ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಇಂದು ‘ನೀಟ್‌‘ ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಆಯೋಜಿಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಭಾನುವಾರ (ಇದೇ 7ರಂದು) ದೇಶದಾದ್ಯಂತ ನಡೆಯಲಿದ್ದು, ರಾಜ್ಯದ 1.34 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಪಶುವೈದ್ಯಕೀಯ, ಹೋಮಿಯೊಪಥಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಪ್ರತಿ ವರ್ಷ ‘ನೀಟ್‌’ ನಡೆಸುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ 2 ಲಕ್ಷ ಹೆಚ್ಚಳವಾಗಿದೆ. 990 ಹೊಸ ಕೇಂದ್ರಗಳನ್ನು ಆರಂಭಿಸಲಾಗಿದೆ. ಒಟ್ಟು 13 ಭಾಷೆಗಳಲ್ಲಿ ‘ನೀಟ್‌’ ಬರೆಯಲು ಅವಕಾಶ ಇದೆ. ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮಲಯಾಳ, ಕನ್ನಡ, ಮರಾಠಿ, ಒಡಿಯಾ, ತಮಿಳು, ತೆಲುಗು, ಉರ್ದು ಮತ್ತು ಪಂಜಾಬಿ ಈ 13 ಭಾಷೆಗಳು. ರಸಾಯನಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ವಿಷಯಗಳಿದ್ದು, ಪ್ರತಿ ವಿಷಯವೂ ತಲಾ 45 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಒಟ್ಟು 180 ಪ್ರಶ್ನೆಗಳಿಗೆ ತಲಾ 4 ಅಂಕಗಳಂತೆ 720 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಮಧ್ಯಾಹ್ನ 2ಕ್ಕೆ ಪರೀಕ್ಷೆ ಆರಂಭವಾದರೆ, 1.30ರ ಒಳಗೆ ಪರೀಕ್ಷಾ ಕೇಂದ್ರಗಳ ಒಳಗೆ ಇರಬೇಕು. ಅಲ್ಲದೇ, ಪ್ರತಿ ವಿದ್ಯಾರ್ಥಿಗೂ ವೈಯಕ್ತಿಕವಾಗಿ ನೀಡಿರುವ ಸಮಯದ ಒಳಗೆ ಹಾಜರಿದ್ದು, ತಪಾಸಣಾ ಕಾರ್ಯಗಳಿಗೆ ಸಹಕರಿಸಬೇಕಿದೆ. ಎಲ್ಲ ಕೇಂದ್ರಗಳ ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಅಗತ್ಯ ಇರುವಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿ ಕೇಂದ್ರದಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.