ಪ್ರಶ್ನೋತ್ತರ | ಕೆಲಸ ಸಿಗದೆ ಪರದಾಟ: ಏನು ಮಾಡಲಿ? ಹೆಸರು, ಊರು ತಿಳಿಸಿಲ್ಲ ಸರ್, ನಾನು ಎರಡು ವರ್ಷದ ಹಿಂದೆ ಎಂಬಿಎ (ಎಚ್‌ಆರ್) ಮಾಡಿ ಒಳ್ಳೆಯ ಕೆಲಸಕ್ಕಾಗಿ ಈಗಲೂ ಪರದಾಡುತ್ತಿದ್ದೇನೆ. ಈಗಿರುವ ಕೆಲಸದಲ್ಲಿ ತೃಪ್ತಿಯಿಲ್ಲ. ಒಳ್ಳೆಯ ಕೆಲಸವಿಲ್ಲದೆ, ಜೀವನದಲ್ಲಿ ನೆಲೆಯೂರಲೂ ಆಗುತ್ತಿಲ್ಲ. ಈ ಕಷ್ಟದಿಂದ ಪಾರಾಗುವುದು ಹೇಗೆ? ದಯವಿಟ್ಟು ತಿಳಿಸಿ. ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು ವೃತ್ತಿ ಸಂಬಂಧಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು. ಹಾಗಿದ್ದರೆ ಮಾತ್ರ, ನಿಮ್ಮ ಕಾರ್ಯಾಚರಣೆ ಉದ್ಯೋಗದಾತರ ನಿರೀಕ್ಷೆಯಂತಿದ್ದು, ನಿಮಗೂ ವೃತ್ತಿಯಲ್ಲಿ ತೃಪ್ತಿಯಿರುತ್ತದೆ. ಹಾಗಾಗಿ, ಈಗಿರುವ ವೃತ್ತಿಯಲ್ಲಿ ತೃಪ್ತಿಯಿಲ್ಲದಿರುವ ಕಾರಣಗಳನ್ನು ಸ್ವಯಂ ಮೌಲ್ಯಮಾಪನದಿಂದ ಅರ್ಥಮಾಡಿಕೊಂಡು, ಇದೇ ವೃತ್ತಿಯಲ್ಲಿ ಪ್ರಗತಿ ಸಾಧ್ಯವೇ ಎಂದು ಪರಿಶೀಲಿಸಿ. ಹಾಗೂ, ಬೇಡಿಕೆಯಲ್ಲಿರುವ ಎಂಬಿಎ (ಮಾನವ ಸಂಪನ್ಮೂಲ) ಪದವಿಯ ನಂತರವೂ ಉತ್ತಮ ಕೆಲಸ ಸಿಗದಿರಲು ಇನ್ನಿತರ ಕಾರಣಗಳನ್ನು ವಿಶ್ಲೇಷಿಸಬೇಕು. ಉದಾಹರಣೆಗೆ, ನಿಮ್ಮಲ್ಲಿರುವ ವಿಶಿಷ್ಟ ಅರ್ಹತೆ, ಕೌಶಲ ಮತ್ತು ಸಾಮರ್ಥ್ಯಗಳನ್ನು ನಿಮ್ಮ ಬಯೋಡೇಟ ಅಚ್ಚುಕಟ್ಟಾಗಿ ಪ್ರತಿಬಿಂಬಿಸುತ್ತಿದೆಯೇ? ಅದೇ ರೀತಿ, ವೃತ್ತಿಯ ಸಂದರ್ಶನಗಳನ್ನು ಸೂಕ್ತವಾದ ಕಾರ್ಯತಂತ್ರದಿಂದಲೂ, ಆತ್ಮವಿಶ್ವಾಸದಿಂದಲೂ ಎದುರಿಸಲು ಆಗುತ್ತಿದೆಯೇ ಎಂದು ಪರಿಶೀಲಿಸಿ. ಹೆಸರು, ಊರು ತಿಳಿಸಿಲ್ಲ ನಾನು ಈಗ ದ್ವಿತೀಯ ಪಿಯುಸಿ (ಕಾಮರ್ಸ್) ಮಾಡುತ್ತಿದ್ದು ಸಿಎ ಮಾಡುವುದು ಕಷ್ಟವೆನಿಸುತ್ತಿದೆ. ಮುಂದೆ ಯಾವ ಕೋರ್ಸ್ ಮಾಡಬಹುದು? ಪಿಯುಸಿ (ಕಾಮರ್ಸ್) ನಂತರ, ಬಿಕಾಂ, ಬಿಕಾಂ (ಹಾನರ್ಸ್), ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್, ಐಟಿ ಸೇರಿದಂತೆ ಹಲವಾರು ಆಯ್ಕೆಗಳು), ಬಿಎ, ಬಿಸಿಎ, ಬಿಬಿಎ, ಬಿ.ಡಿಸೈನ್, ಎಸಿಎಸ್, ಸಿಎಂಎ ಇತ್ಯಾದಿ ಕೋರ್ಸ್‌ಗಳನ್ನು ಮಾಡಬಹುದು. ನಿಮ್ಮ ಆಸಕ್ತಿ, ಸ್ವಾಭಾವಿಕ ಪ್ರತಿಭೆ ಮತ್ತು ಕೌಶಲಗಳನ್ನು ಗಮನಿಸಿ, ಸೂಕ್ತವಾದ ಕಾರ್ಯತಂತ್ರ ಮತ್ತು ಕಠಿಣವಾದ ಪರಿಶ್ರಮವಿದ್ದಲ್ಲಿ, ಬೇಡಿಕೆಯಿರುವ ಸಿಎ ಕೋರ್ಸ್ ಮಾಡುವುದು ಅಸಾಧ್ಯವಲ್ಲ. ಸಿಎ ಮಾಡುವ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.