ಪ್ರಚಲಿತ: ರಾಷ್ಟ್ರೀಯ ವಿದ್ಯಮಾನಗಳು ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಪ್ರಬಂಧ ರಚಿಸುವ ಪ್ರಶ್ನೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಬಂಧಕ್ಕೆ ಉಪಯುಕ್ತವಾಗುವ ಪ್ರಚಲಿತ ವಿದ್ಯಮಾನವನ್ನು ಇಲ್ಲಿ ಕೊಡಲಾಗಿದೆ. 1. ನೂರು ರೂಪಾಯಿ ಮೌಲ್ಯದ ನಾಣ್ಯದ ಬಿಡುಗಡೆ : * ಇತ್ತೀಚಿಗೆ ಪ್ರಧಾನಮಂತ್ರಿಯವರ ತಿಂಗಳ ಬಾನುಲಿ ಕಾರ್ಯಕ್ರಮ ’ಮನ್ ಕಿ ಬಾತ್’ 100 ಸಂಚಿಕೆ ಪೂರ್ಣಗೊಂಡಿದ್ದು, ಇದರ ನೆನಪಿಗಾಗಿ ₹100 ಮುಖ ಬೆಲೆಯ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ನಾಣ್ಯದ ಪ್ರಮುಖ ಅಂಶಗಳು : * ಈ ನಾಣ್ಯದಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನವಿರುತ್ತದೆ. ನಾಣ್ಯದಲ್ಲಿ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೆ ಎಂದು ಬರೆಯಲಾಗುತ್ತದೆ. * ಇದಲ್ಲದೆ ನಾಣ್ಯದ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಭಾರತ ಎಂದು ಉಲ್ಲೇಖಿಸಲಾಗುತ್ತದೆ ಹಾಗೂ ಬಲಭಾಗದಲ್ಲಿ ಆಂಗ್ಲ ಭಾಷೆಯಲ್ಲಿ ಇಂಡಿಯಾ ಎಂದು ಉಲ್ಲೇಖಿಸಲಾಗುತ್ತದೆ. * ನಾಣ್ಯದ ಇನ್ನೊಂದು ಮುಖದಲ್ಲಿ ಮನ್ ಕಿ ಬಾತ್ 100 ನೇ ಸಂಚಿಕೆಯ ಲಾಂಛನ ಕೆತ್ತಲಾಗುತ್ತದೆ ಮತ್ತು ಲಾಂಛನದ ಅಡಿಯಲ್ಲಿ ಒಂದು ಸಣ್ಣ ಮೈಕ್ರೊಫೋನ್ ಮತ್ತು ಶಬ್ದದ ತರಂಗಗಳ ಚಿತ್ರ ಕೆತ್ತಲಾಗುತ್ತದೆ. * ಮೈಕ್ರೋ ಫೋನಿನ ಚಿತ್ರದ ಮೇಲೆ ಮನ್ ಕಿ ಬಾತ್ 100 ಎಂದು ದೇವನಾಗರಿ ಲಿಪಿಯಲ್ಲಿ ಉಲ್ಲೇಖಿಸಿದರೆ ಕೆಳಭಾಗದಲ್ಲಿ ಆಂಗ್ಲ ಭಾಷೆಯಲ್ಲಿ ಮನ್ ಕಿ ಬಾತ್ 100 ಎಂದು ಕೆತ್ತಲಾಗುತ್ತದೆ. 2. ಬಿಸಿಗಾಳಿಯ ಮುನ್ಸೂಚನೆ *ಇತ್ತೀಚಿಗೆ ಭಾರತೀಯ ಹವಾಮಾನ ಇಲಾಖೆ ಕೆಲ ಪ್ರದೇಶಗಳಲ್ಲಿ ಬಿಸಿಗಾಳಿಯ ಬಗ್ಗೆ ಎಚ್ಚರಿಕೆ ಮುನ್ಸೂಚನೆ ನೀಡಿದೆ. * ವಿಪರೀತ ಶಾಖದ ಅಲೆಗಳು ಅಥವಾ ಬಿಸಿಗಾಳಿಯು ವಯಸ್ಸಾದವರ ಮೇಲೆ, ಮಕ್ಕಳ ಮೇಲೆ ಮತ್ತು ಗರ್ಭಿಣಿಯರ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆಯೆಂದು ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾರ್ಗಸೂಚಿಗಳು : * ಪ್ರತಿದಿನ ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರನ್ನು ಕುಡಿಯಲು ಶಿಫಾರಸ್ಸು ಮಾಡಲಾಗಿದ್ದು, ಉಪ್ಪು ಸಹಿತ ನೀರು, ಉಪ್ಪಿನೊಂದಿಗೆ ಎಳನೀರು ಹಾಗೂ ಉಪ್ಪಿನೊಂದಿಗೆ ನಿಂಬೆ ಹಣ್ಣಿನ ರಸವನ್ನು ಕುಡಿಯುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. * ಗಾಳಿ ಮತ್ತು ಶಾಖದ ಅಲೆಗಳು ಹೆಚ್ಚಾಗಿ ಬೀಸ ಬಹುದಾದ ಸ್ಥಳಗಳಲ್ಲಿ ಪ್ರೋಟೀನ್ ಬಳಕೆ ತಗ್ಗಿಸುವಂತೆ ಸೂಚನೆಗಳನ್ನು ನೀಡಿದ್ದು, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವಂತೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. 3. ’ಇಂಡಿಯಾ ಸ್ಟೀಲ್-2023’ * ಇತ್ತೀಚೆಗೆ ಮುಂಬೈನ, ಮುಂಬೈ ಪ್ರದರ್ಶನ ಕೇಂದ್ರದಲ್ಲಿ ‘ಇಂಡಿಯಾ ಸ್ಟೀಲ್‌–2023’ ಅಂತರರಾಷ್ಟ್ರೀಯ ಪ್ರದರ್ಶನ ಆಯೋಜಿಸಲಾಗಿತ್ತು. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಪ್ರದರ್ಶನವನ್ನು ಉದ್ಘಾಟಿಸಿದರು. * ಈ ಅಂತರರಾಷ್ಟ್ರೀಯ ವಸ್ತು ಪ್ರದರ್ಶನವನ್ನು ಕೇಂದ್ರ ಉಕ್ಕಿನ ಸಚಿವಾಲಯ ಹಾಗೂ ಕೇಂದ್ರ ವಾಣಿಜ್ಯ ಇಲಾಖೆ ಮತ್ತು ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ ಜಂಟಿಯಾಗಿ ಆಯೋಜಿಸಿತ್ತು. * ಈ ಅಂತರರಾಷ್ಟ್ರೀಯ ವಸ್ತುಪ್ರದರ್ಶನದಲ್ಲಿ, ಉಕ್ಕಿನ ಉದ್ದಿಮೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಕೈಗಾರಿಕೋದ್ಯಮಿ ಗಳು, ನೀತಿ ನಿರೂಪಕರು, ಪರಿಣಿತರು ಮತ್ತು ವಿವಿಧ ಸಹ ಭಾಗಿದಾರರು ಭಾಗವಹಿಸಿದ್ದರು. ಉಕ್ಕಿನ ಉದ್ದಿಮೆಯಲ್ಲಿ ಇತ್ತೀಚಿನ ಬೆಳವಣಿಗೆಗಳು, ಉದ್ದಿಮೆ ಎದುರಿಸುತ್ತಿರುವ ಸವಾಲುಗಳು ಮತ್ತು ಉದ್ದಿಮೆಯ ಮುಂದಿರುವ ಅವಕಾಶಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಲಾಯಿತು. * ಈ ವಸ್ತುಪ್ರದರ್ಶನದಲ್ಲಿ ಆಧುನಿಕ ತಂತ್ರಜ್ಞಾನ, ಆಧುನಿಕ ಉಕ್ಕು ಉತ್ಪನ್ನಗಳು ಮತ್ತು ಉಕ್ಕು ಉದ್ದಿಮೆಯಲ್ಲಿ ಅಳವಡಿಸಿಕೊಂಡಿರುವ ಆಧುನಿಕ ಪರಿಹಾರಗಳನ್ನು ಪ್ರದರ್ಶಿಸಲಾಗುತ್ತದೆ. ವಿಶೇಷ ಸೂಚನೆ : ವರ್ಷದಲ್ಲಿ ಎರಡು ಬಾರಿ ಈ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. 4. ಭೂ ಶಾಖದ ಶಕ್ತಿ ಉತ್ಪಾದನಾ ಕೇಂದ್ರ : * ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ಮತ್ತೊಂದು ದಾಪುಗಾಲಿಟ್ಟಿದ್ದು, ಇತ್ತೀಚೆಗೆ ಅರುಣಾಚಲಪ್ರದೇಶದಲ್ಲಿ ಭೂ ಶಾಖದ ಶಕ್ತಿ ಉತ್ಪಾದನಾ ಕೇಂದ್ರಕ್ಕೆ( ) ಚಾಲನೆಯನ್ನು ನೀಡಿದೆ. * ಜಗತ್ತಿನಾದ್ಯಂತ ಐಸ್‌ಲ್ಯಾಂಡ್, ಎಲ್ ಸಾಲ್ವಡಾರ್, ನ್ಯೂಜಿಲೆಂಡ್, ಕೀನ್ಯಾ ಮತ್ತು ಪಿಲಿಪ್ಪೀನ್ಸ್‌ ರಾಷ್ಟ್ರಗಳಲ್ಲಿ ಭೂ ಶಾಖದ ಶಕ್ತಿ ಉತ್ಪಾದನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ನವೀಕರಿಸಬಹುದಾದ ಇಂಧನ ಮೂಲವಾಗಿದೆ. * ಇದರಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಗಟ್ಟಬಹುದು ಹಾಗೂ ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಋಣಾತ್ಮಕ ಪರಿಣಾಮಗಳನ್ನು ತಡೆಗಟ್ಟಬಹುದು. * ಭೂ ಶಾಖದ ಶಕ್ತಿ ಉತ್ಪಾದನಾ ಕೇಂದ್ರದ ಕಾಮಗಾರಿಯನ್ನು ಉದ್ಘಾಟಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಚೀನಾ ಇದಕ್ಕೆ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿತು. * ಲಡಾಖ್‌ನ ಪುಗ ಕಣಿವೆಯಲ್ಲಿನ ಭೂ ಶಾಖದ ಶಕ್ತಿ ಉತ್ಪಾದನಾ ಕೇಂದ್ರದ ನಂತರ ಇದು ದೇಶದ ಎರಡನೇ ಭೂ ಶಾಖದ ಶಕ್ತಿ ಉತ್ಪಾದನಾ ಕೇಂದ್ರ ಸ್ಥಾಪನೆಯಾಗಿದೆ. * ಭಾರತ-ಚೀನಾ ಗಡಿ ರೇಖೆಗೆ ಹತ್ತಿರವಿರುವ ಪ್ರದೇಶದಲ್ಲಿ ಈ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ. * ನಾರ್ವೆ ರಾಷ್ಟ್ರದ ಸಹಕಾರವನ್ನು ಭಾರತ ಸರ್ಕಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ವಿಶೇಷ ಸೂಚನೆ : ಭೂ ಶಾಖದ ಶಕ್ತಿಕೇಂದ್ರಗಳ ಅನುಷ್ಠಾನದಲ್ಲಿ ನಾರ್ವೆ ಅತಿಹೆಚ್ಚಿನ ಅನುಭವ ಮತ್ತು ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿದೆ. 5. ಭಾರತೀಯ ಮೂಲದ ಶಿಕ್ಷಣತಜ್ಞ ನೀಲಿ ಬೆಂಡಪುಡಿ * ಭಾರತೀಯ ಮೂಲದ ಶಿಕ್ಷಣ ತಜ್ಞೆ ನೀಲಿ ಬೆಂಡಪುಡಿ ಅವರನ್ನು ಅಮೆರಿಕ ವಿಶ್ವವಿದ್ಯಾಲಯಗಳು ಸಂಘಟನೆಯ ಅಧ್ಯಕ್ಷರಾಗಿ ನೇಮಿಸಲಾಗಿದೆ. ಭಾರತ ಹಾಗೂ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಭಾಗಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ಥಾಪಿಸಿರುವ ಈ ಸಂಘಟನೆಗೆ ನೀಲಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. * ಭಾರತ ಮತ್ತು ಅಮೆರಿಕ ಸರ್ಕಾರಗಳು ಅಭಿವೃದ್ಧಿಪಡಿಸುತ್ತಿರುವ ತಂತ್ರಜ್ಞಾನ ಮತ್ತು ಪ್ರಮುಖ ತಂತ್ರಜ್ಞಾನಗಳ ವಲಯದಲ್ಲಿ ತಾಂತ್ರಿಕ ಸಹಕಾರ ಮತ್ತು ಕೈಗಾರಿಕಾ ಸಹಕಾರವನ್ನು ಹೆಚ್ಚಿಸಲು ಅಮೆರಿಕ ಸರ್ಕಾರ ಟಾಸ್ಕ್ ಫೋರ್ಸ್(ಕಾರ್ಯಪಡೆ) ರಚಿಸಿತ್ತು. ಈ ಕಾರ್ಯಪಡೆಯನ್ನು ಅಮೆರಿಕದ ವಿಶ್ವವಿದ್ಯಾಲಯಗಳ ಸಂಘಟನೆಯೆಂದು ಕರೆಯಲಾಗುತ್ತದೆ. * ನೀಲಿ ಬೆಂಡ ಪುಡಿ ಅವರು ಪ್ರಸ್ತುತ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳಿಗಿಂತ ಹೆಚ್ಚಿನ ಅನುಭವ ಹೊಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.