, : ಪರೀಕ್ಷೆ ವಿಧಾನದಲ್ಲಿ ಬದಲಾವಣೆ; ಮೂರು ವಾರ್ಷಿಕ ಪರೀಕ್ಷೆ ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ನಿರ್ಧರಿಸಿದೆ. 2023–24ನೇ ಶೈಕ್ಷಣಿಕ ಸಾಲಿನಿಂದಲೇ ಈ ವ್ಯವಸ್ಥೆ ಜಾರಿಯಾಗಲಿದ್ದು, ಇನ್ನು ಮುಂದೆ ಒಂದು ವರ್ಷದಲ್ಲಿ ಇಲಾಖೆಯು ಮೂರು ಬಾರಿ ವಾರ್ಷಿಕ ಪರೀಕ್ಷೆ ನಡೆಸಲಿದೆ. ಪೂರಕ ಪರೀಕ್ಷೆ ಬದಲು ವಾರ್ಷಿಕ ಪರೀಕ್ಷೆ 1, 2 ಮತ್ತು 3 ಎಂದು ಹೆಸರಿಸಿ ಅವಕಾಶ ನೀಡ ಲಾಗುವುದು. ಈ ಮೂರು ಪ್ರಯತ್ನಗಳಲ್ಲಿ ಗಳಿಸಿದ ಅಂಕಗಳಲ್ಲಿ ವಿಷಯವಾರು ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದೆ. ಉದಾಹರಣೆಗೆ ವಿದ್ಯಾರ್ಥಿಗಳು ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ‌ ಪಡೆದರೆ ಇನ್ನೊಂದು ಪರೀಕ್ಷೆ ಬರೆಯಬಹುದು. ಅದರಲ್ಲಿ ಕಡಿಮೆ ಬಂದರೆ 3ನೇ ಪರೀಕ್ಷೆ ಬರೆಯಬಹುದು ಎಂದು ತಿಳಿಸಿದೆ. ವಿದ್ಯಾರ್ಥಿಗಳ ಕಲಿಕೆಯ ವೇಗ ಮತ್ತು ಶೈಲಿಯು ವಿಭಿನ್ನವಾಗಿದೆ. 1, 2 ಮತ್ತು 3 ಪರೀಕ್ಷೆಗಳನ್ನು ನಡೆಸುವುದರಿಂದ ಅವರ ಕಲಿಕೆಯ ವೇಗಕ್ಕೆ ಹೊಂದಿಕೊಳ್ಳಲು ಮತ್ತು ಸಮಯದ ನಿರ್ಬಂಧಗಳಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಈ ಮೂರು ಪರೀಕ್ಷೆಗಳಲ್ಲಿ ವಿಷಯ ಮತ್ತು ಕಠಿಣತೆಯ ಮಟ್ಟದಲ್ಲಿ ಏಕರೂಪವನ್ನು ಕಾಯ್ದುಕೊಳ್ಳಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಡವಾಗಿ ದಾಖಲಾಗುವ ಪ್ರಥಮ ಪಿಯುಸಿ ಅಥವಾ ಪದವಿ ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.