ಕೃಷ್ಣಮೂರ್ತಿ ಅವರ ವಿಶ್ಲೇಷಣೆ: ಉನ್ನತ ಶಿಕ್ಷಣ– ಸೀಮೋಲ್ಲಂಘನೆಯ ಪರ್ವ ದೇಶದ ಎಂಟು ಉತ್ಕೃಷ್ಟ ಸಾರ್ವಜನಿಕ ಸಂಸ್ಥೆಗಳಲ್ಲಿ (ಪಬ್ಲಿಕ್ ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್) ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಮದ್ರಾಸ್‍ನಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಸ್ಥೆಗೆ ಈಗ ಸಂಭ್ರಮ, ಸಡಗರದ ಸಮಯ. 1959ರಲ್ಲಿ ಅಂದಿನ ಪಶ್ಚಿಮ ಜರ್ಮನಿ ಸರ್ಕಾರದ ತಾಂತ್ರಿಕ ಮತ್ತು ಆರ್ಥಿಕ ಸಹಕಾರದಿಂದ ಅಸ್ತಿತ್ವಕ್ಕೆ ಬಂದ, ದೇಶದ ಮೂರನೆಯ ಐಐಟಿ, ಕಳೆದ ಆರು ದಶಕಗಳಲ್ಲಿ ಅಪೂರ್ವ ಪ್ರಗತಿ ಸಾಧಿಸಿ, ದೇಶದ ಅಗ್ರಮಾನ್ಯ ತಾಂತ್ರಿಕ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಗೆ ಸೇರಿ, ಇದೀಗ ಪೂರ್ವ ಆಫ್ರಿಕಾದ ತಾಂಜೇನಿಯಾ ದೇಶದ ಜಾಂಜಿಬಾರ್ ದ್ವೀಪ ಸಮೂಹದಲ್ಲಿ, ಭಾರತ ಸರ್ಕಾರದ ಮೊತ್ತಮೊದಲ ‘ವಿದೇಶಿ ಕ್ಯಾಂಪಸ್’ ಅನ್ನು ಸ್ಥಾಪಿಸಿ, ತಾಂತ್ರಿಕ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲಿದೆ. ಮುಂದಿನ ಎರಡು ತಿಂಗಳ ಒಳಗಾಗಿ ಪ್ರಾರಂಭವಾಗಲಿರುವ ಐಐಟಿ ಮದ್ರಾಸ್‍ನ ಜಾಂಜಿಬಾರ್ ಶಾಖೆ, ನಮ್ಮ ದೇಶದ ಉನ್ನತ ಶಿಕ್ಷಣ ಕ್ಷೇತ್ರದ ಅಂತರರಾಷ್ಟ್ರೀಕರಣ ಪ್ರಕ್ರಿಯೆಯಲ್ಲಿ ಅತಿ ಮಹತ್ವದ ಹೆಜ್ಜೆಯಾಗಲಿದೆಯೆಂಬ ನಿರೀಕ್ಷೆಯಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 2020ರಲ್ಲಿ ಪ್ರಕಟಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯ ‘ಶಿಕ್ಷಣದ ಅಂತರರಾಷ್ಟ್ರೀಕರಣ’ ವಿಭಾಗದಲ್ಲಿ, ನಮ್ಮ ದೇಶದ ಉತ್ಕೃಷ್ಟ ವಿಶ್ವವಿದ್ಯಾಲಯಗಳಿಗೆ ವಿದೇಶಗಳಲ್ಲಿ ಕ್ಯಾಂಪಸ್‍ಗಳನ್ನು ತೆರೆಯುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವ ಪ್ರಸ್ತಾಪವಿದೆ. ಈ ಪ್ರಸ್ತಾಪಕ್ಕೆ ಖಚಿತ ರೂಪ ನೀಡುವ ಉದ್ದೇಶದಿಂದ 2021ರಲ್ಲಿ, ಜೆಎನ್‍ಯು ಉಪಕುಲಪತಿ, ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ, ದೇಶದ 23 ಐಐಟಿಗಳ ನಿರ್ದೇಶಕರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಯಿತು. ಈ ಪ್ರಸ್ತಾಪದ ಎಲ್ಲ ಆಯಾಮಗಳನ್ನೂ ವಿಷದವಾಗಿ ಪರಿಶೀಲಿಸಿದ ಪರಿಣತರ ತಂಡ, ವಿದೇಶಗಳಲ್ಲಿ ನಮ್ಮ ದೇಶದ ಉತ್ಕೃಷ್ಟ ವಿದ್ಯಾಸಂಸ್ಥೆಗಳ ಶಾಖೆಗಳನ್ನು ತೆರೆಯುವ ಪ್ರಸ್ತಾಪವನ್ನು ಬಲವಾಗಿ ಬೆಂಬಲಿಸುವುದರ ಜೊತೆಗೆ ಅಂತಹ ಪ್ರಯತ್ನಕ್ಕೆ ನಾಲ್ಕು ಮಾದರಿಗಳನ್ನು ಸೂಚಿಸಿತು. ಅವುಗಳಲ್ಲಿ ಯಾವುದೇ ಒಂದು ಐಐಟಿ ಸ್ವತಂತ್ರವಾಗಿ ವಿದೇಶಿ ನೆಲದಲ್ಲಿ ಕ್ಯಾಂಪಸ್ ಸ್ಥಾಪಿಸುವ ಮಾದರಿಗೆ ಒಮ್ಮತದ ಬೆಂಬಲ ದೊರೆಯಿತು. ಅದರಂತೆ ಇದೀಗ ಮದ್ರಾಸ್ ಐಐಟಿಯು ಜಾಂಜಿಬಾರ್‌ನಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲಿದೆ. ತಾಂಜೇನಿಯಾದಲ್ಲಿರುವ ಭಾರತದ ರಾಯಭಾರಿ, ಮದ್ರಾಸ್ ಐಐಟಿಯ ಗ್ಲೋಬಲ್ ಎಂಗೇಜ್‍ಮೆಂಟ್ ವಿಭಾಗದ ಮುಖ್ಯಸ್ಥರು ಮತ್ತು ಜಾಂಜಿಬಾರ್‌ನ ಶಿಕ್ಷಣ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಜುಲೈ 5ರಂದು ಈ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಶೈಕ್ಷಣಿಕ ಕಾರ್ಯಕ್ರಮಗಳು, ಪಠ್ಯ ವಿಷಯ, ಬೋಧನೆಯ ಮಾದರಿ, ಸಂಶೋಧನೆ, ವಿದ್ಯಾರ್ಥಿಗಳ ಆಯ್ಕೆಯಂತಹವುಗಳನ್ನು ಐಐಟಿ ಮದ್ರಾಸ್ ಸ್ವತಂತ್ರವಾಗಿ ನಿರ್ವಹಿಸಲಿದೆ. ಇಂಗ್ಲಿಷ್ ಭಾಷೆಯಲ್ಲಿ ಬೋಧನೆ ನಡೆಯಲಿದ್ದು, ಸೆಮಿಸ್ಟರ್ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಪದವಿ, ಸ್ನಾತಕೋತ್ತರ ಮತ್ತು ಸಂಶೋಧನೆ ಆಧಾರಿತ ಪಿಎಚ್‍.ಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೂಲ ಸೌಕರ್ಯಗಳ ನಿರ್ಮಾಣ, ವಿಶ್ವವಿದ್ಯಾಲಯದ ವಿವಿಧ ಯೋಜನೆಗಳು ಮತ್ತು ಕಾರ್ಯಾಚರಣೆಯ ಖರ್ಚುವೆಚ್ಚಗಳನ್ನು ತಾಂಜೇನಿಯಾ ಸರ್ಕಾರ ಭರಿಸಲಿದೆ. ಜಾಂಜಿಬಾರ್ ದ್ವೀಪ ಸಮೂಹದ ಬ್ವೆಲಿಯೋ ಜಿಲ್ಲೆಯಲ್ಲಿ ಕಲ್ಪಿಸಲಾಗಿರುವ ತಾತ್ಕಾಲಿಕ ವ್ಯವಸ್ಥೆಯಲ್ಲಿ ಜಾಂಜಿಬಾರ್- ಐಐಟಿ ಮದ್ರಾಸ್ ಕೆಲಸ ಪ್ರಾರಂಭಿಸಲಿದೆ. 2026ರ ಪ್ರಾರಂಭದ ವೇಳೆಗೆ 300 ಎಕರೆಗಳಷ್ಟು ವಿಶಾಲವಾದ ಪ್ರದೇಶದ ಎರಡು ಕ್ಯಾಂಪಸ್‍ಗಳಲ್ಲಿ ವಿವಿಧ ವಿಭಾಗಗಳು, ಅತ್ಯಾಧುನಿಕ ತಂತ್ರಜ್ಞಾನ ಸುಸಜ್ಜಿತ ಕೊಠಡಿಗಳು, ಪ್ರಯೋಗಾಲಯ, ಗ್ರಂಥಾಲಯ, ರಂಗಮಂದಿರ, ಇನೊವೇಶನ್ ಸೆಂಟರ್‌ನಂತಹವು ಸಿದ್ಧವಾಗಲಿವೆ. ಸದ್ಯಕ್ಕೆ ಈ ವರ್ಷದ ಅಕ್ಟೋಬರ್ 25ರ ಸುಮಾರಿಗೆ ಪದವಿಯ ಮಟ್ಟದಲ್ಲಿ ಬಿಎಸ್/ಬಿಟೆಕ್ (ಡೇಟಾ ಸೈನ್ಸ್) ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಎಂಟೆಕ್ (ಎಐ) ತರಗತಿಗಳು ಪ್ರಾರಂಭವಾಗಲಿವೆ. ಮುಂದೆ ಕಂಪ್ಯೂಟರ್ ಸೈನ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಮಶೀನ್ ಲರ್ನಿಂಗ್, ರೊಬಾಟಿಕ್ಸ್, ಎಲೆಕ್ಟ್ರಾನಿಕ್ಸ್, ಗಣಿಗಾರಿಕೆ ಮತ್ತು ಶಕ್ತಿ ಉತ್ಪಾದನೆಗೆ ಸಂಬಂಧಿಸಿದ ಕೋರ್ಸ್‍ಗಳನ್ನು ಪ್ರಾರಂಭಿಸಲಾಗುವುದು. ಸದ್ಯಕ್ಕೆ, ಈ ವರ್ಷ ಪದವಿಗೆ 50 ಮತ್ತು ಸ್ನಾತಕೋತ್ತರ ತರಗತಿಗೆ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಪದವಿಗೆ ವಾರ್ಷಿಕ 12,000 ಡಾಲರ್‌ಗಳು ಮತ್ತು ಸ್ನಾತಕೋತ್ತರಕ್ಕೆ 4,000 ಡಾಲರ್‌ಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪ್ರಾರಂಭದಲ್ಲಿ ಮದ್ರಾಸ್ ಐಐಟಿಯ ಪ್ರಾಧ್ಯಾಪಕರೇ ಜಾಂಜಿಬಾರ್ ಕ್ಯಾಂಪಸ್‍ನಲ್ಲಿ ತರಗತಿಗಳನ್ನು ನಡೆಸುವುದರ ಜೊತೆಗೆ ಸ್ಥಳೀಯ ಅಧ್ಯಾಪಕರಿಗೆ ತರಬೇತಿ ನೀಡಲಿದ್ದಾರೆ. ನಮ್ಮ ದೇಶದ ವಿವಿಧ ಐಐಟಿಗಳಲ್ಲಿ ಅಧ್ಯಯನ ಮಾಡುತ್ತಿರುವ ತಾಂಜೇನಿಯಾದ ವಿದ್ಯಾರ್ಥಿಗಳನ್ನು ಮುಂದೊಮ್ಮೆ ಜಾಂಜಿಬಾರ್ ಐಐಟಿಗೆ ಕರೆತರುವ ಉದ್ದೇಶದಿಂದ ಅವರಿಗೆ 50 ವಿಶೇಷ ವಿದ್ಯಾರ್ಥಿ ವೇತನವನ್ನು ಭಾರತ ಸರ್ಕಾರ ನೀಡಲು ಪ್ರಾರಂಭಿಸಿದೆ. ಮದ್ರಾಸ್ ಐಐಟಿ ಜಾಗತಿಕವಾಗಿ ಪ್ರಪಂಚದ ವಿವಿಧ ವಿಶ್ವವಿದ್ಯಾಲಯಗಳು, ಪ್ರತಿಷ್ಠಿತ ಕಂಪನಿಗಳು, ಸಂಶೋಧನಾ ಸಂಸ್ಥೆಗಳಂತಹವುಗಳೊಂದಿಗೆ ಇಂಟರ್ನ್‍ಶಿಪ್, ವಿದ್ಯಾರ್ಥಿ ವಿನಿಮಯಕ್ಕಾಗಿ ಮಾಡಿಕೊಂಡಿರುವ ಎಲ್ಲ ಒಪ್ಪಂದಗಳ ಪ್ರಯೋಜನಗಳೂ ಜಾಂಜಿಬಾರ್ ಐಐಟಿಯ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮದ್ರಾಸ್ ಐಐಟಿಯೇ ಅಂತಿಮವಾಗಿ ಪದವಿಯನ್ನು ನೀಡುವುದರಿಂದ, ಆ ಸಂಸ್ಥೆಯ ಬ್ಯ್ರಾಂಡ್ ಮೌಲ್ಯ ವಿದ್ಯಾರ್ಥಿಗಳು ಪಡೆದ ಪದವಿಗಳಿಗೆ ವಿಶೇಷ ಮೆರಗು ನೀಡಲಿದೆ. ಜಾಂಜಿಬಾರ್ ಐಐಟಿಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ವಿಶೇಷ ಆಕರ್ಷಣೆಯೆಂದರೆ, ಜಗತ್ತಿನಲ್ಲೇ ಅತ್ಯಂತ ಕಠಿಣ ಪ್ರವೇಶ ಪರೀಕ್ಷೆಯೆಂಬ ಕುಖ್ಯಾತಿಗೆ ಒಳಗಾಗಿರುವ ಎರಡು ಹಂತದ ಜೆಇಇ ಪರೀಕ್ಷೆಯಿಲ್ಲದೆಯೇ ಐಐಟಿಗೆ ಪ್ರವೇಶ ಪಡೆಯಲು ಕಲ್ಪಿಸಿರುವ ಅವಕಾಶ. ಜೆಇಇ ಬದಲಿಗೆ ಮೊದಲನೆಯ ಹಂತದಲ್ಲಿ ಮದ್ರಾಸ್ ಐಐಟಿ ರೂಪಿಸಿರುವ ‘ಐಐಟಿ- ಜಾಂಜಿಬಾರ್ ಸ್ಕ್ರೀನಿಂಗ್ ಟೆಸ್ಟ್’ ತೆಗೆದುಕೊಳ್ಳಬೇಕು. ಅದರಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಒಂದು ತಿಂಗಳ ತರಬೇತಿ ನೀಡಲಾಗುತ್ತದೆ. ಆನಂತರ ನಡೆಯುವ ಸಂದರ್ಶನದ ಮೂಲಕ ಯಶಸ್ವಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ದೇಶದಲ್ಲಿ ವಾರ್ಷಿಕ 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆಇಇ ಪರೀಕ್ಷೆ ಬರೆಯುತ್ತಾರೆ. 8- 9ನೇ ತರಗತಿಯಲ್ಲಿ ಇರುವಾಗಲೇ ಜೆಇಇ ಪರೀಕ್ಷೆಗೆ ಸಿದ್ಧತೆ ಪ್ರಾರಂಭವಾಗುವುದುಂಟು. ಐದಾರು ವರ್ಷಗಳ ಸತತ ಸಿದ್ಧತೆಯ ನಂತರ ಜೆಇಇಯಲ್ಲಿ ಉತ್ತೀರ್ಣರಾಗಿ ಐಐಟಿ ಸೇರುವ ವಿದ್ಯಾರ್ಥಿಗಳ ಗುಣಮಟ್ಟ ಸಹಜವಾಗಿಯೇ ಅತ್ಯುತ್ತಮವಾಗಿರುತ್ತದೆ. ಇಂತಹ ಕಠಿಣ ಆಯ್ಕೆಯ ಪ್ರಕ್ರಿಯೆಯಿಲ್ಲದೇ ಜಾಂಜಿಬಾರ್ ಐಐಟಿ ಸೇರುವ ವಿದ್ಯಾರ್ಥಿಗಳದ್ದು ‘ಹಿಂಬಾಗಿಲ ಪ್ರವೇಶ’ವಾಗುತ್ತದೆ ಎಂಬ ಟೀಕೆಯಿದೆ. ಆದರೆ ಜಾಂಜಿಬಾರ್ ಐಐಟಿಗೆ ಮೊದಲ ಪ್ರವೇಶ ನಡೆಯುವ ಮುಂಚೆಯೇ ಬಂದಿರುವ ಈ ಟೀಕೆಯನ್ನು, ಮದ್ರಾಸ್ ಐಐಟಿಯ ಪ್ರಾಧ್ಯಾಪಕರು ಅಕಾಲಿಕ ಮತ್ತು ಅಪಕ್ವವೆಂದು ತಿರಸ್ಕರಿಸಿದ್ದಾರೆ. ಪ್ರವೇಶ ಪರೀಕ್ಷೆಯ ಸ್ವರೂಪ ಬೇರೆಯದಿರಬಹುದು. ಆದರೆ ಒಟ್ಟಾರೆಯಾಗಿ ಮದ್ರಾಸ್ ಐಐಟಿಯ ಬ್ರ್ಯಾಂಡ್ ಮೌಲ್ಯವನ್ನು ನಿರ್ಧರಿಸಿರುವ ಶಿಕ್ಷಣದ ಗುಣಮಟ್ಟ ಯಾವ ಹಂತದಲ್ಲೂ ಇಳಿಯುವುದಿಲ್ಲವೆಂಬ ಸ್ಪಷ್ಟನೆಯನ್ನು ಸಂಸ್ಥೆಯ ಆಡಳಿತ ಮಂಡಳಿ ನೀಡಿದೆ. ಜಾಂಜಿಬಾರ್ ಐಐಟಿಯಲ್ಲಿ ಭಾರತೀಯ ವಿದ್ಯಾರ್ಥಿಗಳೇ ತುಂಬಿಹೋಗುವುದನ್ನು ತಡೆಯಲು ಈ ವರ್ಷದ ಪದವಿ ತರಗತಿಗೆ 20 ಭಾರತೀಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಮುಂದೆಯೂ ಈ ಸಂಖ್ಯೆಯ ಮೇಲೆ ನಿಯಂತ್ರಣ ಇರಲಿದೆ. ಮದ್ರಾಸ್ ಐಐಟಿಯ ಹೊಸ ಸಾಹಸದ ಬೆನ್ನಿನಲ್ಲೇ ದೆಹಲಿಯ ಐಐಟಿ ಅಬುಧಾಬಿಯಲ್ಲಿ ಸ್ಥಾಪಿಸಲಿರುವ ಕ್ಯಾಂಪಸ್‍ನಲ್ಲಿ ಜನವರಿ 2024ರಿಂದ ಪದವಿ ಮತ್ತು ಸೆಪ್ಟೆಂಬರ್ 2024ರಿಂದ ಸ್ನಾತಕೋತ್ತರ ಕೋರ್ಸ್‍ಗಳನ್ನು ಪ್ರಾರಂಭಿಸಲಿದೆ. ಖರಗ್‍ಪುರ ಐಐಟಿಯು ಕ್ವಾಲಾಲಂಪುರದಲ್ಲಿ ಕ್ಯಾಂಪಸ್ ಸ್ಥಾಪಿಸುವ ಯೋಚನೆಯಲ್ಲಿದೆ. ಖಾಸಗಿ ವಲಯದಲ್ಲಿ ನಮ್ಮ ದೇಶದ ಹಲವಾರು ವಿಶ್ವವಿದ್ಯಾಲಯಗಳು ದುಬೈ, ತಾಷ್ಕೆಂಟ್, ಮಾರಿಷಸ್, ನೈರೋಬಿಯಲ್ಲಿ ಶಾಖೆಗಳನ್ನು ಸ್ಥಾಪಿಸಿವೆ. ಜಾಗತಿಕ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ, ವಿದೇಶಿ ನೆಲದಲ್ಲಿ ಮೊತ್ತಮೊದಲ ಬಾರಿಗೆ ಭಾರತದ ಹೆಜ್ಜೆ ಗುರುತನ್ನು ಸಮರ್ಥವಾಗಿ ನಿರೂಪಿಸುವ ಈ ಹೊಸ ಪ್ರಯತ್ನದಲ್ಲಿ ಅನೇಕ ಸವಾಲುಗಳಿವೆ. ಅವೆಲ್ಲವನ್ನೂ ಎದುರಿಸಿ, ಹೊಸ ಸಂಸ್ಥೆಯೊಂದನ್ನು ಮೂಲದಿಂದ ಪ್ರಾರಂಭಿಸಿ ಕಟ್ಟುವ ಒಟ್ಟಾರೆ ಜವಾಬ್ದಾರಿಯನ್ನು, ಮದ್ರಾಸ್ ಐಐಟಿಯ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ, ಪ್ರಖ್ಯಾತ ಸಂಶೋಧನಾ ವಿಜ್ಞಾನಿ, ಅಮೆರಿಕದ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಪ್ರೀತಿ ಅಹಲ್ಯ ಅವರಿಗೆ ನೀಡಲಾಗಿದೆ. ಅದು ಅಸಾಧಾರಣ ಪ್ರತಿಭೆ, ಸಾಮರ್ಥ್ಯದ ಮಹಿಳೆಗೆ ಸಂದಿರುವ ಅತಿ ವಿಶಿಷ್ಟ ಗೌರವ. ಜಾಂಜಿಬಾರ್ ಕ್ಯಾಂಪಸ್‍ನ ಎಲ್ಲ ಮೂಲ ಸೌಕರ್ಯಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಸಿವಿಲ್ ಎಂಜಿನಿಯರಿಂಗ್ ಪ್ರಾಧ್ಯಾಪಕಿ ಡಾ. ಲಿಜಿ ಫಿಲಿಪ್ ನಿರ್ವಹಿಸಲಿದ್ದಾರೆ. ಅಂದಹಾಗೆ, ಪ್ರೀತಿ ಅಹಲ್ಯ, ಸಾಂಸ್ಕೃತಿಕ ನಗರಿ ಮೈಸೂರಿನ ಶಿಕ್ಷಕರ ಕುಟುಂಬದಲ್ಲಿ ಜನ್ಮತಾಳಿ, ಮೈಸೂರಿನಲ್ಲೇ ಪ್ರಾರಂಭಿಕ ಶಿಕ್ಷಣವನ್ನು ಮುಗಿಸಿದ ವಿದ್ಯಾರ್ಥಿನಿ. ಇಂದು ಕರ್ನಾಟಕ, ಕನ್ನಡದ ಹೆಮ್ಮೆಯ ಹೆಣ್ಣುಮಗಳು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.