ಎರಡು ಕಂಬಗಳ ನಡುವೆ... ಓಬೀರಾಯನ ಕಾಲದಲ್ಲಿಬೆಂಗಳೂರು ಸ್ನಾತಕೋತ್ತರ ಸಂವಹನ ವಿಭಾಗ (ಕಾಲೇಜು) ಲಾಡ್ಜ್‌ ಆಗಿತ್ತು ಎನ್ನುವುದು ಗಾಳಿ ಸುದ್ದಿ! ಆ ಕಾಲದಲ್ಲಿ ಏನಾದರೂ ಆಗಿದ್ದಿದ್ದಿರಲಿ, ನಾವು ವಿದ್ಯಾಭ್ಯಾಸ ಮಾಡುವಾಗ ನಮ್ಮ ಪಾಲಿಗಂತೂ ಅದು ಛತ್ರವಾಗಿತ್ತು. ಕಾಲೇಜಿನ ಮುಂಭಾಗಕ್ಕಿಂತಲೂ ನಾವು ‘ಬ್ಯಾಕ್‌ ಸ್ಪೇಸ್‌’ (ಕಾಲೇಜಿನ ಹಿಂದಿನ ಜಾಗ) ಅನ್ನೇ ಮೆಚ್ಚಿಕೊಂಡಿದ್ದೆವು. ಈ ಜಾಗಕ್ಕೂ ನಮಗೂ ಅವಿನಾಭಾವ ಸಂಬಂಧ. ಕಾಲೇಜಿನ ಕಲ್ಲುಕಂಬಗಳು ಥೇಟ್‌ ದೇವಸ್ಥಾನದ ಕಂಬಗಳಂತೆ ಇತ್ತು.ಮೇಲ್ಛಾವಣಿಗೆ ಸಹಾಯವಾಗಿ ಮರದಿಂದ ಮಾಡಿದ ಕಂಬಗಳು, ಹೊರಾಂಗಣದ ಸರಪಳಿಯ ಮೇಲ್ಭಾಗವು ಮರದಿಂದ ಕೂಡಿತ್ತು. ಮರದ ಮೆಟ್ಟಿಲಿನ ಮೇಲೆ ದಪ್ಪಗಿರುವವರು ಹೆಜ್ಜೆ ಹಾಕಿದರೆ, ‘ಮೆತ್ತಗೆ ನಡೀರಿ ಹಿಂದೆ ನಾವಿದ್ದೀವಿ ಬಿದ್ರೆ ಕಷ್ಟ’ (ಹಳೆ ಕಾಲದ ಮರದ ಮೆಟ್ಟಿಲು) ಎನ್ನುವ ಕೀಟಲೆಗೂ ಇದು ವಸ್ತುವಾಗಿತ್ತು. ಸದಾ ಮೆಲುಕು ಹಾಕುವ ಎವರ್‌ಗ್ರೀನ್‌ ಹಾಡಿನ ರೀತಿ ಉಳಿದು ಹೋಗುವ ಅನುಭವ ಕೊಟ್ಟಿರುವುದು ಕಾಲೇಜಿನ ಹಿಂಭಾಗದಲ್ಲಿರುವ ಎರಡು ಕಲ್ಲುಗಳ ನಡುವೆ ಸಾಷ್ಟಾಂಗ ನಮಸ್ಕಾರ ಹಾಕುವಷ್ಟು ಇರುವ ಜಾಗ. ತೀರ್ಥಕ್ಷೇತ್ರಕ್ಕೆ ಹೋಗುವಾಗ ಮಿಂದು ಹೋಗುವಂತೆ ಕ್ಲಾಸ್‌ ರೂಮ್‌ಗೆ ಹೋಗುವ ಮುನ್ನ ಇಲ್ಲಿಗೆ ಬಂದೇ ಹೋಗುತ್ತಿದ್ದೆವು. ಕಾಲೇಜಿಗೆ ಸೇರಿದ ಮೇಲೆ ಮೊದಲ ಗ್ರೂಪ್‌ ಪೋಟೊಗೆ ಫೋಸ್‌ ನೀಡಿದ್ದು ಕೂಡ ಇದೇ ಜಾಗದಲ್ಲಿ. ಪ್ರಶಾಂತ ವಾತಾವರಣ, ಮರಗಳ ತಂಪಾದ ಗಾಳಿಯಿಂದ ಕೂಡಿದ ಈ ಪ್ರದೇಶದಲ್ಲಿ ಕಿಟಲೆ, ಚರ್ಚೆ, ವಿಮರ್ಶೆ, ಕೈತುತ್ತು, ಹುಟ್ಟುಹಬ್ಬದ ಕೇಕ್‌ ಕಟ್ಟಿಂಗಳು ನಡೆಯುತ್ತಿದ್ದವು. ಅಷ್ಟೇ ಅಲ್ಲ, ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೊಡಿದ್ರಂತೆ ಎನ್ನುವಂತೆ ಕೊನೆ ಕ್ಷಣದಲ್ಲಿ ಅಸೈನ್ಮೆಂಟ್‌, ಪ್ರಾಜೆಕ್ಟ್ ವರ್ಕ್‌ಗಳನ್ನು ಗೀಚಿದ್ದು ಇಲ್ಲೇ! ಉಪನ್ಯಾಸಕರು ಕ್ಲಾಸ್‌ ಬಂಕ್‌ ಮಾಡಿದರೂ, ನಾವೇ ಕ್ಲಾಸ್‌ ಬಂಕ್‌ ಮಾಡಿದರೂ ನಾವು ಮಾತ್ರ ಇಲ್ಲೇ ಸೇರುತ್ತಿದ್ದೆವು. ಈ ಜಾಗ ಕೇವಲ ತುಂಟಾಟ, ಸಮಯ ಪೋಲಿಗಷ್ಟೇ ಸೀಮಿತವಾಗಿರಲಿಲ್ಲ. ನಾವೇ ಕಾಲೇಜಿನಲ್ಲಿ ಮೊದಲಿಗೆ ಹೊರತಂದ ‘ಅಭಿವ್ಯಕ್ತಿ’ ಪತ್ರಿಕೆಯ ರೂಪುರೇಷೆಗಳ ಚರ್ಚೆಗೆ, ಕುಸುಮಬಾಲೆ, ಬೆಂಕಿಯಲ್ಲಿ ಹರಳಿದ ಹೂ, ನಿರಾಕಾರಣ, ಗೃಹಭಂಗ, ಸಂಸ್ಕಾರ, ಮೂಕಜ್ಜಿಯ ಕನಸುಗಳು ಸೇರಿದಂತೆ ಜೋಗಿ ಅವರ ಪುಸ್ತಕಗಳು ಕೈಯಿಂದ ಕೈಗೆ ಬದಲಾಗುತ್ತಿದ್ದಕ್ಕೂ ಸಾಕ್ಷಿಯಾಗಿತ್ತು. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮೆಜಾರಿಟಿ ಇದ್ದರು. ಎಲ್ಲರ ಊಟದ ಬುತ್ತಿ ಇಲ್ಲೇ ತೆರೆದುಕೊಳ್ಳುತ್ತಿತ್ತು. ‘ಏನ್ರಲಾ ಮಾಡ್ತಿದ್ದೀರಾ’ ಎಂದು ಬರುತ್ತಿದ್ದ ಕೆಂಪಮ್ಮ (ಸಹಾಯಕ ಸಿಬ್ಬಂದಿ) ಅಚ್ಚುಕಟ್ಟಾಗಿ ಕೂತು ಅವರ ಮುದ್ದೆ ಮೂರಿದು ಹೋಗುತ್ತಿದ್ದರು. ಹಬ್ಬದ ದಿನಗಳಲ್ಲಿ, ಇಲ್ಲ ಯಾರಾದರೂ ಊರಿಗೆ ಹೋಗಿ ಬಂದರೆ ವಿವಿಧಿ ತಿಂಡಿಗಳ ಆಸ್ವಾದ ಗೊತ್ತಾಗುತ್ತಿತ್ತು. ಬಣ್ಣದೊಕುಳಿ, ವಿನೋದ್‌ ರಾವ್‌ ಅವರು ಕಲಿತ ಛಾಯಾಗ್ರಹಣದ ಕ್ಲಾಸ್‌ನ ಅ, ಆ ಗಳನ್ನು ಎಲ್ಲರಿಗೂ ಹೇಳಿಕೊಟ್ಟಿದ್ದು ಇಲ್ಲೇ. ನಮ್ಮನ್ನ ಕಾಲೇಜಿನಿಂದ ‘ಓಡಿಸುವ’ (ಸೆಂಡ್‌ ಆಫ್‌) ವಿಡಿಯೊದಲ್ಲೂ ಈ ಜಾಗಕ್ಕೆ ವಿಶೇಷ ಮಹತ್ವ ಕೊಡಲಾಗಿತ್ತು! ಒಟ್ಟಾರೆ ಕಾಲೇಜು ಹಿಂದಿನ ಆ ಜಾಗ ಇಂದಿಗೂ ಎಂದಿಗೂ ನನ್ನ ಮೊದಲ ಪ್ರೀತಿಯಾಗಿ ಮನದಲ್ಲಿ ಹಸಿರಾಗಿದೆ. –ಹಿತೇಶ್ ವೈ.,ಸೆಂಟ್ರಲ್ ಕಾಲೇಜು, ಬೆಂಗಳೂರು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.