ಯೂರೋಪ್‌ ವಿವಿಯಲ್ಲಿ ಸಂಶೋಧನೆಗೆ ಮನೆಯಿಂದಲೇ ಪ್ರವೇಶ ಗಿಟ್ಟಿಸಿ ಸ್ನಾತಕೋತ್ತರ ಪದವಿ ಓದುವ ವಿದ್ಯಾರ್ಥಿಗಳಿಗೆ ಆಗುವ ಸಾಮಾನ್ಯ ಅನುಭವವೆಂದರೆ ಪಿಎಚ್‌ಡಿ ಕುರಿತು ನಾನಾ ರೀತಿಯ ಭಯ ಹುಟ್ಟಿಸುವ ಹೇಳಿಕೆಗಳು. ಸಂಶೋಧನೆ, ಪ್ರಬಂಧ ಮಂಡನೆ, ಕೊನೆಗೆ ಡಾಕ್ಟರೇಟ್‌ ಪಡೆಯುವವರೆಗಿನ ಪ್ರಯಾಸದಾಯಕ ಪ್ರಕ್ರಿಯೆಗಳ ಕುರಿತು ಶಿಕ್ಷಕರು ಎಚ್ಚರಿಕೆ ಕೊಡುವುದು ಸಾಮಾನ್ಯ. ಆದರೆ ಸ್ನಾತಕೋತ್ತರ ಪದವಿಯಲ್ಲಿ ಕೂಡ ಸಂಶೋಧನ ಪ್ರಬಂಧ ಬರೆಯಬೇಕು. ಇದು ಶ್ರಮದಾಯಕವಾದೂ ಖುಷಿ ಕೊಡುವಂತಹದ್ದು ಎನಿಸಿತು. ಜೊತೆಗೆ ಸಂಬಂಧಿಸಿದ ವಿಷಯದ ಮೇಲೆ ಪ್ರಸಕ್ತ ಬೆಳವಣಿಗೆಗಳ ಕುರಿತು ಪಡೆಯುವ ಮಾಹಿತಿ ಕೂಡ ಆಸಕ್ತಿದಾಯಕವಾಗಿರುತ್ತದೆ. ಅದರಲ್ಲೂ ಮಾನವಿಕ ವಿಷಯದ ವಿದ್ಯಾರ್ಥಿಯಾಗಿದ್ದು, ತುಲನಾತ್ಮಕ ಸಾಹಿತ್ಯ, ಭಾಷೆ ಹಾಗೂ ಭಾಷಾಂತರ ಕಲೆ ಕುರಿತು ಅಗಾಧ ಆಸಕ್ತಿ ಇದ್ದೂ ತಕ್ಷಣ ಉದ್ಯೋಗಕ್ಕೆ ಸೇರದೆ ಸಂಶೋಧನೆಯತ್ತ ಮುಖ ಮಾಡುವುದು ಒಳಿತು ಎನಿಸಿದ್ದಂತೂ ನಿಜ. ಸಂಶೋಧನೆ ಬಗ್ಗೆ ನಿರ್ಧರಿಸಿದ ನಂತರ ಮೊದಲ ಕೆಲಸವೆಂದರೆ ನೀವು ಯಾವ ವಿಷಯದಲ್ಲಿ ಪಿಎಚ್‌ಡಿ ಮಾಡ ಬಯಸಿದ್ದೀರೋ ಅದರ ಬಗ್ಗೆ ಯಾವ ವಿಶ್ವವಿದ್ಯಾನಿಲಯದಲ್ಲಿ ಒಳ್ಳೆಯ ಸವಲತ್ತಿದೆ, ಉತ್ತಮ ಶಿಕ್ಷಕರಿದ್ದಾರೆ ಎಂಬುದರ ಕುರಿತು ಹುಡುಕಾಟ. ಸಂಶೋಧನೆಯ ವಿಷಯವನ್ನು ನೀವು ಸ್ನಾತಕೋತ್ತರದ ಅಂತಿಮ ಸೆಮಿಸ್ಟರ್‌ನಿದ್ದಾಗಲೇ ನಿರ್ಧರಿಸುವುದು ಒಳಿತು. ನಿಮ್ಮ ಶಿಕ್ಷಕರ ನೆರವನ್ನೂ ಇದಕ್ಕೆ ಪಡೆಯಬಹುದು. ಪ್ರಾಧ್ಯಾಪಕರ ಸಲಹೆ ಕೇಳಿ ಸಾಮಾನ್ಯವಾಗಿ ವಿಶ್ವವಿದ್ಯಾನಿಲಯಗಳಲ್ಲಿ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರು ನಾವು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುವ ವಿಷಯ ಹಾಗೂ ವಿಶ್ವವಿದ್ಯಾನಿಲಯಗಳ ಬಗ್ಗೆ ವಿವರಗಳನ್ನು ಕೊಟ್ಟು ನೆರವು ನೀಡುತ್ತಾರೆ. ಅಲ್ಲಿ ಸಂಶೋಧನೆಗೆ ಇರುವ ಸೌಲಭ್ಯದ ಬಗ್ಗೆಯೂ ನೀವು ಕೇಳಿ ತಿಳಿದುಕೊಳ್ಳಬಹುದು. ಹೆಚ್ಚಿನ ಶಿಕ್ಷಕರು ವಿದೇಶಗಳಲ್ಲಿ ವಿವಿಧ ವಿಷಯಗಳ ಮೇಲೆ ಸಂಶೋಧನೆ ನಡೆಸಿದವರೇ ಇರುತ್ತಾರೆ. ಹೀಗಾಗಿ ಅವರ ಅಭಿಪ್ರಾಯಗಳು ನಿಮ್ಮ ನೆರವಿಗೆ ಬರುತ್ತವೆ. ಇದರ ಜೊತೆಗೆ ವಿವಿಧ ದೇಶಗಳಲ್ಲಿರುವ ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ಬಗ್ಗೆ ಆನ್‌ಲೈನ್‌ ಪೋರ್ಟಲ್‌ಗಳಲ್ಲಿ ನೋಡಿಕೊಳ್ಳಬಹುದು. ಅವುಗಳಲ್ಲಿರುವ ಸ್ನಾತಕೋತ್ತರ ಪದವಿ ಹಾಗೂ ಯಾವ ಕ್ಷೇತ್ರದಲ್ಲಿ ಸಂಶೋಧನೆಗೆ ಅನುವು ಮಾಡಿಕೊಡುತ್ತವೆ ಎಂಬುದರ ಕುರಿತು ನೀವು ವಿವರ ಪಡೆಯಬಹುದು. ನಿಮಗೆ ಅನುಕೂಲವೆನಿಸಿದ ವಿಶ್ವವಿದ್ಯಾನಿಲಯಗಳ ಪಟ್ಟಿ ಮಾಡಿಕೊಂಡ ನಂತರ ಅಲ್ಲಿ ಸಂಶೋಧನೆಗೆ ಅರ್ಜಿ ಸಲ್ಲಿಸಬೇಕಾದರೆ ಬೇಕಾಗುವ ಅರ್ಹತೆ, ದಾಖಲೆಗಳ ಕಡೆ ಗಮನ ಹರಿಸಬೇಕಾಗುತ್ತದೆ. ಇಲ್ಲಿ ಮೊದಲ ಆಯ್ಕೆ ಯೂರೋಪ್‌ ದೇಶಗಳಲ್ಲಿರುವ ವಿಶ್ವವಿದ್ಯಾನಿಲಯಗಳು ಹಾಗೂ ಸಂಶೋಧನ ಸಂಸ್ಥೆಗಳ ಕುರಿತು ಇದ್ದಿದ್ದರಿಂದ ಆ ಬಗ್ಗೆಯೇ ಗಮನ ಹರಿಸಿದೆ. ಅವುಗಳು ನೀಡುವ ಸೌಲಭ್ಯಗಳು ಕೂಡಾ ಅತ್ಯಂತ ಮಹತ್ವದ್ದು. ಹೀಗಾಗಿ ಅಲ್ಲಿರುವ ವಿಶ್ವವಿದ್ಯಾನಿಲಯಗಳ ವೆಬ್‌ಸೈಟ್‌, ಅಲ್ಲಿ ಈ ಹಿಂದೆ ಸಂಶೋಧನ ವಿದ್ಯಾರ್ಥಿಗಳು ಮಂಡಿಸಿದ ಪ್ರಬಂಧಗಳು, ಪ್ರಾಧ್ಯಾಪಕರ ವಿವರ, ನಮಗೆ ಆಸಕ್ತಿ ಇರುವಂತಹ ವಿಭಾಗಗಳು.. ಹೀಗೆ ಕೂಲಂಕಷವಾಗಿ ಅಭ್ಯಾಸ ಮಾಡಬೇಕಾಗುತ್ತದೆ. ಜೊತೆಗೆ ಅಲ್ಲಿ ಹೊಸದಾಗಿ ಆರಂಭವಾಗುವ ಸಂಶೋಧನ ಯೋಜನೆಗಳ ಬಗ್ಗೆಯೂ ವಿವರ ತೆಗೆದುಕೊಳ್ಳಲು ಮರೆಯಬೇಡಿ. ಪ್ರಕ್ರಿಯೆ ವಿಭಿನ್ನ ಇಲ್ಲಿ ಒಂದು ವಿಷಯವನ್ನು ಪ್ರಮುಖವಾಗಿ ಹೇಳಬೇಕಾಗುತ್ತದೆ. ಅರ್ಜಿ ಸಲ್ಲಿಸುವಾಗ ಬಹುತೇಕ ಪ್ರಕ್ರಿಯೆಗಳು ಯೂರೋಪ್‌ ಹಾಗೂ ಅಮೆರಿಕದ ವಿಶ್ವವಿದ್ಯಾನಿಲಯಗಳ ಮಧ್ಯೆ ವಿಭಿನ್ನವಾಗಿರುತ್ತವೆ. ಅವರು ಕೇಳುವ ಅರ್ಹತೆ ಹಾಗೂ ದಾಖಲೆಗಳು ಕೂಡ ಬೇರೆ ಬೇರೆ. ಅಮೆರಿಕದಲ್ಲಿ ಕೆಲವು ವಿಶ್ವವಿದ್ಯಾನಿಲಯಗಳು ಜಿಆರ್‌ಇ ಅಥವಾ ಟೋಫೆಲ್‌ ಪರೀಕ್ಷೆಯ ಅಂಕಗಳನ್ನು ಪರಿಗಣಿಸುತ್ತವೆ. ಪಿಎಚ್‌ಡಿ ಮುಗಿಸಲು ನೀಡುವ ಅವಧಿಯೂ ಬೇರೆಯೇ. ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ಮುಗಿಸಲು ವಿದ್ಯಾರ್ಥಿಗಳಿಗೆ 8–10 ವರ್ಷಗಳಷ್ಟು ಸುದೀರ್ಘ ಅವಧಿಯವರೆಗೆ ಅವಕಾಶವಿದ್ದರೆ, ಯೂರೋಪ್‌ ದೇಶಗಳಲ್ಲಿ ಈ ಅವಧಿ 3–4 ವರ್ಷಗಳು ಮಾತ್ರ. ಕಡ್ಡಾಯ ತರಗತಿಗಳಿಗೆ ಹಾಜರಾಗುವ ವಿಷಯದಲ್ಲಿಯೂ ಕೂಡ ಈ ಎರಡೂ ಕಡೆ ಬೇರೆಯದೇ ಆದ ನಿಯಮಗಳಿವೆ. ಯಾವ ವಿಭಾಗ ಹಾಗೂ ಯಾವ ವಿಶ್ವವಿದ್ಯಾನಿಲಯ ಎಂದು ಹುಡುಕಾಡಿದ ನಂತರ 5–6 ವಿಶ್ವವಿದ್ಯಾನಿಲಯಗಳ ಪಟ್ಟಿ ಮಾಡಿಕೊಳ್ಳಿ. ನಂತರ ಅವುಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರಗಳನ್ನು ಕಲೆ ಹಾಕಿ. ಈ ಮಧ್ಯೆ ನಿಮ್ಮ ಅಂಕಪಟ್ಟಿ, ಇನ್ನಿತರ ಸರ್ಟಿಫಿಕೇಟ್‌ಗಳನ್ನು ದೃಢೀಕರಿಸಿಕೊಳ್ಳಿ. ಭಾರತದ ವಿದ್ಯಾರ್ಥಿಗಳು ಐಇಎಲ್‌ಟಿಎಸ್‌ (ದಿ ಇಂಟರ್‌ನ್ಯಾಷನಲ್‌ ಇಂಗ್ಲಿಷ್‌ ಲ್ಯಾಂಗ್ವೇಜ್‌ ಟೆಸ್ಟಿಂಗ್‌ ಸಿಸ್ಟಂ) ಪರೀಕ್ಷೆಯನ್ನೂ ಎದುರಿಸಬೇಕಾಗುತ್ತದೆ. ಯೂರೋಪ್‌ನ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಅರ್ಜಿ ಹಾಕಲು ಈ ಪರೀಕ್ಷೆಯಲ್ಲಿ 6.5 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಇದು ಭಾಷೆ ಕುರಿತ ಪರೀಕ್ಷೆಯಾಗಿದ್ದು, ಪರೀಕ್ಷೆಗೆ ಹಾಜರಾಗಿ ನಿಗದಿತ ಅಂಕ ಗಳಿಸುವುದು ಕಡ್ಡಾಯ. ಆದರೆ ಜಿಆರ್‌ಇ ಅಥವಾ ಟೋಫೆಲ್‌ ಅವಶ್ಯಕತೆ ಇಲ್ಲ. ಸಂಶೋಧನೆಯ ಪ್ರಸ್ತಾವ ಇದಾದ ನಂತರ ಸಂಶೋಧನೆಯ ಪ್ರಸ್ತಾವನೆ ಕೊಡಬೇಕಾಗುತ್ತದೆ. ನೀವು ಯಾವ ವಿಷಯದ ಮೇಲೆ ಸಂಶೋಧನೆ ಮಾಡುತ್ತೀರೋ ಅದರ ಬಗ್ಗೆ ಪುಟ್ಟದಾಗಿ ವಿವರ, ಸಂಶೋಧನೆಯ ರೀತಿ (ರೀಸರ್ಚ್‌ ಮೆಥಡಾಲಜಿ) ಹಾಗೂ ಆಕರ ಗ್ರಂಥಗಳ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಜೊತೆಗೆ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳಿರುವ ರೆಸ್ಯುಮೆ, ಆಸಕ್ತಿಯ ಹಿನ್ನೆಲೆ ಹಾಗೂ ಕನಿಷ್ಠ ಇಬ್ಬರ ಶಿಫಾರಸ್ಸು ಪತ್ರಗಳು. ಈ ವಿಷಯದಲ್ಲಿ ನೀವು ಆಯ್ಕೆ ಮಾಡಿಕೊಂಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರನ್ನು ವೆಬ್‌ಸೈಟ್‌ನಲ್ಲಿ ನೇರವಾಗಿಯೂ ಸಂಪರ್ಕಿಸಿ ಸಂಶೋಧನೆಯ ಸಂಕ್ಷಿಪ್ತ ವಿವರಗಳನ್ನು ಸಲ್ಲಿಸಬಹುದು. ಪ್ರವೇಶಾತಿ ಹಾಗೂ ವಿದ್ಯಾರ್ಥಿ ವೇತನ ಪಡೆಯುವ ಮುನ್ನ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಯಾವ ಗೈಡ್‌ ಅಡಿಯಲ್ಲಿ ಸಂಶೋಧನೆ ಮಾಡಲು ಇಚ್ಛಿಸುತ್ತಾರೋ ಅವರಿಂದ ನೇರವಾಗಿ ಅನುಮತಿ ಪಡೆದರೆ ಸಾಕು. ಇನ್ನು ಕೆಲವು ಕಡೆ ಡಾಕ್ಟೋರಲ್‌ ಪ್ರವೇಶಾತಿ ತಂಡವಿರುತ್ತದೆ. ನೀವು ಸಲ್ಲಿಸುವ ಅರ್ಜಿಗಳ ಪರೀಶೀಲನೆ ಮಾಡುವುದು ಈ ತಂಡವೇ. ಆಯ್ಕೆ ಸಮಿತಿಯು ಸ್ಕೈಪ್‌ ಮೂಲಕ ಸಂದರ್ಶನ ನಡೆಸುತ್ತದೆ. ಕೆಲವೊಮ್ಮೆ ಪ್ರವೇಶ ಪರೀಕ್ಷೆ ಬರೆಯಬೇಕಾಗುತ್ತದೆ. ನಂತರ ನಿಮಗೆ ಗೈಡ್‌ ಯಾರು ಎಂಬುದು ಗೊತ್ತಾಗುತ್ತದೆ. ಒಮ್ಮೆ ಅನುಮತಿ ದೊರಕಿದ ಮೇಲೆ ನೀವು ವಿದ್ಯಾರ್ಥಿ ವೀಸಾ, ವಿದ್ಯಾರ್ಥಿ ವೇತನ, ಅಲ್ಲಿಯ ವಸತಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಹೀಗೆ ಮಾಡಿ * ಸಂಶೋಧನೆ ಕುರಿತ ಜರ್ನಲ್‌ಗಳನ್ನು ಓದಿ. ನಿಮಗೆ ಆಸಕ್ತಿ ಇರುವ ವಿಷಯ, ವಿಶ್ವವಿದ್ಯಾನಿಲಯ ಹಾಗೂ ಗೈಡ್‌ಗಳನ್ನು ಗುರುತು ಹಾಕಿಕೊಳ್ಳಿ. ನೀವು ಆಯ್ಕೆ ಮಾಡಿಕೊಂಡ ವಿಷಯದ ಮೇಲೆ ಬೇರೆ ಬೇರೆ ಲೇಖಕರು ಪ್ರಕಟಿಸಿದ ಗ್ರಂಥಗಳನ್ನು ಹುಡುಕಿಕೊಳ್ಳಿ. *ಜಾಗತಿಕ ವಿಶ್ವವಿದ್ಯಾನಿಲಯಗಳ ರ‍್ಯಾಂಕಿಂಗ್‌ ಪಟ್ಟಿಯನ್ನು ಅವಲೋಕಿಸಿ ಆಯ್ಕೆ ಮಾಡಿಕೊಳ್ಳಿ. *ಬಹುತೇಕ ವಿವಿಗಳು ತಾವು ಪೂರ್ಣಗೊಳಿಸಿದ ಸಂಶೋಧನ ಯೋಜನೆಗಳ ವಿವರ ಹಾಗೂ ಹೊಸದಾಗಿ ಆರಂಭವಾಗುವ ವಿಷಯವನ್ನು ಪೋರ್ಟಲ್‌ನಲ್ಲಿ ಪ್ರಕಟಿಸಿ ಅರ್ಜಿಯನ್ನು ಆಹ್ವಾನಿಸುತ್ತವೆ. *ನಿಯಮಗಳು ವಿವಿಯಿಂದ ವಿವಿಗೆ ಬದಲಾಗುತ್ತವೆ. ವಿವಿಯ ವೆಬ್‌ಸೈಟ್‌ನಲ್ಲಿ ನಿಯಮಗಳು, ಸ್ಟೈಪಂಡ್‌ ಹಾಗೂ ವಿದ್ಯಾರ್ಥಿ ವೇತನದ ವಿವರಗಳಿರುತ್ತವೆ. *ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಪ್ರಾಧ್ಯಾಪಕರ ಜೊತೆ ಸಂಪರ್ಕದಲ್ಲಿದ್ದು ನಿಮಗೆ ಆಸಕ್ತಿ ಇರುವ ವಿಷಯಗಳ ವಿವರ ಕಳಿಸಿ. ಅವರಿಂದ ಬರುವ ಪ್ರತಿಕ್ರಿಯೆ, ಮಾರ್ಗದರ್ಶನ ಬಹಳ ಮುಖ್ಯ. *ಒಂದೇ ವಿವಿಯ ಬದಲು 8–10 ವಿವಿಗಳಿಗೆ ಅರ್ಜಿ ಸಲ್ಲಿಸಿ. ವಿವರ ಕಲೆ ಹಾಕುವುದು ಶ್ರಮದಾಯಕ ಎನಿಸಿದರೂ, ಆಯ್ಕೆ ಸುಲಭವಾಗುತ್ತದೆ. *ಪ್ರಸ್ತಾವ ಚೆನ್ನಾಗಿರಲಿ. ಶಿಫಾರಸ್ಸುಗಳು ಹಾಗೂ ರೆಫರೆನ್ಸ್‌ ಕೂಡ ಬಲವಾಗಿದ್ದರೆ ನಿಮ್ಮ ಅರ್ಜಿ ಬಹು ಬೇಗ ಪರಿಶೀಲನೆಗೆ ಒಳಗಾಗುತ್ತದೆ. *ಎಷ್ಟು ಸಾಧ್ಯವಾಗುತ್ತದೋ ಅಷ್ಟು ಸಂಶೋಧನ ಪ್ರಬಂಧ ಪ್ರಕಟಿಸಿದರೆ, ನಿಮ್ಮ ರೆಸ್ಯುಮೆ ಉತ್ತಮವಾಗಿದ್ದು, ಅನುಮತಿ ಅವಕಾಶಗಳು ಹೆಚ್ಚಿರುತ್ತವೆ. *ಆ ಯೋಜನೆಗೆ ವಿಶ್ವವಿದ್ಯಾನಿಲಯ ಎಷ್ಟು ಧನ ಸಹಾಯ ನೀಡುತ್ತದೋ ಅದರ ಮೇಲೆ ನಿಮ್ಮ ಸ್ಟೈಪಂಡ್‌ ಮೊತ್ತ ನಿರ್ಧಾರವಾಗುತ್ತದೆ. ಕೆಲವೊಮ್ಮೆ ಖಾಸಗಿ ಸಂಸ್ಥೆಗಳು ಹಣ ನೀಡುತ್ತವೆ. ಇವೆಲ್ಲ ಇಲ್ಲದಿದ್ದರೂ ಒಬ್ಬ ಸಂಶೋಧನ ವಿದ್ಯಾರ್ಥಿ ಪಡೆಯುವ ನೆರವಿನ ಮೊತ್ತ ಸಾಕಷ್ಟಿರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.