ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಇಸವಿ ನೆನಪಿಟ್ಟುಕೊಳ್ಳುವುದು ಹೇಗೆ? 1. ನಾನು ಅಂತಿಮ ವರ್ಷದ ಬಿ.ಟೆಕ್ ಮಾಡುತ್ತಿದ್ದು ಮುಂದಿನ ವರ್ಷ ಕೆಲಸ ಸಿಗುವುದೇ ಎಂಬ ಯೋಚನೆಯಾಗಿದೆ. ಹಾಗಾಗಿ, ವೃತ್ತಿಯ ದೃಷ್ಟಿಯಿಂದ ಮುಂದೆ ಎಂಟೆಕ್ ಮಾಡುವುದೇ ಅಥವಾ ಎಂಬಿಎ ಮಾಡುವುದು ಒಳ್ಳೆಯದೇ? ತಿಳಿಸಿ. ಹೆಸರು, ಊರು ತಿಳಿಸಿಲ್ಲ. –ನೀವು ಬಿ.ಟೆಕ್ ಯಾವ ವಿಭಾಗದಲ್ಲಿ ಮಾಡುತ್ತಿದ್ದೀರಿ ಎಂದು ತಿಳಿಸಿಲ್ಲ. ಮುಂದಿನ ವರ್ಷ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕ್ಯಾಂಪಸ್ ನೇರ ನೇಮಕಾತಿ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ ಯಾವ ಕ್ಷೇತ್ರದಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳಬೇಕೆಂದು ನಿರ್ಧರಿಸಿ. ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯಿದ್ದಲ್ಲಿ ಎಂಟೆಕ್ ಮಾಡಬಹುದು; ಮ್ಯಾನೇಜ್‌ಮೆಂಟ್ ಕ್ಷೇತ್ರ ಅಥವಾ ಅನುಭವದ ನಂತರ ಸ್ವಂತ ಉದ್ದಿಮೆಯನ್ನು ಮಾಡುವ ಆಸಕ್ತಿಯಿದ್ದರೆ ಎಂಬಿಎ ಮಾಡಬಹುದು. ಎಂಬಿಎ ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಕಲಿಕೆಯಾಗುವುದರಿಂದ, ವೃತ್ತಿ ಮತ್ತು ಖಾಸಗಿ ಜೀವನಗಳೆರಡರಲ್ಲೂ ಯಶಸ್ಸನ್ನು ಸಾಧಿಸಲು ಅನುಕೂಲವಾಗುತ್ತದೆ. ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: ://../?=1TcHjPKJ1gw 2. ನಾನೀಗ ದ್ವಿತೀಯ ಪಿಯುಸಿ ಮಾಡುತ್ತಿದ್ದು, ಮುಂದೆ ಏನು ಮಾಡುವುದೆಂದು ಯೋಚಿಸುತ್ತಿದ್ದೇನೆ. ಆದ್ದರಿಂದ, ವೃತ್ತಿ ಯೋಜನೆ ಎಂದರೇನು? ಮಾಡುವುದು ಹೇಗೆ? ದಯವಿಟ್ಟು ತಿಳಿಸಿ. –ಹೆಸರು, ಊರು ತಿಳಿಸಿಲ್ಲ. –ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಸ್ವಯಂ- ಮೌಲ್ಯಮಾಪನ ಮಾಡಬೇಕು. ನಂತರ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳನ್ನು ಗುರುತಿಸಿ, ಯಾವ ವೃತ್ತಿ ಸರಿಹೊಂದಬಹುದು ಎಂದು ಅಂದಾಜು ಮಾಡಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ವಿವಿಧ ಹಂತಗಳ ಅವಶ್ಯಕತೆಗಳನ್ನು ತೀರ್ಮಾನಿಸಿ. ಅವಶ್ಯಕತೆಗಳಿಗೆ ತಕ್ಕಂತೆ ಮಾಡಬೇಕಾದ ಕೋರ್ಸ್‌ಗಳು, ಪ್ರವೇಶ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರುತಿಸಿ. ಅಲ್ಪಾವಧಿ ಮತ್ತು ದೀರ್ಘಾವಧಿ ಮೈಲಿಗಲ್ಲುಗಳೊಂದಿಗೆ, ವೃತ್ತಿ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿ. ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: ://../?=MHnPg_sp6E0 3. ಸರ್, ನಾನು ಬಿ.ಎ ಪ್ರಥಮ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ, ಇತಿಹಾಸದಲ್ಲಿ ಎಷ್ಟು ಪ್ರಯತ್ನ ಮಾಡಿದರೂ ಇಸವಿಗಳ ನೆನಪು ಉಳಿಯುತ್ತಿಲ್ಲ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಭೂಗೋಳಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಳ್ಳಲು ಬಯಸುತ್ತೇನೆ. ನಾನು ಕನ್ನಡ ಮಾಧ್ಯಮದಲ್ಲಿ ಓದಿರುವುದರಿಂದ, ಇಂಗ್ಲಿಷ್ ಕಲಿಕೆ ಕಷ್ಟವಾಗುತ್ತಿದೆ. ಇಂಗ್ಲಿಷ್ ಕಲಿಯಲು ನಿಮ್ಮ ಸಲಹೆ ಕೇಳಬಯಸುತ್ತೇನೆ. ಹಾಗೂ, ಯುಪಿಎಸ್‌ಸಿ ತಯಾರಿಗಾಗಿ ಪುಸ್ತಕಗಳ ಪಟ್ಟಿಯನ್ನು ನೀಡಿ. –ಸುಮನ್ ಪಿ, ಚಿತ್ರದುರ್ಗ. –ಇತಿಹಾಸದ ಪ್ರಮುಖ ಘಟನೆಗಳನ್ನು ಮತ್ತು ವರ್ಷಗಳನ್ನು ಸಾಮಾನ್ಯ ರೀತಿಯಲ್ಲಿ ಓದಿದರೆ, ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸ. ಆದರೆ, ಇತಿಹಾಸದ ಅಧ್ಯಾಯಗಳನ್ನು ಆಸಕ್ತಿಯಿಂದ ಕಥಾರೂಪದಲ್ಲಿ ಓದುತ್ತಾ, ಘಟನೆಗಳನ್ನು ಕಾಲಾನುಕ್ರಮದಂತೆ, ಮನಸ್ಸಿನಲ್ಲಿ ಮರುಸೃಷ್ಠಿ ಮಾಡಿಕೊಳ್ಳುತ್ತಾ ಓದಿದರೆ, ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸವಲ್ಲ. ಜೊತೆಗೆ, ಇತಿಹಾಸದ ಸಾಕ್ಷ್ಯಚಿತ್ರಗಳನ್ನು ಮತ್ತು ವಿಡಿಯೊಗಳನ್ನು ವೀಕ್ಷಿಸಿ. ಹಾಗೂ, ಓದುತ್ತಿರುವಾಗ ಟಿಪ್ಪಣಿಯನ್ನು ಬರೆದುಕೊಂಡು, ಘಟನೆಗಳ ಶೀರ್ಷಿಕೆಗಳನ್ನು ಮತ್ತು ಇಸವಿಗಳನ್ನು ಹೈಲೈಟ್ ಮಾಡಿಕೊಳ್ಳುವುದರಿಂದ, ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಯುಪಿಎಸ್‌ಸಿ ಪರೀಕ್ಷೆಯ ಪಠ್ಯಕ್ರಮವನ್ನು ಅರ್ಥೈಸಿಕೊಂಡು, ಅನೇಕ ಮೂಲಗಳಿಂದ ಆಯ್ದ ಅಧ್ಯಯನ ಸಾಮಗ್ರಿಯನ್ನು ಸಿದ್ದಪಡಿಸಿಕೊಳ್ಳಬೇಕು. ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳ ಮಾಹಿತಿಗಾಗಿ ಗಮನಿಸಿ: ://./--2/ ಇಂಗ್ಲಿಷ್ ಕಲಿಕೆಗೆ ಸಹಾಯವಾಗಬಹುದಾದ ಈ ವಿಡಿಯೊ ವೀಕ್ಷಿಸಿ: ://../?= ಗಮನಿಸಿ! ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು @.. ಗೆ ಕಳಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.