ಶಿಕ್ಷಣ ನೀತಿ: ಆಗಬೇಕಿರುವುದೇನು? ಹಿನ್ನೆಲೆಯಲ್ಲಿ ಸಬಿತಾ ಬನ್ನಾಡಿ ಅವರ ಲೇಖನ ‘ಮೇಡಂ, ದೊಡ್ಡ ಫೋನ್ ಕೊಡಿಸ್ಲೇಬೇಕಾ?’ ಬಿಸಿಲ ದುಡಿಮೆಗೆ ಚರ್ಮ ಸುಕ್ಕಾಗಿ ಕಪ್ಪಾಗಿರುವ ಮುಖ, ಚಪ್ಪಲಿಯಿಲ್ಲದ ಕಾಲು, ಮಾಸಲು ಬಟ್ಟೆಯಲ್ಲಿರುವ, ವಯಸ್ಸು ಹೆಚ್ಚಾಗಿ ಕಾಣುವ ತಂದೆಯೊಬ್ಬರು ತಮ್ಮ ಮಗಳನ್ನು ಓದಿಸುವ ಆಸೆಯಲ್ಲಿ ಕಾಲೇಜಿಗೆ ಸೇರಿಸಲು ಬಂದವರು ಹೀಗೆ ಕೇಳುತ್ತಿರುವಾಗ ನನಗೆ, ‘ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದ’ ಅನುಭವ. ಪದವಿಯ ರಾಷ್ಟ್ರೀಯ ಶಿಕ್ಷಣ ನೀತಿಯ ಜೊತೆಗೆ ಸ್ಮಾರ್ಟ್‍ಫೋನನ್ನು ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಲಾಗಿತ್ತು. ಅವರು ಪ್ರತಿದಿನ ಅದರಲ್ಲೇ ಲಾಗಿನ್ ಆಗಬೇಕು. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸುವ್ಯವಸ್ಥಿತವಾಗಿ, ಅಲ್ಲಿನ ಪರಿಸರಕ್ಕೆ ತಕ್ಕಂತೆ ಅಳವಡಿಸಿರುವ ಇಂತಹ ಶಿಕ್ಷಣ ಕ್ರಮದಿಂದ ಪ್ರೇರಿತಗೊಂಡು ಇಲ್ಲೂ ಅದನ್ನು ಜಾರಿಗೊಳಿಸುವ ಆತುರ ಸರ್ಕಾರಕ್ಕೆ ಇತ್ತಾದರೂ ಇಲ್ಲಿನ ತಳಮಟ್ಟದ ಸಮಸ್ಯೆಗಳ ಸ್ವರೂಪದ ಅಗಾಧತೆಯೇ ಬೇರೆ ರೀತಿಯದು. ಎರಡು– ಮೂರು ಸಾವಿರ ರೂಪಾಯಿ ಫೀಸನ್ನು ಕಟ್ಟುವುದೂ ಕಷ್ಟವಾಗಿರುವ ವಿದ್ಯಾರ್ಥಿಗಳ ನಡುವೆ ನಾವಿದ್ದೇವೆ. ಹೆಣ್ಣುಮಕ್ಕಳಿಗೆ ಅತಿಬೇಗ ಮದುವೆ, ಹುಡುಗರು ದುಡಿಮೆಯ ಕಾರಣಕ್ಕೆ ಪದವಿಯನ್ನು ಅರ್ಧದಲ್ಲೇ ಕೈಬಿಡುವುದಂತೂ ನಿವಾರಿಸಿಕೊಳ್ಳಲಾಗದ ಸಂಗತಿಗಳಾಗಿವೆ. ಹಾಗೆ ನೋಡಿದರೆ ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳು ಅತ್ಯಂತ ವೇಗವಾಗಿ ಯಶಸ್ಸನ್ನು ಸಾಧಿಸಿದ್ದು ಅಲ್ಲಿನ ಗುಣಮಟ್ಟದ ಶಿಕ್ಷಣ, ಶಿಕ್ಷಕರಿಂದ. ಹೋಬಳಿ ಮಟ್ಟದಲ್ಲೂ ಮಕ್ಕಳಿಗೆ ಕನಿಷ್ಠ ಹಣದಲ್ಲಿ ಗರಿಷ್ಠ ಶಿಕ್ಷಣ ಲಭ್ಯವಾದ್ದರಿಂದಾಗಿ ಸುಸಜ್ಜಿತ ಖಾಸಗಿ ಕಾಲೇಜುಗಳಿಗಿಂತಲೂ ಕನಿಷ್ಠ ಭೌತಿಕ ಸೌಲಭ್ಯದ ಸರ್ಕಾರಿ ಕಾಲೇಜುಗಳೆಡೆಗೆ ವಿದ್ಯಾರ್ಥಿಗಳು ಧಾವಿಸುತ್ತಾರೆ. ಹೀಗಿರುವಾಗ ಇದ್ದಕ್ಕಿದ್ದಂತೆ ಎನ್‍ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಜಾರಿಯಾಯಿತು. ಈಗಿನ ಸರ್ಕಾರ ಇದೀಗ ಎಸ್‍ಇಪಿ (ರಾಜ್ಯ ಶಿಕ್ಷಣ ನೀತಿ) ಜಾರಿಗೆ ತರುವ ಬಗ್ಗೆ ಹೇಳುತ್ತಿದೆ. ಎನ್‍ಇಪಿ ಎಂದರೆ ಬರೀ ಪಠ್ಯಕ್ರಮದ ಹೇರಿಕೆ ಅಥವಾ ಬದಲಾವಣೆ ಆಗಿರುವುದಲ್ಲ. ಬದಲಿಗೆ ಶಿಕ್ಷಣದ ಒಟ್ಟು ಚೌಕಟ್ಟನ್ನೇ ಬದಲಿಸಿರುವುದು. ಎನ್‍ಇಪಿಯನ್ನು ಅಳವಡಿಸುವಾಗ ಪದವಿ ಕಾಲೇಜಿನ ವಿದ್ಯಾರ್ಥಿಗಳನ್ನಾಗಲೀ ಉಪನ್ಯಾಸಕರನ್ನಾಗಲೀ ಗಣನೆಗೇ ತೆಗೆದುಕೊಳ್ಳಲಿಲ್ಲ. ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಸಭೆ ನಡೆಸಲಾಯಿತು. ಆದರೆ ಈ ಕುಲಪತಿಗಳಿಗೆ ಪದವಿಯ ಸಿಲೆಬಸ್ ಕೂಡಾ ಗೊತ್ತಿರುವುದಿಲ್ಲ. ಯಾಕೆಂದರೆ ಅವರೆಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡಿದವರಾಗಿರುತ್ತಾರೆಯೇ ವಿನಾ ಒಂದು ದಿನಕ್ಕಾದರೂ ಪದವಿ ಪಾಠ ಮಾಡಿರುವುದಿಲ್ಲ. ಇಲ್ಲಿನ ಗ್ರೌಂಡ್ ರಿಯಾಲಿಟಿ ತಿಳಿದಿಲ್ಲದ ಒಂದಿಷ್ಟು ಜನರನ್ನು ಸೇರಿಸಿಕೊಂಡು ಮಾಡಿದ ಸಮಿತಿಯು ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಕೂಲವಾಗುವಂತೆ ಕೊಟ್ಟ ನಿರ್ದೇಶನಗಳನ್ನು ಯಾವ ಸವಲತ್ತೂ ಇಲ್ಲದ ಸರ್ಕಾರಿ ಕಾಲೇಜುಗಳವರು ತುಟಿಪಿಟಕ್ಕೆನ್ನದೆ ಅನುಸರಿಸುವುದು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಎನ್ಇಪಿಯನ್ನು ಹೊರನೋಟದಲ್ಲಿ ಒಂದು ದಾಖಲೆಯ ರೂಪದಲ್ಲಿ ಓದಿದಾಗ ಅದ್ಭುತವಾಗಿ ಕಾಣಿಸುತ್ತದೆ. ಆದರೆ ಒಳಗಿನ ಕತೆ ಬೇರೆಯೇ ಇದೆ. ಮೊದಲು ಪದವಿ ಮಕ್ಕಳು ಮೂರು ಮೇಜರ್ ಸಬ್ಜೆಕ್ಟ್‌ಗಳ ಜೊತೆಗೆ ಎರಡು ಭಾಷೆಗಳನ್ನು ಅಧ್ಯಯನ ಮಾಡುತ್ತಿದ್ದರು. ಇದು ಪ್ರೋಗ್ರಾಂಗಳಾಗಿ (ಬಿಎ, ಬಿಕಾಂ, ಬಿಎಸ್ಸಿ) ಇದ್ದು ಆಸಕ್ತರು ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಎನ್ಇಪಿಯಲ್ಲಿ ಎರಡು ವಿಷಯಗಳ ನಾಲ್ಕು ಪೇಪರ್+ ಮುಕ್ತ ಆಯ್ಕೆಯ ಒಂದು ಪೇಪರ್+ ಎರಡು ಭಾಷೆಗಳನ್ನು ಅಧ್ಯಯನ ಮಾಡುತ್ತಾರೆ. ಇವುಗಳ ಜೊತೆಗೆ ಪ್ರತಿ ಸೆಮಿಸ್ಟರ್‌ನಲ್ಲಿ ಪ್ರತ್ಯೇಕವಾಗಿ ಯೋಗ, ಎನ್‍ಎಸ್‍ಎಸ್, ಕ್ರೀಡೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಡಿಜಿಟಲ್ ಫ್ಲೂಯೆನ್ಸಿಯಂತಹವು ಕಡ್ಡಾಯವಾಗಿರುತ್ತವೆ. ಮುಕ್ತ ಆಯ್ಕೆ ಎಂದರೆ ಯಾವುದೇ ಪ್ರೋಗ್ರಾಂನ ವಿದ್ಯಾರ್ಥಿ ಇನ್ನಾವುದೇ ಪ್ರೋಗ್ರಾಂನ ಒಂದು ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ಇತಿಹಾಸ, ಅರ್ಥಶಾಸ್ತ್ರದ ಜೊತೆಗೆ ಫಿಸಿಕ್ಸ್, ಕಾಮರ್ಸ್ ಏನಾದರೂ ತೆಗೆದುಕೊಳ್ಳಬಹುದು. ಆದರೆ ಕರ್ನಾಟಕದಲ್ಲಿ, ತಮ್ಮದೇ ಪ್ರೋಗ್ರಾಂನ ಇನ್ನೊಂದು ಸಬ್ಜೆಕ್ಟ್ ತೆಗೆದುಕೊಳ್ಳಲು ಅವಕಾಶ ನೀಡಲಿಲ್ಲ. ಉದಾಹರಣೆಗೆ ಕಲಾ ವಿಭಾಗದ ಮಕ್ಕಳು ಕಡ್ಡಾಯವಾಗಿ ಒಂದು ಪೇಪರ್‌ ಅನ್ನು ವಿಜ್ಞಾನ, ವಾಣಿಜ್ಯ, ಬಿಬಿಎ ಇತ್ಯಾದಿಯಿಂದಲೇ ತೆಗೆದುಕೊಳ್ಳುವಂತೆ ನಿರ್ಬಂಧಿಸಲಾಯಿತು. ಈ ವಿಷಯವನ್ನು ಅವರು ಎರಡು ವರ್ಷ ಓದುತ್ತಾರೆ. ಮುಂದೆ ಇದರಲ್ಲಿ ಅವರು ಮಾಸ್ಟರ್ಸ್ ಮಾಡಲು ಅವಕಾಶ ಇಲ್ಲ. ಇನ್ನು ಯೋಗ, ಎನ್‍ಎಸ್‍ಎಸ್, ಕ್ರೀಡೆ, ಡಿಜಿಟಲ್ ಫ್ಲೂಯೆನ್ಸಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇತ್ಯಾದಿಗಳನ್ನೆಲ್ಲಾ ಇವರು ಕಲಿತಿದ್ದಾರೆ ಎಂಬಂತೆ ಅವರ ಮಾರ್ಕ್ಸ್‌ಕಾರ್ಡ್ ನೋಡಿದಾಗ ಭಾಸವಾಗುತ್ತದೆ. ನೋಡುವವರು ಮೂಗಿನ ಮೇಲೆ ಬೆರಳಿಡುವಂತೆ ಈ ಸಬ್ಜೆಕ್ಟ್‌ಗಳು ಕಾಣುತ್ತವೆ. ಆದರೆ ಇಲ್ಲಿ ಇವರು ಏನೂ ಕಲಿತಿರುವುದಿಲ್ಲ. ಒಬ್ಬ ಸೈನ್ಸ್ ವಿದ್ಯಾರ್ಥಿಯನ್ನೇ ಬೇಕಿದ್ದರೆ ನೀವು ಕೇಳಿ ನೋಡಿ. ಡಿಜಿಟಲ್ ಫ್ಲೂಯೆನ್ಸಿಯನ್ನು ಹೇಗೋ ಇಪ್ಪತ್ತೈದು ಅಂಕಕ್ಕೆ ಬರೆದು ಪಾಸಾಗಿದ್ದೇವೆ ಎಂದು ನಿಟ್ಟುಸಿರು ಬಿಡುತ್ತಾರೆ. ವಾಸ್ತವವಾಗಿ ಆಗಿದ್ದೇನೆಂದರೆ, ಮೊದಲು ಶಿಸ್ತಾಗಿ ಕಲಿಯುತ್ತಿದ್ದ ಮೂರು ಸಬ್ಜೆಕ್ಟ್‌ಗಳಲ್ಲಿ ಈಗ ಒಂದು ಮೈನಸ್ ಆಯ್ತು ಅಷ್ಟೇ. ಉಳಿದಿದ್ದೆಲ್ಲ ಅಂಕಪಟ್ಟಿಯಲ್ಲಿ ಅಲಂಕಾರಕ್ಕೆ ಇವೆಯೇ ವಿನಾ ಆ ವಿಷಯಗಳಿಂದ ಕಾಲೇಜಿನ ಒಳಗೂ ಹೊರಗೂ ಯಾವ ಉಪಯೋಗವೂ ಇಲ್ಲ. ಮೊದಲಾದರೆ ಮೂರು ವಿಷಯಗಳಲ್ಲಿ ಯಾವುದರಲ್ಲಿ ಬೇಕಿದ್ದರೂ ಮಾಸ್ಟರ್ಸ್ ಮಾಡಬಹುದಿತ್ತು. ಅವುಗಳ ಸರಿಯಾದ ಬುನಾದಿ ಪದವಿ ಮುಗಿಯುವುದರೊಳಗೆ ಸಿಗುತ್ತಿತ್ತು. ಎರಡು ಭಾಷಾ ವಿಷಯಗಳಲ್ಲೂ ಮುಂದೆ ಮಾಸ್ಟರ್ಸ್ ಮಾಡುವ ಅವಕಾಶವೂ ಇತ್ತು. ಬಿ.ಇಡಿಗೆ ಪೂರಕವಾಗಿತ್ತು. ಈಗ ಆಂತರಿಕ ಅಂಕಗಳನ್ನು ನಲವತ್ತಕ್ಕೆ ಹೆಚ್ಚಿಸಿದ್ದರಿಂದ ಇವರಿಗೆ ಅಂಕಗಳೇನೋ ಹೆಚ್ಚು ಬರುತ್ತಿವೆ. ಜ್ಞಾನ ಕಡಿಮೆ ಸಿಗುತ್ತಿದೆ. ಇರುವ ಎರಡು ವಿಷಯಗಳಲ್ಲಿ ಸ್ನಾತಕೋತ್ತರ ಮಟ್ಟದ ವಿಷಯಗಳನ್ನೆಲ್ಲಾ ತುರುಕಲಾಗಿದೆ. ಆದರೆ ಎಲ್ಲವನ್ನೂ ಸ್ಯಾಂಪಲ್ ರೀತಿ ಕಲಿಯುತ್ತಾರೆ. ನಾವು ಉಸಿರು ಕಟ್ಟಿಕೊಂಡು ಪಾಠ ಮಾಡಬೇಕಿದೆ. ‘ನಾವೆಲ್ಲಾ ಮನೆಗೆ ಹೋದಮೇಲೆ ನೀವು ಕಾಲೇಜಲ್ಲಿ ಏನು ಮಾಡ್ತಿರ್ತೀರಿ?’ ಅಂತ ಪಕ್ಕದ ಮನೆಯ ವಿದ್ಯಾರ್ಥಿನಿಯೊಬ್ಬಳು ಕೇಳಿದ್ದಳು. ‘ನಾವು ಕಂಪ್ಯೂಟರ್, ಲ್ಯಾಪ್‍ಟಾಪ್‍ಗಳಲ್ಲಿ ಕೆಲಸ ಮಾಡ್ತಿರ್ತೀವಿ’ ಅಂದಾಗ ಅವಳಿಗೆ ವಿಚಿತ್ರ ಅನ್ನಿಸಿತ್ತು. ಯಾಕೆಂದರೆ ಹೊರಗಿನವರಿಗೆ ಇದು ಅರ್ಥವಾಗುವುದಿಲ್ಲ. ಇಂದು ಹೆಚ್ಚೂಕಡಿಮೆ ರಾಜ್ಯದ ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ ಬೋಧಕೇತರ ಸಿಬ್ಬಂದಿ ಇಲ್ಲವೇ ಇಲ್ಲ ಎಂಬಂತಾಗಿದೆ. ಕೆಲವು ಕಾಲೇಜುಗಳಲ್ಲಿ ಒಬ್ಬರೂ ಇಲ್ಲ. ಕಾಯಂ ಪ್ರಿನ್ಸಿಪಾಲರಿಲ್ಲ. ಕೆಲವೆಡೆ ಈಗಿನ್ನೂ ನೇಮಕಗೊಂಡವರೇ ಪ್ರಾಂಶುಪಾಲರು. ಇನ್ನೊಂದೆಡೆ, ಇಪ್ಪತ್ತೈದು, ಮೂವತ್ತು ವರ್ಷ ಸೇವೆ ಮಾಡಿದವರಿಗೂ ಪ್ರಾಂಶುಪಾಲರಾಗುವ ಅವಕಾಶ ಇಲ್ಲ. ಕಚೇರಿಯ ಕೆಲಸದ ಸಹಾಯದಿಂದ ಹಿಡಿದು, ನ್ಯಾಕ್, ಕಲಿಕಾ ನಿರ್ವಹಣೆ ವ್ಯವಸ್ಥೆ (ಎಲ್‍ಎಮ್‍ಎಸ್), ಸಾಂಸ್ಕೃತಿಕ ಚಟುವಟಿಕೆಗಳ ದಾಖಲೀಕರಣ, ಎನ್‍ಎಸ್‍ಎಸ್, ಎನ್‍ಸಿಸಿ, ಸ್ಟೂಡೆಂಟ್ ಕೌನ್ಸಿಲಿಂಗ್, ಅಫಿಲಿಯೇಷನ್, ಪ್ರತಿದಿನವೂ ಕೇಂದ್ರ ಕಚೇರಿ ಕೇಳುವ ಹತ್ತು ಹಲವು ಮಾಹಿತಿಗಳ ಅಪ್‍ಲೋಡ್, ಟೆಸ್ಟ್, ಮುಖ್ಯ ಪರೀಕ್ಷೆ ಪೇಪರ್ ತಯಾರಿ, ಡ್ಯೂಟಿ, ಮೌಲ್ಯಮಾಪನ, ಮೀಟಿಂಗ್, ರಿಫ್ರೆಶರ್ ಕೋರ್ಸ್, ಎಫ್‌ಡಿಪಿ, ತರಬೇತಿ ಶಿಬಿರಗಳು, ಕಾಲೇಜಲ್ಲಿ ಕಾರ್ಯಕ್ರಮಗಳ ಆಯೋಜನೆ, ಸಂಬಳ ಹಾಗೂ ಇನ್ನಿತರೆ ಬಿಲ್ ಮಾಡುವುದು, ಅಡ್ಮಿಷನ್‍ ಕೆಲಸ, ಗ್ರಂಥಪಾಲಕ, ದೈಹಿಕ ಶಿಕ್ಷಣ ಶಿಕ್ಷಕರು ನೇಮಕವಾಗಿಲ್ಲದಿದ್ದರೆ ಆ ಹೆಚ್ಚುವರಿ ಕೆಲಸ, ಕೊನೆಗೆ ಪರೀಕ್ಷೆ ನಡೆಸಿ ಬಂಡಲ್ ಹೊಲಿಯಲೂ ಹಿಂದೆ ಮುಂದೆ ನೋಡದೆ ಮುಗಿಸುವುದು... ಇವೆಲ್ಲವನ್ನೂ ಬೆರಳೆಣಿಕೆಯಲ್ಲಿರುವ ಕಾಯಂ ಉಪನ್ಯಾಸಕರೇ ಮಾಡಬೇಕು. ಉಪನ್ಯಾಸಕರ ಮೊದಲ ಪ್ರೀತಿ ಪಾಠ ಮಾಡುವುದೇ ಆದರೂ ಮೇಲೆ ಹೇಳಿದ ಎಲ್ಲಾ ಕೆಲಸಗಳು ಆಗದೇ ಕಾಲೇಜುಗಳು ನಡೆಯುವುದಿಲ್ಲ ಎಂಬುದೂ ವಾಸ್ತವವೇ ಆಗಿದೆ! ಎಲ್ಎಮ್ಎಸ್ ನೋಡಿ ಎಂದು ನಾವು ಅಲವತ್ತುಕೊಂಡರೆ, ಪಾಠ ಬೇಕು ಎಂದು ವಿದ್ಯಾರ್ಥಿಗಳು ಅಲವತ್ತುಕೊಳ್ಳುತ್ತಾರೆ! ಯಾವುದೇ ಬದಲಾವಣೆಗೂ ಮುನ್ನ ಸರ್ಕಾರ ಪ್ರತಿ ಕಾಲೇಜಿನಿಂದ ಒಬ್ಬ ನುರಿತ ಪ್ರಾಧ್ಯಾಪಕರನ್ನು ಆರಿಸಿ ಕರೆಸಿಕೊಂಡು ಸಭೆ ನಡೆಸಬೇಕು. ಹತ್ತು ಹಲವು ಸಂಗತಿಗಳನ್ನು ಪಠ್ಯಕ್ರಮದಲ್ಲಿ ತುರುಕಬಾರದು. ಮೊದಲಿನಂತೆ ಮೂರು ಮೇಜರ್ ಸಬ್ಜೆಕ್ಟ್‌ಗಳು ಮುಂದುವರಿಯಬೇಕು. ಕನಿಷ್ಠ ವಿದ್ಯಾರ್ಥಿ ಸಂಖ್ಯೆಯನ್ನು ಹತ್ತಕ್ಕೆ ಮಿತಿಗೊಳಿಸಬೇಕು. ವಿದ್ಯಾರ್ಥಿಗಳ ಕೊರತೆಯಿಂದಾಗಿ ಹಲವು ವಿಭಾಗಗಳು ಈಗಾಗಲೇ ಮುಚ್ಚುವ ಅಪಾಯದಲ್ಲಿವೆ. ನಾಲ್ಕು ವರ್ಷ ಎಂದು ಭಾವಿಸಿದ (!) ಪದವಿಗಿಂತ ಉದ್ಯೋಗಾಧಾರಿತ ಡಿಪ್ಲೊಮಾಗಳೇ ವಾಸಿ ಎಂದು ವಿದ್ಯಾರ್ಥಿಗಳು ಅತ್ತ ಹೋಗಲು ಆರಂಭಿಸಿದ್ದು, ಪದವಿ ಕಾಲೇಜುಗಳಿಗೆ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.