ಶಿಕ್ಷಣ: ಮೂರು ಪರೀಕ್ಷಾ ಸೂತ್ರ ಹೊಳೆದಿದ್ದು ಹೇಗೆ? ಲೇಖನ: ಎಸ್. ಸಂಪತ್ ––– ‘ತ್ರಿ’ ಪರೀಕ್ಷಾ ಸೂತ್ರ ಮೊಳಕೆ ಹೊಡೆದದ್ದು ಹೇಗೆ ಎಂಬುದರ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕ ಎಚ್‌.ಎನ್‌. ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ. ಪರೀಕ್ಷೆಗಳ ಸುಧಾರಣೆ, ಫಲಿತಾಂಶ ಹೆಚ್ಚಳ ಸೇರಿದಂತೆ ‘ವಿದ್ಯಾರ್ಥಿ ಸ್ನೇಹಿ’ ಪರೀಕ್ಷೆಗಳನ್ನು ನಡೆಸಲು ಏನೇನು ಮಾಡಬೇಕು, ಉನ್ನತ ಶಿಕ್ಷಣಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಹೋಗುವಂತೆ ಮಾಡಲು ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬ ಚರ್ಚೆಗಳು ಮಂಡಳಿಯ ಅಧ್ಯಕ್ಷ ಆರ್‌. ರಾಮಚಂದ್ರನ್ ಅವರ ನೇತೃತ್ವದಲ್ಲಿ ಆಗಾಗ ನಡೆಯುತ್ತಿತ್ತು. ಈ ರೀತಿ ಚರ್ಚಿಸುವಾಗ ಈ ಬಾರಿ ದ್ವಿತೀಯ ಪಿಯುಗೆ ಎರಡನೇ ಪೂರಕ ಪರೀಕ್ಷೆ ನಡೆಸಿದರೆ ಹೇಗೆ ಎಂಬ ಚಿಂತನೆ ಮೂಡಿತು. ಅದನ್ನು ಸಾಕಾರ ಮಾಡಿದೆವು. ಪರೀಕ್ಷೆ ಬರೆದ 1.19 ಲಕ್ಷ ವಿದ್ಯಾರ್ಥಿಗಳ ಪೈಕಿ 41,961 (ಶೇ 35.21)ರಷ್ಟು ವಿದ್ಯಾರ್ಥಿಗಳು ಪಾಸಾದರು. ಇದು ನಮ್ಮ ಉತ್ಸಾಹವನ್ನು ಹೆಚ್ಚಿಸಿತು. ಈ ಪೈಕಿ ಶೇ 43.55ರಷ್ಟು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿದ್ದರು. ಇವರಲ್ಲಿ ಎಂಟು ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಗಮನ ಸೆಳೆದರು. ಇದು ಅವರ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‍ಗಳ ಪ್ರವೇಶಿಸುವ ಕನಸನ್ನು ನನಸು ಮಾಡಲು ಸಹಕಾರ ಮಾಡಿತು. ಇದು ನಮ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದ್ದರ ಜತೆಗೆ ಹೊಸ ದಿಕ್ಕಿನತ್ತ ಯೋಚಿಸಲು ದಾರಿ ಮಾಡಿಕೊಟ್ಟಿತು. ವರ್ಷಕ್ಕೆ ಎರಡು ಪೂರಕ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದನ್ನು ಮನಗಂಡು, ಪ್ರತಿ ವರ್ಷ ಹೀಗೇ ಮಾಡಿದರೆ ಹೇಗೆ ಎಂಬ ವಿಚಾರ ಮಂಡಳಿ ಮತ್ತು ಇಲಾಖೆಗೆ ಬಂದಿತು. ಆಗ ನಡೆದ ಚರ್ಚೆ ಸಂದರ್ಭದಲ್ಲಿ ಪೂರಕ ಪರೀಕ್ಷೆ ಬದಲಿಗೆ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ವಾರ್ಷಿಕ ಪರೀಕ್ಷೆಯಂತೆಯೇ ನಡೆಸಿದರೆ ಹೇಗೆ ಎಂಬ ಯೋಚನೆ ಬಂದಿತು. ಅದರ ಸಾಧಕ– ಬಾಧಕಗಳ ಬಗ್ಗೆ ವಿಚಾರ, ವಿಮರ್ಶೆಗಳನ್ನು ಮಾಡಿದ ಬಳಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಾರ್ಷಿಕ ಪರೀಕ್ಷೆ 1, 2 ಮತ್ತು 3 ಎಂದು ಮೂರು ಪರೀಕ್ಷೆಗಳನ್ನು ನಡೆಸುವ ನಿರ್ಧಾರ ಪ್ರಕಟಿಸಿದರು. ಈ ಕುರಿತು ನಡೆಯುತ್ತಿದ್ದ ಚರ್ಚೆಗಳ ಸಂದರ್ಭದಲ್ಲಿ ನಾವು ಇತರ ರಾಜ್ಯಗಳ ಪರೀಕ್ಷಾ ಮಂಡಳಿಗಳು, ಸಿಬಿಎಸ್‍ಇ ಮತ್ತು ಐಸಿಎಸ್‍ಇ ನಡೆಸುವ ಪರೀಕ್ಷೆಗಳನ್ನು ಪರಿಶೀಲಿಸಿದ್ದೆವು. ಎಲ್ಲೂ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸುವ ವಿಧಾನ ಅಳವಡಿಕೆಯಲ್ಲಿಲ್ಲ. ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಮಾದರಿಯನ್ನು ಅಳವಡಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಬೇರೆ ಯಾವುದೇ ರಾಜ್ಯಗಳ ಮಂಡಳಿಗಳು ನಮ್ಮ ಈ ವಿಧಾನ ಅಳವಡಿಸಿಕೊಂಡರೆ ಅದು ‘ಕರ್ನಾಟಕ ಮಾದರಿ’ ಎಂದು ಕರೆಸಿಕೊಳ್ಳಬಹುದು ಎನ್ನುತ್ತಾರೆ ಗೋಪಾಲಕೃಷ್ಣ. ಏನೆಲ್ಲ ನಿಯಮಗಳಿವೆ? * ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ವಾರ್ಷಿಕ ಹಾಜರಾತಿ ಶೇ 75ರಷ್ಟು ಕಡ್ಡಾಯ. ಇಷ್ಟು ಹಾಜರಾತಿ ಇಲ್ಲದಿದ್ದರೆ ಪರೀಕ್ಷೆ ಬರೆಯಲು ಅರ್ಹತೆ ಇರುವುದಿಲ್ಲ. * ಮೊದಲ ಬಾರಿಗೆ ಪರೀಕ್ಷೆ ತೆಗೆದುಕೊಳ್ಳುವ ಹೊಸಬರು ಮತ್ತು ಖಾಸಗಿ ಅಭ್ಯರ್ಥಿಗಳು ಎಲ್ಲ ವಿಷಯಗಳಲ್ಲಿ ಪರೀಕ್ಷೆ–1 ಬರೆಯುವುದು ಕಡ್ಡಾಯ. ನೇರವಾಗಿ ಪರೀಕ್ಷೆ–2 ಮತ್ತು ಪರೀಕ್ಷೆ–3 ಬರೆಯಲು ಅವಕಾಶ ಇರುವುದಿಲ್ಲ. * ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವ ಸಲುವಾಗಿ ಒಂದು ಬಾರಿ ಮಾತ್ರ ನಿಗದಿತ ಶುಲ್ಕ ವಿಧಿಸಲಾಗುತ್ತದೆ. ಎರಡನೇ ಬಾರಿ ಶುಲ್ಕ ಪಡೆಯುವಂತಿಲ್ಲ. * ಪರೀಕ್ಷೆ–1ರಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ 2 ಮತ್ತು 3ನೇ ಪರೀಕ್ಷೆ ತೆಗೆದುಕೊಳ್ಳಲು ಆಸಕ್ತಿ ಇಲ್ಲದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ವಿತರಿಸಲಾಗುತ್ತದೆ. * ವಿದ್ಯಾರ್ಥಿಗಳ ಅಂಕಗಳನ್ನು ಪಡೆಯುವ ಸಲುವಾಗಿ ನ್ಯಾಷನಲ್ ಅಕಾಡೆಮಿಕ್ ಡೆಪಾಸಿಟರಿ (ಎನ್‍ಎಡಿ) ಡಿಜಿ ಲಾಕರ್ ವ್ಯವಸ್ಥೆಯಲ್ಲಿ ಆಯಾ ಪರೀಕ್ಷೆಗಳು ಮುಗಿದ ನಂತರ ಅಪ್ಲೋಡ್ ಮಾಡಲಾಗುತ್ತದೆ. * ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಮರು ಪ್ರಯತ್ನಿಸುವವರಿಗೆ ಹಾಲಿ ವ್ಯವಸ್ಥೆ ಮುಂದುವರಿಯುತ್ತದೆ. ಅವರಿಗೆ ಪ್ರಯತ್ನಗಳ ವಿಷಯದಲ್ಲಿ ಯಾವುದೇ ಮಿತಿ ಇರುವುದಿಲ್ಲ. * ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನೀಡುವ ಸಂಬಂಧ ಎಲ್ಲ ಉಪ ನಿರ್ದೇಶಕರು ಅಗತ್ಯ ತನಿಖಾ ತಂಡಗಳನ್ನು ರಚಿಸಿ, ಪ್ರತಿ ಕಾಲೇಜಿಗೂ ಭೇಟಿ ನೀಡಿ, ಹಾಜರಾದವರ, ಗೈರಾದವರ ಮತ್ತು ನೋಂದಣಿಯಾದ ವಿದ್ಯಾರ್ಥಿಗಳ ಮಾಹಿತಿಯನ್ನು ಪರಿಶೀಲಿಸುತ್ತಾರೆ. ಶಿಕ್ಷಕರಿಗೆ ಹೊರೆ ಶಿಕ್ಷಣ ಇಲಾಖೆಯಲ್ಲಿ ಬೋಧಕರಿಗೆ, ವಿದ್ಯಾರ್ಥಿಗಳಿಗೆ ದಸರಾ, ಬೇಸಿಗೆ ರಜೆ ಇರುತ್ತದೆ. ವಾರ್ಷಿಕ ಪರೀಕ್ಷೆಯ ಬಳಿಕ ಬೇಸಿಗೆ ರಜೆ ನಿಗದಿಯಾಗಿರುತ್ತದೆ. ಆದರೆ ಈ ಬಾರಿಯಿಂದ ವಾರ್ಷಿಕ ಮೂರು ಪರೀಕ್ಷೆ ನಡೆಸುವುದರಿಂದ ರಜೆ ಸಿಗುತ್ತದೆಯೇ ಎಂಬ ಆತಂಕ ಬೋಧಕರನ್ನು ಕಾಡುತ್ತಿದೆ. ಮಾರ್ಚ್‍ನಿಂದ ಜೂನ್ ಅಂತ್ಯದವರೆಗೆ ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಪ್ರಕಟ ಕಾರ್ಯಗಳಲ್ಲಿಯೇ ನಿರತರಾಗಬೇಕಾಗುತ್ತದೆ. ಹೀಗಿರುವಾಗ ರಜೆ ಎಲ್ಲಿ ಸಿಗುತ್ತದೆ ಎಂಬುದು ಬೋಧಕರ ಅಳಲು. ಮೂರು, ಮೂರು ಪರೀಕ್ಷೆಗಳನ್ನು ಮಾಡಲೇಬೇಕು ಎಂದಾದರೆ ಇತರ ಇಲಾಖೆಗಳಂತೆ ಶಿಕ್ಷಣ ಇಲಾಖೆಯನ್ನೂ ರಜೆ ರಹಿತ ಇಲಾಖೆ ಎಂದು ಘೋಷಿಸಿ, ಇತರ ಇಲಾಖಾ ಸಿಬ್ಬಂದಿಗೆ ಇರುವ ಸವಲತ್ತುಗಳನ್ನೂ ಬೋಧಕರಿಗೂ ವಿಸ್ತರಿಸಬೇಕು ಎಂಬುದು ಬೋಧಕರ ಸಂಘಗಳ ಮನವಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.