ಬದಲಾವಣೆಗಾಗಿ ‘ಕಾಂತರಿ’ ಮಾತು ಶಿಕ್ಷಕರಿಲ್ಲದ ಶಾಲೆ, ವಿದ್ಯಾರ್ಥಿಗಳೇ ಸ್ವಯಂ ಅನುಭವಪೂರ್ಣವಾಗಿ ಕಲಿಯಬೇಕೆಂಬ ಆಸೆ ನಗರದ ಅನುಭವ್‌ ಸಿನ್ಹಾ ಅವರದ್ದಾಗಿತ್ತು. ಶಿಕ್ಷಕರಿಲ್ಲದ ಶಾಲೆ ರೂಪಿಸಬೇಕೆನ್ನುವ ಕನಸನ್ನು ಹಂಚಿಕೊಂಡಾಗಲೆಲ್ಲಾ ಅದನ್ನು ಕೇಳಿದಾಗ ನಕ್ಕವರೇ ಹೆಚ್ಚು. ಶಿಕ್ಷಣ ಕ್ಷೇತ್ರದಲ್ಲಿ ಇಂಥದೊಂದು ಬದಲಾವಣೆ ಸಾಧ್ಯವಿಲ್ಲ ಎಂದರು ಬಹುತೇಕರು. ಸಮಾಜದಲ್ಲಿ ಸಣ್ಣ ಬದಲಾವಣೆ ತರಬೇಕೆಂಬ ಕನಸು ಹೊತ್ತಿದ್ದ ಅನುಭವ್ ಅವರಿಗೆ ಆತ್ಮವಿಶ್ವಾಸ ತುಂಬಿದ್ದು ‘ಕಾಂತರಿ’ ಎನ್ನುವ ಸಂಸ್ಥೆ. ಕಾಂತರಿ ಕೈ ಹಿಡಿದ ಮೇಲೆ ಅನುಭವ್ ಸಿನ್ಹಾ ಅವರ ಕನಸು ನನಸಾಯಿತು. ‘ಡೆಫಿ’ ಎನ್ನುವ ಸಂಘಟನೆ ಕಟ್ಟಿದ ಅನುಭವ್ ಅದರ ಮೂಲಕ ಶಿಕ್ಷಕರಿಲ್ಲದ ಶಾಲೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಯುವಜನರಿಗೆ ಮಾದರಿಯಾಗಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು ಕಾಂತರಿ. ಕಾಂತರಿ ಎನ್ನುವುದು ಕೇರಳ ಮತ್ತು ತಮಿಳುನಾಡಿನಲ್ಲಿ ಬೆಳೆಯುವ ಮೆಣಸಿನಕಾಯಿ ತಳಿಯ ಹೆಸರು. ಹತ್ತು ಸಾಮಾನ್ಯ ಮೆಣಸಿನಕಾಯಿಯ ಕಾರ ಒಂದು ಕಾಂತರಿ ಮೆಣಸಿನಕಾಯಿಗೆ ಸಮ. ಇದೇ ಮೆಣಸಿನಕಾಯಿಯ ಹೆಸರು ಹೊತ್ತಿರುವ ಕೇರಳದ ‘ಕಾಂತರಿ’ ನಾಯಕತ್ವ ತರಬೇತಿ ಕೇಂದ್ರ ನೋಡಲು ಪುಟ್ಟದಾಗಿದ್ದರೂ ಮಾಡಿರುವ ಕೆಲಸ ಮಾತ್ರ ಅಗಾಧ. ಸಮಾಜದಲ್ಲಿ ಬದಲಾವಣೆ ತರಬೇಕೆನ್ನುವವರಿಗೆ ಪ್ರೋತ್ಸಾಹಕರ ನುಡಿಗಳು ಸಿಗುವುದು ಕಷ್ಟ. ಆದರೆ, ಬದಲಾವಣೆಗಾಗಿ ತುಡಿಯುವವರ ಕನಸುಗಳಿಗೆ ಜೀವ ತುಂಬುವ ಕೆಲಸ ಕಾಂತರಿಯದ್ದು. ಸಣ್ಣಸಂಗತಿಗಳು ಹೇಗೆ ದೊಡ್ಡ ಬದಲಾವಣೆಗೆ ಪ್ರೇರಣೆಯಾಗುತ್ತವೆ ಎಂಬುದನ್ನು ಕಾಂತರಿ ನಿರೂಪಿಸುತ್ತದೆ. ಪ್ರತಿ ವರ್ಷವೂ ಒಂದೊಂದು ವಿಷಯಾಧಾರಿತವಾಗಿ ಕಾಂತರಿ ಮಾತುಕತೆಯ ಮೂಲಕ ಮಾರ್ಗದರ್ಶನ ನೀಡುತ್ತದೆ. ಈ ಬಾರಿ ‘ಬದಲಾವಣೆ ನಿಮ್ಮೊಳಗೆ’ ವಿಷಯ. ಇದೇ 24 ಮತ್ತು 25ರಂದು ಕೋರಮಂಗಲದ ಸೇಂಟ್ ಜೋಸೆಫ್ ಆಡಿಟೋರಿಯಂನಲ್ಲಿ ಕಾಂತರಿ ನಾಯಕತ್ವದ ಕಾರ್ಯಾಗಾರ ನಡೆಯಲಿದೆ. ಇದರಲ್ಲಿ ಬಾಂಗ್ಲಾ ದೇಶ, ಘಾನಾ, ಭಾರತ, ಕೀನ್ಯಾ, ನೇಪಾಳ, ನೈಜೀರಿಯಾ, ಥಾಯ್ಲೆಂಡ್, ಉಗಾಂಡ ಸೇರಿದಂತೆ ಒಟ್ಟು13 ದೇಶಗಳ 23 ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಿರುವುದು ವಿಶೇಷ. ತಮ್ಮ ವೈಯಕ್ತಿಕ ಬದುಕಿನಲ್ಲಾದ ನೋವುಗಳನ್ನು ಮೆಟ್ಟಿ ನಿಂತ ಬಗೆಯನ್ನು ಸಂಪನ್ಮೂಲ ವ್ಯಕ್ತಿಗಳು ಹಂಚಿಕೊಳ್ಳಲಿದ್ದಾರೆ. ಪರಿಸರ ಸಂರಕ್ಷಣೆ, ಪರ್ಯಾಯ ಶಿಕ್ಷಣ, ಮಹಿಳಾ ಸಬಲೀಕರಣ, ಸಮಾನತೆಯ ಸಮಾಜ ರಚನೆ ವಿಷಯ ಕುರಿತು ಚರ್ಚೆ ನಡೆಯಲಿದೆ. 2009ರಲ್ಲಿ ಆರಂಭವಾದ ಕಾಂತರಿಗೆ ಈಗ ದಶಕದ ಸಂಭ್ರಮ. ಸಬ್ರಿಯೇ ಟೆನ್‌ಬೆರ್ಕನ್ ಮತ್ತು ಪೌಲ್ ಕ್ರೊನೆನ್‌ಬರ್ಗ್ ಈ ಸಂಘಟನೆಯ ಸ್ಥಾಪಕರು. ಕೇರಳದ ತಿರುವನಂತಪುರದಲ್ಲಿರುವ ಕಾಂತರಿ, ಸ್ಕಾಲರ್‌ಶಿಪ್ ಆಧಾರಿತ 7 ತಿಂಗಳ ವಸತಿ ಸಹಿತ ತರಬೇತಿ ನೀಡುತ್ತದೆ. ಗಡಿ, ಭಾಷೆಗಳನ್ನು ಮೀರಿ ಈ ಸಂಘಟನೆ ಕೆಲಸ ಮಾಡುತ್ತಿದ್ದು ಕಾಂತರಿಯಲ್ಲಿ ಇದುವರೆಗೆ 41 ದೇಶಗಳ 183 ಮಂದಿ ತರಬೇತಿ ಪಡೆದಿದ್ದಾರೆ. ಇದರಲ್ಲಿ 130 ಮಂದಿ ಸ್ವಂತ ಬಲದಿಂದ ಸಾಮಾಜಿಕ ಸಂಘಟನೆಗಳನ್ನು ಕಟ್ಟಿ ಯಶಸ್ವಿಯಾಗಿದ್ದಾರೆ. ‘ದೊಡ್ಡ ಸಮಾಜದಲ್ಲಿ ಸಣ್ಣ ಸಣ್ಣ ಬದಲಾವಣೆಗಳೇ ಅಗಾಧವಾದ ಪರಿಣಾಮ ಬೀರುತ್ತವೆ. ಆದರೆ, ಈ ಬದಲಾವಣೆ ನಮ್ಮಿಂದಲೇ ಆಗಬೇಕಾದದ್ದು ಮುಖ್ಯ. ಬೆಂಗಳೂರಿನಲ್ಲಿ ಇಂಥ ಕಾರ್ಯಕ್ರಮ ನಡೆಸಲು ತುಂಬಾ ಸಂತಸವಾಗುತ್ತಿದೆ. ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ಬೆಂಗಳೂರು ನಗರದ ಜನರು ಅರಿಯಲು ಇದೊಂದು ಸುಸಂದರ್ಭ’ ಎನ್ನುತ್ತಾರೆ ಕಾಂತರಿಯ ಸಹ ಸ್ಥಾಪಕ ಪೌಲ್ ಕ್ರೊನೆನ್‌ಬರ್ಗ್. ಭಾರತದಲ್ಲಿ 25 ಕಾಂತರಿ ಪದವೀಧರರು ಕೆಲಸ ಮಾಡುತ್ತಿದ್ದು ಸಾಮಾಜಿಕ ಬದಲಾವಣೆಗೆ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕೆ.ಆರ್. ರಾಜಾ ಗ್ಲೋಬಲ್ ನೆಟ್‌ವರ್ಕ್ ಆಫ್ ಇಕ್ವಾಲಿಟಿ ಎನ್ನುವ ಸಂಘಟನೆ ಆರಂಭಿಸಿದ್ದು, ಕೈದಿಗಳ ಮಕ್ಕಳು ಮತ್ತು ಕೈದಿಗಳ ಪುನರ್ವಸತಿಗಾಗಿ ಶ್ರಮಿಸುತ್ತಿದ್ದಾರೆ. ಅಂತೆಯೇ ಚಿನ್ನರಾಜ, ‘ಸ್ನೇಹನ್’ ಸಂಘಟನೆ ಆರಂಭಿಸಿದ್ದು, ಪುದುಚೆರಿಯಲ್ಲಿ ನಿರ್ಗತಿಕರಿಗಾಗಿ ಕೌಶಲ ತರಬೇತಿ ಮತ್ತು ಕಾನೂನು ಸಲಹಾ ಅಭಿಯಾನ ನಡೆಸುತ್ತಿದ್ದಾರೆ. ಇಂಥ ನೂರಾರು ಯಶಸ್ಸಿನ ಕಥೆಗಳಿಗೆ ಕಾಂತರಿಯ ಬೆಂಬಲವಿದೆ. ವಯಸ್ಸಿನ ಬೇಧವಿಲ್ಲದೆ ಎಲ್ಲರಿಗೂ ಮುಕ್ತ ಪ್ರವೇಶ ಅನುಕೂಲ ಕಲ್ಪಿಸಿರುವ ಕಾಂತರಿ, ತರಬೇತಿಯ ಜೊತೆಗೆ ಸ್ಕಾಲರ್‌ಶಿಪ್ ಸಹ ನೀಡುತ್ತದೆ. ಆಸಕ್ತರು ಕಾಂತರಿ ವೆಬ್‌ಸೈಟ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿ ತಾವು ಆರಂಭಿಸಬೇಕೆಂದಿರುವ ಸಾಮಾಜಿಕ ಸಂಘಟನೆಯ ಕುರಿತು ಮಾಹಿತಿ ನೀಡಿದಲ್ಲಿ ಕಾಂತರಿ ಅಂಥವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತದೆ. ಹೆಚ್ಚಿನ ಮಾಹಿತಿಗೆ: ... ಕಾರ್ಯಾಗಾರದ ಟಿಕೆಟ್‌ಗಾಗಿ: .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.