ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ‘ಸಫಲತೆಯ ಮೆಟ್ಟಿಲು’ ಚಿತ್ರದುರ್ಗ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳ ಹಾಗೂ ತಾಲ್ಲೂಕಿನಲ್ಲಿ ಕಲಿಕೆಯಲ್ಲಿ ಸಾಧಾರಣ ಮಟ್ಟಕ್ಕಿಂತ ಅತ್ಯಂತ ಹಿಂದುಳಿದ ವಿದ್ಯಾರ್ಥಿಗಳನ್ನು ಉತ್ತೀರ್ಣದ ಮಾರ್ಗದತ್ತ ಕೊಂಡೊಯ್ಯಲು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯೂ ‘ಸಫಲತೆಯ ಮೆಟ್ಟಿಲು’ ಕಾರ್ಯಕ್ರಮ ರೂಪಿಸಿದೆ. ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಕಚೇರಿಯ ನೋಡಲ್ ಅಧಿಕಾರಿಗಳು ಫಲಿತಾಂಶ ಸುಧಾರಣೆಗೆ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಶಾಲೆಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಉತ್ತಮ ಸಾಧನೆ ತೋರುತ್ತಿರುವ ಮಕ್ಕಳಿಗೂ ಪೂರಕವಾಗುವ ಹಾಗೂ ಹಿಂದಿನ ವರ್ಷದ ಫಲಿತಾಂಶಕ್ಕಿಂತಲೂ ಈ ಬಾರಿ ಹೆಚ್ಚಳಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇದೇ ಪ್ರಥಮ ಬಾರಿ ತಾಲ್ಲೂಕಿನಲ್ಲಿ ಕೈಗೊಂಡಿರುವ ಈ ವಿನೂತನ ಕಾರ್ಯಕ್ರಮದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ‘ಪ್ರಜಾವಾಣಿ’ಗೆ ವಿವರ ನೀಡಿದ್ದಾರೆ. ಉದ್ದೇಶ: ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವುದು. ಕಲಿಕೆಯಲ್ಲಿ ಹಿಂದುಳಿದವರ ಫಲಿತಾಂಶ ಉತ್ತಮ ಪಡಿಸುವುದು. ಸಾಧಾರಣ ಹಾಗೂ ನಿಧಾನ ಕಲಿಕೆಯ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು. ಬರವಣಿಗೆ ಕೌಶಲ ವೃದ್ಧಿಸುವುದು. ವಾರ್ಷಿಕ ಪರೀಕ್ಷೆಗೆ ಸಿದ್ಧತೆಗೊಳಿಸುವುದು. ಮಕ್ಕಳ ನ್ಯೂನತೆ ಅರಿತು ಸರಿಪಡಿಸಲು ಶಿಕ್ಷಕರಿಗೆ ನೆರವಾಗುವುದು. ತಾಲ್ಲೂಕಿನಲ್ಲಿ ಶಿಕ್ಷಕರ ಸಭೆಗಳನ್ನು ಈಗಾಗಲೇ ನಡೆಸಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ವಿಷಯವಾರು ಪ್ರಶ್ನೆ ಪತ್ರಿಕೆ ತಯಾರಿಸಿದ್ದೇವೆ. ಅವುಗಳನ್ನು ಬಿಇಒ ಕಚೇರಿಯಿಂದ ನೇರವಾಗಿ ಆಯಾ ಶಾಲೆಗಳ ಮುಖ್ಯ ಶಿಕ್ಷಕರ ಇಮೇಲ್‌ ಅಥವಾ ಶಾಲಾ ಇಮೇಲ್‌ ವಿಳಾಸಕ್ಕೆ ಎರಡು ದಿನ ಮುಂಚಿತವಾಗಿ ಆನ್‌ಲೈನ್‌ ಮೂಲಕ ಕಳಿಸುತ್ತೇವೆ. ಪರೀಕ್ಷಾ ಸಿದ್ಧತೆಗಾಗಿಯೇ ತಯಾರಾದ ಆ ಪ್ರಶ್ನೆ ಪತ್ರಿಕೆಗಳು ವಿದ್ಯಾರ್ಥಿಗಳ ಉತ್ತೀರ್ಣಕ್ಕೂ ಅನುಕೂಲವಾಗಲಿದ್ದು, ಅದಕ್ಕಾಗಿ ಸರಣಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವಿವರಿಸಿದರು. ಸರಣಿ ಪರೀಕ್ಷೆ ಉಪಯೋಗ: ‘ಸರಣಿ ಪರೀಕ್ಷೆಯಲ್ಲಿ 50 ಅಂಕಗಳ ನಾಲ್ಕು ಅಭ್ಯಾಸ ಪರೀಕ್ಷೆಗಳನ್ನು ನಡೆಸಲಾಗುವುದು. ವಿಷಯವಾರು ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೆ ನೀಡುತ್ತಾರೆ. ಇದು ಮೊದಲ ಹಂತದ ಗೃಹಾಧಾರಿತ ಅಭ್ಯಾಸ ಪರೀಕ್ಷೆಯಾಗಿದ್ದು, ಮನೆಯಲ್ಲಿಯೇ ಉತ್ತರ ಹುಡುಕಿ ಬರೆದು ಶಿಕ್ಷಕರಿಗೆ ತಲುಪಿಸುವುದಾಗಿದೆ. ಎರಡನೇ ಹಂತದ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನೂ ಒಂದು ದಿನ ಮೊದಲೇ ವಿದ್ಯಾರ್ಥಿಗಳಿಗೆ ನೀಡಿ ಅಭ್ಯಾಸ ಮಾಡಿಕೊಂಡು ಬಂದ ನಂತರ ಮರುದಿನ ಶಾಲೆಯಲ್ಲಿ ಪರೀಕ್ಷೆ ಬರೆಸುವುದಾಗಿದೆ. ಇದನ್ನು ಜನವರಿ ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. ಮೂರು ಮತ್ತು ನಾಲ್ಕನೇ ಹಂತದ ಪರೀಕ್ಷೆಯನ್ನು ನಿಗದಿತ ವೇಳೆಯಲ್ಲಿ ಶಾಲೆಯಲ್ಲಿಯೇ ನಿಯಮಾನುಸಾರ ನಡೆಸಲಾಗುವುದು’ ಎನ್ನುತ್ತಾರೆ ನಾಗಭೂಷಣ್‌. ‘ಮೊದಲ ಪರೀಕ್ಷೆಯಿಂದ ನಾಲ್ಕನೇ ಪರೀಕ್ಷೆಯವರೆಗೂ ವಿದ್ಯಾರ್ಥಿಗಳು ಎಲ್ಲಿ ತಪ್ಪು ಮಾಡಿದ್ದಾರೆ ಎಂಬುದನ್ನು ಸ್ವತಃ ಶಿಕ್ಷಕರೇ ಗುರುತಿಸಿ ಅವರನ್ನು ತಿದ್ದುವ ಕೆಲಸ ಮಾಡಲಿದ್ದಾರೆ. ಐದನೇ ಪರೀಕ್ಷೆಯೂ ಕನ್ನಡ ಹೊರತುಪಡಿಸಿ ಉಳಿದ ವಿಷಯಗಳಿಗೆ 100 ಅಂಕಗಳಿಗೆ ನಡೆಯಲಿದ್ದು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಮಾದರಿಯಲ್ಲೇ ತಾಲ್ಲೂಕು ಮಟ್ಟದಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ಆಯೋಜಿಸಿದ್ದೇವೆ. ಈ ಎಲ್ಲ ಪರೀಕ್ಷೆಯನ್ನೂ ಮುಕ್ತ, ಪಾರದರ್ಶಕ ಹಾಗೂ ಮಕ್ಕಳ ಸ್ನೇಹಿಯಾಗಿ ನಡೆಸುತ್ತಿದ್ದೇವೆ. ಕಚೇರಿಯಿಂದ ನಿಗದಿಪಡಿಸಿದ ಪರೀಕ್ಷೆಗಳಲ್ಲಿ ತಯಾರಾಗುವ ಅನೇಕ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಖಂಡಿತ ಉತ್ತೀರ್ಣದ ಗುರಿಯತ್ತ ತಲುಪುತ್ತಾರೆ. ಹೆಚ್ಚಿನ ಕಲಿಕಾಸಕ್ತಿಯುಳ್ಳವರು ಅಧಿಕ ಅಂಕಗಳಿಸುತ್ತಾರೆ’ ಎಂಬುದು ಅವರ ವಿಶ್ವಾಸವಾಗಿದೆ, ಮೊದಲೆರಡು ಪರೀಕ್ಷೆಗಳಲ್ಲಿ ತಾಲ್ಲೂಕಿನ ಎಲ್ಲ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಪ್ಪದೇ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಯಾವ ರೀತಿ ಎದುರಿಸಬೇಕು ಎಂಬ ವಿಶ್ವಾಸ ಗೈರು ಹಾಜರಾಗುತ್ತಿದ್ದ ವಿದ್ಯಾರ್ಥಿಗಳಲ್ಲೂ ಮೂಡುತ್ತಿದೆ. ಅವರಲ್ಲಿ ಕಲಿಕಾಸಕ್ತಿಯೂ ಹೆಚ್ಚುತ್ತಿರುವ ಬಗ್ಗೆ ಪರಿಶೀಲನೆ ವೇಳೆ ತಿಳಿದು ಬಂದಿದೆ. ಓದಿನಲ್ಲಿ ಹಿಂದುಳಿದ ಮಕ್ಕಳನ್ನೇ ಗುರಿಯಾಗಿಸಿಕೊಂಡಿದ್ದು, ಸಂಬಂಧಪಟ್ಟ ಪೋಷಕರನ್ನು ಶಾಲೆಗೆ ಕರೆಸಿ ಮನೆಯಲ್ಲೂ ಕಲಿಕೆ ಬಗ್ಗೆ ಆಸಕ್ತಿ ಮೂಡುವಂಥ ವಾತಾವರಣ ನಿರ್ಮಿಸಲು ಸಲಹೆ ನೀಡುತ್ತಿದ್ದೇವೆ. ಪ್ರತಿಷ್ಠಿತ ಖಾಸಗಿ ಶಾಲೆಗಳಂತೆಯೇ ಒಂದು ಹೆಜ್ಜೆ ಮುಂದೆ ಹೋಗಿ ವಿವಿಧ ರೀತಿಯಲ್ಲಿ ತಯಾರಿ ನಡೆಸಲಾಗುತ್ತಿದೆ. ಸರಣಿ ಪರೀಕ್ಷೆಯ ನಂತರ ಮಕ್ಕಳಿಗೆ ಎದುರಾದ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳಿಗ್ಗೆ ರಸಪ್ರಶ್ನೆ ಹಾಗೂ ಮಧ್ಯಾಹ್ನ ಸಂವಾದ ಆಯೋಜಿಸುತ್ತಿದ್ದೇವೆ. ಇದನ್ನು ಅಕ್ಕಪಕ್ಕದ ಎರಡು ಶಾಲೆಗಳನ್ನು ಒಗ್ಗೂಡಿಸಿ ನಡೆಸಲಾಗುವುದು. ಮೂರು ದಿನದ ಈ ಕಾರ್ಯಕ್ರಮದಲ್ಲಿ ಪ್ರತಿ ದಿನ ಒಂದು ಭಾಷಾ ಹಾಗೂ ಒಂದು ಕೋರ್ ವಿಷಯದ ಬಗ್ಗೆ ರಸಪ್ರಶ್ನೆ ನಡೆಯಲಿದೆ. ಪರೀಕ್ಷೆ ಎದುರಿಸಲು ಇದು ಕೂಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ‘ಫಲಿತಾಂಶ ಸುಧಾರಣೆಗಾಗಿ ಡಿಡಿಪಿಐ ಕಚೇರಿ ನೀಡಿರುವ ‘ಬೆಳಕು’ ಮಾರ್ಗದರ್ಶಿಯನ್ನು ಕೂಡ ಅನುಸರಿಸುತ್ತಿದ್ದೇವೆ. ಜಿಲ್ಲಾಧಿಕಾರಿ ಅವರು ಕೊಟ್ಟಿರುವ ಸಲಹೆಗಳಂತೆ ಕಾರ್ಯಪ್ರವೃತ್ತರಾಗಿದ್ದೇವೆ’ ಎನ್ನುತ್ತಾರೆ ಅವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.