ಎರಡು ಹುದ್ದೆಗಳಿಗೆ ಏಕಕಾಲದಲ್ಲಿ ಪರೀಕ್ಷೆ ಮೈಸೂರು: ವಿವಿಧ ನಿಗಮ–ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಿಂದ ನಡೆಸಲಾಗುವ ಪರೀಕ್ಷೆಗೆ ಪ್ರಕಟಿಸಲಾಗಿರುವ ವೇಳಾಪಟ್ಟಿಗೆ ಆಕಾಂಕ್ಷಿಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರು ಒಂದು ಪರೀಕ್ಷೆಯನ್ನಷ್ಟೆ ತೆಗೆದುಕೊಳ್ಳಬಹುದು. ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ನ ಹುದ್ದೆಗಳಿಗೆ ಅ.28, 29 ಹಾಗೂ 30ರಂದು ಸ್ಪರ್ಧಾತ್ಮಕ ಪರೀಕ್ಷೆ ನಿಗದಿಪಡಿಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸೀನಿಯರ್‌ ಅಕೌಂಟೆಂಟ್ ಹಾಗೂ ಕಾರ್ಮಿಕ ಇಲಾಖೆಯ ಫೀಲ್ಡ್‌ ಇನ್‌ಸ್ಪೆಕ್ಟರ್‌ ಹುದ್ದೆಗಳೆರಡಕ್ಕೂ ಅ.28ರಂದು ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಪರೀಕ್ಷೆ (ಸೆಕೆಂಡ್ ಪೇಪರ್‌) ನಿಗದಿಪಡಿಸಲಾಗಿದೆ. ಅ. 29ರಂದು ಆಹಾರ ನಿಗಮದ ಎಸ್‌ಡಿಎ ಹಾಗೂ ಕಾರ್ಮಿಕ ಇಲಾಖೆಯ ಎಸ್‌ಡಿಎ ಹುದ್ದೆಗಳಿಗೆ ಏಕಕಾಲಕ್ಕೆ ಪರೀಕ್ಷೆ ನಡೆಯಲಿದೆ. ನಾಲ್ಕು ಹುದ್ದೆಗಳಿಗೂ ಅರ್ಜಿ ಸಲ್ಲಿಸಿರುವವರು ಯಾವುದಾದರೂ ಎರಡು ಹುದ್ದೆಯ ಪರೀಕ್ಷೆಯನ್ನಷ್ಟೇ ಬರೆಯಬಹುದು. ಈ ಬಗ್ಗೆ ಪ್ರತಿಕ್ರಿಯೆಗೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.