ಪ್ರಶ್ನೋತ್ತರ: ಎಂ.ಎಸ್ಸಿ ನರ್ಸಿಂಗ್ ಪ್ರವೇಶಕ್ಕೆ ಸಿಇಟಿ ಇದೆಯೇ? 1. ಬಿ.ಎಸ್ಸಿ (ಆಹಾರ ತಂತ್ರಜ್ಞಾನ) ಕೋರ್ಸ್ ಬಗ್ಗೆ ಮಾಹಿತಿ ನೀಡಿ. ಹೆಸರು, ಊರು ತಿಳಿಸಿಲ್ಲ. ಪಿಯುಸಿ (ವಿಜ್ಞಾನ) ನಂತರ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ-ಆಹಾರ ತಂತ್ರಜ್ಞಾನ (ಫುಡ್ ಟೆಕ್ನಾಲಜಿ) ಕೋರ್ಸ್ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಆಯ್ಕೆ. ಜೀವನ ಶೈಲಿ ಮತ್ತು ಅಗತ್ಯಗಳು ಬದಲಾಗಿರುವ ಈ ಕಾಲಘಟ್ಟದಲ್ಲಿ ಸಿದ್ದಪಡಿಸಿದ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಆಹಾರ ತಂತ್ರಜ್ಞಾನ ಕ್ಷೇತ್ರ ಮುಂಚೂಣಿಯಲ್ಲಿದೆ. ಕಚ್ಛಾ ಧಾನ್ಯಗಳು ಮತ್ತು ಇನ್ನಿತರ ಆಹಾರ ಪದಾರ್ಥಗಳ ಶುದ್ಧೀಕರಣ, ಸಂಸ್ಕರಣೆ, ಸುರಕ್ಷತೆ ಮತ್ತು ಸೂಕ್ತ ಪ್ಯಾಕಿಂಗ್ ನಂತರ, ಬಳಕೆಗೆ ಯೋಗ್ಯ ರೀತಿಯಲ್ಲಿ ಸಿದ್ಧಪಡಿಸುವ ಕಾರ್ಯಗಳಲ್ಲಿ ಆಹಾರ ತಂತ್ರಜ್ಞಾನ ಪ್ರಮುಖ ಪಾತ್ರವಹಿಸುತ್ತದೆ. ಈ ಕೋರ್ಸ್ ಬೆಂಗಳೂರು, ಮಂಗಳೂರು, ಧಾರವಾಡ ಸೇರಿದಂತೆ, ದೇಶದ ಪ್ರಮುಖ ನಗರಗಳಲ್ಲಿ ಲಭ್ಯ ಮತ್ತು ಆಯಾ ಕಾಲೇಜುಗಳ/ವಿಶ್ವವಿದ್ಯಾಲಯಗಳ ನಿಯಮಾವಳಿಗಳಂತೆ ಪ್ರವೇಶ ಪ್ರಕ್ರಿಯೆ ಇರುತ್ತದೆ. ಇದಲ್ಲದೆ, ಬಿಟೆಕ್ (ಆಹಾರ ತಂತ್ರಜ್ಞಾನ) ಕೋರ್ಸ್ ಸಹಾ ಲಭ್ಯವಿದೆ ಎನ್ನುವುದನ್ನು ಗಮನಿಸಿ. ಈ ವೃತ್ತಿಯಲ್ಲಿ ಯಶಸ್ವಿಯಾಗಲು ವಿಷಯದಲ್ಲಿ ಆಸಕ್ತಿ, ವಿಶ್ಲೇಷಾತ್ಮಕ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ, ವಿವರಗಳಿಗೆ ಗಮನ, ಸಂವಹನ ಇತ್ಯಾದಿ ಕೌಶಲಗಳಿರಬೇಕು.ಈ ಕೋರ್ಸ್ ನಂತರ, ಸರ್ಕಾರಿ ಮತ್ತು ಬಹು ರಾಷ್ಟ್ರೀಯ ಕಂಪನಿಗಳು ಸೇರಿದಂತೆ ಖಾಸಗಿ ಕ್ಷೇತ್ರದ ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಆಹಾರ ಸಂಬಂಧಿತ (ಸಂರಕ್ಷಕಗಳು, ಬಣ್ಣಗಳು ಮತ್ತು ಸ್ವಾದಗಳು ಇತ್ಯಾದಿ) ಉದ್ದಿಮೆಗಳು, ಕೃಷಿ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ಹೋಟೆಲ್ಸ್ ಮತ್ತು ರೆಸ್ಟೋರೆಂಟ್ಸ್, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು ಸೇರಿದಂತೆ ವಿಪುಲವಾದ ಉದ್ಯೋಗದ ಅವಕಾಶಗಳಿವೆ. ಹೆಚ್ಚಿನ ತಜ್ಞತೆಗಾಗಿ, ಎಂಎಸ್ಸಿ/ಎಂಬಿಎ ಮಾಡುವುದರಿಂದ ಉದ್ಯೋಗಾರ್ಹತೆಯನ್ನೂ ಹೆಚ್ಚಿಸಿಕೊಳ್ಳಬಹುದು. ವೃತ್ತಿಯಲ್ಲಿನ ಅನುಭವದ ನಂತರ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: ://../?=r6vHcwlCiY8 2. ನಾನು ಬಿ.ಎಸ್ಸಿ (ನರ್ಸಿಂಗ್) ಮುಗಿಸಿ, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೀಗ 37 ವರ್ಷಗಳಾಗಿದ್ದು, ಎಂ.ಎಸ್ಸಿ ನರ್ಸಿಂಗ್‌ಗೆ ಸಿಇಟಿ ಪರೀಕ್ಷೆ ಬರೆಯಬಹುದೇ? ಹೆಸರು, ಊರು ತಿಳಿಸಿಲ್ಲ. ಎಂ.ಎಸ್ಸಿ (ನರ್ಸಿಂಗ್) ಕೋರ್ಸ್ ಮಾಡಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸುವ ಪಿಜಿಸಿಇಟಿ ಪರೀಕ್ಷೆಯನ್ನು ಬರೆಯಬೇಕು. ಕಳೆದ ವರ್ಷದ ಅಧಿಸೂಚನೆಯಂತೆ, ಅಭ್ಯರ್ಥಿಗಳ ವಯಸ್ಸು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕಡೆಯ ದಿನಾಂಕದAದು 45 ವರ್ಷದ ಒಳಗಿರಬೇಕು. ಹಾಗಾಗಿ, ನೀವು ಈ ಪರೀಕ್ಷೆಯನ್ನು ಬರೆಯಬಹುದು. ಈ ವರ್ಷದ ಪ್ರವೇಶ ಪರೀಕ್ಷೆಯ ಅಧಿಸೂಚನೆ ಇನ್ನು ಕೆಲವು ತಿಂಗಳಲ್ಲಿ ಪ್ರಕಟವಾಗಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: ://...// ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.