ಕಾಲೇಜಿಗೆ ನಿತ್ಯ ಬಸ್‌ನಲ್ಲಿ 140 ಕಿ.ಮೀ ಪಯಣ; 7 ಚಿನ್ನದ ಪದಕ ಪಡೆದ ಅಭಿಷೇಕ ಸಾಧನೆ ಇಮಾಮ್‌ಹುಸೇನ್‌ ಗೂಡುನವರ ಬೆಳಗಾವಿ: ‘ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ತಳಗವಾರದಿಂದ ನಿತ್ಯ ಬಸ್‌ನಲ್ಲಿ ಬೆಂಗಳೂರಿನ ಕಾಲೇಜಿಗೆ ಹೋಗುತ್ತಿದ್ದೆ. ನಸುಕಿನ 5.30ಕ್ಕೆ ಮನೆಯಿಂದ ಹೊರಟು, ರಾತ್ರಿ ಮನೆಗೆ ಮರಳುತ್ತಿದ್ದೆ. ಹೋಗಿ ಬರಲು ಒಟ್ಟು 140 ಕಿ.ಮೀ. ಪ್ರಯಾಣ ಆಗುತಿತ್ತು. ಸಿಕ್ಕ ಸಮಯದಲ್ಲೇ ಶ್ರಮ ವಹಿಸಿ ಓದಿದ ಫಲವಾಗಿ ಕನಸು ನನಸಾಗಿದೆ’ –ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಮಂಗಳವಾರ ನಡೆದ 23ನೇ ಘಟಿಕೋತ್ಸವದಲ್ಲಿ 7 ಚಿನ್ನದ ಪದಕ ಗಳಿಸಿದ ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿ ಅಭಿಷೇಕ ಜಿ. ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು. ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ವಿಭಾಗದ ವಿದ್ಯಾರ್ಥಿ, ಆಂಧ್ರಪ್ರದೇಶದ ನೆಲ್ಲೂರಿನ ಗುಡಿಕಲ್‌ ಸಾಯಿವಂಶಿ 7 ಚಿನ್ನದ ಪದಕ ಪಡೆದಿದ್ದಾರೆ. ಅವರ ಸರ್ಕಾರಿ ಶಾಲಾ ಶಿಕ್ಷಕರಾಗಿರುವ ಮುರಳಿ–ಸುರೇಖಾ ದಂಪತಿ ಪುತ್ರ. ಯುಪಿಎಸ್‌ಸಿಗೆ ತಯಾರಿ: ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ ಸಾಧನೆ ಮಾಡಿದ ಬಳ್ಳಾರಿಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಕೆ.ಆರ್‌.ಸಂಪತಕುಮಾರ್‌, ‘ನನಗೆ ರ್‍ಯಾಂಕ್‌ ನಿರೀಕ್ಷೆಯಿತ್ತು. 7 ಚಿನ್ನದ ಪದಕ ಸಿಕ್ಕಿದ್ದು ಸಂತಸ ಹೆಚ್ಚಿಸಿದೆ. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ’ ಎಂದರು. ಮದಕಶಿರಾ ಚಿನ್ನದ ಹುಡುಗ: ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿ, ಅಂಧ್ರಪ್ರದೇಶದ ಅನಂತಪುರದ ಮದಕಶಿರಾ ಚಿನ್ಮಯ ವಿಕಾಸ್‌ 13 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ‘13 ಚಿನ್ನದ ಪದಕ ಸಿಕ್ಕಿರುವುದು ಖುಷಿ ತಂದಿದೆ. ಶಿಸ್ತುಬದ್ಧ ಅಧ್ಯಯನದಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಅವರು ತಿಳಿಸಿದರು. ಗೌರವ ಡಾಕ್ಟರೇಟ್‌ ಪಿಎಚ್.ಡಿ ಪ್ರದಾನ ಅಧ್ಯಾತ್ಮ ಕ್ಷೇತ್ರದಲ್ಲಿನ ಸಾಧನೆಗೆ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ (ಅನುಪಸ್ಥಿತಿ) ಶಿಕ್ಷಣ ಕ್ಷೇತ್ರದ ಸಾಧನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎ.ವಿ.ಎಸ್. ಮೂರ್ತಿ ಮತ್ತು ಉದ್ಯಮ ಕ್ಷೇತ್ರದ ಸಾಧನೆಗೆ ಮೈಸೂರಿನ ಮರ್ಕಂಟೈಲ್‌ ಕಂಪನಿ ಅಧ್ಯಕ್ಷ ಎಚ್.ಎಸ್‌.ಶೆಟ್ಟಿ ಅವರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’ ಪದವಿ ಪ್ರದಾನ ಮಾಡಲಾಯಿತು. ಈ ಘಟಿಕೋತ್ಸವದಲ್ಲಿ ಬಿಇ ಬಿ.ಟೆಕ್ ಸೇರಿ 42545 ಪದವಿ ಬಿ.ಪ್ಲ್ಯಾನ್- 6 ಬಿ.ಆರ್ಕ್‌ 1003 578 ಪಿಎಚ್‌.ಡಿ 4 ಎಂ.ಎಸ್ಸಿ ಬೈ ರಿಸರ್ಚ್‌ ಹಾಗೂ 2 ಇಂಟಿಗ್ರೇಟೆಡ್‌ ಡ್ಯುಯಲ್‌ ಪದವಿಗಳನ್ನು ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮದ್ರಾಸ್‌ನ ನಿರ್ದೇಶಕ ಪ್ರೊ.ವಿ.ಕಾಮಕೋಟಿ ಘಟಿಕೋತ್ಸವ ಭಾಷಣ ಮಾಡಿದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.