ಶತಮಾನ ಕಂಡ ಶಾಲೆಗಳಲ್ಲಿ ಸೌಕರ್ಯ ಕೊರತೆ ರಾಮನಗರ: ಜಿಲ್ಲೆಯಲ್ಲಿ ಶತಮಾನ ಪೂರೈಸಿರುವ 28 ಶಾಲೆಗಳು ಇವೆ. ಇವುಗಳಲ್ಲಿ ಕೆಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದರೆ, ಕೆಲವು ಶಾಲೆಗಳು ಇತಿಹಾಸದ ಪುಟ ಸೇರಿವೆ. ಕೆಲವು ಶಾಲೆಗಳು ತಾವು ಸ್ಥಾಪನೆಗೊಂಡ ಕಟ್ಟಡಗಳಲ್ಲಿಯೇ ಮುಂದುವರೆದು ಇತಿಹಾಸದ ಕುರುಹುಗಳಾಗಿ ಅಸ್ತಿತ್ವದಲ್ಲಿವೆ. ಅಭಿವೃದ್ಧಿಯ ಹೆಸರಿನಲ್ಲಿ ಕೆಲವು ಶಾಲೆಗಳ ಕಟ್ಟಡಗಳನ್ನು ಕೆಡವಲಾಗಿದೆ. ಹಳೆಯ ಕಟ್ಟಡಗಳಲ್ಲಿ ಹೊಸ ವ್ಯವಸ್ಥೆಗಳನ್ನು ಕಲ್ಪಿಸುವುದು ಅಸಾಧ್ಯವೆಂಬ ಕಾರಣಕ್ಕೆ ಅವುಗಳು ಅಸ್ಥಿಪಂಜರದಂತೆ ನಿಂತಿವೆ. ಬಹುತೇಕ ಎಲ್ಲಾ ಹಳೆಯ ಕಟ್ಟಡಗಳಲ್ಲಿ ಕೊಠಡಿಗಳ ಕೊರತೆ ಇದೆ. ಮೂಲ ಸೌಕರ್ಯ ವೃದ್ಧಿ ಆಗಬೇಕಾಗಿದೆ. ಆದರೆ, ಕಾಮಗಾರಿ ಕೈಗೆತ್ತಿಕೊಂಡರೆ ಕಟ್ಟಡಕ್ಕೆ ಸಮಸ್ಯೆಯಾಗಬಹುದು ಎಂಬ ಆತಂಕವೂ ಇದೆ. ‘ಶತಮಾನ ಕಂಡ ಕೆಲವು ಶಾಲೆಗಳ ಕಟ್ಟದ ಮೇಲ್ಛಾವಣಿ ಕಿತ್ತು ಬಂದಿದೆ. ಕಟ್ಟಡ ನಿರುಪಯುಕ್ತವಾಗಿದೆ. ಶಾಲಾ ಕಟ್ಟಡ ಸುತ್ತ ಕಾಪೌಂಡ್ ಇಲ್ಲ, ಆದ್ದರಿಂದ, ರಾತ್ರಿ ಹೊತ್ತಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇತಿಹಾಸ ಸಾರುತ್ತಿರುವ ಕಟ್ಟಡಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು’ ಎನ್ನುತ್ತಾರೆ ಡಾ. ಚಕ್ಕೆರೆ ಶಿವಶಂಕರ್. ಶಾಲೆಗಳ ಸ್ಥಿತಿ: ಕನಕಪುರದ ಜಿಕೆಬಿಎಂಎಸ್ ಶಾಲೆಗೆ 130 ವರ್ಷಗಳ ಇತಿಹಾಸವಿತ್ತು. ಈಗ ಆ ಕಟ್ಟಡವನ್ನು ಕೆಡವಿ ಅಲ್ಲಿ ಮಿನಿ ವಿಧಾನಸೌಧವನ್ನು ನಿರ್ಮಿಸಲಾಗಿದೆ. ರಾಮನಗರ ತಾಲೂಕಿನಲ್ಲಿ ಮೂರು ಶಾಲೆಗಳು ಶತಮಾನೋತ್ಸವ ಕಂಡಿವೆ. ರಾಮನಗರದ ಛತ್ರದ ಬೀದಿಯಲ್ಲಿರುವ ಸರ್ಕಾರಿ ಮೇಯಿನ್ ಶಾಲೆಗೆ 114 ವರ್ಷ ಆಯಸ್ಸು, ಜಿಕೆಬಿಎಂಎಸ್ ಶಾಲೆಗೆ 125 ವರ್ಷ, ಬಿಡದಿಯ ಹಿರಿಯ ಪ್ರಾಥಮಿಕ ಶಾಲೆಗೆ 101 ವರ್ಷ. ಆದರೆ ಬಿಡದಿಯ ಶಾಲೆಯನ್ನು ನೂರು ವರ್ಷ ತುಂಬಿದ ವರ್ಷದಲ್ಲೇ (2017) ಕೆಡವಿ, ನೂತನ ಕಟ್ಟಡವನ್ನು ನಿರ್ಮಿಸಲು ಆರಂಭಿಸಿರುವುದು ಆ ಭಾಗದ ಜನರಲ್ಲಿ ಬೇಸರವಿದೆ. ಉಳಿದೆರೆಡು ಶಾಲೆಗಳ ಕಟ್ಟಡಗಳು ಸುಸ್ಥಿತಿಯಲ್ಲಿವೆ. ಮೂರು ಕಟ್ಟಡಗಳು ಶಿಥಿಲ: ಕನಕಪುರ ತಾಲ್ಲೂಕಿನಲ್ಲಿ ಶತಮಾನ ಕಂಡಿರುವ 11 ಶಾಲೆಗಳಿವೆ. ದೊಡ್ಡಮರಳವಾಡಿ (104 ವರ್ಷ), ಚಿಕ್ಕೇನಹಳ್ಳಿ (132), ತುಂಗಣಿ (100), ಅರಳಾಳು (117 ವರ್ಷ), ಕೋಡಿಹಳ್ಳಿ (116 ವರ್ಷ)), ಹೇರಿಂದ್ಯಾಪನಹಳ್ಳಿ (113 ವರ್ಷ) ಗ್ರಾಮಗಳಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗಳು, ನಗರದಲ್ಲಿರುವ ಜಿಕೆಬಿಎಂಎಸ್(130 ವರ್ಷ), ಜಿಜಿಎಂಎಸ್ (105 ವರ್ಷ) ಶಾಲೆಗಳು. ಪಿಚ್ಚನಕೆರೆ (103 ವರ್ಷ), ಚಿಕ್ಕಮುದುವಾಡಿ (110 ವರ್ಷ) ಮತ್ತು ಕೋಡಿಹಳ್ಳಿ (109 ವರ್ಷ) ಗಳಲ್ಲಿ ಬಾಲಕಿಯರ ಉರ್ದು ಶಾಲೆಗಳಿವೆ. ಇವುಗಳಲ್ಲಿ ತುಂಗಣಿ, ಅರಳಾಳು, ಕೋಡಿಹಳ್ಳಿ ಗ್ರಾಮಗಳ (ಉರ್ದು ಶಾಲೆ) ಕಟ್ಟಡಗಳು ಶಿಥಿಲವಾಗಿದ್ದು ನೂತನವಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ. ನಗರದಲ್ಲಿರುವ ಜಿಕೆಬಿಎಂಎಸ್ ಶಾಲೆಗೆ 130 ವರ್ಷಗಳಾಗಿದ್ದು, ಈ ಶಾಲೆಯ ಕಟ್ಟಡವನ್ನು ಕೆಡವಿ ಅಲ್ಲಿ ಮಿನಿ ವಿಧಾನಸೌಧವನ್ನು ನಿರ್ಮಿಸಲಾಗಿದೆ. ಈ ಶಾಲೆಯನ್ನು ಈಗ ಹಳೇ ಬಿಇಓ ಕಚೇರಿಯ ಬಳಿ ಇರುವ ಹಾಸ್ಟೆಲ್ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. 105 ವರ್ಷ ಕಂಡಿರುವ ಜಿಜಿಎಂಎಸ್ ಶಾಲೆಯಲ್ಲಿ 4 ಕೊಠಡಿಗಳು ದುರಸ್ತಿಯಾಗಬೇಕಾಗಿದೆ. ಹೇರಿಂದ್ಯಾಪನಹಳ್ಳಿ, ಪಿಚ್ಚನಕೆರೆ ಶಾಲೆಗೆ ಹೆಚ್ಚುವರಿ ಕೊಠಡಿಗಳು ಮತ್ತು ದುರಸ್ತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ದೊಡ್ಡಮರಳವಾಡಿ ಶಾಲಾ ಕಟ್ಟಡದ ದುರಸ್ತಿಗೆ ಮನವಿ ಮಾಡಲಾಗಿದೆ. ಕೊಠಡಿಗಳ ಕೊರತೆ : ಮಾಗಡಿ ತಾಲ್ಲೂಕಿನಲ್ಲಿ ಆಲೂರು (104 ವರ್ಷ), ವಿ.ಜಿ.ದೊಡ್ಡಿ (103 ವರ್ಷ), ಚಕ್ರಬಾವಿ (105 ವರ್ಷ), ತಿರುಮಲೆ (102 ವರ್ಷ), ಜಿಕೆಬಿಎಂಎಸ್(110 ವರ್ಷ), ಜಿಜಿಎಂಎಸ್ (110) ಶಾಲೆಗಳು ಶತಮಾನ ಕಂಡಿವೆ. ಜಿಕೆಬಿಎಂಎಸ್ ಮತ್ತು ಜಿಜಿಎಂಎಸ್ ಶಾಲೆಗೆ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ ನೂರು ವಸಂತಗಳನ್ನು ಕಂಡ 8 ಶಾಲೆಗಳಿವೆ. ಹೊಂಗನೂರಿನ ಜಿಎಂಪಿಎಸ್ (104 ವರ್ಷ), ಶೆಟ್ಟಿಹಳ್ಳಿಯ ಕೆಎಸ್‍ ಜಿಎಂಪಿಎಸ್(105 ವರ್ಷ), ದೊಡ್ಡಮಳೂರಿನ ಹಿರಿಯ ಪ್ರಾಥಮಿಕ ಶಾಲೆ (103 ವರ್ಷ), ಗರಕಳ್ಳಿಯ ಹಿರಿಯ ಪ್ರಾಥಮಿಕ ಶಾಲೆ (128 ವರ್ಷ), ನಗರದಲ್ಲಿರುವ ಬಾಲಕರ ಸಂಯುಕ್ತ ಸರ್ಕಾರಿ ಪದವಿ ಪೂರ್ವ ಕಾಲೇಜು (119 ವರ್ಷ), ಸೈಯದ್ ವಾಡಿಯ ಬಾಲಕರ ಉರ್ದು ಶಾಲೆ (112), ಜಿಎಲ್‍ಪಿಎಸ್ ಸೆಂಟ್ರಲ್ ಶಾಲೆ (100 ವರ್ಷ)ಮತ್ತು ರಾಂಪುರದ ಹಿರಿಯ ಪ್ರಾಥಮಿಕ ಶಾಲೆ (105 ವರ್ಷ). ಈ ಪೈಕಿ ಸೆಂಟ್ರಲ್ ಶಾಲೆ ಮತ್ತು ರಾಂಪುರದ ಶಾಲೆಗಳ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇನ್ನುಳಿದ ಶಾಲೆಗಳು ಹಳೆ ಮತ್ತು ನೂತನವಾಗಿ ನಿರ್ಮಿಸಿರುವ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಶತಮಾನ ಪೂರೈಸಿರುವ 28 ಶಾಲೆಗಳ ಪೈಕಿ 6 ಶಾಲೆಗಳ ಕಟ್ಟಡ ಸುಸ್ಥಿತಿಯಲ್ಲಿವೆ. ಉಳಿದ 6 ಶಾಲೆಗಳ ಕಟ್ಟಡಗಳು ಶಿಥಿಲವಾಗಿದ್ದರೆ, 16 ಶಾಲೆಗಳಲ್ಲಿ ಕೊಠಡಿಗಳ ಕೊರತೆ, ಅಧುನಿಕ ಸೌಕರ್ಯ ಕಲ್ಪಿಸಲು ಸಮಸ್ಯೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಮೂಲ ಸೌಲಭ್ಯ ಕಲ್ಪಿಸಿ ಮಕ್ಕಳ ಸುರಕ್ಷತೆಯ ಪ್ರಮುಖ ಉದ್ದೇಶದೊಂದಿಗೆ ಹಳೆಯ ಕಟ್ಟಡಗಳನ್ನು ತೆರವು ಮಾಡಿ ಹೊಸ ಕಟ್ಟಡ ನಿರ್ಮಿಸುವುದು ಅನಿವಾರ್ಯ ಎಂದು ನಿವೃತ್ತ ಉಪನ್ಯಾಸಕ ಭೂಹಳ್ಳಿ ಪುಟ್ಟಸ್ವಾಮಿ ತಿಳಿಸಿದರು. ಸುಸ್ಥಿತಿಯಲ್ಲಿರುವ ಕಟ್ಟಡಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಅವುಗಳನ್ನು ಉನ್ನತೀಕರಣ ಮಾಡುವ ಕೆಲಸವೂ ನಡೆಯಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೂರು ವರ್ಷ ಪೂರೈಸಿರುವ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು. * ಮಕ್ಕಳ ಹಿತದೃಷ್ಟಿಯನ್ನು ಪ್ರಮುಖವಾಗಿರಿಸಿಕೊಂಡು ಶತಮಾನ ಕಂಡ ಶಾಲೆಗಳ ಕಟ್ಟಡಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು –ಡಾ. ಚಕ್ಕೆರೆ ಶಿವಶಂಕರ್‌, ಸಾಹಿತಿ * ಶಾಲೆಗಳ ಕಟ್ಟಡಗಳು ಶಿಥಿಲಗೊಳ್ಳದಂತೆ ರಕ್ಷಿಸುವುದು ಸರ್ಕಾರದ ಜತೆಗೆ ಅಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ –ಭೂಹಳ್ಳಿ ಪುಟ್ಟಸ್ವಾಮಿ, ನಿವೃತ್ತ ಉಪನ್ಯಾಸಕ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.