ಶಿಕ್ಷಣ: ವಿವಿಧ ಕಲಿಕಾ ತಂತ್ರಗಳ ಸಂಗಮ ಪರಿಕಲ್ಪನಾ ಕಲಿಕೆ –ಆರ್.ಬಿ.ಗುರುಬಸವರಾಜ -------------- ಪರಿಕಲ್ಪನಾತ್ಮಕ ಕಲಿಕೆಯು ವಿವಿಧ ಕಲಿಕಾ ತಂತ್ರಗಳ ಸಮ್ಮಿಳಿತವಾಗಿದೆ. ಇದರಲ್ಲಿ ಪ್ರಯೋಗ, ವಿಮರ್ಶೆ, ಸತತ ಅಭ್ಯಾಸ ಕ್ರಮ, ಅಂತರ್ ಸಂಬಂಧಿತ ಅನ್ವಯಿಕ ಇದೆ. ಚರ್ಚೆ, ಸಂವಾದ,, ಸ್ವಯಂ ಮೌಲ್ಯಮಾಪನ ಇದೆ. ಇದು ಕಲಿಕಾ ವಿಧಾನಗಳ ಸಮಿಶ್ರಣವಾಗಿದ್ದು, ಎಲ್ಲರಿಗೂ ಎಲ್ಲಾ ಕಾಲಕ್ಕೂ ಉಪಯುಕ್ತವಾಗುತ್ತದೆ. --------------- ‘ಏಯ್ ನೋಡ್ರೋ, ಈ ಕಾನ್ಸೆಪ್ಟ್ ಸರಿಯಾಗಿ ಅರ್ಥ ಮಾಡಿಕೊಂಡರೆ ಪರೀಕ್ಷೆಯಲ್ಲಿ ಸುಲಭವಾಗಿ ಅಂಕ ಗಳಿಸಬಹುದು’ – ಇದು ತರಗತಿಯಲ್ಲಿ ಪ್ರತಿ ವಿಷಯದ ಶಿಕ್ಷಕರು( ) ವಿದ್ಯಾರ್ಥಿಗಳಿಗೆ ನೀಡುವ ಸಾಮಾನ್ಯ ಸಲಹೆ. ಇಂಗ್ಲಿಷ್‌ನ ಕಾನ್ಸೆಪ್ಟ್‌ಗೆ () ಕನ್ನಡದಲ್ಲಿ ಪರಿಕಲ್ಪನೆ ಎನ್ನುತ್ತಾರೆ. ನಿರ್ದಿಷ್ಟ ಕಲಿಕಾಂಶವನ್ನು ವಿವಿಧ ಆಯಾಮಗಳ ಹಿನ್ನೆಲೆಯಲ್ಲಿ ಕಲಿಯುವ ವಿಧಾನವನ್ನು ಪರಿಕಲ್ಪನಾತ್ಮಕ ಕಲಿಕೆ ಎನ್ನುತ್ತಾರೆ. ಒಂದು ನಿರ್ದಿಷ್ಟ ಕಲಿಕಾಂಶವನ್ನು ವಿವಿಧ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳುವ ಹಾಗೂ ಅದನ್ನು ಸಂಧರ್ಭಕ್ಕನುಸಾರವಾಗಿ ಅನ್ವಯಿಸುವ ಕಲಿಕೆಯಾಗಿದೆ. ಒಟ್ಟಾರೆ ಹೇಳುವುದಾದರೆ ನಿರ್ದಿಷ್ಟ ವಿಷಯದ ಸಮಗ್ರ ಕಲಿಕೆಯೇ ಪರಿಕಲ್ಪನಾತ್ಮಕ ಕಲಿಕೆಯಾಗಿದೆ. ಪರಿಕಲ್ಪನಾ ಕಲಿಕೆ ಹೇಗಿರುತ್ತದೆ ? ಪರಿಕಲ್ಪನಾ ಕಲಿಕೆಯನ್ನು ಅರ್ಥೈಸಿಕೊಳ್ಳಲು ಈ ಉದಾಹರಣೆಯನ್ನು ಗಮನಿಸಿ; ಈಗ ನಾವು ವಿಜ್ಞಾನ ವಿಷಯದಲ್ಲಿನ ಪಾಸ್ಟಿಕ್ ಮಾಲಿನ್ಯ ಎಂಬ ವಿಷಯವನ್ನು ತೆಗೆದುಕೊಳ್ಳೋಣ. ಇದರಲ್ಲಿ ‘ಪ್ಲಾಸ್ಟಿಕ್‌ನಿಂದಾಗುವ ಮಾಲಿನ್ಯ‘ ಎಂಬುದು ಕಲಿಯುವ ಅಂಶ. ಇದು ನಮಗೆ ಗೊತ್ತಿದೆ. ಹಾಗಾಗಿ, ಇದನ್ನು ವಿವಿಧ ಆಯಾಮಗಳಿಂದ ಅರ್ಥ ಮಾಡಿಕೊಳ್ಳಬೇಕು. ಅಂದರೆ, ಮಾಲಿನ್ಯಕ್ಕೆ ಕಾರಣಗಳೇನು, ಮಾಲಿನ್ಯದಿಂದಾಗುವ ಪರಿಣಾಮಗಳೇನು ? ಇದಕ್ಕೆ ಪರಿಹಾರ ಹೇಗೆ ? ವಿದ್ಯಾರ್ಥಿಗಳು, ಪೋಷಕರು ಏನು ಮಾಡಬೇಕು ? ಸಂಘ ಸಂಸ್ಥೆಗಳು, ಸರ್ಕಾರಗಳ ಪಾತ್ರವೇನು ? ನಿವಾರಣೆ ಅಥವಾ ನಿಯಂತ್ರಣಕ್ಕಿರುವ ಸಾಧ್ಯತೆಗಳು ಯಾವುದು ? – ಹೀಗೆ ವಿವಿಧ ಆಯಾಮಗಳಿಂದ ಯೋಚಿಸಿ, ಅದಕ್ಕೆ ಬೇಕಾದ ಮಾಹಿತಿಯನ್ನು ವಲಯಗಳಿಂದ ಸಂಗ್ರಹಿಸಬೇಕು. ನಂತರ ಅದನ್ನು ವಿಂಗಡಿಸಿದರೆ ವಿಷಯವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ, ಸಂಧರ್ಭಾನುಸಾರ ಅನ್ವಯಿಸಿಕೊಳ್ಳಲು ಅನುಕೂಲವಾಗುತ್ತದೆ. ಈ ವಿಧಾನವನ್ನು ವಿಜ್ಞಾನ ವಿಷಯದಲ್ಲಿ ಮಾತ್ರವಲ್ಲ, ಗಣಿತಕ್ಕೂ ಅನ್ವಯಿಸಬಹುದು. ಗಣಿತ ವಿಷಯದಲ್ಲಿ ದಶಮಾಂಶಗಳ ಸ್ಪಷ್ಟ ತಿಳುವಳಿಕೆ ಪಡೆದರೆ, ಭಿನ್ನರಾಶಿಗಳು, ಶೇಕಡಾವಾರು ಮತ್ತು ಅನುಪಾತಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು ಹಾಗೂ ಪರಸ್ಪರ ಪರಿವರ್ತನೆಯನ್ನು ಸುಲಭವಾಗಿ ಮಾಡಬಹುದು. ಸಮಾಜ ವಿಜ್ಞಾನದಲ್ಲಿ ಸಮಾಜ ಸುಧಾರಕರ ಬಗ್ಗೆ ಸಮಗ್ರ ತಿಳುವಳಿಕೆ ಇದ್ದರೆ, ಆ ಕಲಿಕಾಂಶದ ಎಲ್ಲ ಪ್ರಶ್ನೆಗಳಿಗೂ ಸುಲಭವಾಗಿ ಉತ್ತರಿಸಬಹುದು. ಅಲ್ಲದೇ ಭವಿಷ್ಯದಲ್ಲಿ ಅದನ್ನು ವಿವಿಧ ಕಲಿಕೆಗೆ ಸುಲಭವಾಗಿ ಅನ್ವಯಿಸಿಕೊಳ್ಳಬಹುದು. ಅಂತೆಯೇ ಒಂದು ಭಾಷಾ ವಿಷಯದಲ್ಲಿ ಕಲಿತ ಭಾಷಾ ಕೌಶಲವನ್ನು ಇನ್ನೊಂದು ಭಾಷಾ ಕಲಿಕೆಯಲ್ಲಿ ಬಳಸಿಕೊಳ್ಳಬಹುದು. ಪರಿಕಲ್ಪನೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಮೈಂಡ್ ಮ್ಯಾಫ್ ಅಥವಾ ಫ್ಲೋಚಾರ್ಟ್ ಬಳಸಬಹುದು. ಈ ಕಲಿಕಾ ವಿಧಾನ ಏಕೆ ಮುಖ್ಯ? ಪರಿಕಲ್ಪನೆಯ ಕಲಿಕೆಯು ಶಿಕ್ಷಣ ವ್ಯವಸ್ಥೆಯ ಭವಿಷ್ಯವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ-2020(ಎನ್‌ಇಪಿ) ಒತ್ತಿ ಹೇಳುತ್ತದೆ. ಈ ವಿಧಾನದಿಂದ ಕಲಿತ ಕಲಿಕಾಂಶಗಳು ಇನ್ನೊಂದು ಕಲಿಕಾಂಶದ ತಿಳುವಳಿಕೆಗೆ ಸಹಾಯ ಮಾಡುತ್ತದೆ. ಪರಿಕಲ್ಪನೆಗಳು ಪರಸ್ಪರ ಅಂತರ್ ಸಂಬಂಧ ಹೊಂದಿರುವುದರಿಂದ ಕಲಿಕೆ ಸುಲಭ ಹಾಗೂ ಪರಿಣಾಮಕಾರಿಯಾಗಿ ರುತ್ತದೆ. ಈ ವಿಧಾನದಿಂದ ಕಲಿತ ಕಲಿಯು ಶಾಶ್ವತವಾಗಿರುತ್ತದೆ ಮತ್ತು ಸಂದರ್ಭಕ್ಕನುಸಾರವಾಗಿ ಬಳಕೆಯಾಗುತ್ತದೆ. ಇದು, ಕಂಠಪಾಠ ಕಲಿಕೆ ಮತ್ತು ಮಾಹಿತಿ ಕಲಿಕೆಯಲ್ಲಿನ ದೋಷಗಳನ್ನು ನಿವಾರಿಸಿ ಭವಿಷ್ಯಕ್ಕೆ ಬೇಕಾದ ಅನ್ವಯಿಕ ಜ್ಞಾನವನ್ನು ನೀಡುತ್ತದೆ. ಆರಂಭಿಕ ಕಲಿಕೆಯು ಸ್ಪಷ್ಟತೆಯಿಂದ ಕೂಡಿದ್ದರೆ ಭವಿಷ್ಯದಲ್ಲಿ ಎಂತಹ ಸಮಸ್ಯೆಗಳಿಗೂ ಸೂಕ್ತ ಕಂಡುಕೊಳ್ಳಬಹುದು ಎಂಬುದನ್ನು ಈ ಕಲಿಕೆ ತಿಳಿಸುತ್ತದೆ. ಪ್ರಯೋಜನಗಳೇನು ? ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಅನ್ವಯಿಸಲು ಶಕ್ತರಾಗಬೇಕಾದರೆ ವಿವಿಧ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ರೀತಿಯ ಕಲಿಕೆಯು ಹೊಸ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಅಥವಾ ಅವರು ಅನುಭವಿಸಿದ್ದನ್ನು ಕಲಿಕೆಗೆ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತದೆ. ವಿದ್ಯಾರ್ಥಿಗಳಲ್ಲಿ ಅನ್ವಯಿಕ ಮತ್ತು ಪ್ರಾಯೋಗಿಕ ಅಭ್ಯಾಸಗಳನ್ನು ಬಲಪಡಿಸಲು ಪರಿಕಲ್ಪನಾತ್ಮಕ ಕಲಿಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕಲಿಕೆಯನ್ನು ಸ್ವಯಂ ವಿಶ್ಲೇಷಿಸಲು ಮತ್ತು ಪ್ರೋತ್ಸಾಹಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ. ಚರ್ಚೆ, ಸಂವಾದ, ಗುಂಪು ಅಧ್ಯಯನ, ಕಾರ್ಯಾಗಾರಗಳ ಮೂಲಕ ನಿರ್ಧಿಷ್ಟ ವಿಷಯದ ವಿವಿಧ ಆಯಾಮಗಳನ್ನು ಕಲಿಯಲು ಉತ್ತೇಜಿಸುತ್ತದೆ. ಇನ್ನಷ್ಟು ಪ್ರಯೋಜನಗಳು •ನಿರ್ದಿಷ್ಟ ವೇಗದಲ್ಲಿ ಪ್ರಗತಿ ಸಾಧಿಸಲು ಅನುವು ಮಾಡಿಕೊಡುತ್ತದೆ. • ಕ್ರಿಯಾತ್ಮಕ ಕಲಿಕಾ ವ್ಯವಸ್ಥೆಗಳನ್ನು ಪ್ರೋತ್ಸಾಹಿಸುತ್ತದೆ. • ಕಲಿಕೆಯನ್ನು ಫಲಿತಾಂಶದ ಮೇಲೆ ಕೇಂದ್ರೀಕರಿಸುತ್ತದೆ. • ಹಿಂದಿನ ಕಲಿಕೆಗೆ ಹೊಸ ಮಾಹಿತಿಯನ್ನು ಸಂಬಂಧಿಕರಿಸುತ್ತದೆ. • ಜ್ಞಾನವನ್ನು ನೀಡುತ್ತದೆ ಮತ್ತು ಕಲಿಕೆಯನ್ನು ಖಾತ್ರಿಪಡಿಸುತ್ತದೆ. • ಇದು ಹೊಂದಿಕೊಳ್ಳುವ ಮತ್ತು ನಿರಂತರ ಸುಧಾರಣೆಗೆ ಅನುವು ಮಾಡಿಕೊಡುತ್ತದೆ. • ಕಲಿಕೆಯ ಪ್ರಕ್ರಿಯೆಯ ಫಲಿತಾಂಶದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ • ಪರಿಕಲ್ಪನಾ ಕಲಿಕೆಯು ವಿಷಯದಲ್ಲಿ ಪ್ರಗತಿಯನ್ನು ಸಾಧಿಸುತ್ತದೆ. • ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆಯ ಕೌಶಲಗಳನ್ನು ಬೆಳೆಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.