ಉನ್ನತ ಶಿಕ್ಷಣ ಕ್ಷೇತ್ರದ ಹೊಸ ದಿಗಂತಗಳು ಒಂದು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯನ್ನು ಅಳೆಯಲು ಅನೇಕ ಮಾಪನಗಳಿವೆ. ಅವುಗಳಲ್ಲಿ ಪ್ರತಿ 10 ಲಕ್ಷ ಜನಕ್ಕೆ ಎಷ್ಟು ಜನ ಸಂಶೋಧನೆಯಲ್ಲಿ ತೊಡಗಿದ್ದಾರೆ ಎನ್ನುವುದು ಒಂದು ಮುಖ್ಯ ಮಾಪನ. ವಿಶ್ವಬ್ಯಾಂಕ್ ಈ ವರದಿಯನ್ನು ಹೊರತರುತ್ತದೆ. ಇದನ್ನು ಗಮನಿಸಿದರೆ ಅಮೆರಿಕ ಮತ್ತು ಯುರೋಪಿನ ಮುಂದುವರಿದ ರಾಷ್ಟ್ರಗಳಲ್ಲಿ ಪ್ರತಿ10 ಲಕ್ಷಕ್ಕೆ6ರಿಂದ 7 ಸಾವಿರ ಜನರು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಂಖ್ಯೆ ದಕ್ಷಿಣ ಕೊರಿಯಾದಲ್ಲಿ 7087, ಜಪಾನಿನಲ್ಲಿ 5231, ಮಲೇಷ್ಯಾದಲ್ಲಿ 2261, ಚೀನಾದಲ್ಲಿ 1177; ಭಾರತದಲ್ಲಿ 10 ಲಕ್ಷ ಜನರಲ್ಲಿ 216 ಜನರು ಮಾತ್ರ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ವಿಜ್ಞಾನ, ತಂತ್ರಜ್ಞಾನದಲ್ಲಿ ಪ್ರಗತಿ ಕಾಣದೆ ಯಾವುದೇ ದೇಶ ಆರ್ಥಿಕ ಪ್ರಗತಿಯನ್ನು ಕಾಣಲಾಗದು; ದೇಶ ಬಲಾಢ್ಯವಾಗುವುದೂ ಸಾಧ್ಯವಿಲ್ಲ. ‘ವಿಶ್ವ ಬೌದ್ಧಿಕ ಹಕ್ಕು ಸ್ಥಾಪನೆ’ಯ ಅಂಕಿ–ಅಂಶಗಳ ಪ್ರಕಾರ ಭಾರತ 2014ರಲ್ಲಿ 42 ಸಾವಿರದ 854 ಪೇಟೆಂಟ್‍ಗಳಿಗಾಗಿ ಅರ್ಜಿ ಹಾಕಿದ್ದರೆ, ಚೀನಾ ಒಂಬತ್ತು ಲಕ್ಷದ 28 ಸಾವಿರದ 177, ಅಮೆರಿಕ 5 ಲಕ್ಷದ 78 ಸಾವಿರದ 177 ಹಾಗೂ ದಕ್ಷಿಣ ಕೊರಿಯಾ 2 ಲಕ್ಷ 10 ಸಾವಿರದ 292 ಪೇಟೆಂಟ್‍ಗಳಿಗಾಗಿ ಅರ್ಜಿ ಸಲ್ಲಿಸಿದ್ದವು. ಈ ಅಂಕಿ–ಅಂಶಗಳೇ ನಮ್ಮಲ್ಲಿನ ಸಂಶೋಧನೆಯ ಪ್ರಮಾಣವನ್ನು ಸೂಚಿಸುವಂತಿವೆ. ಭಾರತೀಯರ ಬಗ್ಗೆ ಇನ್ನೊಂದು ಮಾತಿದೆ - ಅಮೆರಿಕಾದ ಯಾವುದೇ ಉನ್ನತ ವಿಜ್ಞಾನ ತಂತ್ರಜ್ಞಾನ ಸಂಸ್ಥೆಗೆ ಹೋದರೂ ಕನಿಷ್ಠ ಶೇ 10-15ರಷ್ಟಾದರೂ ಭಾರತೀಯರಿರುತ್ತಾರೆ ಎನ್ನುವುದು. ನಮ್ಮಲ್ಲಿ ಸುಮಾರು 6500 ವಿಶ್ವವಿದ್ಯಾಲಯಗಳಿದ್ದು, 40 ಸಾವಿರ ಕಾಲೇಜುಗಳಿವೆ. ಸಂಶೋಧನೆಯಲ್ಲಿ ನಮ್ಮ ಕಳಪೆ ಸಾಧನೆಯನ್ನು ಈಗಲಾದರೂ ನಾವು ಗಂಭೀರವಾಗಿ ತೆಗೆದುಕೊಳ್ಳಲೇಬೇಕಾಗಿದೆ. ಸ್ವಾತಂತ್ರ್ಯ ಬಂದ ನಂತರ ಇಲ್ಲಿಯೇ ಸಂಶೋಧನೆ ಮಾಡಿ ಒಂದೂ ಕೂಡ ನೊಬೆಲ್ ಬಹುಮಾನ ಬಾರದಿರುವುದು ಎಚ್ಚರಿಕೆಯ ಇನ್ನೊಂದು ಗಂಟೆ. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ‘ಬ್ರಾಂಕ್ಸ್ ಹೈಸ್ಕೂಲ್’ನಲ್ಲಿ ಓದಿದ ಆರು ಮಂದಿಗೆ ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಹಾಗೂ ಭೌತವಿಜ್ಞಾನ ಕ್ಷೇತ್ರದಲ್ಲಿ ಒಬ್ಬರಿಗೆ ನೊಬೆಲ್ ಪ್ರಶಸ್ತಿ ಸಂದಿದೆ. ಇದೇ ಶಾಲೆಯ ಆರು ಮಂದಿ ಕಲಾ ವಿಭಾಗದಲ್ಲಿ ಪುಲಿಟ್ಜರ್ ಪ್ರಶಸ್ತಿ ಪಡೆದಿದ್ದಾರೆ. ನಮ್ಮಲ್ಲಿ ಇಂಥ ಉದಾಹರಣೆಗಳು ಸದ್ಯಕ್ಕಂತೂ ಇಲ್ಲ. ಭಾರತದಲ್ಲಿ ವಿಶ್ವವಿದ್ಯಾಲಯಕ್ಕೂ ಸಂಶೋಧನೆಗೂ ಸಂಬಂಧವೇ ಇಲ್ಲದಂತಾಗಿದೆ. ಸಂಶೋಧನೆಯಲ್ಲಿ ಹೆಸರು ಮಾಡಿರುವ ‘ಐಎಸ್‌ಆರ್‌ಒ’, ‘ಸಿಎಸ್‌ಐಆರ್’, ‘ಬಿಎಆರ್‌ಸಿ’ ಯಾವುದೇ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿಲ್ಲ. ವಿಜ್ಞಾನ–ತಂತ್ರಜ್ಞಾನಕ್ಕೆ ವಿಶ್ವವಿದ್ಯಾಲಯ ಹೊರತಾಗಿ ಪ್ರತ್ಯೇಕ ಸಂಸ್ಥೆಯಾದ ‘ಸಿಎಸ್‌ಐಆರ್’ ಅನ್ನು ಭಟ್ನಾಗರ್ ಹುಟ್ಟುಹಾಕಿದರು. ಆಗ ಕೋಪಗೊಂಡಿದ್ದ ಸಿ.ವಿ. ರಾಮನ್ ಅವರು, ‘ಮುಮ್ತಾಜ಼್‌ಗೆ ಷಹಜಹಾನ್ ತಾಜ್‍ಮಹಲ್ ಗೋರಿ ಕಟ್ಟಿಸಿದ. ಪ್ರಯೋಗಾಲಯದ ಯಂತ್ರಗಳನ್ನು ಹೂಳಲು ಭಟ್ನಾಗರ್ ಸಿಎಸ್‌ಐಆರ್ ಕಟ್ಟಿಸಿದ್ದಾರೆ’ ಎಂದಿದ್ದರು. ನಮ್ಮ ವಿಶ್ವವಿದ್ಯಾಲಯದ ಕಲಿಕೆಗೂ ಇಲ್ಲಿರುವ ಉದ್ಯಮ ಮತ್ತು ಉದ್ಯೋಗಕ್ಕೂ ಸಂಬಂಧವಿಲ್ಲದಂತಿದೆ. ಹಾಗೆಯೇ ಓಬೀರಾಯನ ಕಾಲದ ಪಠ್ಯಪುಸ್ತಕಕ್ಕೂ ಇಂದಿನ ತಂತ್ರಜ್ಞಾನಕ್ಕೂ ಬೆಸುಗೆಯೇ ಇಲ್ಲವಾಗಿದೆ. ಉದಾಹರಣೆಗೆ, ಭಾರತದಿಂದ ಅತಿ ಹೆಚ್ಚು ರಫ್ತಾಗುವ ವಸ್ತು ಯಾವುದೆಂದು ಪ್ರಶ್ನಿಸಿದರೆ, ‘ಪೆಟ್ರೋಲಿಯಂ’ ಎಂದು ಹೇಳುವವರ ಸಂಖ್ಯೆ ಬೆರಳೆಣಿಕೆಯಷ್ಟೇ. ವಾಸ್ತವಾಂಶವೆಂದರೆ ನಮ್ಮ ದೇಶದಿಂದ ರಫ್ತಾಗುವ ಒಟ್ಟು ಉತ್ಪನ್ನಗಳಲ್ಲಿ ಶೇ 20ರಷ್ಟು ರಪ್ತಾಗುವುದು ಪೆಟ್ರೋಲಿಯಂ ಪದಾರ್ಥಗಳೇ. ಪೆಟ್ರೋಲಿಯಂನಿಂದ ನೂರಾರು ರೀತಿಯ ರಾಸಾಯನಿಕಗಳನ್ನು ತಯಾರಿಸಬಹುದು. ಇಂದು ‘ವಿಟಮಿನ್ ಎ’ ರೀತಿಯ ಆನೇಕ ವಿಟಮಿನ್‌ಗಳನ್ನೂ ತಯಾರಿಸಬಹುದು. ಗುಜರಾತ್‌ನಲ್ಲಿ ಈಗ ‘ದೀನ್‌ದಯಾಳ್ ಉಪಾಧ್ಯಾಯ ಪೆಟ್ರೋಲಿಯಂ’ ವಿಶ್ವವಿದ್ಯಾಲಯವಿದೆ. ಇತರೆ ಕೆಲವು ಸಂಸ್ಥೆಗಳೂ ಪೆಟ್ರೋಲಿಯಂ ಅನ್ನು ಅಧ್ಯಯನದ ಒಂದು ವಿಷಯವಾಗಿ ಸೇರಿಸಿಕೊಂಡಿವೆ. ಕಲ್ಲಿದ್ದಲಿನಿಂದ ಕೂಡ ವೈವಿಧ್ಯಮಯ ರಾಸಾಯನಿಕಗಳನ್ನು ತಯಾರಿಸಲಾಗುತ್ತಿದೆ. ಹೊಸ ಪರ್ಯಾಯ ಶಕ್ತಿಮೂಲಗಳನ್ನು ಹುಡುಕಲು ಹೊರಟಿರುವುದು ವಾಸ್ತವವಾದರೂ, ಹಳೆಯ ಮೂಲಗಳಿಂದ ತಯಾರಿಸಬಹುದಾದ ರಾಸಾಯನಿಕಗಳು ವಿಸ್ತಾರಗೊಂಡಿವೆ. ಪ್ರಕೃತ್ತಿದತ್ತವಾಗಿ ದೊರಕುವ ವಸ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಹೊಸ ಪ್ರಯತ್ನಗಳು ನಡೆಯುತ್ತಿವೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ರೊಬಾ ಟಿಕ್ಸ್, ಮಷಿನ್ ಲರ್ನಿಂಗ್, ಮೆಟೀರಿಯಲ್ ಸೈನ್ಸ್, ಐಒಟಿ - ಇವೆಲ್ಲ ಎಲ್ಲಡೆ ಕೇಳಿಬರುವ ತಂತ್ರಜ್ಞಾನಗಳಾಗಿವೆ. ಜೊತೆಗೆ ಬ್ಲಾಕ್‌ಚೈನ್ ತಂತ್ರಜ್ಞಾನ, ನ್ಯೂರೊ ಸೈನ್ಸ್, ಕ್ವಾಂಟಂ ಕಂಪ್ಯೂ ಟಿಂಗ್, ಜೆನೆಟಿಕ್ ಸೈನ್ಸ್ – ಈ ಶತಮಾನದ ವಿಜ್ಞಾನ ಗಳೆಂದು ಹೆಸರು ಪಡೆದಿವೆ. ಆಧುನಿಕ ವಿಜ್ಞಾನದ ಜೊತೆಗೆ ನಮ್ಮಲ್ಲಿನ ಸಾವಿರಾರು ಸಮಸ್ಯೆಗಳಿಗೆ ಸ್ಥಳೀಯ ಪರಿಹಾರಗಳನ್ನು ಹುಡುಕಿಕೊಳ್ಳಬೇಕಾಗಿದೆ. ಹಾಗೆಯೇ ಪ್ಲೇಟೊ ಹೇಳಿದಂತೆ, ಗಣಿತದ ಜೊತೆಗೆ ಜಿಮ್ನಾಸ್ಟಿಕ್ ಮತ್ತು ಕಲೆ, ಸಂಗೀತ ಕೂಡ ಅಷ್ಟೇ ಮುಖ್ಯ. ಮುಂದೆ ಭಾಷಾಜ್ಞಾನ, ತತ್ವಶಾಸ್ತ್ರ , ಸಮಾಜಶಾಸ್ತ್ರ, ವಿಜ್ಞಾನದಷ್ಟೇ ಪ್ರಾಮುಖ್ಯವನ್ನು ಉಳಿಸಿಕೊಳ್ಳುತ್ತವೆ ಅಥವಾ ಇನ್ನೂ ಹೆಚ್ಚು ಪ್ರಾಮುಖ್ಯ ಪಡೆದುಕೊಳ್ಳಬಹುದು. ಐನ್ಸ್‌ಸ್ಟೈನ್ ಹೇಳುವಂತೆ ಜ್ಞಾನಕ್ಕಿಂತ ಕಲ್ಪನಾಶಕ್ತಿ ಮುಖ್ಯ. ಕಲ್ಪನಾಶಕ್ತಿಗೆ ಚಿಕ್ಕ ಮಯಸ್ಸಿನ ಅಜ್ಜಿ ಕಥೆ ಕೂಡ ಶಾಲಾಶಿಕ್ಷಣದಷ್ಟೇ ಮುಖ್ಯ. ವಿಜ್ಞಾನಕ್ಕೆ ತಕ್ಕ ದಿಕ್ಕು ತೋರಿಸಲು ನೀತಿಶಾಸ್ತ್ರದ ಅವಶ್ಯಕತೆ ಇರುತ್ತದೆ. ಆಕ್ಸ್‌ಫ಼ರ್ಡ್ ವಿಶ್ವವಿದ್ಯಾಲದಲ್ಲಿ ‘ಮನುಕುಲದ ಭವಿಷ್ಯ’ ( ) ಎನ್ನುವ ಅಧ್ಯಯನ ಕೇಂದ್ರವಿದೆ. ನಮ್ಮ ಮುಂದಿನ ಉನ್ನತ ಶಿಕ್ಷಣ ಹೊಸ ಆರ್ಥಿಕತೆ, ಅಂದರೆ ಜೀವವೈವಿಧ್ಯ ಮತ್ತು ಪರಿಸರಕ್ಕೆ ಪೂರಕವಾಗಿರಬೇಕು. - . ಜಾಗತಿಕ ತಾಪಮಾನದ ಶಾಪ ವಿಮೋಚನೆಗೆ ಹೊಸ ತಂತ್ರಜ್ಞಾನ ಮುಖ ಮಾಡಬೇಕಾಗಿದೆ. ಈಗ ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಬಳಸಿ ಪ್ರಕೃತಿಯಲ್ಲಿ ಕರಗುವ ಪ್ಲಾಸ್ಟಿಕ್ ಮಾಡಲಾಗಿದೆ. ಹೀಗೆ ಹಿನ್ನೋಟ-ಮುನ್ನೋಟ – ಎರಡೂ ನಮ್ಮ ಉನ್ನತ ಶಿಕ್ಷಣದ ಭಾಗವಾಗುವುದು ಈ ಹೊತ್ತಿನ ಅಗತ್ಯ. ನಾಲ್ಕು ಸ್ತಂಭಗಳು! ವಿಜ್ಞಾನದ ವಿಷಯಗಳಲ್ಲಿ ಸಂಶೋಧನೆ ಕೈಗೊಳ್ಳಲು ಆಸಕ್ತಿ ಮತ್ತು ಅರ್ಹತೆ ಇದ್ದವರಿಗೆ ಚೈತನ್ಯ ತುಂಬುವ ನಮ್ಮ ದೇಶದ ಪ್ರಧಾನ ಶೈಕ್ಷಣಿಕ ಸಂಸ್ಥೆಗಳೆಂದರೆ - ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಐಐಟಿ, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮತ್ತು ಸಿಎಸ್‌ಐಆರ್‌. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಬೆಂಗಳೂರಿನಲ್ಲಿದೆ (..); ಉಳಿದ ಮೂರುಸಂಸ್ಥೆಗಳ ಕರ್ನಾಟಕದಲ್ಲಿನ ಕೇಂದ್ರಗಳು ಹೀಗಿವೆ: * ಐಐಟಿ – ಧಾರವಾಡ (..) * ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ – ಸುರತ್ಕಲ್‌ ’(..) * ಸಿಎಸ್‌ಐಆರ್‌ನ ಎರಡು ಕೇಂದ್ರಗಳು ಕರ್ನಾಟಕದಲ್ಲಿದ್ದು ಒಂದು ಬೆಂಗಳೂರಿನಲ್ಲೂ (ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೊರೆಟರೀಸ್‌) (..), ಮತ್ತೊಂದು ಮೈಸೂರಿನಲ್ಲಿದೆ ( ‘ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ)(.) ಈ ಮೂರು ಸಂಸ್ಥೆಗಳಲ್ಲದೆ ಬೆಂಗಳೂರಿನಲ್ಲಿರುವ ‘ಜವಾಹರ್‌ಲಾಲ್‌ ನೆಹರು ಸೆಂಟರ್‌ ಫಾರ್‌ ಅಡ್ವಾನ್ಸ್ಡ್‌ಸೈಂಟಿಫಿಕ್‌ ರಿಸರ್ಚ್‌’ (..) ಕೂಡ ಸಂಶೋಧನೆಗೆ ಮೀಸಲಾಗಿರುವ ಪ್ರತಿಷ್ಠಿತ ಸಂಸ್ಥೆ. ** ಎನ್‌ಐಟಿಕೆಯು ಎಂಜಿನಿಯರಿಂಗ್‌ , ಮೂಲವಿಜ್ಞಾನಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತದೆ. ಬದಲಾಗುತ್ತಿರುವ ಜಗತ್ತಿನಲ್ಲಿ ಸಂಶೋಧನಾ ಚಟುವಟಿಕೆಗಳು ಮಹತ್ವ ಪಡೆಯುತ್ತಿವೆ. ಈ ಸಂಸ್ಥೆಯಲ್ಲಿ 100ಕ್ಕೂ ಹೆಚ್ಚು ಮಂದಿ ನಿರಂತರವಾಗಿ ವಿವಿಧ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಸೆಂಟ್ರಲ್‌ ರಿಸರ್ಚ್‌ ಫೆಸಿಲಿಟಿ(ಸಿಆರ್‌ಎಫ್‌) ಕೇಂದ್ರವನ್ನು ಆರಂಭಿಸಲಾಗಿದ್ದು, ಇದು ‘ಸೆಂಟರ್‌ ಆಫ್‌ ಎಕ್ಸೆಲೆನ್ಸಿ’ ಮಾದರಿಯಲ್ಲಿ ಕಾರ್ಯ ನಿರ್ವ ಹಿಸುತ್ತಿದೆ. ಎಂಜಿನಿಯರಿಂಗ್‌ ಮತ್ತು ಮೂಲ ವಿಜ್ಞಾನ ಕ್ಷೇತ್ರದ ಸಂಶೋಧನಾ ಚಟುವಟಿಕೆಗಳಿಗೆ ಈ ಕೇಂದ್ರವು ಪೂರಕ ವಾತಾವರಣ ಕಲ್ಪಿಸುತ್ತಿದೆ. ಸಂಶೋಧನಾ ಗುಣಮಟ್ಟಕ್ಕೆ ಸಂಬಂಧಿಸಿ ಹೇಳುವುದಾದರೆ ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಂತಹ ಸಂಸ್ಥೆಗಳ ಜೊತೆ ಸ್ಪರ್ಧಿಸುವ ರೀತಿಯಲ್ಲಿ ಸಂಶೋಧನೆಗಳಿಗೆ ಒತ್ತು ನೀಡಲಾ ಗುತ್ತಿದೆ. ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಸಮುದ್ರ ನೀರಿನ ಶುದ್ಧೀಕರಣ, ಕುಡಿಯುವ ನೀರಿನ ಪರಿಶುದ್ಧತೆ ಸೇರಿದಂತೆ ಹಲವು ಸಾಮಾಜಿಕ ಅಗತ್ಯಗಳಿಗೆ ಪೂರಕವಾದ ಸಂಶೋಧ ನೆಗಳು ನಡೆಯುತ್ತಿವೆ. –ಪ್ರೊ. ಕರಣಂ ಉಮಾಮಹೇಶ್ವರ ರಾವ್‌,ಸುರತ್ಕಲ್‌ ಎನ್‌ಐಟಿಕೆ ನಿರ್ದೇಶಕರು ** ಭಾರತದಲ್ಲಿ ಇದುವರೆಗೆ ಉನ್ನತ ಶಿಕ್ಷಣ ಎಂದರೆ ಕಲಿಕೆ ಮತ್ತು ಸಂಶೋಧನೆಯು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿತ್ತು. ಆದರೆ ಈಗ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರಬಲ್ಲಂತಹ ಜ್ಞಾನ ನಮ್ಮಲ್ಲಿದೆ. ಬೃಹತ್‌ ಸಂಖ್ಯೆಯ ಪರಿಣತರೂ ನಮ್ಮಲ್ಲಿದ್ದಾರೆ. ಆದ್ದರಿಂದ ಸಂಶೋಧನೆಯನ್ನು ಕಲಿಕೆಯ ಭಾಗವನ್ನಾಗಿ ಮಾಡುವತ್ತ ನಾವು ಗಮನ ಹರಿಸಬೇಕಾಗಿದೆ. ಹಾಗಾದಾಗ ವಿದ್ಯಾರ್ಥಿಗಳು ವೃತ್ತಿಪರರಾಗಿ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ನಿರತರಾಗಬಹುದು. –ಪ್ರೊ. ಎಸ್‌. ಎಂ. ಶಿವಪ್ರಸಾದ್‌,ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕರು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.