ಸಿಇಟಿ; ಮೊದಲ ದಿನ ಸುಸೂತ್ರ ಕಲಬುರ್ಗಿ: ನಗರದ 21 ಕೇಂದ್ರಗಳಲ್ಲಿ ಸೋಮವಾರ ನಡೆದ ಜೀವಶಾಸ್ತ್ರ ಹಾಗೂ ಗಣಿ ವಿಷಗಳ ಸಿಇಟಿ ಸುಸೂತ್ರವಾಗಿ ನಡೆಯಿತು. ಜಿಲ್ಲೆಯ ಒಟ್ಟು 8,853 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಪ್ರವೇಶ ಪಡೆದಿದ್ದರು. ಇದರಲ್ಲಿ 7,734 ವಿದ್ಯಾರ್ಥಿಗಳು ಜೀವಶಾಸ್ತ್ರ ಹಾಗೂ 8,244 ಮಂದಿ ಗಣಿತಕ್ಕೆ ಹಾಜರಾಗಿದ್ದಾರೆ. ಜೀವಶಾಸ್ತ್ರದಲ್ಲಿ 1,119 ಹಾಗೂ ಗಣಿತದಲ್ಲಿ 609 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಮಂಗಳವಾರ (ಏ. 30) ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದ್ದು ಇದಕ್ಕೂ 8,853 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ನಕಲು ತಡೆಯಲೆಂದೇ ಪ್ರತಿ ಕೇಂದ್ರಕ್ಕೆ ಇಬ್ಬರಂತೆ ಒಟ್ಟು 42 ಜಾಗೃತ ದಳದ ಸದಸ್ಯರನ್ನು ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರದ 200 ಮೀಟರ್‌ ವ್ಯಾಪ್ತಿಯಲ್ಲಿ 144ನೇ ಕಲಂ ಜಾರಿಗೊಳಿಸಲಾಗಿತ್ತು. ಇದರಿಂದ ಯಾರಿಗೂ ತೊಂದರೆಯಾಗದಂತೆ ಪರೀಕ್ಷೆ ನಡೆದಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ತಿಳಿಸಿದ್ದಾರೆ. ಬೆಳಿಗ್ಗೆಯೇ ಮಹಿಳಾ ಹಾಗೂ ಪುರುಷ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿ, ಕೇಂದ್ರದೊಳಗೆ ಬಿಡಲಾಯಿತು. ಪ್ರತಿ ಕೇಂದ್ರಕ್ಕೂ ಒಬ್ಬ ಮೇಲ್ವಿಚಾರಕ, ಒಬ್ಬ ಕಸ್ಟೋಡಿಯನ್‌, ಇಬ್ಬರು ಸಿಟಿಂಗ್‌ ಸ್ಕ್ವಾಡ್‌, ಒಬ್ಬ ಪರಿವೀಕ್ಷಕರನ್ನು ನೇಮಿಸಲಾಗಿತ್ತು. ಜತೆಗೆ, ಹಿರಿಯ ಉಪನ್ಯಾಸಕರೊಬ್ಬರನ್ನು ಒಬ್ಬ ರೂಟ್‌ ಅಧಿಕಾರಿ ಆಗಿ ನೇಮಿಸಿ ಎಲ್ಲ ಕೇಂದ್ರಗಳಿಗೂ ಭೇಟಿ ನೀಡಲಾಯಿತು. ಇದರ ಜತೆಗೆ, ಬೆಂಗಳೂರಿನಿಂದ ಬಂದ ರೂಟ್‌ ಅಧಿಕಾರಿ ಕೂಡ ಖುದ್ದಾಗಿ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆ ಪರಿಶೀಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.