ವೈದ್ಯಕೀಯ ಪದವಿ ಕೋರ್ಸ್‌: ದೇಶದಾದ್ಯಂತ ಸಾಮಾನ್ಯ ಕೌನ್ಸೆಲಿಂಗ್‌ ನವದೆಹಲಿ (ಪಿಟಿಐ): ದೇಶದ ಎಲ್ಲ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ‘ಎನ್ಇಇಟಿ– ಯುಜಿ’ ಮೆರಿಟ್‌ ಪಟ್ಟಿ ಆಧರಿಸಿ ಸಾಮಾನ್ಯ ಕೌನ್ಸೆಲಿಂಗ್‌ ಆಯೋಜಿಸುವ ವಿಷಯವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತನ್ನ ಹೊಸ ನಿಯಮಾವಳಿಯಲ್ಲಿ ಪ್ರಸ್ತಾಪಿಸಿದೆ. ಈ ಹೊಸ ನಿಯಮಗಳನ್ನು ವೈದ್ಯಕೀಯ ಪದವಿ ಶಿಕ್ಷಣ ನಿಯಮಗಳು (ಜಿಎಂಇಆರ್‌– 2023) ಎಂದು ಕರೆಯಲಾಗಿದೆ. ‌ಈ ಕುರಿತು ಎನ್‌ಎಂಸಿ ಜೂನ್‌ 2ರಂದು ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಎನ್‌ಎಂಸಿ ಒದಗಿಸಿದ ಸೀಟ್‌ ಮ್ಯಾಟ್ರಿಕ್ಸ್‌ ಆಧರಿಸಿಯೇ ಈ ಕೌನ್ಸೆಲಿಂಗ್‌ ಇರುತ್ತದೆ. ಅಗತ್ಯವಿದ್ದಲ್ಲಿ ಕೌನ್ಸೆಲಿಂಗ್‌ ಹಲವು ಸುತ್ತುಗಳನ್ನು ಹೊಂದಿರಬಹುದು ಎಂದು ಅದು ತಿಳಿಸಿದೆ. ವೈದ್ಯಕೀಯ ಪದವಿ ಶಿಕ್ಷಣ ಮಂಡಳಿಯು (ಯುಜಿಎಂಇಬಿ) ‌ಸಾಮಾನ್ಯ ಕೌನ್ಸೆಲಿಂಗ್‌ನ ಮಾರ್ಗಸೂಚಿಗಳನ್ನು ಪ್ರಕಟಿಸುತ್ತದೆ. ಸರ್ಕಾರ ನೇಮಿಸುವ ಪ್ರಾಧಿಕಾರವು ಈ ಮಾರ್ಗಸೂಚಿಗಳ ಅನ್ವಯವೇ ಕೌನ್ಸೆಲಿಂಗ್‌ ನಡೆಸುತ್ತದೆ. ಯಾವುದೇ ವೈದ್ಯಕೀಯ ಸಂಸ್ಥೆಗಳು ಈ ನಿಯಮಗಳಿಗೆ ವಿರುದ್ಧವಾಗಿ ವೈದ್ಯಕೀಯ ಪದವಿ ಶಿಕ್ಷಣ ಕೋರ್ಸ್‌ಗೆ ಪ್ರವೇಶಾತಿ ನೀಡುವಂತಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.