ಮಹತ್ವಾಕಾಂಕ್ಷೆಗೆ ಇನ್ನೊಂದು ಹೆಸರು ’ಐ.ಐ.ಟಿ’ ಶಿಕ್ಷಣ ಅತಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ತಮ್ಮ ಪಠ್ಯಕ್ರಮಕ್ಕೆ ಹೊಂದಿಸಿಕೊಳ್ಳಲು ನಮ್ಮ ಎಂಜಿನಿಯರಿಂಗ್ ಕಾಲೇಜುಗಳು ಒದ್ದಾಡುತ್ತಿವೆ. ತಂತ್ರಜ್ಞಾನದ ಬೆನ್ನೆಲುಬಾದ ಸಂಶೋಧನಾ ಚಟುವಟಿಕೆ ಈ ಕಾಲೇಜುಗಳಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿ, ಇಲ್ಲಿಂದ ಹೊರಬರುತ್ತಿರುವಎಂಜಿನಿಯರಿಂಗ್‌ ಪದವೀಧರರು ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಸೋಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇರುವ ಏಕೈಕ ಮಾರ್ಗವೆಂದರೆ, ರಾಷ್ಟ್ರಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳಾದ ಐಐಟಿ–ಎನ್‌ಐಟಿಗಳತ್ತ ಮುಖ ಮಾಡುವುದು. ಐಐಟಿ–ಎನ್‌ಐಟಿ: ಉನ್ನತ ತಾಂತ್ರಿಕ ಶಿಕ್ಷಣದ ದಾರಿಗಳು ಕೇಂದ್ರ ಸರ್ಕಾರದ ಅನುದಾನದ ಮೇಲೆ ನಡೆಯತ್ತಿರುವ ಈ ಸಂಸ್ಥೆಗಳು ಜಾಗತಿಕ ಮಟ್ಟದ ತಂತ್ರಜ್ಞಾನ ಶಿಕ್ಷಣವನ್ನು ನೀಡುತ್ತಿವೆ. ದೇಶದಲ್ಲಿರುವ 23 ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (), 31 ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು () ಮತ್ತು ಇನ್ನಿತರ ಕೆಲವು ರಾಷ್ಟ್ರಮಟ್ಟದ ಸಂಸ್ಥೆಗಳು ಅತ್ಯುತ್ತಮ ತಾಂತ್ರಿಕ ಶಿಕ್ಷಣವನ್ನು ನೀಡುತ್ತಿವೆ. ಇನ್ಫೊಸಿಸ್ ಸಂಸ್ಥಾಪಕರಾದ ಎನ್.ಆರ್. ನಾರಾಯಣಮೂರ್ತಿ ಹಾಗೂ ವಿಪ್ರೊ ಸಂಸ್ಥಾಪಕರಾದ ಅಜೀಂ ಪ್ರೇಂಜಿ ಇಂತಹ ರಾಷ್ಟ್ರೀಯ ಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳಿಂದ ಬಂದವರೇ ಆಗಿದ್ದಾರೆ. ಭಾರತದ ಸಾಫ್ಟ್‌ವೇರ್ ಕಂಪನಿಗಳ ಬಹುಪಾಲು ಸಿಇಒಗಳು ಐ.ಐ.ಟಿ.ಯಿಂದ ಶಿಕ್ಷಣ ಪಡೆದವರು. ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚ್ಚೈ, ಮೈಕ್ರೊಸಾಫ್ಟ್ ಕಂಪನಿಯ ಸಿಇಒ ಸತ್ಯ ನಡೇಲಾ ಮುಂತಾದವರೆಲ್ಲಾ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಂದ ತರಬೇತಿ ಪಡೆದವರಾಗಿದ್ದಾರೆ. ಅಂತರರಾಷ್ಟ್ರೀಯ ಪ್ರಖ್ಯಾತಿ ಹೊಂದಿದ ಎನ್‌ಐಟಿ ಮತ್ತು ಐಐಟಿಗಳಿಗೆ ಕರ್ನಾಟಕದಿಂದ ಹೋಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಮನಿಸಿದರೆ ಕಳವಳವಾಗುತ್ತದೆ. ಪ್ರತಿವರ್ಷ 2 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ತೆಗೆದುಕೊಂಡರೆ, ಐಐಟಿ ಮೇನ್ಸ್ ಮತ್ತು ಅಡ್ವಾನ್ಸ್ಡ್‌ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಹೆಚ್ಚೆಂದರೆ 10 ಸಾವಿರ ಮಾತ್ರ. ಅವರಲ್ಲಿ ಉತ್ತೀರ್ಣರಾಗಿ ಐಐಟಿ ಸೇರುವವರು 600–700 ಮಂದಿ ಇರಬಹುದು. ಅಂದರೆ, ಎನ್‌ಐಟಿ ಮತ್ತು ಐಐಟಿಗಳಲ್ಲಿರುವ ಒಟ್ಟು ಸೀಟುಗಳಲ್ಲಿ ಶೇ 2ರಷ್ಟು ಸೀಟುಗಳನ್ನು ಮಾತ್ರ ಕರ್ನಾಟಕದ ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಿದ್ದಾರೆ. ಈ ನಿರಾಶಾದಾಯಕ ಅಂಕಿಅಂಶಗಳನ್ನು ಗಮನಿಸಿದರೆ ಕರ್ನಾಟಕದಲ್ಲಿ ಐಐಟಿ ಮತ್ತು ಎನ್‌ಐಟಿ ತಾಂತ್ರಿಕ ಶಿಕ್ಷಣದ ಬಗ್ಗೆ, ಎಚ್ಚರ ಮೂಡಿಸುವ ತುರ್ತು ಅಗತ್ಯ ಮನವರಿಕೆಯಾಗುತ್ತದೆ. ನಮ್ಮ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳೂ, ಬೇರೆ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ, ಎನ್‌ಐಟಿ ಅಥವಾ ಐಐಟಿಗಳಲ್ಲಿ ಅವಕಾಶ ಪಡೆದು ಉತ್ತಮ ತಾಂತ್ರಿಕ ಶಿಕ್ಷಣವನ್ನು ಪಡೆಯಲು ಪ್ರೇರೇಪಿಸಬೇಕಾಗಿದೆ. ಪರೀಕ್ಷೆ–ಪಠ್ಯ, ಇತ್ಯಾದಿ... ಜೆಇಇ (ಮೇನ್ಸ್‌) ಪರೀಕ್ಷೆ ಸಿಬಿಎಸ್‌ಇ ಪಠ್ಯಕ್ರಮವನ್ನು ಆಧರಿಸಿದ್ದು, ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಭಾಗದಲ್ಲಿ, ಪ್ರತಿಯೊಂದರಲ್ಲಿಯೂ 30 ಪ್ರಶ್ನೆಗಳಿದ್ದು, ಪ್ರತಿ ಸರಿ ಉತ್ತರಕ್ಕೆ 4 ಅಂಕಗಳೂ ತಪ್ಪು ಉತ್ತರಕ್ಕೆ –1 ಅಂಕವೂ ಇರುತ್ತದೆ. ಮೂರು ಗಂಟೆಗಳ ಅವಧಿಯಲ್ಲಿ 90 ಪ್ರಶ್ನೆಗಳನ್ನು ಉತ್ತರಿಸುವ ಸವಾಲು ಇಲ್ಲಿರುತ್ತದೆ. ಪದವಿಪೂರ್ವ ಶಿಕ್ಷಣ ಅವಧಿಯ ಎರಡು ವರ್ಷದ ಪಠ್ಯಗಳ ಬಗ್ಗೆಯೂ ಪ್ರಶ್ನೆಗಳು ಇಲ್ಲಿ ಸಮವಾಗಿ ಹಂಚಿಕೆಯಾಗಿರುತ್ತವೆ. ಕರ್ನಾಟಕ ಸರ್ಕಾರ ನಡೆಸುವ ಸಿಇಟಿ ಪರೀಕ್ಷೆಗಿಂತ ಕಠಿಣವಾಗಿರುವ ಈ ಪರೀಕ್ಷೆಯನ್ನು ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಾರೆ. ಕರ್ನಾಟಕದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು * ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಧಾರವಾಡ. ಮಾಹಿತಿಗೆ: .. * ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ, ಸುರತ್ಕಲ್. ಮಾಹಿತಿಗೆ: .. * ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ, ಮೈಸೂರು.ಮಾಹಿತಿಗೆ: . ವಿಶ್ವದಲ್ಲೇ ಕ್ಲಿಷ್ಟಕರ ಪರೀಕ್ಷೆ ಜೆಇಇ (ಅಡ್ವಾನ್ಸ್ಡ್) ಪ್ರಶ್ನೆಪತ್ರಿಕೆಗಳ ಮಾದರಿ ಪ್ರತಿ ವರ್ಷ ಬದಲಾಗುತ್ತಿರುತ್ತದೆ. ಏಕ ಉತ್ತರದ ಪ್ರಶ್ನೆಗಳು, ಬಹು ಉತ್ತರದ ಪ್ರಶ್ನೆಗಳು, ಪೂರ್ಣಾಂಕ ಉತ್ತರದ ಪ್ರಶ್ನೆಗಳು ಎರಡು ಅಥವಾ ಮೂರು ಪಟ್ಟಿಗಳನ್ನು ಹೊಂದಿಸುವ ಪ್ರಶ್ನೆಗಳು, ಗ್ರಹಣಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಶ್ನೆಗಳು – ಹೀಗೆ ಬೇರೆ ಬೇರೆ ವಿಧದ 20 ಪ್ರಶ್ನೆಗಳು ಪ್ರತಿ ವಿಷಯದಲ್ಲಿ (ಭೌತವಿಜ್ಞಾನ, ರಸಾಯನವಿಜ್ಞಾನ ಮತ್ತು ಗಣಿತ) ಇರುತ್ತವೆ. ಈ ಪ್ರಶ್ನೆಪತ್ರಿಕೆಯ ನಿರ್ಮಾಣದ ಜವಾಬ್ದಾರಿಯನ್ನು ಪ್ರತಿ ವರ್ಷ ಒಂದೊಂದು ಐಐಟಿ ನಿರ್ವಹಿಸುತ್ತಿದೆ. ಇಲ್ಲಿ ಬರುವ ಪ್ರಶ್ನೆಗಳು ಹಿಂದಿನ ಪರೀಕ್ಷೆಗಳ ಪುನಾರಾವೃತ್ತಿ ಆಗಿರುವುದಾಗಲೀ ಅಥವಾ ಯಾವುದೇ ಉತ್ಕೃಷ್ಟ ಪುಸ್ತಕಗಳಲ್ಲಿ ಉದ್ಧರಿಸಿರುವುದಾಗಲೀ ಆಗಿರುವುದಿಲ್ಲ. ಪ್ರಪಂಚದಲ್ಲಿಯೇ ಅತಿಕ್ಲಿಷ್ಟಕರ ಪರೀಕ್ಷೆ ಎಂಬ ಪ್ರಖ್ಯಾತಿಯನ್ನು ಹೊಂದಿದ ಈ ಪರೀಕ್ಷೆ, ವಿದ್ಯಾರ್ಥಿಗಳ ವಿಜ್ಞಾನಪ್ರತಿಭೆಗೆ ಸವಾಲಾಗಿರುತ್ತದೆ. ಎಲ್ಲ ವಿಜ್ಞಾನ ಅಧ್ಯಾಪಕರೂ, ಪ್ರತಿವರ್ಷ ಹೊರಬರುವ ಈ ಪ್ರಶ್ನೆಪತ್ರಿಕೆಗೆ ಕಾದಿದ್ದು, ಅದನ್ನು ತಾವೂ ಬಿಡಿಸಿ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳುತ್ತಾರೆ. ದೇಶದಲ್ಲಿ 31 ಎನ್‌ಐಟಿ: ರ‍್ಯಾಂಕ್‌ ನಿಗದಿ ಹೇಗೆ? ದೇಶದ 31 ಎನ್‌ಐಟಿಗಳಲ್ಲಿರುವ 19 ಸಾವಿರ ಸೀಟುಗಳಿಗೆ ಜೆಇಇ ಮೇನ್ಸ್ ಪರೀಕ್ಷೆಯ ಅಂಕಗಳ ಆಧಾರದಲ್ಲಿ ರ‍್ಯಾಂಕ್‌ಗಳನ್ನು ನಿಗದಿಪಡಿಸುತ್ತಾರೆ. ಇದಲ್ಲದೇ ಐಐಟಿ ಜೆಇಇ (ಅಡ್ವಾನ್ಸ್ಡ್‌) ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ರ‍್ಯಾಂಕನ್ನೂ, ಈ ಪರೀಕ್ಷೆಯ ಅಂಕಗಳ ಆಧಾರದಲ್ಲಿಯೇ ನಿರ್ಧರಿಸುತ್ತಾರೆ. ಈ ರ‍್ಯಾಂಕ್‌ಗಳನ್ನು ನೀಡುವಾಗ ಪಿಯು ಬೋರ್ಡ್ ಪರೀಕ್ಷೆಯ ಅಂಕಗಳನ್ನು ಪರಿಗಣಿಸುವುದಿಲ್ಲ. ಆದರೆ ಪಿ.ಯು. ಬೋರ್ಡ್ ಪರೀಕ್ಷೆಯಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಪರಿಗಣಿಸುತ್ತಾರೆ. ಪ್ರತಿ ವರ್ಷ ಏಪ್ರಿಲ್‌ನಲ್ಲಿ ನಡೆಯುವ ಈ ಪರೀಕ್ಷೆ ಕೈ ಬರವಣಿಗೆಯ ಮಾದರಿಯಲ್ಲಿ ಮತ್ತು ಕಂಪ್ಯೂಟರ್ ಮಾದರಿಯಲ್ಲಿ – ಎರಡೂ ವಿಧದಲ್ಲಿ ನಡೆಯುತ್ತದೆ. ವಿದ್ಯಾರ್ಥಿ ತನಗೆ ಅನುಕೂಲವಾದ ಬಗೆಯನ್ನು ಮೊದಲೇ ಆರಿಸಿಕೊಳ್ಳಬೇಕಾಗುತ್ತದೆ. ಜೆಇಇ (ಮೇನ್ಸ್) ಪರೀಕ್ಷೆಯಲ್ಲಿ ಅರ್ಹರೆಂದು ಪರಿಗಣಿತರಾದ, ಸುಮಾರು 2 ಲಕ್ಷ ವಿದ್ಯಾರ್ಥಿಗಳು ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಈ ಪರೀಕ್ಷೆಯ ರ‍್ಯಾಂಕುಗಳು, ನಮ್ಮ ದೇಶದ ಒಟ್ಟು 23 ಐಐಟಿಗಳಲ್ಲಿರುವ 11 ಸಾವಿರ ಸೀಟುಗಳನ್ನು ನಿರ್ಧರಿಸುತ್ತವೆ. ಪ್ರತಿ ವರ್ಷ ಮೇ ತಿಂಗಳ ಕೊನೆಯ ಭಾನುವಾರ ಈ ಪರೀಕ್ಷೆ ನಡೆಯುತ್ತದೆ. ಈ ವರ್ಷದ ಪರೀಕ್ಷೆ ಕಂಪ್ಯೂಟರ್‌ಗಳ ಮುಖಾಂತರ ಮಾತ್ರ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಎರಡು ಪೇಪರ್‌ಗಳಿದ್ದು ಮೊದಲನೆಯ ಪೇಪರ್‌ ಅನ್ನು ಬೆಳಿಗ್ಗೆ ಮತ್ತು ಎರಡನೆಯ ಪೇಪರ್‌ ಅನ್ನು ಅದೇ ದಿನ ಸಂಜೆ ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿ ಪೇಪರ್‌ನ ಅವಧಿ 3 ಗಂಟೆ. (ಲೇಖಕರು ಬೆಂಗಳೂರಿನ ’ಬೇಸ್’ ಸಂಸ್ಥೆಯ ಐ.ಐ.ಟಿ. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು.) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.