ದಕ್ಷಿಣ ಕನ್ನಡ: ‘ಸಿ’ ಗ್ರೇಡ್ ಶಾಲೆಗಳಿಗೆ ವಿಶೇಷ ಗಮನ ಮಂಗಳೂರು: ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ 19ನೇ ಸ್ಥಾನ ಪಡೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಈ ಬಾರಿ ತನ್ನ ಸ್ಥಾನ ಉತ್ತಮ ಪಡಿಸಿಕೊಳ್ಳಲು ಪೂರ್ವ ಸಿದ್ಧತೆ ಆರಂಭಿಸಿದೆ. 2023ನೇ ಸಾಲಿನಲ್ಲಿ ನಡೆದ ಪರೀಕ್ಷೆ ಫಲಿತಾಂಶದಲ್ಲಿ ಅತಿ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿ ದಕ್ಷಿಣ ಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ. ಶೇ 60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳನ್ನು ‘ಸಿ’ ಗ್ರೇಡ್, ಶೇ 61ರಿಂದ 70ರವರೆಗೆ ಫಲಿತಾಂಶ ದಾಖಲಿಸಿರುವ ಶಾಲೆಗಳನ್ನು ‘ಬಿ’ ಗ್ರೇಡ್ ಎಂದು ಗುರುತಿಸಲಾಗಿದೆ. ‘ಸಿ‘ ಗ್ರೇಡ್‌ನಲ್ಲಿರುವ 16 ಹಾಗೂ ‘ಬಿ’ ಗ್ರೇಡ್‌ನಲ್ಲಿರುವ 48 ಶಾಲೆಗಳು ಸೇರಿ ಒಟ್ಟು 64 ಶಾಲೆಗಳು ಜಿಲ್ಲೆಯ ಒಟ್ಟಾರೆ ಫಲಿತಾಂಶ ಕಡಿಮೆಯಾಗಲು ಕಾರಣವಾಗಿರುವುದನ್ನು ಗುರುತಿಸಿರುವ ಶಿಕ್ಷಣ ಇಲಾಖೆಯು, ಈ ಶಾಲೆಗಳಿಗೆ ವಿಶೇಷ ಕಾರ್ಯಕ್ರಮ ರೂಪಿಸಿದೆ. ‘ಸಿ’ ಗ್ರೇಡ್ ಶಾಲೆಗಳಿಗೆ ಭೇಟಿ ನೀಡಲು ಡಿಡಿಪಿಐ ನೇತೃತ್ವದಲ್ಲಿ ತಂಡ ರಚಿತವಾಗಿದೆ. ಈ ತಂಡದಲ್ಲಿ ಸರ್ವ ಶಿಕ್ಷಣ ಅಭಿಯಾನದ ಪ್ರಮುಖರು, ವಿಷಯ ತಜ್ಞರು, ಬಿಆರ್‌ಪಿ, ಸಿಆರ್‌ಪಿಗಳು ಇದ್ದಾರೆ. ಈ ತಂಡವು ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಿಗೆ ಭೇಟಿ ನೀಡಿ, ಮುಖ್ಯ ಶಿಕ್ಷಕರು, ವಿಷಯ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸಮಸ್ಯೆಯ ಮೂಲ ತಿಳಿಯುವ ಪ್ರಯತ್ನ ಮಾಡುತ್ತಿದೆ. ‘ಸಿ ಗ್ರೇಡ್‌ ಶಾಲೆಗಳಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳು ಒಳಗೊಂಡಿವೆ. ಬಂಟ್ವಾಳ ತಾಲ್ಲೂಕಿನಲ್ಲಿ ಐದು, ಮಂಗಳೂರು ದಕ್ಷಿಣದಲ್ಲಿ ನಾಲ್ಕು, ಮಂಗಳೂರು ಉತ್ತರ ಮತ್ತು ಪುತ್ತೂರು ತಾಲ್ಲೂಕಿನಲ್ಲಿ ತಲಾ ಎರಡು ಸಿ ಗ್ರೇಡ್ ಶಾಲೆಗಳು ಇವೆ. ಅನುದಾನಿತ ಶಾಲೆಗಳಲ್ಲಿ ಕೆಲವು ಕಡೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಒಂದೇ ವಿಷಯವನ್ನು ಇಬ್ಬರು ಪಾಠ ಮಾಡುವ ಸ್ಥಿತಿ ಇದೆ. ಅನುದಾನರಹಿತ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಅತಿಥಿ ಶಿಕ್ಷಕರನ್ನೇ ಅವಲಂಬಿಸಿದ್ದಾರೆ. ಅನನುಭವಿ ಶಿಕ್ಷಕರು, ಶಿಕ್ಷಕರ ನಿರಂತರ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಗೊಂದಲವಾಗಿದೆ. ಕೆಲವು ಸರ್ಕಾರಿ ಶಾಲೆಗಳಲ್ಲಿ ಎರಡು ವಿಷಯಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದಾರೆ. ಇನ್ನುಳಿದ ವಿಷಯಗಳಲ್ಲಿ ಕಡಿಮೆ ಅಂಕ ಬಂದಿದ್ದು, ಶಿಕ್ಷಕರು ಹೆಚ್ಚು ಶ್ರಮವಹಿಸಿದ್ದರೆ ಒಟ್ಟಾರೆ ಫಲಿತಾಂಶದಲ್ಲಿ ಪ್ರಗತಿ ಕಾಣಬಹುದಿತ್ತು’ ಎಂದು ತಂಡದಲ್ಲಿದ್ದ ಪ್ರಮುಖರೊಬ್ಬರು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.