ಸಿಪಿಎ ಕೋರ್ಸ್ ಮಾಡುವುದು ಹೇಗೆ? ಪ್ರದೀಪ್‌ ಕುಮಾರ್ ವಿ. ನಾನು ಬಿ.ಎಸ್ಸಿ (ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ) ಮುಗಿಸಿದ್ದು, ಎಂ.ಎಸ್ಸಿ ಯಾವ ವಿಷಯದಲ್ಲಿ ಮಾಡಬಹುದು? – ಹೆಸರು, ಊರು ತಿಳಿಸಿಲ್ಲ. ಮೊದಲಿಗೆ, ಎಂ.ಎಸ್ಸಿ ನಂತರದ ನಿಮ್ಮ ವೃತ್ತಿಜೀವನದ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು ಮತ್ತು ಅದರಂತೆ ಶಿಕ್ಷಣವನ್ನು ಮುಂದುವರೆಸಬೇಕು. ಎಂ.ಎಸ್ಸಿ ಕೋರ್ಸ್ ಅನ್ನು ಯಾವುದಾದರೂ ಒಂದು ವಿಷಯದಲ್ಲಿ (ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ) ಅಥವಾ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ, ವಿಶ್ವವಿದ್ಯಾಲಯ ಅನುದಾನ ಆಯೋಗ ಮತ್ತು ವಿಶ್ವವಿದ್ಯಾಲಯದ ನಿಬಂಧನೆಗಳ ಅನುಸಾರ, ಎರಡು ವಿಷಯಗಳಲ್ಲಿಯೂ ಮಾಡಬಹುದು (ಡ್ಯುಯಲ್ ಡಿಗ್ರಿ). ಎರಡೂ ಕೋರ್ಸ್ ತರಗತಿಗಳ ವೇಳಾಪಟ್ಟಿ ಇದಕ್ಕೆ ಅನುವು ಮಾಡುವಂತಿದ್ದರೆ, ಏಕಕಾಲಕ್ಕೆ ಎರಡು ರೆಗ್ಯುಲರ್ ಕೋರ್ಸ್‌ಗಳನ್ನು ಮಾಡಬಹುದು ಅಥವಾ ಒಂದು ಕೋರ್ಸ್‌ ದೂರಶಿಕ್ಷಣ / ಆನ್‌ಲೈನ್ ಮೂಲಕ ಮಾಡಬಹುದು. ಎಂ.ಎಸ್ಸಿ ನಂತರ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಷ್ಠಿತ ಸರ್ಕಾರಿ/ಖಾಸಗಿ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಬಹುದು. ಪ್ರಮುಖವಾಗಿ, ನಿಮ್ಮ ಆಸಕ್ತಿ, ಅಭಿರುಚಿಯಂತೆ, ವೃತ್ತಿಯೋಜನೆಯನ್ನು ರೂಪಿಸಿ ಅದರಂತೆ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ. ವೃತ್ತಿಯೋಜನೆ ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ ನಾನು ಬಿ.ಫಾರ್ಮಾ ಓದುತ್ತಿದ್ದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಈ ಕೋರ್ಸ್ ಜೊತೆಗೆ ಮೂರು ವರ್ಷದ ಡಿಪ್ಲೊಮಾ (ಜನರಲ್ ನರ್ಸಿಂಗ್ ಅಂಡ್ ಮಿಡ್‌ವೈಫರಿ) ಮಾಡಬಹುದೇ? – ಎಂ.ಎ. ಅನ್ಸಾರಿ, ಕಲಬುರ್ಗಿ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಎರಡು ರೆಗ್ಯುಲರ್ ಕೋರ್ಸ್‌ಗಳನ್ನು ಒಂದೇ ಸಮಯದಲ್ಲಿ ಮಾಡುವ ಅವಕಾಶವಿದೆ: ಆದರೆ, ಎರಡೂ ತರಗತಿಗಳ ವೇಳಾಪಟ್ಟಿ ಇದಕ್ಕೆ ಅನುವು ಮಾಡುವಂತಿರಬೇಕು. ನೀವು ಯಾವ ವಿಶ್ವವಿದ್ಯಾಲಯದಲ್ಲಿ ಈಗ ಅಧ್ಯಯನ ಮಾಡುತ್ತಿದ್ದೀರಿ ಎಂದು ತಿಳಿಸಿಲ್ಲ. ಈ ಎರಡೂ ರೆಗ್ಯುಲರ್ ಕೋರ್ಸ್‌ಗಳಾಗಿರುವುದರಿಂದ ಹೆಚ್ಚಿನ ಮಾಹಿತಿಗಾಗಿ, ನೀವು ಓದುತ್ತಿರುವ ಶಿಕ್ಷಣ ಸಂಸ್ಥೆ/ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ. ಮೇಲಾಗಿ, ನೀವು ಕೇಳುತ್ತಿರುವ ಕೋರ್ಸ್‌ಗಳು ಸ್ವಾಸ್ಥ್ಯ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ್ದರೂ, ಎರಡೂ ಕೋರ್ಸ್ ಸಂಬಂಧಿಸಿದ ವೃತ್ತಿಗಳು ವಿಭಿನ್ನವಾಗಿದೆ. ನೀವು ಈಗಾಗಲೇ ಎರಡನೇ ವರ್ಷದ ಬಿ.ಫಾರ್ಮಾ ಮಾಡುತ್ತಿರುವುದರಿಂದ, ಮೇಲ್ನೋಟಕ್ಕೆ, ಈ ಕೋರ್ಸ್ ಮುಂದುವರೆಸುವುದೇ ಸೂಕ್ತವೆನಿಸುತ್ತದೆ. ಅಂತಿಮ ಆಯ್ಕೆ ನಿಮ್ಮದು. ನಾನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂಬಿಎ ಮುಗಿಸಿದ್ದು, ಈಗ ಅಮೇರಿಕ ದೇಶದ ಸಿಪಿಎ ಕೋರ್ಸ್ ಮಾಡಲು ಇಚ್ಛಿಸಿದ್ದೇನೆ. ದಯವಿಟ್ಟು ನಿಮ್ಮ ಮಾರ್ಗದರ್ಶನ ನೀಡಿ – ದಿಶಂತ್ ವಿ ರಾವ್, ಮಂಡ್ಯ. ಅಮೆರಿಕ ದೇಶದ ವಿವಿಧ ರಾಜ್ಯಗಳ ಲೆಕ್ಕಪತ್ರ ಮಂಡಳಿ ನೀಡುವ ಸಿಪಿಎ (ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್), ಒಂದು ಪ್ರತಿಷ್ಟಿತ ಅಕೌಂಟೆನ್ಸಿ ಪರವಾನಗಿ ಆಗಿದ್ದು, ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅಪಾರವಾದ ಮನ್ನಣೆಯಿದೆ. ಈಗ ಭಾರತದಲ್ಲಿದ್ದುಕೊಂದೇ ಈ ಪರವಾನಗಿಯನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ ://./// ://..///------ ನಾನು ಎಂಬಿಎ (ಆನ್‌ಲೈನ್) ಮಾಡಲು ಇಚ್ಛಿಸಿದ್ದೇನೆ. ಆನ್‌ಲೈನ್ ಮತ್ತು ರೆಗ್ಯುಲರ್ ಎಂಬಿಎ ಕೋರ್ಸ್‌ಗಳಲ್ಲಿನ ವ್ಯತ್ಯಾಸಗಳೇನು? ಉತ್ತಮ ಕಾಲೇಜುಗಳಾವುವು?– ಹೆಸರು, ಊರು ತಿಳಿಸಿಲ್ಲ. ಉದ್ಯಮದ ಜವಾಬ್ದಾರಿಗಳನ್ನು ನಿರ್ವಹಿಸಲು ಸಮಗ್ರವಾದ ತಿಳುವಳಿಕೆಯನ್ನು-ಮಾರುಕಟ್ಟೆಯ ನಿರ್ವಹಣೆ, ಹಣಕಾಸಿನ ಆಡಳಿತ, ಆಯವ್ಯಯ ಶಾಸ್ತ್ರ, ಬಂಡವಾಳ ಪೂರೈಕೆ, ಉತ್ಪಾದನೆ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆ ಇತ್ಯಾದಿ-ಎಂಬಿಎ ಕೋರ್ಸ್‌ನಲ್ಲಿ ನೀಡಲಾಗುತ್ತದೆ. ಎಂಬಿಎ (ರೆಗ್ಯುಲರ್) ಕೋರ್ಸ್‌ನಲ್ಲಿ ವೈವಿಧ್ಯಮಯ ಕಲಿಕೆಯ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಉದಾಹರಣೆಗೆ, ಅಸೈನ್‌ಮೆಂಟ್ಸ್, ಮಿನಿ ಪ್ರಾಜೆಕ್ಟ್‌, ಕೇಸ್ ಸ್ಟಡೀಸ್, ಗ್ರೂಪ್ ಡಿಸ್ಕಷನ್, ಪ್ರೆಸೆಂಟೇಷನ್ ಇತ್ಯಾದಿ. ಈ ಎಲ್ಲಾ ವಿಧಾನಗಳನ್ನು ಪರಿಣಾಮಕಾರಿಯಾಗಿ ಆನ್‌ಲೈನ್ ಮೂಲಕ ಅಳವಡಿಸಿಕೊಳ್ಳುವುದು ಸಾಧ್ಯವಿಲ್ಲ. ಹಾಗಾಗಿ, ರೆಗ್ಯುಲರ್ ಎಂಬಿಎ ಕೋರ್ಸಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ನೀವು ಈಗಾಗಲೇ ವೃತ್ತಿಯಲ್ಲಿದ್ದರೆ, ವಾರಾಂತ್ಯದ ಅಥವಾ ಆನ್‌ಲೈನ್ ಎಂಬಿಎ ಮಾಡಿ, ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸಬಹುದು. ಕಾಲೇಜು ಆಯ್ಕೆ ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ ಈ ಲಿಂಕ್‌ ನೋಡಿ ://.//----/-#9 ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ ಬ್ಯಾಂಕಿಂಗ್ ಪರೀಕ್ಷೆಯ ಬಗ್ಗೆ ತಿಳಿಸಿ. ಈ ಪರೀಕ್ಷೆಯನ್ನು ಬಿಸಿಎ ಪದವೀಧರರು ಬರೆಯಬಹುದೇ?– ಹೆಸರು, ಊರು ತಿಳಿಸಿಲ್ಲ. ಬಿಸಿಎ ಪದವಿಯ ನಂತರ ಐಬಿಪಿಎಸ್ ಅಥವಾ ಆಯಾ ಬ್ಯಾಂಕ್ ನಡೆಸುವ ಅರ್ಹತಾ ಪರೀಕ್ಷೆಯ ಮುಖಾಂತರ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ, ಪ್ರೊಬೆಷನರಿ ಆಫೀಸರ್ ಹುದ್ದೆಗೆ ಮೂರು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ಇರುತ್ತದೆ. 1. ಪೂರ್ವಭಾವಿ ಪರೀಕ್ಷೆ 2. ಮುಖ್ಯ ಪರೀಕ್ಷೆ 3. ವೈಯಕ್ತಿಕ ಸಂದರ್ಶನ ವೈಯಕ್ತಿಕ ಸಂದರ್ಶನದ ನಂತರ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಸಾಮಾನ್ಯವಾಗಿ, ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ಆಗಿರಬೇಕು; ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು. ಈ ಆಯ್ಕೆ ಪ್ರಕ್ರಿಯೆಯ ಹಂತಗಳು, ಮಾದರಿ, ಪಠ್ಯಕ್ರಮ, ಅವಕಾಶಗಳು, ಸವಾಲುಗಳು ಇತ್ಯಾದಿಗಳನ್ನು ಅರಿತು ಖುದ್ದಾಗಿ ನೀವೇ ತಯಾರಾಗಬಹುದು ಅಥವಾ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸೇರಬಹುದು. ಬ್ಯಾಂಕಿಂಗ್ ಮತ್ತು ಫೈನಾನ್ಸ್ ಸಂಬಂಧಿತ ಅರೆಕಾಲಿಕ ಕೋರ್ಸ್‌ಗಳನ್ನು ಮಾಡುವುದರಿಂದ ಈ ಕ್ಷೇತ್ರದಲ್ಲಿನ ಸವಾಲುಗಳು ಮತ್ತು ಅವಕಾಶಗಳ ಅರಿವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: ://./ ನನಗೆ ವಿಜ್ಞಾನ ಕ್ಷೇತ್ರದಲ್ಲಿ ಓದುವ ಆಸೆಯಿತ್ತು. ಆದರೆ, ಬೇರೆಯವರ ಒತ್ತಾಯದಿಂದ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡು, ಈಗ ಬಿಕಾಂ ಮಾಡುತ್ತಿದ್ದೇನೆ. ಬಿಕಾಂ ನಂತರ ಉದ್ಯಮಿಯಾಗಲು ಮಾರ್ಗದರ್ಶನ ನೀಡಿ – ಆಕಾಶ್, ಊರು ತಿಳಿಸಿಲ್ಲ. ಉದ್ಯಮವನ್ನು ಪ್ರಾರಂಭಿಸುವ ಮುಂಚೆ, ನೀವು ಮಾರುಕಟ್ಟೆಗೆ ನೀಡಬಯಸುವ ಉತ್ಪನ್ನ ಅಥವಾ ಸೇವೆಯ ಕುರಿತು ಸ್ಪಷ್ಟವಾದ ಪರಿಕಲ್ಪನೆಯಿರಬೇಕು. ಹಾಗೂ, ಮಾರುಕಟ್ಟೆಯಲ್ಲಿ ಅಂತಹ ಉತ್ಪನ್ನ ಅಥವಾ ಸೇವೆಗೆ ಬೇಡಿಕೆ ಇರಬೇಕು; ವಿನೂತನ ಉತ್ಪನ್ನ ಅಥವಾ ಸೇವೆಯಾದರೆ, ಬೇಡಿಕೆಯನ್ನು ನಿರೀಕ್ಷಿಸುವಂತಿರಬೇಕು. ಮಾರುಕಟ್ಟೆಯ ಬೇಡಿಕೆಯ ಪ್ರಮಾಣ, ಬೆಲೆ, ಉತ್ಪಾದನಾ ಸವಾಲುಗಳು, ಮಾನವ ಸಂಪನ್ಮೂಲ, ಹಣಕಾಸು ಇತ್ಯಾದಿ ಅಂಶಗಳ ಕುರಿತು ನಿಖರವಾದ ಮಾಹಿತಿಯನ್ನು ಸಂಗ್ರಹಿಸಲು ಸಂಶೋಧನೆಯನ್ನು ಮಾಡಬೇಕು. ಸಂಶೋಧನೆಯಲ್ಲಿ ಲಭಿಸಿದ ಮಾಹಿತಿಯನ್ನು ವಿಶ್ಲೇಶಿಸಿ, ಅದರಂತೆ ಉದ್ಯಮದ ಯೋಜನೆಯನ್ನು ಸಿದ್ಧಪಡಿಸಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ಎಲ್ಲಾ ಕಾರ್ಯಗಳನ್ನು ನಿಭಾಯಿಸುವ ಆತ್ಮವಿಶ್ವಾಸವಿದ್ದರೆ ಉದ್ಯಮವನ್ನು ಸ್ವತಃ ಸ್ಥಾಪಿಸಬಹುದು ಅಥವಾ ಉದ್ಯಮ ಕ್ಷೇತ್ರದ ಮಾರ್ಗದರ್ಶಕರನ್ನು ಸಂಪರ್ಕಿಸಬಹುದು. ಹೊಸ ಉದ್ಯಮಿಗಳಿಗೆ ನೆರವಾಗುವ ಕೇಂದ್ರ ಸರ್ಕಾರದ ಅನೇಕ ಯೋಜನೆಗಳ ಮಾಹಿತಿಗಾಗಿ ಗಮನಿಸಿ ://../-10------ ನಾನು ಪಿಯುಸಿ (ವಿಜ್ಞಾನ) ಮುಗಿಸಿದ್ದು ಕಾರಣಾಂತರಗಳಿಂದ ಪದವಿ ಕೋರ್ಸನ್ನು ಮುಂದುವರಿಸಲು ಆಗಲಿಲ್ಲ. ಈಗ ಬಿಎ (ದೂರ ಶಿಕ್ಷಣ) ಮಾಡಬೇಕೆಂದುಕೊಂಡಿದ್ದೇನೆ. ಇದರ ಬಗ್ಗೆ ಮಾಹಿತಿ ನೀಡಿ – ಹೆಸರು, ಊರು ತಿಳಿಸಿಲ್ಲ. ಬಿಎ ಕೋರ್ಸನ್ನು ಯಾವ ವಿಷಯದಲ್ಲಿ ಮಾಡಬೇಕು ಮತ್ತು ನಂತರದ ವೃತ್ತಿಜೀವನದ ಕನಸುಗಳೇನು ಎನ್ನುವುದರ ಬಗ್ಗೆ ನಿಮಗೆ ಸ್ಪಷ್ಟವಾದ ಕಲ್ಪನೆಯಿರಬೇಕು. 2023-2024ನೇ ಶೈಕ್ಷಣಿಕ ವರ್ಷದ ಪದವಿ ಕೋರ್ಸ್ (ದೂರಶಿಕ್ಷಣ) ಪ್ರವೇಶ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಉದಾಹರಣೆಗೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧಿಸೂಚನೆಯಂತೆ ಮೂರು ವರ್ಷದ ಬಿಎ ಪದವಿಗೆ ಅರ್ಜಿ ಸಲ್ಲಿಸಲು ದಿನಾಂಕ 31, ಆಗಸ್ಟ್ ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ ://../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.