ಶಿಕ್ಷಕರ ದಿನಾಚರಣೆ | ವಿಜ್ಞಾನ ಕಲಿಸುತ್ತಾ ಮೌಢ್ಯ ಅಳಿಸುತ್ತಾ... ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢ ಶಾಲೆಯ ಶಿಕ್ಷಕಿ ಸಪ್ನಾ ಶ್ರೀಶೈಲ ಅನಿಗೋಳ 'ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ತಮ್ಮ ವೃತ್ತಿಜೀವನದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ನಿರೂಪಣೆ: ಮಹೇಶ‌ ಮನ್ನಯ್ಯನವರಮಠ, ಮಹಾಲಿಂಗಪುರ ________________ ಮಕ್ಕಳಿಗೆ ಪಾಠ ಮಾಡುವುದು ಪ್ರತಿಯೊಬ್ಬ ಶಿಕ್ಷಕ ಮತ್ತು ಶಿಕ್ಷಕಿಯ ಕರ್ತವ್ಯ. ಆದರೆ, ಅದು ಸಾರ್ಥಕವಾಗುವುದು ಮಕ್ಕಳಿಗೆ ಪಾಠವು ಸರಳವಾಗಿ ಮತ್ತು ಸುಲಭವಾಗಿ ಮನನವಾದಾಗ. ಶಾಲೆ ಮತ್ತು ಮನೆಯಲ್ಲಿ ಪುಸ್ತಕಗಳನ್ನು ಓದಿದಾಗ, ಮಕ್ಕಳಿಗೆ ಸಹಜವಾಗಿ ಜ್ಞಾನ ವೃದ್ಧಿಸುತ್ತದೆ. ಆದರೆ, ಪರಿಸರ ಕಾಳಜಿ ಎಂಬುದು ತರಗತಿ ಚಟುವಟಿಕೆಯ ಜೊತೆಗೆ ದೈನಂದಿನ ಆಸಕ್ತಿ ಮತ್ತು ಬದ್ಧತೆ ಆಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಆಸಕ್ತಿ ಮೂಡಿಸುವುದರ ಜೊತೆಗೆ ಮೂಢನಂಬಿಕೆಯ ವಿರುದ್ಧ ಜಾಗೃತ ಮನೋಭಾವ ಬೆಳೆಸಬೇಕು ಎಂಬ ಆಶಯ ನನ್ನದು. ಬಾಲ್ಯದ ದಿನಗಳಲ್ಲೇ ಈ ಎಲ್ಲಾ ಸಂಗತಿಗಳು ಅರಿವಾದರೆ, ದೊಡ್ಡವರಾದ ಬಳಿಕ ಸಮಾಜದ ಬಗ್ಗೆ ಸ್ಪಷ್ಟ ಪರಿಕಲ್ಪನೆ ಸಿಗುತ್ತದೆ. ನನ್ನ ವೃತ್ತಿ ಜೀವನದ ಪರಮಗುರಿಯೇ ಇದು. ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯಲ್ಲಿ 19 ವರ್ಷಗಳಿಂದ ವಿಜ್ಞಾನದ ಶಿಕ್ಷಕಿಯಾಗಿರುವ ನಾನು ಮಕ್ಕಳಿಗೆ ಸರಳವಾಗಿ ಪಾಠ ಬೋಧಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಪರಿಸರ ಪ್ರಜ್ಞೆ ಬೆಳೆಸಲು ಪ್ರಾಶಸ್ತ್ಯ ನೀಡುತ್ತೇನೆ. ಸಸಿ ನೆಡುವುದು, ಕಾಳಜಿಯಿಂದ ಬೆಳೆಸುವುದು, ಕಾಡು ರಕ್ಷಿಸುವುದು ಮತ್ತು ಸುತ್ತಲ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳುವುದರ ಬಗ್ಗೆ ಪ್ರತಿದಿನವೂ ಪಾಠದ ಜೊತೆ ತಿಳಿ ಹೇಳುತ್ತೇನೆ. ಮಕ್ಕಳ ಪರಿಸರ ಪ್ರೇಮದಿಂದಲೇ ಶಾಲೆಯು ಎರಡು ಬಾರಿ ಪರಿಸರ ಮಿತ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಗಳಿಸಿದೆ. ಮಹಾಲಿಂಗಪುರದಲ್ಲಿ ಸ್ವಚ್ಛತೆಯ ರಾಯಭಾರಿಗಳಂತೆ ಮಕ್ಕಳು ಕಾರ್ಯ ನಿರ್ವಹಿಸಿದ್ದಾರೆ. ಮಕ್ಕಳಿಗೆ ವಿಜ್ಞಾನ ಪ್ರಯೋಗಗಳನ್ನು ಮಾಡಿಸುತ್ತೇನೆ. ಮಕ್ಕಳು ಮಾಡಿದ ಪ್ರಯೋಗಗಳು ಎಲ್ಲರ ಮೆಚ್ಚುಗೆ ಗಳಿಸಿವೆ, ಅಲ್ಲದೇ ರಾಷ್ಟ್ರಮಟ್ಟದಲ್ಲಿ ಇನ್‌ಸ್ಪೈಯರ್‌ ಪ್ರಶಸ್ತಿ ಕೂಡ ಗಳಿಸಿವೆ. ನಾನು ಶಾಲೆ ಕಲಿಯುವ ಸಂದರ್ಭದಲ್ಲಿ ಪತ್ರಿಕೆ, ಟಿವಿ ಮತ್ತು ರೇಡಿಯೊ ಹೊರತುಪಡಿಸಿ ಬೇರಾವ ಸಮೂಹ ಮಾಧ್ಯಮಗಳಿರಲಿಲ್ಲ. ಎಷ್ಟೋ ಸಲ ಸುದ್ದಿಗಳು ತಡವಾಗಿ ಗೊತ್ತಾಗುತಿತ್ತು. ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಲು ಚಡಪಡಿಸುತ್ತಿದ್ದೆ. ಆದರೆ, ಈಗಿನ ಮಕ್ಕಳಿಗೆ ಇಂಟರ್‌ನೆಟ್‌ ಇದೆ. ಬೇಕಾದ ಮಾಹಿತಿಯನ್ನು ಮೊಬೈಲ್‌ನಲ್ಲಿ ಟೈಪಿಸಿದರೆ ಸಾಕು, ಕ್ಷಣಮಾತ್ರದಲ್ಲಿ ಎಲ್ಲವೂ ಸಿಕ್ಕಿಬಿಡುತ್ತದೆ. ಆದ್ದರಿಂದ, ಮೊಬೈಲ್‌ ಮತ್ತು ಕಂಪ್ಯೂಟರ್‌ನಲ್ಲಿ ಇಲ್ಲಸಲ್ಲದ ವಿಷಯಗಳನ್ನು ನೋಡುತ್ತ ಕಾಲವ್ಯಯ ಮಾಡುವ ಬದಲು ಜ್ಞಾನ ವೃದ್ಧಿಸಿಕೊಳ್ಳಲು ತಿಳಿಸುತ್ತೇನೆ. ಸ್ಮಾರ್ಟ್‌ ಕ್ಲಾಸ್, ಶೈಕ್ಷಣಿಕ ಆ್ಯಪ್, ಕಂಪ್ಯೂಟರ್, ಪ್ರಯೋಗಾಲಯಗಳನ್ನು ಬಳಸಿಕೊಂಡು ಪಾಠ ಮಾಡುತ್ತೇನೆ. ಸಂಕಷ್ಟ ತೋಡಿಕೊಂಡಾಗ, ಪೋಷಕರಿಗೆ ಹಣವನ್ನು ನೀಡಿ ಮಕ್ಕಳು ಶಾಲೆಗೆ ಬರುವಂತೆ ನೋಡಿಕೊಂಡ ಸಮಾಧಾನವಿದೆ. ಎಷ್ಟೋ ಸಲ ಮಕ್ಕಳು ಶಾಲೆಗೆ ಬಾರದಿದ್ದಾಗ, ಅವರನ್ನು ಮನೆಯವರೆಗೆ ಹುಡುಕಿಕೊಂಡು ಹೋಗಿ ಕರೆದುಕೊಂಡ ಬಂದ ಸಂತೃಪ್ತಿಯಿದೆ. ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಕ್ಯಾಪ್ಟನ್ ಆಗಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸಿದ್ದೇನೆ. 28 ವಿದ್ಯಾರ್ಥಿಗಳು ಗವರ್ನರ್‌ ಪ್ರಶಸ್ತಿ ಪಡೆದಿದ್ದಾರೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ದಿಸೆಯಲ್ಲಿ ಬಟ್ಟೆ ಚೀಲಗಳನ್ನು ತಯಾರಿಸುವ ಬಗ್ಗೆ ತರಬೇತಿ ನೀಡಿದ್ದೇನೆ. ಗಣೇಶನ ಹಬ್ಬದಲ್ಲಿ ಅರಿಸಿನ ಮತ್ತು ಮಣ್ಣಿನ ಗಣಪ ತಯಾರಿಸಿ ನೆರೆಹೊರೆಯವರಿಗೆ ಹಂಚಿರುವ ನಿದರ್ಶನಗಳಿವೆ. ಇದಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮೆಚ್ಚುಗೆ ವ್ಯಕ್ತವಾಗಿದೆ. ಸಪ್ನಾ ಅನಿಗೋಳ * ಚಂದನ ವಾಹಿನಿ ಪ್ರೌಢಶಾಲಾ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ವಿಡಿಯೊ ಸಿದ್ಧಪಡಿಸುವ ತಂಡದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ * ಸಿಕಂದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಶಿಕ್ಷಕರ ವಿಜ್ಞಾನ ವಿಭಾಗದ ವಸ್ತು ಪ್ರದರ್ಶನದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ವಿಶೇಷ ಪ್ರಶಸ್ತಿ ಪಡೆದಿದ್ದಾರೆ * ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಿವೆ. ಜಿಲ್ಲಾಮಟ್ಟದ, ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ * ಕೋವಿಡ್ ಸಂದರ್ಭದಲ್ಲಿ ಪೊಲೀಸರಿಗೆ, ಗೃಹ ರಕ್ಷಕ ದಳ ಸಿಬ್ಬಂದಿಗೆ, ಪೌರಕಾರ್ಮಿಕರಿಗೆ ಸ್ವಂತ ಖರ್ಚಿನಲ್ಲಿ ಆರೋಗ್ಯ ಕಿಟ್ ವಿತರಿಸಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಮಹಿಳೆಯರಿಗೆ ಮಾಸ್ಕ್ ಹೊಲಿಯಲು ವ್ಯವಸ್ಥೆ ಕಲ್ಪಿಸಿದ್ದಾರೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.