇರೆ ಬಣ್ಣಗಳು ಮಿಶ್ರಣವಾದಾಗ ಅವುಗಳನ್ನು ಪ್ರತ್ಯೇಕಗೊಳಿಸುವುದು ಹೇಗೆ? ಬಾಳೆಹಣ್ಣಿನಲ್ಲಿ ಡಿಎನ್‌ಎ ಕಂಡು ಹಿಡಿಯುವುದು ಹೇಗೆ? ಆಫ್ಟಿಕಲ್‌ ಫೈಬರ್‌ ಮೂಲಕ ಸಾವಿರಾರು ಸಿಗ್ನಲ್‌ಗಳನ್ನು ಕಳುಹಿಸಬಹುದಾ, ಶೆಲ್‌ ಮೂಲಕ ಮೋಟಾರು ಚಾಲನೆ ಮಾಡಬಹುದಾ... ಹೀಗೆ ಹಲವು ವೈಜ್ಞಾನಿಕ ವಿಷಯಗಳನ್ನು ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ವಿವರಿಸುತ್ತಿದ್ದರೆ, ವಿದ್ಯಾರ್ಥಿಗಳು ಕುತೂಹಲದಿಂದ ಆಲಿಸಿದರು. ಅಷ್ಟೇ ಅಲ್ಲದೆ ಸ್ವಲ್ಪ ಸಮಯದ ಬಳಿಕ ಸ್ವತಃ ಪ್ರಯೋಗಗಳಲ್ಲಿ ತೊಡಗಿಕೊಳ್ಳುತ್ತಾ, ಸುತ್ತಲಿದ್ದವರನ್ನೆಲ್ಲ ನಿಬ್ಬೆರಗಾಗಿಸಿದರು. ಇದು ಕಂಡು ಬಂದಿದ್ದು ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾಲಯವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿಯೇ ಮೊದಲ ಬಾರಿಗೆ ಆಯೋಜಿಸಿದ್ದ ಮೂರು ದಿನಗಳ ವಿಜ್ಞಾನ ಮೇಳದಲ್ಲಿ. ಗಣಿತ, ಭೌತವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಪ್ರಯೋಗಗಳಿಗೆ ವಿಜ್ಞಾನ ಮೇಳವು ವೇದಿಕೆಯಾಯಿತು. ಬೆಂಗಳೂರು ದಕ್ಷಿಣ ಜಿಲ್ಲೆಯ 100 ಸರ್ಕಾರಿ ಶಾಲೆಗಳ 2,500ಕ್ಕೂ ಅಧಿಕ ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳು, ಪ್ರಯೋಗಗಳಲ್ಲಿ ತೊಡಗುವ ಮೂಲಕ ವೈಜ್ಞಾನಿಕ ಕ್ಷೇತ್ರದಲ್ಲಿನ ಬೆಳವಣಿಗೆಗಳ ಬಗ್ಗೆ ಕುತೂಹಲದಿಂದ ತಿಳಿದುಕೊಂಡರು. ಹತ್ತೊಂಬತ್ತು ಪ್ರಯೋಗಗಳು ಶಾಲಾ ಪಠ್ಯಕ್ಕೆ ಪೂರಕವಾದ ಒಟ್ಟು 19 ಪ್ರಯೋಗಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕೋವಿಡ್‌ನಿಂದಾಗಿ 2–3 ವರ್ಷಗಳಿಂದ ಮಕ್ಕಳು ಪ್ರಯೋಗಾಲಯಗಳತ್ತ ಬರುವುದೇ ಕಡಿಮೆಯಾಗಿತ್ತು. ಕೋವಿಡ್‌ ನಂತರದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಮಕ್ಕಳನ್ನು ಪ್ರಯೋಗಾಲಯಗಳತ್ತ ಆಕರ್ಷಿಸಿ, ಪ್ರಾಯೋಗಿಕ ಚಟುವಟಿಕೆಗಳು ಹಾಗೂ ಪ್ರಯೋಗ ನಡೆಸಲು ಬೇಕಾದ ಕೌಶಲಗಳ ಬಗ್ಗೆ ಮನವರಿಕೆ ಮಾಡಿಕೊಡಲು ಈ ಮೇಳ ವೇದಿಕೆಯಾಯಿತು. ನಿತ್ಯ ಜೀವನದಲ್ಲಿ ಯೋಗ, ಧ್ಯಾನದ ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ಮೇಳದಲ್ಲಿ ಯೋಗಕ್ಕೂ ಅವಕಾಶ ಮಾಡಿಕೊಡಲಾಗಿತ್ತು. ಮನಸ್ಸು ಮತ್ತು ದೇಹ ಸಮತೋಲನದಿಂದ ಇರಬೇಕಾದರೆ ಯೋಗದ ಪಾತ್ರ ಎಷ್ಟು ಪ್ರಮುಖ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ವಿಜ್ಞಾನದ ಬೆಳವಣಿಗೆ, ವಿಜ್ಞಾನ ಕ್ಷೇತ್ರಕ್ಕೆ ಭಾರತೀಯರ ಕೊಡುಗೆ, ನೊಬೆಲ್‌ ಪ್ರಶಸ್ತಿಗಳ ಇತಿಹಾಸ, ಕೈಗಾರಿಕಾ ಕ್ರಾಂತಿ, ಆಧುನಿಕ ವಿಜ್ಞಾನದ ಪ್ರಕಾರಗಳು ಕುರಿತು ವಿಡಿಯೊ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಪ್ರದರ್ಶನದ ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ಪಡೆದುಕೊಂಡರು. ಸಾಮಾನ್ಯ ಜ್ಞಾನ ವಿಸ್ತರಿಸಿದ ಮೇಳ ಮೇಳವು ವಿಜ್ಞಾನ ವಿಷಯದ ಪ್ರಾಯೋಗಿಕ ಕಲಿಕೆಯ ಜೊತೆಗೆ ಸಾಮಾನ್ಯ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಯಿತು. ರಸಪ್ರಶ್ನೆ ಸ್ಪರ್ಧೆಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಉತ್ತೇಜನ ನೀಡಿತ್ತು. ‘ರಸಪ್ರಶ್ನೆ ಸ್ಪರ್ಧೆಯನ್ನು ಆನಂದಿಸಿದ್ದೇನೆ. ಮುಂದಿನ ಓದಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮೇಳದಲ್ಲಿ ಪಡೆದುಕೊಂಡಿದ್ದೇನೆ’ ಎಂದು ಆಡುಗೋಡಿಯ ಕರ್ನಾಟಕ ಪಬ್ಲಿಕ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪಿ.ನಯನಾ ತನ್ನ ಅನುಭವ ಹಂಚಿಕೊಂಡರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ಮಾಡಿದರೆ, ಅವರಿಗೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇವೆ. ಪ್ರತಿ ವರ್ಷವೂ ಈ ರೀತಿಯ ಮೇಳ ಆಯೋಜಿಸುವ ಉದ್ದೇಶವಿದೆ ಎನ್ನುತ್ತಾರೆ ಮೇಳದ ಉಸ್ತುವಾರಿಯಾಗಿದ್ದ ಡಾ.ಎಸ್‌.ರಾಧಾಕೃಷ್ಣ. ಗ್ರಾಮೀಣ ಭಾಗದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ಇರಬಹುದಾದ ಕೊರತೆಗಳನ್ನು ಹೋಗಲಾಡಿಸಿ, ಸ್ವಂತ ಅನುಭವಗಳಿಂದ ಕಲಿಯಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಈ ಮೇಳ ಆಯೋಜಿಸಲಾಗಿತ್ತು. ಜೊತೆಗೆ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಜಾಗೃತಗೊಳಿಸುವುದು, ಪ್ರಾಯೋಗಿಕ ಕಲಿಕೆ, ಉನ್ನತ ಶಿಕ್ಷಣ ಹಾಗೂ ಸಾಧನೆಗಳತ್ತ ಪ್ರೇರಣೆ ನೀಡುವುದು ಮೇಳದ ಉದ್ದೇಶವಾಗಿತ್ತು. ನಮ್ಮ ಈ ಎಲ್ಲ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ ಎನ್ನುತ್ತಾರೆ ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ. ವಿಶ್ವವಿದ್ಯಾಲಯದ ಕುಲಪತಿ ಜೆ.ಸೂರ್ಯಪ್ರಸಾದ್‌, ಕುಲಸಚಿವ ಕೆ.ಎಸ್‌.ಶ್ರೀಧರ್‌ ಸೇರಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಣ ಇಲಾಖೆಯ ಸಹಕಾರದಿಂದ ಮೇಳ ಯಶಸ್ವಿಯಾಗಿ ನಡೆಯಲು ಸಾಧ್ಯವಾಯಿತು ಎಂದು ದೊರೆಸ್ವಾಮಿ ಸಂತಸ ವ್ಯಕ್ತಪಡಿಸಿದರು. ವಿಜ್ಞಾನ ಮೇಳವು ಸೃಜನಾತ್ಮಕ ಮತ್ತು ಮಾಹಿತಿಯುಕ್ತವಾಗಿತ್ತು. ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಲು ಮೇಳವು ಸ್ಫೂರ್ತಿ ನೀಡಿದೆ. ವಿದ್ಯಾರ್ಥಿಗಳು ಹೊಸ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಅನುಪಮಾ, ಸರೋಜಾ, ಶಿಕ್ಷಕರು, ಕರ್ನಾಟಕ ಪಬ್ಲಿಕ್‌ ಶಾಲೆ. ಆಡುಗೋಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಬಗ್ಗೆ ಕುತೂಹಲ ಮೂಡಿಸುವಲ್ಲಿ ವಿಜ್ಞಾನ ಮೇಳವು ಯಶಸ್ವಿಯಾಗಿದೆ. ಕಮಲಾ, ಮುಖ್ಯಶಿಕ್ಷಕಿ, ಗೊಟ್ಟಿಗೆರೆ ಸರ್ಕಾರಿ ಶಾಲೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.