ಜೈಲು ಹಕ್ಕಿಗಳಿಗೆ ಪುಸ್ತಕ ‘ಅಡ್ಡದಾರಿ ಹಿಡಿದಾಗಲೆಲ್ಲ ನಮ್ಮನ್ನು ಎಚ್ಚರಿಸುವ ಅಂತರಂಗದಲ್ಲಿನ ಪೊಲೀಸ್‌ನ ಮಾತು ಕೇಳಿದರೆ ತಪ್ಪು ಘಟಿಸುವುದಿಲ್ಲ’ ಎಂದು ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಸಲಹೆ ನೀಡಿದರು. ಕನ್ನಡ ಪುಸ್ತಕ ಪ್ರಾಧಿಕಾರ ಬೆಳ್ಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ‘ನಿಮ್ಮ ಮನೆಗೆ ನಮ್ಮ ಪುಸ್ತಕ’ ಕಾರ್ಯಕ್ರಮ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ನೆರೆದಿದ್ದ ಕೈದಿಗಳಿಗೆ ಪುಸ್ತಕ ವಿತರಿಸಿದ ಅವರು, ‘ಸ್ವಯಂ ಅಪರಾಧಕ್ಕೆ ಬದುಕನ್ನು ಬರಡು ಮಾಡಿಕೊಳ್ಳುತ್ತೇವೆ. ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ. ಅದನ್ನು ತಿದ್ದಿಕೊಂಡು ಮುಂದೆ ಸಾಗಿದಾಗ ಮಾತ್ರ ಸುಂದರ ಬದುಕು ನಡೆಸಲು ಸಾಧ್ಯ. ಇನ್ನು ನಮ್ಮಲ್ಲಿನ ಏಕಾಂಗಿತನವನ್ನು ಹೋಗಲಾಡಿಸುವ ಪುಸ್ತಕ ಮನಶಾಂತಿಯನ್ನು ಒದಗಿಸುತ್ತದೆ. ಅಪರಾಧದ ಹಿನ್ನೆಲೆ ಹೊಂದಿರುವವರು ಹಾವು ಪೊರೆ ಕಳಚಿದ ಹಾಗೇ ಹೊಸ ವ್ಯಕ್ತಿಯಾಗಿ ಜೀವನ ಆರಂಭಿಸಬೇಕೆಂದು’ ಅವರು ಕಿವಿಮಾತು ಹೇಳಿದರು. ಆತ್ಮಾವಲೋಕನ ಅಗತ್ಯ:ಜೈಲಿನಲ್ಲಿ ಪ್ರತಿಯೊಬ್ಬರಿಗೂ ಒಂಟಿತನ, ಹತಾಶೆ, ಕೋಪ, ಭಯ ಕಾಡುತ್ತದೆ. ಇದರಿಂದ ಕೈದಿಗಳಲ್ಲಿ ಶೇ 95 ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ನಿರಪರಾಧಿ ಸಹ ಶಿಕ್ಷೆಗೆ ಒಳಗಾಗುವು ಸಾಧ್ಯತೆ ಇರುತ್ತದೆ. ಹಾಗಂತ ಬದುಕಿನಲ್ಲಿ ಭರವಸೆ ಕಳೆದುಕೊಳ್ಳಬಾರುದು. ಜೈಲಿನಲ್ಲಿರುವಷ್ಟು ದಿನ ಸ್ನೇಹ, ಸೌಹಾರ್ದತೆಯಿಂದ ಬದುಕನ್ನು ಸಾಗಿಸಿ, ಜೀವನಕ್ಕೆ ಅರ್ಥಕಂಡುಕೊಳ್ಳಬೇಕು. ಹಸಿದರಿಗೆ ಅನ್ನ ನೀಡಿದ ಹಾಗೆ ನೊಂದ ಕೈದಿಗಳಿಗೂ ಸಮಾಧಾನ ಮಾಡುವ ಮೂಲಕ ಆತ್ಮವಿಶ್ವಾಸವನ್ನು ತುಂಬುವುದು ಅತ್ಯಗತ್ಯ. ಕೆಲವು ವ್ಯಕ್ತಿಗಳು ಮನೋರೋಗದಿಂದ ಸಹ ಅಪರಾಧ ಮಾಡುವ ಸಾಧ್ಯತೆ ಇರುತ್ತದೆ’ ಎಂದು ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ತಿಳಿಸಿದರು. ಸಾಹಿತಿ ಡಾ. ಸಿದ್ಧಲಿಂಗಯ್ಯ, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಎಂ. ಸೋಮಶೇಖರ್, ಅಧೀಕ್ಷಕ ಪಿ.ಎಸ್. ರಮೇಶ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಆಡಳಿತಾಧಿಕಾರಿ ಸೌಭಾಗ್ಯ, ಕಾರಾಗೃಹದ ಗ್ರಂಥಾಲಯದ ಶಿಕ್ಷಕ ಸಿ. ಸಿದ್ಧಪ್ಪ ಉಸಪಸ್ಥಿತರಿದ್ದರು. ಕೈದಿಗಳಿಗೆ ಕಥಾ ಕಮ್ಮಟ 300ಕ್ಕೂ ಅಧಿಕ ಪುಸ್ತಕವನ್ನು ಕೇಂದ್ರ ಕಾರಾಗೃಹದ ಗ್ರಂಥಾಲಯಕ್ಕೆ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಹಸ್ತಾಂತರಿಸಿದರು. ಜೈಲಿನಲ್ಲಿರುವ ಕೈದಿಗಳಲ್ಲಿ ಒಂಟಿತನ, ಹತಾಶ ಭಾವ ಹೋಗಲಾಡಿಸಲು ಪುಸ್ತಕ ಸಹಾಯಕ. ಹೀಗಾಗಿ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮವನ್ನು ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಯಿತು. ಶೀಘ್ರದಲ್ಲಿಯೇ ಬರಹ ಹಾಗೂ ಓದಿನಲ್ಲಿ ಆಸಕ್ತಿ ಇರುವ ಕೈದಿಗಳಿಗೆ ಕಥಾ ಕಮ್ಮಟ ಏರ್ಪಡಿಸಿ, ಲೇಖನಗಳನ್ನು ಪುಸ್ತಕ ರೂಪದಲ್ಲಿ ಹೊರತರುತ್ತೇವೆ ಎಂದು ಅವರು ಹೇಳಿದರು. * ಕೈದಿಗಳಿಗೆ ಕಾರಾಗೃಹ ಪರಿವರ್ತನೆಯ ಕೇಂದ್ರವಾಗಬೇಕು. ಇರುವಷ್ಟು ದಿನ ಅವರು ಅರ್ಥಪೂರ್ಣವಾಗಿ ಜೀವಿಸಿ, ಉತ್ತಮ ವ್ಯಕ್ತಿಯಾಗಿ ಹೊರಹೋಗಬೇಕು. ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡರೆ ಜೈಲು ವಾಸ ಸಹ ವರವಾಗುತ್ತದೆ. –ಡಾ. ಸಿದ್ಧಲಿಂಗಯ್ಯ, ಸಾಹಿತಿ * ಕಾರಾಗೃಹದ ಇತಿಹಾಸದಲ್ಲಿಯೇ ಮೊದಲ ಬಾರಿ ಈ ರೀತಿ ಪುಸ್ತಕ ವಿತರಣೆ ಕಾರ್ಯಕ್ರಮ ನಡೆದಿದೆ. ನಮ್ಮ ಗ್ರಂಥಾಲಯದಲ್ಲಿ 50ಸಾವಿರ ಪುಸ್ತಕಗದಳಿದ್ದು, ಸಾಹಿತ್ಯ, ಕಲೆಯಲ್ಲಿ ಆಸಕ್ತಿ ಇರುವವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಪುಸ್ತಕ ಓದುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. –ಪಿ.ಎಸ್. ರಮೇಶ್, ಅಧೀಕ್ಷಕರು ಕೇಂದ್ರ ಕಾರಾಗೃಹ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.