ಮಂಡ್ಯದ ಜನಪದ ಸೇವಾ ಟ್ರಸ್ಟ್‌ನ ‘ಜೀವನ ಶಾಲೆ’ ಎಂಬ ವಿಶಿಷ್ಟ ತರಬೇತಿ ಕಾರ್ಯಕ್ರಮ ಔಪಚಾರಿಕ ಶಿಕ್ಷಣದಲ್ಲಿ ಆಸಕ್ತಿ ಇಲ್ಲದ, ತಮ್ಮ ಜೀವನವನ್ನು ಹಳ್ಳಿಯಲ್ಲೇ ಇದ್ದುಕೊಂಡು ಪರಿಸರಕ್ಕೆ ಹತ್ತಿರವಾಗಿ ಕಟ್ಟಿಕೊಳ್ಳಬೇಕೆಂಬ ಕನಸು ಹೊತ್ತಿರುವ ಯುವಕರಿಗೆ ಒಂದು ಹೊಸ ಮಾರ್ಗವನ್ನು ನೀಡುವ ವಿಶಿಷ್ಟ ತರಬೇತಿ ಕಾರ್ಯಕ್ರಮ ’ಜೀವನ ಶಾಲೆ’. ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿರುವ ಜನಪದ ಸೇವಾ ಟ್ರಸ್ಟ್‌ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ತರಬೇತಿಯಲ್ಲಿ ಎರಡು ವರ್ಷದ ಫೌಂಡೇಶನ್ ಕೋರ್ಸ್ ಮತ್ತು ಎರಡು ವರ್ಷದ ಅಡ್ವಾನ್ಸ್‌ ಕೋರ್ಸ್‌ ಇರಲಿದೆ. ಪರಿಸರದ ನಡುವಿರುವ ಸರಳ, ಸುಂದರ ಮತ್ತು ಪ್ರಶಾಂತ ವಾತಾವರಣದ ’ಹೊಸ ಜೀವನ ದಾರಿ’ ಕೇಂದ್ರದಲ್ಲಿ ತರಬೇತಿ ನಡೆಯುತ್ತದೆ. ಇದು ವಸತಿ ಸಹಿತ ತರಬೇತಿ ಕಾರ್ಯಕ್ರಮವಾಗಿದೆ. ಪ್ರತಿ ದಿನದ ತರಬೇತಿಯಲ್ಲಿ, ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್‌ನ ಉತ್ತಮ ಕಲಿಕೆಯಿರುತ್ತದೆ. ಇದರ ಜೊತೆಗೆ, ಒಂದಿಷ್ಟು ಶ್ರಮದ ಕೆಲಸ, ಆಟ, ನಾಟಕ, ಹಾಡು, ಪರಿಸರ ವೀಕ್ಷಣೆ ಮತ್ತು ಅಧ್ಯಯನವೂ ಇರುತ್ತದೆ. ಇವೆಲ್ಲದರೊಂದಿಗೆ ಶೈಕ್ಷಣಿಕ ಪ್ರವಾಸಗಳ ಹದವಾದ ಮಿಶ್ರಣವೂ ಇದೆ. ಅಡ್ವಾನ್ಸ್ ಕೋರ್ಸ್‌ ಮುಗಿಸಿದ ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಕಂಪನಿಗಳಲ್ಲಿ ಕೆಲಸಕ್ಕೆ ಅವಕಾಶ ಮಾಡಿಕೊಡಲಾಗುವುದು. ವಿದ್ಯಾರ್ಥಿಗಳು ನಿರ್ಭಯವಾಗಿ ತಮ್ಮದೇ ವೇಗದಲ್ಲಿ ಕಲಿಯುವ ವಾತಾವರಣವನ್ನು ನಿರ್ಮಿಸ ಲಾಗಿದೆ. ಪರಿಣಿತರ ಮಾರ್ಗದರ್ಶನದಲ್ಲಿ ಕಲಿಕೆ ನಡೆಯುತ್ತದೆ. ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಮತ್ತು ಸ್ವಾಭಿಮಾನದಿಂದ ಗ್ರಾಮೀಣ ಪ್ರದೇಶದಲ್ಲಿ ಉಳಿದು ಸಂತೋಷದ ಮತ್ತು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವಂತೆ ಮಾಡುವುದು ತರಬೇತಿಯ ಉದ್ದೇಶವಾಗಿದೆ. ವಯೋಮಿತಿ: 14 ರಿಂದ 16 ವಯಸ್ಸಿನ ಒಳಗಿರುವ ಎಸ್.ಎಸ್.ಎಲ್.ಸಿ ಪಾಸು ಇಲ್ಲವೇ ಫೇಲಾಗಿರುವ ಗಂಡು ಮಕ್ಕಳಿಗೆ ಅವಕಾಶ. ಅಭ್ಯರ್ಥಿಗಳ ಆಯ್ಕೆ: ಈ ವರ್ಷ ಕೇವಲ ಹತ್ತು ಮಕ್ಕಳನ್ನು , ಅವರ ಮನೋಸ್ಥಿತಿ ಮತ್ತು ಮೌಲ್ಯಗಳನ್ನು ಗಮನಿಸಿ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ತರಬೇತಿ, ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. ತರಬೇತಿಯನ್ನು ಸಮಾಧಾನಕರವಾಗಿ ಮುಗಿಸಿದ ನಂತರ ಸಂಸ್ಥೆಯು ಪ್ರಮಾಣಪತ್ರವನ್ನು ನೀಡುವುದು. ತರಬೇತಿಗೆ ಸೇರುವ ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ: 9663406366 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.