ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ‘ತೀವ್ರ ನಿಗಾ ತರಗತಿ’ ಕಲಬುರ್ಗಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಹೈದರಾಬಾದ್‌ ಕರ್ನಾಟಕದ 542 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ‘ತೀವ್ರ ನಿಗಾ ಕಲಿಕಾ ತರಗತಿ‘ (ಪರಿಹಾರ ಬೋಧನೆ) ಆರಂಭಿಸಲಾಗಿದೆ. ಐದು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 75ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳನ್ನು ಇದಕ್ಕೆ ಆಯ್ದುಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಆರ್ಥಿಕ ನೆರವು ನೀಡುತ್ತಿದೆ. ಇಡೀ ಪಠ್ಯಕ್ರಮವನ್ನು ಮತ್ತೊಂದು ಬಾರಿ ಬೋಧಿಸಿ ವಿದ್ಯಾರ್ಥಿಗಳಿಗೆ ಮನನ ಮಾಡಿಸುವುದು. ಪಠ್ಯಕ್ರಮದಲ್ಲಿಯ ಕಠಿಣ ಅಂಶಗಳು ವಿದ್ಯಾರ್ಥಿಗಳಿಗೆ ತಿಳಿಯುವ ಹಾಗೆ ವಿಶೇಷ ಒತ್ತು ನೀಡುವುದು. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಿ ಕಲಿಕೆಯಲ್ಲಿ ಪರಿಪೂರ್ಣತೆಯನ್ನು ಸಾಧಿಸುವಂತೆ ಪ್ರೇರೇಪಿಸುವುದು. ಇದೆಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿಯ ಪರೀಕ್ಷಾ ಭಯ ಹೋಗಲಾಡಿಸಿ ಅವರನ್ನು ಪರೀಕ್ಷೆಗೆ ಅಣಿಗೊಳಿಸುವುದು ಈ ಯೋಜನೆಯ ಉದ್ದೇಶ. ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್‌ 21ರಿಂದ ಆರಂಭಗೊಂಡು, ಏಪ್ರಿಲ್‌ 4ಕ್ಕೆ ಕೊನೆಗೊಳ್ಳುತ್ತವೆ. ಇದಕ್ಕೂ ಮುನ್ನ ಶಾಲಾ ಹಂತದಲ್ಲಿ ಪೂರ್ವಸಿದ್ಧತಾ ಪರೀಕ್ಷೆ, ಸರಣಿ ಪರೀಕ್ಷೆ ನಡೆಸಲಾಗುತ್ತಿದೆ.ಈ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಅವರ ‘ಕೊರತೆ’ಯನ್ನು ವಿಶ್ಲೇಷಿಸಿ ಅದನ್ನು ನೀಗಿಸಲು ಪರಿಹಾರ ಬೋಧನೆಯಲ್ಲಿ ಒತ್ತು ನೀಡಲಾಗುತ್ತಿದೆ. ಮೂರು ವಿಷಯಗಳಿಗೆ ಒತ್ತು: ಇಂಗ್ಲಿಷ್‌, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದೆ. ಶನಿವಾರ ಹೊರತು ಪಡಿಸಿ ವಾರದ ಐದು ದಿನ ಶಾಲೆ ಆರಂಭಗೊಳ್ಳುವುದಕ್ಕಿಂತ ಮುನ್ನ (ಬೆಳಿಗ್ಗೆ 8.45ರಿಂದ 9.45) ಹಾಗೂ ಶಾಲಾ ಅವಧಿ ಪೂರ್ಣಗೊಂಡ ನಂತರ (ಸಂಜೆ 4.45ರಿಂದ 5.45ರ ವರೆಗೆ) ಒಂದು ಗಂಟೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಹೆಚ್ಚುವರಿ ಪಾಠ ಮಾಡಲಾಗುತ್ತಿದೆ. ಪಾಠ ಬೋಧನೆಯ ಜೊತೆಗೆ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸುವ ಪ್ರಯತ್ನವೂ ಇದಾಗಿದೆ. ಜನವರಿಯಿಂದಲೇ ಆರಂಭಗೊಂಡಿರುವ ತರಗತಿಗಳು ಫೆಬ್ರುವರಿ ಅಂತ್ಯದವರೆಗೆ ನಡೆಯಲಿವೆ. ತೀವ್ರ ನಿಗಾ ಕಲಿಕಾ ತರಗತಿ ನಡೆಯುತ್ತಿರುವ ಸರ್ಕಾರಿ ಪ್ರೌಢ ಶಾಲೆಗಳು ಜಿಲ್ಲೆ; ಶಾಲೆಗಳ ಸಂಖ್ಯೆ ಕಲಬುರ್ಗಿ; 124 ಬೀದರ್‌; 108 ಬಳ್ಳಾರಿ; 95 ಯಾದಗಿರಿ; 84 ರಾಯಚೂರು; 72 ಕೊಪ್ಪಳ; 56 1132 ಹೈ.ಕ ದಲ್ಲಿಯ ಸರ್ಕಾರಿ ಪ್ರೌಢ ಶಾಲೆಗಳು 542 ‘ತೀವ್ರ ನಿಗಾ ತರಗತಿ’ ನಡೆಯುತ್ತಿರುವ ಸರ್ಕಾರಿ ಪ್ರೌಢ ಶಾಲೆಗಳು 10 ಸಾವಿರ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಶಿಕ್ಷಕರಿಗೆಸಂಭಾವನೆ ಪರಿಹಾರ ಬೋಧನೆಯನ್ನು ಆಯಾ ಪ್ರೌಢ ಶಾಲೆಗಳ ವಿಷಯ ಶಿಕ್ಷಕರೇ ಮಾಡುತ್ತಿದ್ದಾರೆ. ಇದರ ಮೇಲ್ವಿಚಾರಣೆಯ ಹೊಣೆಯನ್ನು ಆಯಾ ಶಾಲೆಗಳ ಮುಖ್ಯಗುರುಗಳಿಗೆ ವಹಿಸಲಾಗಿದೆ. ಮೂವರು ವಿಷಯ ಶಿಕ್ಷಕರಿಗೆ ಹಾಗೂ ಮುಖ್ಯಗುರುಗಳಿಗೆ ಹೀಗೆ ಒಂದು ಶಾಲೆಯ ನಾಲ್ವರಿಗೆ ತಿಂಗಳಿಗೆ ತಲಾ ₹1 ಸಾವಿರ ಸಂಭಾವನೆಯನ್ನು ಎಚ್‌ಕೆಆರ್‌ಡಿಬಿ ನೀಡುತ್ತಿದೆ. ರಾಜ್ಯದ ಸರಾಸರಿಗಿಂತ ಹೆಚ್ಚಿನ ಫಲಿತಾಂಶ ನೀಡುವ ಶಾಲೆಗಳಿಗೆ ಪಾರಿತೋಷಕ ಮತ್ತು ಪ್ರಶಂಸಾ ಪತ್ರ ನೀಡುವ ಯೋಜನೆಯನ್ನೂ ಮಂಡಳಿ ಹಾಕಿಕೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.