2023 | ಪರಿಸರದಲ್ಲಿ ಕಲಿಯುತ್ತಾ ಕಲಿಸುತ್ತಾ... ಅರವಿಂದ ಕುಡ್ಲ ಮಕ್ಕಳಿಗೆ ಪರಿಸರದ ಮೂಲಕವೇ ಶಿಕ್ಷಣ ಕಲಿಸಬೇಕು. ಮಕ್ಕಳ ಜೊತೆಗೆ ಶಿಕ್ಷಕರೂ ಕಲಿಯುತ್ತಾ, ಕಲಿಸುತ್ತಾ ಹೆಜ್ಜೆ ಹಾಕಬೇಕು. ಇದೇ ಮಾದರಿ ಅನುಸರಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಅರವಿಂದ ಕುಡ್ಲ, ‘ಸೆ.5ರ ಶಿಕ್ಷಕರ ದಿನಾಚರಣೆ’ ಸಂದರ್ಭದಲ್ಲಿ ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ‘ನಾವು ಮಕ್ಕಳನ್ನು ತರಗತಿಯೊಳಗೆ ಕೂರಿಸಿಕೊಂಡು, ತರಗತಿಯ ಹೊರಗಿನ ಪರಿಸರದಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಕಲಿಸು ತ್ತೇವೆ. ಆದರೆ, ಮಕ್ಕಳನ್ನು ‍ಪರಿಸರದ ನಡುವೆಯೇ ಕೂರಿಸಿ ದರೆ, ಅನೇಕ ವಿಷಯಗಳನ್ನು ಕಲಿಯುತ್ತಾರೆ’ - ಹಿರಿಯ ಶಿಕ್ಷಣ ಚಿಂತಕರೊಬ್ಬರು ಹೇಳಿದ ಈ ಮಾತು ಸದಾ ನೆನಪಾಗುತ್ತದೆ. ನಾನು ಸರ್ಕಾರಿ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದು ಕಾಡಿನ ಅಂಚಿನ ಗ್ರಾಮೀಣ ಭಾಗದ ಶಾಲೆಗೆ. ಆಗ, ಮಧ್ಯಾಹ್ನದ ಬಿಸಿಯೂಟಕ್ಕಾಗಿ ಶಾಲೆ ಅಂಗಳದಲ್ಲಿ ತರಕಾರಿ ಬೆಳೆಯಲು ಪೋಷಕರ ನೆರವಿನಿಂದ ಕೈತೋಟ ಮಾಡಿದ್ದೆ. ಆ ತೋಟಕ್ಕೆ ಬೀಜ ಹಾಕಿಸಿದ್ದೆ. ಆ ಬೀಜಗಳು ಮೊಳೆತು ಮೊದಲ ಎರಡು ಎಲೆಗಳು ಮೂಡಿದಾಗ ಮಕ್ಕಳು ‘ಓ..ಇದು ಸೌತೆ ಬಳ್ಳಿ. ಅರೆ ಇದು ಕುಂಬಳ ಬಳ್ಳಿ, ಅಲ್ವಾ. ಇದು ಮಾತ್ರ ಚೀನೀಕಾಯಿ ಬಳ್ಳಿಯೇ’ ಎಂದು ಸುಲಲಿತವಾಗಿ ಗುರುತಿಸಿ ಹೇಳುತ್ತಿದ್ದರು. ಗ್ರಾಮೀಣ ಪರಿಸರದಲ್ಲಿ ಬೆಳೆಯುವ ಮಕ್ಕಳಲ್ಲಿನ ಈ ಸಸ್ಯಗಳ ಜ್ಞಾನ ಕಂಡು ಬೆರಗಾದೆ. ಇಂಥ ಮಕ್ಕಳಿಗೆ, ‘ಸಸ್ಯಶಾಸ್ತ್ರದ ಪಾಠ ಮಾಡುವುದು ಎಷ್ಟು ಸರಿ’ ಎಂಬ ಪ್ರಶ್ನೆ ಮೂಡಿತ್ತು. ಪರಿಸರದ ಮೂಲಕ ಶಿಕ್ಷಣ ಸಿಗಬೇಕು. ಬಹಳಷ್ಟು ಮಕ್ಕಳಿಗೆ ಪರಿಸರದ ಕಥೆಗಳೆಂದರೆ ಬಹಳ ಇಷ್ಟವಾಗುತ್ತವೆ. ಆಸಕ್ತಿಯಿಂದ ಕೇಳಿ ತಿಳಿದುಕೊಳ್ಳುತ್ತಾರೆ. ಇದು ನನ್ನ ಅನುಭವ ಕೂಡ. ಹೀಗೆ ಹೇಳುವಾಗ ಒಂದು ಘಟನೆ ನೆನಪಾಗುತ್ತದೆ. ಒಮ್ಮೆ ನಾನು ಬಿಡುವಿನ ಸಮಯದಲ್ಲಿ ಶಾಲೆಯ ಸುತ್ತಲಿದ್ದ ಹೂವು, ಕೀಟ, ಚಿಟ್ಟೆಗಳ ಫೋಟೊ ತೆಗೆಯುತ್ತಿದ್ದೆ. ಫೋಟೊ ತೆಗೆದಾಗಲೆಲ್ಲ, ಮಕ್ಕಳು ಓಡೋಡಿ ಬಂದು, ‘ಯಾವ ಫೋಟೊ ತೆಗೆದ್ರಿ ತೋರಿಸಿ ಸರ್’ ಎಂದು ದುಂಬಲು ಬೀಳುತ್ತಿದ್ದರು. ಕ್ಲಿಕ್ಕಿಸಿದ ಫೋಟೊ ತೋರಿಸಿದಾಗ, ‘ಇದು ಯಾವ ಹೂವು, ಯಾವ ಹಣ್ಣು, ಯಾವ ಹಕ್ಕಿ, ಪ್ರಾಣಿ, ಕೀಟ.. ಇದರ ಬಣ್ಣ ಏಕೆ ಹೀಗಿದೆ ? ಇದು ಎಲ್ಲ ಕಡೆ ಇರುತ್ತದಾ’ – ಇಂಥ ಹಲವಾರು ಪ್ರಶ್ನೆ ಕೇಳುತ್ತಿದ್ದರು. ಮಕ್ಕಳ ಕೆಲವೊಂದು ಕುತೂಹಲದ ಪ್ರಶ್ನೆಗೆ ಉತ್ತರ ಹೇಳಲು / ವಿವರಿಸಲು ಕಷ್ಟವಾಗುತ್ತಿತ್ತು. ಅವರ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿಯೇ ನಾನೂ ಹುಡುಕಾಟ ನಡೆಸುತ್ತಿದ್ದೆ. ಇಂಟರ್ನೆಟ್‌, ಸಾಮಾಜಿಕ ಜಾಲತಾಣಗಳನ್ನು ಜಾಲಾಡಿ ಪುಸ್ತಕಗಳನ್ನು ತಡಕಾಡಿ ಉತ್ತರಗಳನ್ನು ಹುಡುಕಿ ಮಕ್ಕಳಿಗೂ ಹೇಳುತ್ತಿದ್ದೆ. ಈ ಬೆಳವಣಿಗೆಗಳಿಂದ ಮಕ್ಕಳ ಜೊತೆಗೆ, ನನ್ನ ಪರಿಸರ ಕಲಿಕಾಸಕ್ತಿಯೂ ವಿಸ್ತಾರವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗ್ರಫಿ, ಹಕ್ಕಿ, ಚಿಟ್ಟೆ, ಕಪ್ಪೆ, ಜೇಡ ಮೊದಲಾದ ಜೀವಿಗಳ ಬಗ್ಗೆ ಆಸಕ್ತರ ಗುಂಪುಗಳು ಪರಿಚಯ ವಾದವು. ಪರಿಸರ ಶಿಕ್ಷಣ ಸಂಬಂಧಿಸಿದ ಕಾರ್ಯಾಗಾರಗಳಲ್ಲಿ ಭಾಗವಹಿಸಿದೆ. ನಾನು ಕಲಿತಿದ್ದೆಲ್ಲವನ್ನೂ ಮಕ್ಕಳಿಗೆ ವರ್ಗಾಯಿ ಸುತ್ತಾ ಹೊರಟೆ. ಪ್ರತಿ ಜೀವಿಯ ಸಂತಾನೋತ್ಪತ್ತಿಕಾಲ ಮತ್ತು ವಿಧಾನ ವಿಶಿಷ್ಟವಾದದ್ದು. ಕಪ್ಪೆಗಳು ಮಳೆಗಾಲದಲ್ಲಿ ಮಾತ್ರ ಏಕೆ ಕೂಗುತ್ತವೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದೇ ಇಂಥ ಹುಡುಕಾಟದ ಸಮಯದಲ್ಲಿ. ಈ ಚಟುವಟಿಕೆ ನಡುವೆ ಕಳೆದವರ್ಷ ಮಕ್ಕಳ ಸಹಭಾಗಿತ್ವದಲ್ಲಿ ಕಂಬಳಿಹುಳುಗಳನ್ನು ಸಾಕಿ ಚಿಟ್ಟೆಯಾಗಿಸುವ ಕಿರು ಯೋಜನೆ(ಪ್ರಾಜೆಕ್ಟ್‌)ಯೊಂದನ್ನು ತೆಗೆದುಕೊಂಡಿದ್ದೆ. ಈ ಯೋಜನೆಯಲ್ಲಿ ಮಕ್ಕಳೊಂದಿಗೆ ಸೇರಿ ಸಸ್ಯಗಳ ಮೇಲೆ ಹರಿದಾಡುವ ಕಂಬಳಿಹುಳುಗಳನ್ನು ತಂದು, ರೇಷ್ಮೆ ಹುಳು ಸಾಕಿದಂತೆ ಸಾಕಿ ಕೊನೆಗೆ ಅದರಿಂದ ಚಿಟ್ಟೆ ಅಥವಾ ಪತಂಗ ಹೊರಬರುವ ಪ್ರಕ್ರಿಯೆಯನ್ನು ಗಮನಿಸಿ ದಾಖಲಿಸಬೇಕಿತ್ತು. ಮಕ್ಕಳು ಬಹಳ ಉತ್ಸಾಹದಿಂದ ಈ ಯೋಜನೆಯಲ್ಲಿ ಪಾಲ್ಗೊಂಡರು, ಅವರಿಗೆ ತುಂಬಾ ಖುಷಿ ಕೊಟ್ಟಿತು. ಈ ಪ್ರಾಜೆಕ್ಟ್ ಮುಗಿದ ಮೆಲೆ, ಮಕ್ಕಳಿಗೆ ‘ನೀವು ಕಂಬಳಿಹುಳು ಸಾಕಿದ್ದರಿಂದ ಏನೇನು ತಿಳಿದುಕೊಂಡಿದ್ದೀರಿ, ಬರೆಯಿರಿ’ ಎಂದು ಹೇಳಿ ಬಿಳಿ ಹಾಳೆಯೊಂದನ್ನು ಕೊಟ್ಟೆ. ಈ ಹಿಂದೆ ಪರೀಕ್ಷೆ ವೇಳೆ ಹಾಳೆ ಕೊಟ್ಟರೆ, ಏನೂ ಬರೆಯದೇ ಖಾಲಿ ಹಾಳೆಯನ್ನು ವಾಪಸ್ ಕೊಡುತ್ತಿದ್ದ ಮಕ್ಕಳು, ಈಗ ಅರ್ಧ ಪುಟಕ್ಕೂ ಹೆಚ್ಚು ತಮ್ಮ ಅನುಭವವನ್ನು ಬರೆದಿದ್ದರು. ಅವರ ಭಾಷಾ ಸಾಮರ್ಥ್ಯ, ಅನುಭವ, ವಿಜ್ಞಾನ ಕಲಿಕೆಗಳೆಲ್ಲ ಅಲ್ಲಿ ವ್ಯಕ್ತವಾಗಿದ್ದವು. ನೋಡಿ ಕಲಿಯುವ, ಮಾಡಿ ತಿಳಿಯುವ ವಿಧಾನ ಅವರಲ್ಲಿ ಉತ್ತಮ ಕಲಿಕೆಯನ್ನು ಉಂಟುಮಾಡಬಲ್ಲದು ಎಂಬುದು ನಮಗೂ ಅರ್ಥವಾಗಿತ್ತು. ಕಂಬಳಿ ಹುಳು ಪ್ರಾಜೆಕ್ಟ್‌ ವೇಳೆ, ‌ನನ್ನ ಬಳಿಯಿದ್ದ ಕೆಲವು ಚಿಟ್ಟೆ, ಹಕ್ಕಿ, ಜೇಡದಂತಹ ಜೀವಿಗಳಿಗೆ ಸಂಬಂಧಿಸಿದ ಚಿತ್ರಸಹಿತ ಪುಸ್ತಕಗಳನ್ನು ಮಕ್ಕಳಿಗೆ ಸಿಗುವಂತೆ ಶಾಲೆಯ ಪುಸ್ತಕದ ಗೂಡಿನಲ್ಲಿ ಇಟ್ಟಿದ್ದೆ. ಪ್ರಾಜೆಕ್ಟ್‌ನಿಂದ ಪ್ರೇರಿತರಾದ ಪುಟಾಣಿಗಳು, ಈಗ ಯಾವುದೇ ಕೀಟ ಕಂಡರೂ ತಕ್ಷಣ ಓಡಿ ಬಂದು, ‘ಅಲ್ಲೊಂದು ಹುಳ ಇದೆ ಫೋಟೊ ತೆಗೀರಿ ಸಾರ್‌’ ಎಂದು ದುಂಬಾಲು ಬೀಳುತ್ತಾರೆ. ಪೋಟೊ ತೆಗೆದ ನಂತರ ‘ಈ ಕೀಟ ಯಾವುದು ಎಂದು ಅಲ್ಲಿರುವ ಪುಸ್ತಕದಲ್ಲಿ ಹುಡುಕುತ್ತೀರಾ’ ಎಂದು ಕೇಳಿದರೆ, ಥಟ್‌ನೆ ಪುಸ್ತಕ ತೆಗೆದು, ತಾವು ನೋಡಿದ ಕೀಟದ ಚಿತ್ರವನ್ನು ಹುಡುಕಿ, ‘ಇಲ್ಲಿದೆ ನೋಡಿ, ಇದೇ ಇರಬೇಕು’ ಎಂದು ತೋರಿಸುತ್ತಾರೆ. ‌ಒಂದೇ ರೀತಿಯ ಎರಡು ಜೀವಿಯ ಚಿತ್ರಗಳನ್ನು ಕಂಡರೆ ಅವುಗಳಲ್ಲಿ ತಾವು ನೋಡಿದ್ದು ಯಾವುದು ಎಂದು ವಿಮರ್ಶೆ ಮಾಡುತ್ತಾರೆ. ಹಿಂದೆ ಓತಿಕ್ಯಾತ ಕಂಡರೆ ಕಲ್ಲು ಹೊಡೆದು ಸಾಯಿಸುತ್ತಿದ್ದ ಮಕ್ಕಳು ಈಗ ಕುತೂಹಲದಿಂದ ಅದನ್ನು ಗಮನಿಸುತ್ತಾರೆ. ಹಾವುಗಳನ್ನು ಕಂಡರೆ ಕರೆದು ತೋರಿಸುತ್ತಾರೆ. ಅದರಲ್ಲಿ ವಿಷ ಇದೆಯೇ ಎಂದು ಪ್ರಶ್ನಿಸುತ್ತಾರೆ. ಹಕ್ಕಿಗಳನ್ನು ಕಂಡರೆ ಸಂತೋಷಪಡುತ್ತಾರೆ. ಅವುಗಳು ಗೂಡು ಕಟ್ಟುವುದನ್ನು ಕಂಡರೆ ತೊಂದರೆ ಕೊಡದೆ ಸುಮ್ಮನೆ ಕುತೂಹಲದಿಂದ ಗಮನಿಸುತ್ತಾರೆ. ಜೇಡ, ಹಲ್ಲಿ, ಜಿರಲೆ ಕಂಡರೆ ಬೆಚ್ಚಿ ಬೀಳುವ ಬದಲು ಅದರ ಬಣ್ಣ ಆಕಾರ ಗಾತ್ರಗಳನ್ನು ಗಮನಿಸಿ ಅಗತ್ಯಬಿದ್ದರೆ ಅವುಗಳನ್ನು ತರಗತಿಯಿಂದ ಹೊರಗೆ ಬಿಟ್ಟು ಬರುತ್ತಾರೆ. ಅವರ ಮನೆಯಲ್ಲೇನಾದರೂ ವಿಶೇಷ ಬಣ್ಣ ಅಥವಾ ಆಕಾರದ ಜೀವಿ ಕಂಡರೆ ಪೋಷಕರ ಮೊಬೈಲ್‌ನಲ್ಲಿ ಫೋಟೊ ತೆಗೆದು ‘ಇದ್ಯಾವ ಜೀವಿ ಹೇಳಿ ಸಾರ್‌’ ಎಂದು ಕಳುಹಿಸುತ್ತಾರೆ. ಇದೆಲ್ಲ ಪರಿಸರ ಶಿಕ್ಷಣ ದಿಂದ ಮಕ್ಕಳಲ್ಲಾಗಿರುವ ಬದಲಾವಣೆಗಳು. ಪರಿಸರದೊಂದಿಗೆ ಕಲಿಕೆ ಮಕ್ಕಳಲ್ಲಿ ಗಮನಿಸುವಿಕೆ, ಪ್ರಶ್ನಿಸುವಿಕೆ, ಆಸಕ್ತಿ, ಕುತೂಹಲ ಮತ್ತು ಅಧ್ಯಯನ ಪ್ರವೃತ್ತಿ ಯನ್ನು ಬೆಳೆಸುತ್ತದೆ. ಜೊತೆಗೆ ಪರಿಸರದ ಬಗ್ಗೆ ಕಾಳಜಿಯನ್ನೂ ಬೆಳೆಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.