ತ್ರಿಮೂರ್ತಿ ಸ್ನೇಹಿತರು... ಅಂದು ಕ್ಲಾಸ್‌ ಮುಗಿಸಿ ಹಾಸ್ಟೆಲ್‌ಗೆ ಬಂದು ಮಲಗಿದ್ದೆ. ಪಕ್ಕದಲ್ಲಿದ್ದ ಮೊಬೈಲ್ ರಿಂಗ್ ಆಯ್ತು. ಎದ್ದು ನೋಡಿದರೆ ಕರೆ ಮಾಡಿದ್ದು ಆತ್ಮೀಯ ಗೆಳೆಯ ಅಭಿ. ಆತ ತುಂಬಾ ದಿನಗಳ ನಂತರ ಕರೆ ಮಾಡಿದ್ದ. ಇಬ್ಬರೂ ಪರಸ್ಪರ ಯೋಗಕ್ಷೇಮ, ಸುಖ–ದುಃಖಗಳನ್ನು ವಿನಿಮಯ ಮಾಡಿಕೊಂಡು ಕಾಲ್ ಕಟ್ ಮಾಡಿದ.ನಂತರ ಅವನ ಜೊತೆ ಕಳೆದ ಕಾಲೇಜಿನ ದಿನಗಳು ನೆನಪಿಗೆ ಬಂದು ಮೈ ರೋಮಾಂಚನಗೊಂಡು ಕಣ್ಣಂಚಲಿ ಹನಿ ನೀರು ತುಂಬಿ ಕೊಂಡಿತು. ನಾವು ಎ3 ಗೆಳೆಯರು ಅಂದರೆ ಅಭಿ, ಅಜಿತ, ಅರ್ಜುನ್ ಕಾಲೇಜಿನ ಆರತಿಗಳಾಗಿದ್ದೆವು. ಅಂದರೆ ನಾವು ಮಾಡುವ ಒಳ್ಳೆಯ ಕೆಲಸ ನಮಗೆ ಆರತಿ ಮಾಡು, ಪೂಜೆ ಎನ್ನುವಂತಿದ್ದವು. ನಾವು ಏನೇ ಮಾಡಿದರೂ ಮೂವರು ಸೇರಿಕೊಂಡು ಮಾಡಿ ಮಂಗಳಾರತಿ ಆಗುತ್ತಿತ್ತು. ಕ್ಲಾಸ್ ರೂಮ್‌ನಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದಾಗ ನಾವು ಹಿಂದುಗಡೆ ಕುಳಿತು ಮೊಬೈಲ್‍ನಲ್ಲಿ ಗೇಮ್ ಆಡಿಕೊಂಡು, ಕೀಟಲೆ ಮಾಡಿಕೊಂಡು, ದಾಂಧಲೆ ಮಾಡುತ್ತಾ ಕುಚೇಷ್ಟೆ ಮಾಡುತ್ತಿದ್ದೆವು. ಆದರೂ ಯಾರೂ ನಮ್ಮನ್ನು ಕೇಳುತ್ತಿರಲಿಲ್ಲ. ಕಾರಣ ಮೊದಲೆಲ್ಲ ಕೇಳಿ ಬಾಯಿಗೆ ಬಂದಿದ್ದು ಬೈದು ಅವರ ಬಾಯಿನೇ ಹೊಲಸು ಮಾಡಿಕೊಂಡಿದ್ದರು. ಏನು ಅಂದ್ರೂ ಪ್ರಯೋಜನ ಇಲ್ಲವೆಂದು ಸುಮ್ಮನೆ ಇರುತ್ತಿದ್ದರು. ಕಾಲೇಜಿನಲ್ಲಿ ನಮ್ಮ ಹೆಸರು ಎಷ್ಟರ ಮಟ್ಟಿಗೆ ಫೇಮಸ್‌ ಆಗಿತ್ತೆಂದರೆ ಯಾರೂ ಏನೇ ಮಾಡಿದರೂ, ಜಗಳ, ವಸ್ತು ಹಾಳಾದರೂ ಎಲ್ಲರೂ ನಮ್ಮನ್ನೆ ಕೈ ಮಾಡಿ ತೋರಿಸುವಷ್ಟು ಹವಾ ಇಟ್ಟುಕೊಂಡಿದ್ದೆವು. ಎಲ್ಲರಂತೆ ನಾವು ಒಂದು ದಿನವೂ ಸೆಮಿನಾರ್, ಪ್ರಾಜೆಕ್ಟ್‌, ಪ್ರಾರ್ಥನೆಗೆ ಹೋದವರಲ್ಲ, ನಮ್ದೆ ಆದ ದುನಿಯಾ ನಮ್ಮದಾಗಿತ್ತು. ಇಷ್ಟೆಲ್ಲ ಒಳ್ಳೆಯ (ಕೆಟ್ಟ) ಹೆಸರಿದ್ದರೂ ಗೆಳೆಯ ಅಜಿತ ಪ್ರೇಮದ ಬಲೆಗೆ ಸಿಲುಕಿಕೊಂಡ. ಕೊನೆಗೆ ಅವನ ಪ್ರೀತಿ ಹೀಗೆ ಬಂದು ಹಾಗೆ ಹಾರಿ ಹೋದ ಪಕ್ಷಿಯಂತೆ ಆಯಿತು. ಇಷ್ಟೆಲ್ಲ ಆದಮೇಲೆ ಕೊನೆಗೆ ಪರೀಕ್ಷೆ ಬಂದೇ ಬಿಟ್ಟಿತು, ಅದರ ಬಗ್ಗೆ ನಮಗೆ ಭಯನೇ ಇರಲಿಲ್ಲ ಕಾರಣ ಅದರ ಬಗ್ಗೆ ತಲೆನೇ ಕೆಡಿಸಿಕೊಂಡವರಲ್ಲ, ಯೋಚನೆ ಮಾಡಿದವರಲ್ಲ. ನಕಲು ಮಾಡಿದರಾಯ್ತು ಎಂದುಕೊಂಡಿದ್ದೆವು. ಅದರಂತೆ ಅಜಿತ ಗೈಡನ್ನೆ ಹರಿದುಕೊಂಡು ನಕಲು ಮಾಡುತ್ತಿದ್ದ. ಆದರೆ ನಾನು ಅಭಿ ಮೊಬೈಲ್‍ನಲ್ಲಿ ಪೋಟೊ ತೆಗೆದು ಬರೆಯುತ್ತಿದ್ದೆವು. ಇದನ್ನು ನೋಡಿದ ಪ್ರಾಂಶುಪಾಲರು ನಮ್ಮನ್ನು ಚೆಂಬರ್‌ಗೆ ಕರೆಸಿ ಮಂಗಳಾರತಿ ಮಾಡಿದ್ದರು. ಆದರೂ ನಮಗೆ ಏನೂ ಅನಿಸಲಿಲ್ಲ ಕೊನೆಯಲ್ಲಿ ಅವರು ಹೇಳಿದ ಮಾತು ‘ಈ ನಿಮ್ಮ ಕಾಲೇಜು ಬದುಕು ಮುಂದೊಂದು ದಿನ ನಿಮಗೆ ಪಾಠ ಕಲಿಸುತ್ತದೆ‘ ಎಂದಿದ್ದರು. ಆದರೂ ನಮಗೆ ತಲೆಗೆ ಹೋಗಲಿಲ್ಲ. ಹೀಗೆ ತರ್ಲೆ ತುಂಟಾಟ, ಹಾಸ್ಯ, ಮೋಜು, ಮಸ್ತಿಯಿಂದ ಕಾಲೇಜಿನ ದಿನಗಳು ಮುಗಿದೇ ಹೋದವು. ಆದರೆ ನಾವು ಏನೂ ಕಲಿಯಲಿಲ್ಲ. ನಂತರ ಕೆಲವು ದಿನಗಳಲ್ಲಿ ಅಭಿ ಮತ್ತು ಅಜಿತನಿಗೆ ಸರಕಾರಿ ನೌಕರಿ ಸಿಕ್ಕಿತ್ತು. ಆದರೆ ನಾನು ಮಾತ್ರ ಅವರ ಜೊತೆ ಕಳೆದ ಕಾಲೇಜಿನ ದಿನಗಳನ್ನು ಮೆಲಕು ಹಾಕುತ್ತಾ ಹೀಗೆ ತಲೆಗೆ ತೋಚಿದನ್ನು ಗೀಚುತ್ತಾ ನನ್ನ ಜೀವನವನ್ನು ಕಳೆಯುತ್ತಿದ್ದೇನೆ... – ಮಲ್ಲಿಕಾರ್ಜುನ (ಅರ್ಜುನ) ಮೇತ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಪಜಲಪುರ, ಕಲಬುರಗಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.