ನೀಟ್‌–ಪಿಜಿ ಕಟ್‌ಆಫ್‌ ಶೂನ್ಯಕ್ಕೆ: ಐಎಂಎ ವಿರೋಧ ಬೆಂಗಳೂರು: ಕೇಂದ್ರ ಆರೋಗ್ಯ ಸಚಿವಾಲಯವು 2023ನೇ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌–ಪಿ.ಜಿ) ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಟ್‌ ಆಫ್ ಅಂಕವನ್ನು ಶೂನ್ಯಕ್ಕೆ ಇಳಿಸಿರುವುದಕ್ಕೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಐಎಂಎ ಕರ್ನಾಟಕ ಶಾಖೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರವು ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ. ‘ಕಟ್ ಆಫ್ ಅಂಕ ಹೆಚ್ಚಿಸಿದ್ದ ಕಾರಣ ದೇಶದಾದ್ಯಂತ ‌ವೈದ್ಯಕೀಯ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ದಾಖಲಾತಿಯಾಗುತ್ತಿಲ್ಲ. ಹೀಗಾಗಿ, ವೈದ್ಯಕೀಯ ಸೀಟುಗಳು ಖಾಲಿ ಉಳಿದಿವೆ. ಆದ್ದರಿಂದ ಕಟ್‌ ಆಫ್ ಅಂಕವನ್ನು ಇಳಿಸಬೇಕು’ ಎಂದು ಸ್ಥಾನಿಕ ವೈದ್ಯರ ಸಂಘ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ‌ಮನವಿ‌ ಮಾಡಿತ್ತು. ಸೆ.21ರಂದು ಆರೋಗ್ಯ ಸಚಿವಾಲಯವು ಕಟ್ ಆಫ್ ಅಂಕವನ್ನು ಶೂನ್ಯಕ್ಕೆ ತಗ್ಗಿಸಿ, ಆದೇಶ ಹೊರಡಿಸಿತ್ತು. ಈ ನಿರ್ಧಾರವನ್ನು ದೆಹಲಿಯ ಐಎಂಎ ಕೇಂದ್ರ ಕಚೇರಿ ಸ್ವಾಗತಿಸಿತ್ತು. ಈಗ ಐಎಂಎ ಕರ್ನಾಟಕ ಶಾಖೆಯು ಕೇಂದ್ರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ನಿರ್ಧಾರದಿಂದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದೆ. ‘ಕೇಂದ್ರದ ಈ ನಿರ್ಧಾರವು ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಜೀವರಸಾಯನ ವಿಜ್ಞಾನ, ಅಂಗರಚನಾ ವಿಜ್ಞಾನ ಸೇರಿ ಕೆಲವು ವಿಭಾಗಗಳನ್ನು ಹೊರತುಪಡಿಸಿದರೆ ಉಳಿದ ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ನಿರ್ಧಾರದಿಂದ ಹೆಚ್ಚಿನ ಬೇಡಿಕೆಯುಳ್ಳ ವಿಭಾಗಗಳಲ್ಲಿ ಸೀಟುಗಳು ಅಧಿಕ ಮೊತ್ತಕ್ಕೆ ಮಾರಾಟವಾಗುತ್ತವೆ’ ಎಂದು ಐಎಂಎ ಕರ್ನಾಟಕ ಶಾಖೆಯ ಅಧ್ಯಕ್ಷ ಶಿವಕುಮಾರ್ ಬಿ. ಲಕ್ಕೋಳ ತಿಳಿಸಿದ್ದಾರೆ. ಐಎಂಎ ಕರ್ನಾಟಕ ಶಾಖೆಯ ಕಾರ್ಯದರ್ಶಿ ಬಿ.ಪಿ. ಕರುಣಾಕರ್, ‘ಮಕ್ಕಳ ವೈದ್ಯ ವಿಜ್ಞಾನ, ಚರ್ಮ ವಿಜ್ಞಾನ ವಿಭಾಗದಲ್ಲಿ ಈಗಾಗಲೇ ಸೀಟುಗಳಿಗೆ ₹ 2.5 ಕೋಟಿ ಶುಲ್ಕ ಇದೆ. ಈ ಬೇಡಿಕೆ ಹೆಚ್ಚಳವಾಗುವ ನಿರೀಕ್ಷೆಯಿಂದ ಈಗಾಗಲೇ ಹಲವು ಖಾಸಗಿ ಕಾಲೇಜುಗಳು ಶುಲ್ಕವನ್ನು ಹೆಚ್ಚಿಸಿವೆ. ಏಜೆಂಟ್‌ಗಳು ಸಾಮಾನ್ಯವಾಗಿ ಸೀಟುಗಳನ್ನು ಬ್ಲಾಕ್ ಮಾಡುತ್ತಾರೆ. ಈ ಸೀಟುಗಳು ಮೆರಿಟ್ ಕೋಟಾ ವಿದ್ಯಾರ್ಥಿಗಳಿಗೆ ಲಭ್ಯವಾಗುವುದಿಲ್ಲ. ಆದ್ದರಿಂದ ಅಧಿಸೂಚನೆಯನ್ನು ವಾಪಸ್ ಪಡೆದು, ಖಾಲಿ ಇರುವ ಸೀಟುಗಳನ್ನು ಮೆರಿಟ್ ಮೂಲಕವೇ ಭರ್ತಿ ಮಾಡಲು ಕ್ರಮವಹಿಸಬೇಕು’ ಎಂದು ಆಗ್ರಹಿಸಿದ್ದಾರೆ. ‘ಎಲ್ಲಾ ಖಾಸಗಿ ಕಾಲೇಜುಗಳಲ್ಲಿ ಖಾಲಿ ಇರುವ ಸೀಟುಗಳನ್ನು ಸರ್ಕಾರಿ ಕೋಟಾ ಸೀಟುಗಳಾಗಿ ಪರಿವರ್ತಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.