ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ನೆನಪಿಟ್ಟುಕೊಳ್ಳುವುದು ಹೇಗೆ? 1. ನಾನು ಎರಡು ವರ್ಷಗಳ ಹಿಂದೆ ಬಿಕಾಂ ಮಾಡಿ, ನಂತರ ಬಿಇಡಿ ಕೋರ್ಸ್‌ನಲ್ಲಿ ಇಂಗ್ಲಿಷ್ ಮತ್ತು ವಾಣಿಜ್ಯ ಅಭ್ಯಾಸ ಮಾಡಿದ್ದು, ಪ್ರೌಢಶಾಲೆಯಲ್ಲಿ ಶಿಕ್ಷಕನಾಗಬೇಕೆಂದುಕೊಂಡಿದ್ದೇನೆ. ಹಾಗೂ, ಈ ಕ್ಷೇತ್ರದ ಇನ್ನಿತರ ಅವಕಾಶಗಳ ಬಗ್ಗೆ ವಿಸ್ತೃತವಾಗಿ ತಿಳಿಸಿ. –ಬಸವರಾಜ, ಜೆ ಜಾಡಲದಿನ್ನಿ, ದೇವದುರ್ಗ ತಾಲೂಕು. ಪ್ರೌಢಶಾಲೆಗಳಲ್ಲಿ ನೀವು ಇಂಗ್ಲಿಷ್ ಮತ್ತು ವಾಣಿಜ್ಯ ಸಂಬಂಧಿತ ವಿಷಯಗಳನ್ನು ಭೋಧಿಸಬಹುದು. ಹೆಚ್ಚಿನ ಅವಕಾಶಗಳಿಗಾಗಿ ಎಂಕಾಂ ಮಾಡಿ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆಎಸ್‌ಇಟಿ ಅಥವಾ ಎನ್‌ಇಟಿ) ಬರೆದು, ಪಾಸಾದರೆ ಸರ್ಕಾರಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಬಹುದು. ಪಿ.ಎಚ್‌ಡಿ ಮಾಡಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಬಹುದು. ಪಿ.ಎಚ್‌ಡಿ ಪದವೀಧರರಿಗೆ ಕೆಎಸ್‌ಇಟಿ/ಎನ್‌ಇಟಿ ಅರ್ಹತಾ ಪರೀಕ್ಷೆಯ ಅವಶ್ಯಕತೆಯಿರುವುದಿಲ್ಲ. ಭೋಧನಾ ವೃತ್ತಿಯ ಜೊತೆಗೆ ವಿಪುಲವಾದ ಇನ್ನಿತರ ಅವಕಾಶಗಳಿವೆ. ಉದಾಹರಣೆಗೆ, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಆಡಳಿತಾತ್ಮಕ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಿ ಪಡೆಯಬಹುದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ನೀಡಬಹುದು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಭೋಧನೆ ಮತ್ತು ಆಡಳಿತ ಸಂಬಂಧಿಸಿದ ಅವಕಾಶಗಳಿವೆ. ಅಭಿರುಚಿ, ಜ್ಞಾನ ಮತ್ತು ಕೌಶಲಗಳನ್ನು ಬೆಳೆಸಿಕೊಂಡು ನಿಮಗೆ ಸೂಕ್ತವೆನಿಸುವ ವೃತ್ತಿಯನ್ನು ಆಯ್ಕೆಮಾಡಿಕೊಳ್ಳಿ, ಮುಖ್ಯವಾಗಿ, ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳಿಂದ ವೃತ್ತಿ ಯೋಜನೆಯನ್ನು ಕಾರ್ಯಗತಗೊಳಿಸಿ, ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: ://..//-ugIg9bBIyH5QQbn_JjIw 2. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವ ನನಗೆ ನೆನಪಿಟ್ಟುಕೊಳ್ಳಲು ಕಷ್ಟವಾಗುತ್ತಿದೆ. ನೆನಪಿನ ಶಕ್ತಿಯನ್ನು ವೃದ್ಧಿಸಲು ಸಲಹೆ ನೀಡಿ. –ಸಹನಾ, ಚಾಮರಾಜನಗರ. ಓದಿದ್ದನ್ನು ಮರೆಯುವುದು ಒಂದು ಗಂಭೀರ ಹಾಗೂ ಸಾಮಾನ್ಯ ಸಮಸ್ಯೆ. ಪರಿಣಾಮಕಾರಿ ಕಾರ್ಯತಂತ್ರಗಳನ್ನು ಓದುವಿಕೆಯಲ್ಲಿ ಅಳವಡಿಸದಿರುವುದರಿಂದ ಓದಿದ ವಿಷಯಗಳು ನಿಮ್ಮ ಅಲ್ಪಾವಧಿ ಸ್ಮರಣೆಯಲ್ಲಿ ಮಾತ್ರ ಇರುತ್ತದೆ. ಪರೀಕ್ಷೆ/ಟೆಸ್ಟ್ಗಳಲ್ಲಿ ಓದಿದ ವಿಷಯ ಜ್ಞಾಪಕಕ್ಕೆ ಬರದೆ, ಸಮಸ್ಯೆಯಾಗುತ್ತದೆ. ಓದುವಿಕೆಯ ಕಾರ್ಯತಂತ್ರಗಳಲ್ಲಿ ಓದುವ ಪ್ರಕ್ರಿಯೆಯ ಜೊತೆ ಸಮೀಕ್ಷೆ, ಪ್ರಶ್ನಿಸುವಿಕೆ, ಪುನರುಚ್ಛಾರಣೆ ಮತ್ತು ಪುನರಾವರ್ತನೆ ಇರಬೇಕು. ತರಗತಿಗಳಲ್ಲಿ, ಉಪನ್ಯಾಸದ ಟಿಪ್ಪಣಿಯನ್ನು ಸರಿಯಾದ ಕ್ರಮದಲ್ಲಿ, ಓದುವಿಕೆಗೆ ಪೂರಕವಾಗುವಂತೆ ಬರೆಯಬೇಕು. ಹಾಗೂ, ಮನೆಯಲ್ಲಿ ಓದುವಾಗ ಕಣ್ಣಿಗೂ, ಮನಸ್ಸಿಗೂ ತರಬೇತಿಯ ಅಗತ್ಯವಿರುತ್ತದೆ. ಹೆಚ್ಚಿನ ಶಾಲಾ/ಕಾಲೇಜುಗಳಲ್ಲಿ ಪರಿಣಾಮಕಾರಿ ಓದುವಿಕೆಯ ಈ ಕಾರ್ಯತಂತ್ರಗಳ ಕುರಿತು ತರಬೇತಿ ನೀಡಿರುವುದಿಲ್ಲ. ಪರಿಣಾಮಕಾರಿ ಓದುವಿಕೆಯ ಕಾರ್ಯತಂತ್ರಗಳು ಮತ್ತು ಟಿಪ್ಪಣಿ ಬರೆಯುವ ಕ್ರಮ ಇತ್ಯಾದಿ ವಿಷಯಗಳ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊಗಳನ್ನು ವೀಕ್ಷಿಸಿ: ://../?=3PzmKRaJHmk, ://../?=Y2IPeZ6lbeM 3. ನಾನು ಬಿ.ಟೆಕ್ (ಕಂಪ್ಯೂಟರ್ ಸೈನ್ಸ್) ಅಂತಿಮ ವರ್ಷದಲ್ಲಿದ್ದೇನೆ. ಶೈಕ್ಷಣಿಕ ಸಾಲವಿರುವುದರಿಂದ, ಕೆಲಸಕ್ಕೆ ಸೇರಬೇಕೇ ಅಥವಾ ಎಂಟೆಕ್ ಮಾಡುವುದೇ ಎಂಬ ಗೊಂದಲದಲ್ಲಿದ್ದೇನೆ. – ಹೆಸರು, ಊರು ತಿಳಿಸಿಲ್ಲ. ಬಿ.ಟೆಕ್ (ಕಂಪ್ಯೂಟರ್ ಸೈನ್ಸ್) ಬೇಡಿಕೆಯಲ್ಲಿರುವ ಕ್ಷೇತ್ರ. ಸಾಮಾನ್ಯವಾಗಿ, ಈ ವಿಭಾಗದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನೇಮಕಾತಿಯ ಅವಕಾಶವಿರುತ್ತದೆ. ನೀವು ಕ್ಯಾಂಪಸ್ ನೇಮಕಾತಿಯ ಮೂಲಕ ವೃತ್ತಿಯನ್ನು ಅರಸಬಹುದು. ಹಾಗೂ, ಎಂಟೆಕ್ ಪದವಿಯನ್ನು ಅರೆಕಾಲಿಕ/ವಾರಾಂತ್ಯದ ತರಗತಿಗಳಿಂದ ಮಾಡಬಹುದು. ಲವು ವರ್ಷಗಳ ವೃತ್ತಿಯ ಅನುಭವದ ನಂತರ, ಕಂಪ್ಯೂಟರ್ ಸೈನ್ಸ್‌ನ ವಿಭಾಗಗಳಲ್ಲಿ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಡೇಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯೂರಿಟಿ, ರೊಬೊಟಿಕ್ಸ್ ಇತ್ಯಾದಿ) ನಿಮ್ಮ ಅಗತ್ಯಕ್ಕೆ ಅನುಗುಣವಾಗಿ, ಪೂರ್ಣಾವಧಿ ಎಂಟೆಕ್ ಮಾಡಬಹುದು. ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ, ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: ://../?=faQz_iLCWEk ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು @.. ಗೆ ಕಳಿಸಬಹುದು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.