ಏಸಿ ರೂಂ ಎಂಬ ಸ್ನೇಹತಾಣ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲೂ ಕಾಲೇಜು ಜೀವನ ಎಂದರೆ ಮರೆಯಲಾಗದ ಅನುಭವಗಳ ಬುತ್ತಿ. ನನಗೂ ಕಾಲೇಜು ಎಂದರೆ ತುಂಬಾ ಪ್ರೀತಿ. ಅದರಲ್ಲೂ ನಾನು ಕಾಲೇಜಿನಲ್ಲಿ ತುಂಬಾ ಇಷ್ಟಪಡುತ್ತಿದ್ದದ್ದೂ ನಮ್ಮ ಕರ್ನಾಟಕ ವಿಶ್ವ ವಿದ್ಯಾಲಯದ ಏಸಿ ರೂಂ ಅನ್ನು. ಏಸಿ ಕೋಣೆನಾ! ಇದ್ಯಾವುದಪ್ಪಾ, ಅದ್ಯಾಕೆ ಇಷ್ಟವಾಗುತ್ತದೆ ಎಂದು ಯೋಚಿಸಬೇಡಿ ಮುಂದೆ ಓದಿ. ಏಸಿ ರೂಮ್ ಎಂದರೆ ತಕ್ಷಣ ತಲೆಯಲ್ಲಿ ಬರುವುದು ಹವಾನಿಯಂತ್ರಿತ ಕೊಠಡಿ. ಆದರೆ ನಾನು ಮಾತನಾಡುತ್ತಿರುವುದು ಕವಿವಿಯ ಕ್ವಾಲಿಡೋರ್ ವಿಷಯದ ಬಗ್ಗೆ. ಹೌದು, ನಮ್ಮ ಸೀನಿಯರ್ಸ್‌ ಮತ್ತು ಸಮಾಜಶಾಸ್ತ್ರ ವಿಭಾಗದ ಅಕ್ಕಂದಿರು ಅದಕ್ಕೆ ಏಸಿ ರೂಮ್ ಎಂದೇ ಕರೆಯುತ್ತಿದ್ದರು. ನಾವೆಲ್ಲಾ ಸ್ನೇಹಿತರು ಸೇರುತ್ತಿದ್ದ ವಿಶೇಷವಾದ ಕೊಠಡಿಯದು. ನಮ್ಮೆಲ್ಲರಓದು, ಬರಹ, ಮಾತು, ಹರಟೆ, ಪ್ರಾಕ್ಟಿಕಲ್‌ ವರ್ಕ್‌, ಮೋಜು–ಮಸ್ತಿ ಪ್ರತಿಯೊಂದು ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುವುದು ಇಲ್ಲಿಯೇ ಜಾಸ್ತಿ. ಈ ಕೋಣೆಯಲ್ಲಿ ಏನೋ ಒಂದು ವಿಶೇಷತೆ ಇತ್ತು. ಬೇಸಿಗೆಯ ಬಿರು ಬಿಸಿಲಿನಲ್ಲೂ ತಣ್ಣನೆ ಗಾಳಿ ಬೀಸಿ, ನೆಮ್ಮದಿ ನೀಡುವ ಜಾಗವಿದು. ಈ ಕೋಣೆಯಲ್ಲಿ ಹೋಗಿ ಕುಳಿತರೆ ಏನೋ ಆನಂದ. ಅದರಲ್ಲೂ ನಮ್ಮ ಸೀನಿಯರ್ಸ್‌ಗಳು ಜೊತೆ ಇದ್ದರೆ ಸಮಯ ಸರಿದ್ದಿದ್ದೇ ತಿಳಿಯುತ್ತಿರಲಿಲ್ಲ. ಅವರಲ್ಲಿ ಕೆಲವರು ಮಾತಿನ ಮಲ್ಲರು, ಇನ್ನು ಕೆಲವರು ಶಾಂತಿ ಪ್ರಿಯರು. ಆದರೆ ನಮ್ಮೆಲ್ಲರ ಸ್ನೇಹ ಸಂಬಂಧಗಳು ಹೇಗಿತ್ತು ಎಂದರೆ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಎನ್ನುವಂತಹ ಭಾವ. ಪ್ರತಿದಿನ ಮಧ್ಯಾಹ್ನ ಎಲ್ಲರೂ ಭೋಜನಕೂಟಕ್ಕೆ ಅಲ್ಲಿಯೇ ಸೇರುತ್ತಿದ್ದೆವು. ಕುಟುಂಬದ ಸದಸ್ಯರಂತೆ ವೃತ್ತಾಕಾರದಲ್ಲಿ ಕುಳಿತು ಎಲ್ಲರೂ ತಂದ ಬುತ್ತಿಯನ್ನು ಹಂಚಿಕೊಂಡು ಊಟ ಮಾಡುವುದರಲ್ಲಿ ಇರುವ ಸಂತೋಷ ಬೇರೆ ಯಾವುದರಲ್ಲೂ ಇರುತ್ತಿರಲಿಲ್ಲ. ಮಾತಿಗೆ ಕುಳಿತರೆ ಸಾಕು ಭೂತಕಾಲ, ಭವಿಷ್ಯತ್‌ ಕಾಲ, ವರ್ತಮಾನದ ಎಲ್ಲಾ ವಿಚಾರಗಳು ಮಾತಿನ ನಡುವೆ ಹಾದು ಹೋಗುತ್ತಿದ್ದವು. ಎಲ್ಲರೂ ನನ್ನ ತಂಡವನ್ನು ನೋಡಿ ‘ಏನು ಗ್ರೂಪ್‌ ಅಪ್ಪಾ ಇವರದ್ದು, ಎಲ್ಲಿ ನೋಡಿದ್ರು ಜೊತೆಲೇ ಇರ್ತಾರೆ‘ ಎಂಬ ಸಣ್ಣ ಧ್ವನಿ ಕಿವಿಗೆ ಬಿದ್ದಾಗ ಏನೋ ಮಜಾ ಅನ್ನಿಸುತ್ತಿತ್ತು. ಹೀಗೆ ನೆನಪಿನ ಬುತ್ತಿ ಹಸಿರಾಗಿಸುವ ಕ್ವಾರಿಡೋರ್ ಇಂದಿಗೂ ಸವಿ ನೆನಪಿನಲ್ಲಿ ಉಳಿದಿದೆ. ವಿಜಯಕುಮಾರ ಸೋ. ಬೆಳ್ಳೇರಿಮಠ ಪತ್ರಿಕೋದ್ಯಮ ವಿಭಾಗ, ಕವಿವಿ ಧಾರವಾಡ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.