ಭಾರತದ ವಿಜ್ಞಾನ ಸಂಶೋಧನೆಗಳ ತವರುಮನೆ ಟಿಐಎಫ್‌ಆರ್‌ ಆರ್.ಬಿ.ಗುರುಬಸವರಾಜ ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಪ್ರಬಂಧ ರಚಿಸುವ ಪ್ರಶ್ನೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಬಂಧಕ್ಕೆ ಉಪಯುಕ್ತವಾಗುವ ಪ್ರಚಲಿತ ವಿದ್ಯಮಾನವನ್ನು ಇಲ್ಲಿ ಕೊಡಲಾಗಿದೆ. ಆಸ್ಟ್ರೋಸ್ಯಾಟ್-ಇದು ಏಕಕಾಲದಲ್ಲಿ ಒಂದೇ ಉಪಗ್ರಹದೊಂದಿಗೆ ವಿವಿಧ ಖಗೋಳ ವಸ್ತುಗಳ ಬಹು ತರಂಗಾಂತರದ ಆಕಾಶಕಾಯಗಳನ್ನು ವೀಕ್ಷಿಸಲು ರೂಪುಗೊಂಡ ಭಾರತೀಯ ಖಗೋಳಶಾಸ್ತ್ರ ಮಿಷನ್ ಆಗಿದೆ. ಇಂತಹ ಮಹತ್ತರವಾದ ಮಿಷನ್ ತಯಾರಿಸಿದ್ದು ಟಿಐಎಫ್‌ಆರ್‌ (ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್) ಸಂಸ್ಥೆ. ಇದು ಸಂಪೂರ್ಣವಾಗಿ ವೈಜ್ಞಾನಿಕ ಸಂಶೋಧನೆಗಳಿಗಾಗಿ ಮೀಸಲಾದ ಸಂಸ್ಥೆಯಾಗಿದೆ. ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ವಿಭಾಗಗಳ ಸಂಶೋಧನೆ ನಡೆಸುತ್ತದೆ. ಟಿಐಎಫ್‌ಆರ್ ಸಾಗಿದ ಹಾದಿ.. ಭಾರತ ಸರ್ಕಾರದ ಪರಮಾಣು ಇಂಧನ ಇಲಾಖೆಯ ಅಡಿಯಲ್ಲಿ ಸ್ಥಾಪಿತವಾದ ಸಂಶೋಧನಾ ಕೇಂದ್ರವೇ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌– ಟಿಐಎಫ್‌ಆರ್‌. ಇದು ವಿಜ್ಞಾನದ ವಿವಿಧ ಕ್ಷೇತ್ರಗಳ ಸಂಶೋಧನೆಗಳ ಜೊತೆಗೆ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳನ್ನು ನೀಡುವ ಡೀಮ್ಡ್ ವಿಶ್ವವಿದ್ಯಾಲಯವೂ ಆಗಿದೆ. ಡಾ. ಹೋಮಿ ಜಹಾಂಗೀರ್ ಭಾಭಾ ಅವರ ಕಲ್ಪನೆಯ ಕೂಸಾದ ಈ ಸಂಶೋಧನಾ ಸಂಸ್ಥೆಯನ್ನು 1945ರಲ್ಲಿ ಸರ್.ದೊರಾಬ್ಜಿ ಟಾಟಾ ಟ್ರಸ್ಟ್‌ನ ಬೆಂಬಲದೊಂದಿಗೆ ಸ್ಥಾಪಿಸಲಾಯಿತು. ಇದರ ಮುಖ್ಯ ಕ್ಯಾಂಪಸ್ ಮುಂಬೈನಲ್ಲಿದೆ. ಪುಣೆ, ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲೂ ಇದರ ಕೇಂದ್ರಗಳಿವೆ. ಸಂಸ್ಥೆಯು ಮೊದಲು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಕ್ಯಾಂಪಸ್‌ನಲ್ಲಿರುವ ಕಾಸ್ಮಿಕ್ ರೇ ಸಂಶೋಧನಾ ಘಟಕದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಅದೇ ವರ್ಷ ಅಕ್ಟೋಬರ್‌ನಲ್ಲಿ ಮುಂಬೈಗೆ ಸ್ಥಳಾಂತರಗೊಂಡಿತು. ಈ ಸಂಸ್ಥೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಕಂಪ್ಯೂಟರ್ ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣದಲ್ಲಿ ಮೂಲಭೂತ ಸಂಶೋಧನೆಗಳನ್ನು ನಡೆಸಲಾಗುತ್ತದೆ. 1955-56 ರಲ್ಲಿ ಭಾರತ ಸರ್ಕಾರ, ಬಾಂಬೆ ಸರ್ಕಾರ ಮತ್ತು ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ನಡುವಿನ ತ್ರಿಪಕ್ಷೀಯ ಒಪ್ಪಂದಿಂದ ಟಿಐಎಫ್‌ಆರ್‌ ಜಾರಿಗೆ ಬಂದಿದೆ. ತ್ರಿಪಕ್ಷೀಯ ಒಪ್ಪಂದವು ಭಾರತ ಸರ್ಕಾರದಿಂದ ವ್ಯಾಪಕವಾದ ಹಣಕಾಸಿನ ಬೆಂಬಲವನ್ನು ಮತ್ತು ಅದಕ್ಕೆ ಅನುಗುಣವಾಗಿ ಕೌನ್ಸಿಲ್ ಆಫ್ ಮ್ಯಾನೇಜ್‌ ಮೆಂಟ್‌ನಲ್ಲಿ ಹೆಚ್ಚಿನ ಶಾಶ್ವತ ಪ್ರತಿನಿಧಿಯನ್ನು ಕಲ್ಪಿಸಿದೆ. ಇಂದು ಸಂಸ್ಥೆಯ ವೆಚ್ಚದ ಶೇ 99ರಷ್ಟನ್ನು ಭಾರತ ಸರ್ಕಾರವು ಭರಿಸುತ್ತಿದೆ. ಪ್ರಸ್ತುತ ಸಂಸ್ಥೆಯು ಪರಮಾಣು ಇಂಧನ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ. ಸಂಸ್ಥೆಯ ವಿಸ್ತರಣೆ ಮೈಲಿಗಲ್ಲುಗಳು • 1960 ರ ದಶಕದಲ್ಲಿ ಆಣ್ವಿಕ ಜೀವಶಾಸ್ತ್ರ ಮತ್ತು ರೇಡಿಯೊ ಖಗೋಳವಿಜ್ಞಾನ ಪ್ರಾರಂಭ. • 1964 ರಲ್ಲಿ ಬೇಸಿಕ್ ಡೆಂಟಲ್ ರಿಸರ್ಚ್ ಗ್ರೂಪ್ ಪ್ರಾರಂಭ. • 1970 ರ ದಶಕದಲ್ಲಿ ಸೈದ್ಧಾಂತಿಕ ಆಸ್ಟ್ರೊಫಿಸಿಕ್ಸ್ ಮತ್ತು ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್‌ನ್ನು ವಿಸ್ತರಣೆ. ಪುಣೆಯಲ್ಲಿ ರೇಡಿಯೊ ಆಸ್ಟ್ರೊಫಿಸಿಕ್ಸ್ ರಾಷ್ಟ್ರೀಯ ಕೇಂದ್ರ, ಬೆಂಗಳೂರಿನಲ್ಲಿ ಅನ್ವಯಿಕ ಗಣಿತ ಕೇಂದ್ರ, ಬೆಂಗಳೂರಿನಲ್ಲಿ ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ ಪ್ರಾರಂಭ. • 2007 ರಲ್ಲಿ ಸೈದ್ಧಾಂತಿಕ ವಿಜ್ಞಾನಗಳ ಅಂತರರಾಷ್ಟ್ರೀಯ ಕೇಂದ್ರವೂ ಸ್ಥಾಪನೆ. • ಕೆಲಸದ ಹಂಚಿಕೆಗಾಗಿ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್, ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸಸ್ ಮತ್ತು ಸ್ಕೂಲ್ ಆಫ್ ಟೆಕ್ನಾಲಜಿ ಮತ್ತು ಕಂಪ್ಯೂಟರ್ ಸೈನ್ಸಸ್ ಶಾಖೆಗಳ ಆಯೋಜನೆ. • 2003 ರಲ್ಲಿ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನವನ್ನು ನೀಡಲಾಗಿದೆ. ಟಿಐಎಫ್‌ಆರ್‌ ವಿಷನ್ ವಿಶ್ವದ ಪ್ರಮುಖ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಾಗಿ, ಮಾನವ ಜ್ಞಾನದ ಬೆಳವಣಿಗೆಗೆ ಕೊಡುಗೆ ನೀಡುವುದು ಮತ್ತು ವೈಜ್ಞಾನಿಕ ಜ್ಞಾನದ ಪ್ರಸರಣಕ್ಕೆ ಕೊಡುಗೆ ನೀಡುವ ಭಾಗವಾಗಿ ಅತ್ಯುತ್ತಮ ವಿಜ್ಞಾನಿಗಳು ಮತ್ತು ಗಣಿತಜ್ಞರಿಗೆ ಶಿಕ್ಷಣ ಮತ್ತು ಪೋಷಣೆ ನೀಡುವುದು ಸಂಸ್ಥೆಯ ವಿಷನ್ ಆಗಿದೆ. ಟಿಐಎಫ್‌ಆರ್‌ ಮಿಷನ್: • ದೇಶದಲ್ಲಿ ಮೂಲ ವಿಜ್ಞಾನ, ಗಣಿತ, ಕಂಪ್ಯೂಟರ್ ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣದ ಕ್ಷೇತ್ರಗಳಲ್ಲಿ ಉನ್ನತ ಗುಣಮಟ್ಟದ ಸಂಶೋಧನೆ ನಡೆಸುವುದು. • ಸುಧಾರಿತ ವೈಜ್ಞಾನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಅತ್ಯಾಧುನಿಕ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸುವುದು. • ಮೂಲ ವಿಜ್ಞಾನದಿಂದ ಉದ್ಭವಿಸುವ ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸುವುದು ಮತ್ತು ಅವುಗಳ ಆರಂಭಿಕ ಬೆಳವಣಿಗೆಯನ್ನು ಹೆಚ್ಚಿಸಲು ಪ್ರತ್ಯೇಕ ಮತ್ತು ಸ್ವತಂತ್ರ ಸಂಸ್ಥೆಯಲ್ಲಿ ಕೆಲಸ ಮಾಡುವವರೆಗೆ ಆದ್ಯತೆ ನೀಡುವುದು. • ಮಹೋನ್ನತ ವಿಜ್ಞಾನಿಗಳು ಮತ್ತು ಗಣಿತಜ್ಞರನ್ನು ಒಟ್ಟುಗೂಡಿಸುವುದು ಮತ್ತು ಅವರಿಗೆ ವಿಶ್ವ ದರ್ಜೆಯ ಸಂಶೋಧನಾ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಭಿನ್ನ ಸಂಶೋಧನಾ ವಾತಾವರಣವನ್ನು ಸೃಷ್ಟಿಸುವುದು. • ದೇಶದ ಯುವ ವೈಜ್ಞಾನಿಕ ಪ್ರತಿಭೆಯನ್ನು ಪೋಷಿಸುವುದು ಮತ್ತು ತರಬೇತಿ ನೀಡುವುದು. ಎಲ್ಲಾ ಹಂತಗಳಲ್ಲಿ ವಿಜ್ಞಾನ ಪಠ್ಯಕ್ರಮದ ಅಭಿವೃದ್ಧಿಯಲ್ಲಿ ಭಾಗವಹಿಸುವ ಮೂಲಕ ದೇಶದ ವೈಜ್ಞಾನಿಕ ಅಭಿವೃದ್ಧಿಗೆ ಕೊಡುಗೆ ನೀಡುವುದು. • ವಿಜ್ಞಾನ ಮತ್ತು ಗಣಿತದ ಜ್ಞಾನವನ್ನು ಸಾಮಾನ್ಯ ಚಟುವಟಿಕೆಗಳ ಮೂಲಕ ಪ್ರಸಾರ ಮಾಡುವುದು ಮತ್ತು ಆ ಮೂಲಕ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ನಿರ್ಮಿಸುವುದು. ಡೀಮ್ಡ್ ವಿಶ್ವವಿದ್ಯಾಲಯ: • ಟಿಐಎಫ್‌ಆರ್‌ ವಿಶ್ವವಿದ್ಯಾಲಯವು ಪಿಎಚ್‌.ಡಿ ಮತ್ತು ಇಂಟಿಗ್ರೇಟೆಡ್ ಎಂ.ಎಸ್ಸಿ, ಪಿಎಚ್‌.ಡಿ ಭೌತಶಾಸ್ತ್ರ, ರಸಾಯನಶಾಸ್ತ್ರ ಜೀವಶಾಸ್ತ್ರ ಮತ್ತು ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನವನ್ನು ಒಳಗೊಂಡಿರುವ ನೈಸರ್ಗಿಕ ವಿಜ್ಞಾನದ ಎಲ್ಲಾ ಕ್ಷೇತ್ರಗಳಲ್ಲಿನ ಅಧ್ಯಯನಗಳನ್ನು ಒಂಗೊಂಡಿದೆ. ಟಿಐಎಫ್‌ಆರ್‌ ಆಯ್ದ ಎಂ.ಎಸ್ಸಿಯನ್ನು ಸಹ ಬೆಂಬಲಿಸುತ್ತದೆ. • ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವನ್ಯಜೀವಿ ಜೀವಶಾಸ್ತ್ರ, ಗಣಿತ, ಕಂಪ್ಯೂಟರ್ ಮತ್ತು ಸಿಸ್ಟಮ್ಸ್ ಸೈನ್ಸ್ ಮತ್ತು ವಿಜ್ಞಾನ ಶಿಕ್ಷಣದಲ್ಲಿ ಪದವಿಗಳನ್ನು ನೀಡಲಾಗುತ್ತದೆ. ವಿಶಿಷ್ಟವಾಗಿ ಸಂಯೋಜಿತ ಎಂ.ಎಸ್ಸಿ, ಪಿಎಚ್‌.ಡಿ ನೀಡಲಾಗುತ್ತದೆ. • ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಕಠಿಣವಾಗಿದ್ದು, ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಬೇಸಿಗೆ ಕಾರ್ಯಕ್ರಮಗಳು: ಟಿಐಎಫ್‌ಆರ್‌ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಬೇಸಿಗೆ ಕಾರ್ಯಕ್ರಮಗಳನ್ನು ನಡೆಸುತ್ತದೆ. ಇದರಲ್ಲಿ ಖಗೋಳಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಗಣಿತ ಮತ್ತು ಭೌತಶಾಸ್ತ್ರದ ಸಂಶೋಧನಾ ಚಟುವಟಿಕೆಗಳನ್ನು ಪರಿಚಯಿಸಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ಟಿಐಎಫ್‌ಆರ್‌ ಸಂಶೋಧಕರ ಮೇಲ್ವಿಚಾರಣೆಯಲ್ಲಿ ಸಂಶೋಧನಾ ಯೋಜನೆಯಲ್ಲಿ ಕೆಲಸ ಮಾಡುವ ನಿರೀಕ್ಷೆಯಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.