ಮೊಬೈಲ್‌ನಿಂದ ದೂರ; ರ‍್ಯಾಂಕ್‌ಗೆ ಬಲು ಹತ್ತಿರ! ಎಂಜಿನಿಯರಿಂಗ್ ಪದವಿ ಪ್ರವೇಶಕ್ಕಾಗಿ ಕಾಮೆಡ್–ಕೆ ನಡೆಸಿದ ಪರೀಕ್ಷೆಯಲ್ಲಿ ಬೆಂಗಳೂರಿನ ವಿದ್ಯಾಸಂಸ್ಥೆಗಳಲ್ಲಿ ಓದಿದ ಐವರು ವಿದ್ಯಾರ್ಥಿಗಳೇ ಮೊದಲ 10 ರ‍್ಯಾಂಕ್ ಗಳಿಸಿದ್ದಾರೆ. ತಮ್ಮ ಸಾಧನೆ ಕುರಿತು ‘ಮೆಟ್ರೊ’ದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಿತ್ಯ 12 ಗಂಟೆ ಓದುತ್ತಿದ್ದೆ 10ನೇ ತರಗತಿ ಪರೀಕ್ಷೆ ಮುಗಿದ ನಂತರ ಎರಡು ವರ್ಷ ನನ್ನ ಗಮನವೆಲ್ಲಾ ಎಂಜಿನಿಯರಿಂಗ್ ಮೇಲೆ ಇತ್ತು. ಈ ಎರಡು ವರ್ಷದಲ್ಲಿ ಮೊಬೈಲ್‌ ಬಳಸಲಿಲ್ಲ. ಸಾಮಾಜಿಕ ಮಾಧ್ಯಮಗಳಿಂದ, ಟಿ.ವಿಯಿಂದ ದೂರ ಇದ್ದೆ. ಈ ಮಟ್ಟಿಗೆ ಪರಿಶ್ರಮ ಪಟ್ಟರೆ ಮಾತ್ರ ರ‍್ಯಾಂಕ್ ಸಾಧಿಸಲು ಸಾಧ್ಯ ಎಂದು ನಾನು ಹೇಳುವುದಿಲ್ಲ. ಆದರೆ ರ‍್ಯಾಂಕ್ ಪಡೆಯಬೇಕೆಂಬ ಆಸೆ ಇದ್ದರೆ, ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಓದಲೇಬೇಕು. ನಮ್ಮ ತಂದೆ ಐಐಟಿ ಪದವೀಧರ, ಅವರೇ ನನಗೆ ಸ್ಫೂರ್ತಿ. ಪ್ರತಿ ಹಂತದಲ್ಲೂ ನನಗೆ ಪ್ರೋತ್ಸಾಹ ನೀಡಿದ್ದಾರೆ. ನನ್ನ ಸಾಧನೆಯಲ್ಲಿ ಅವರ ಪರಿಶ್ರಮವೇ ಹೆಚ್ಚು. ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆಯಬೇಕೆಂಬ ಆಸೆ ಇದೆ. ನನ್ನ ಗುರಿ ಮುಂಬೈ ಐಐಟಿ ಸೇರುವುದು. ಅಲ್ಲಿ ಸೀಟು ಸಿಗದಿದ್ದರೆ ಚೆನ್ನೈಗೆ ಹೋಗುತ್ತೇನೆ. ನಿತ್ಯ 5ರಿಂದ 6 ಗಂಟೆಯಾದರೂ ಓದಿದರೆ ಎಂಥವರೂ ರ‍್ಯಾಂಕ್ ಗಳಿಸಬಹುದು. -ರಿಷಬ್‌ ಅಡಿಗ 4ನೇ ರ‍್ಯಾಂಕ್‌ (ರಾಜ್ಯಕ್ಕೆ ಮೊದಲ ರ‍್ಯಾಂಕ್) ** ಕಾಮೆಡ್‌–ಕೆ ತುಂಬಾ ಸುಲಭ ನಾನು ಹಾಸ್ಟೆಲ್‌ನಲ್ಲಿ ಇದ್ದೀನಿ, ಹೀಗಾಗಿ ಓದುವುದಕ್ಕೆ ಹೆಚ್ಚು ಸಮಯ ಸಿಗುತ್ತದೆ. ಸ್ನೇಹಿತರ ಜೊತೆ ಹರಟೆ ಹೊಡೆಯುವುದು, ಆಟವಾಡುವುದರ ಜತೆಗೆ ನಿತ್ಯ 4ರಿಂದ 5 ತಾಸು ಓದುತ್ತಿದ್ದೆ. ನಾನು ಜೆಇಇ ಮೇನ್ಸ್ ಅಡ್ವಾನ್ಸ್‌ಡ್‌ಗೆ ಓದುತ್ತಿದ್ದೆ ಅದು ಕಾಮೆಡ್‌–ಕೆ ಪರೀಕ್ಷೆಗೂ ನೆರವಾಯಿತು. ಪರೀಕ್ಷೆ ಆರಂಭವಾಗುವುದಕ್ಕೆ ಒಂದು ವಾರ ಮುಂಚೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಓದಿಕೊಂಡೆ. ಪರೀಕ್ಷೆಯ ಸ್ವರೂಪ ಹೇಗಿರುತ್ತದೆ ಎಂಬುದು ತಿಳಿಯಿತು. ಜೆಇಇ ಮೇನ್ಸ್ ಅಡ್ವಾನ್ಸ್‌ಡ್ ಪರೀಕ್ಷೆಗೆ ಹೋಲಿಸಿದರೆ ಇದು ತುಂಬಾ ಸುಲಭ. ಆದರೆ ಇಲ್ಲಿ ಸಮಯದ ಮೇಲೆ ಹೆಚ್ಚು ಗಮನ ಕೊಡಬೇಕು ಏಕೆಂದರೆ ಒಂದು ಪ್ರಶ್ನೆಗೆ ಉತ್ತರಿಸಲು ಒಂದು ನಿಮಿಷ ಮಾತ್ರ ಕಾಲಾವಕಾಶ ಇರುತ್ತದೆ. ಸಂತೋಷದ ವಿಷಯವೆಂದರೆ ಪ್ರಶ್ನೆಗಳು ಸರಳವಾಗಿರುತ್ತವೆ. ದ್ವಿತೀಯ ಪಿಯು ಎನ್‌ಸಿಆರ್‌ಟಿ ಪಠ್ಯಗಳನ್ನು ಓದಿ ನೆನಪಿಟ್ಟುಕೊಂಡರೆ ಸಾಕು. ನನ್ನ ಸ್ವಂತ ಊರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ. ಅಪ್ಪ–ಅಮ್ಮನನ್ನು ಬಿಟ್ಟು ಬೇರೆ ಊರಿಗೆ ಬಂದು ಓದಬೇಕೆಂದರೆ ಭಯ ಇದ್ದೇ ಇರುತ್ತದೆ. ನಾನು ಹೆದರಿಕೊಂಡಿದ್ದೆ. ಹೆದರಬೇಡ ಒಳ್ಳೆಯದಾಗುತ್ತೆ ಅಂತ ಪೋಷಕರು ಪ್ರೋತ್ಸಾಹ ತುಂಬುತ್ತಿದ್ದರು. ನನ್ನ ಸಾಧನೆಗೆ ಅವರೇ ಕಾರಣ. ಬಿಟ್ಸ್‌ ಪಿಲಾನಿಗೆ (ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸೇರಬೇಕು ಎಂಬುದು ನನ್ನ ಆಸೆ. ಅಲ್ಲಿ ಸೀಟು ಸಿಗದಿದ್ದರೆ ಐಐಟಿ ಹೈದರಾಬಾದ್‌ಗೆ ಸೇರಬೇಕು ಅಂದುಕೊಂಡಿದ್ದೇನೆ. ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರ್ ಆಗಬೇಕು ಎಂಬ ಆಸೆ ಇದೆ. ದಿನಕ್ಕೆ ಇಷ್ಟೇ ಗಂಟೆ ಓದಬೇಕು ಎಂದು ನಾನು ಹೇಳುವುದಿಲ್ಲ. ದಿನಕ್ಕೆ ಎರಡು ಗಂಟೆ ಓದಿದರೂ ಒಂದು ಕ್ಷಣವನ್ನೂ ಗಮನವನ್ನು ಬೇರೆಡೆಗೆ ಮರಳಿಸದೇ ಓದಬೇಕು. ಹೀಗಿದ್ದರೆ ಮಾತ್ರ ರ‍್ಯಾಂಕ್ ಪಡೆಯಲು ಸಾಧ್ಯ. ನಮ್ಮ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಯಾವುದೇ ಸಾಧನಗಳಿಂದ (ಮೊಬೈಲ್.ಟಿ.ವಿ) ದೂರವಿರುವುದು ಒಳ್ಳೆಯದು ಎಂಬುದು ನನ್ನ ಅನಿಸಿಕೆ. ಇಂತಹ ಪರೀಕ್ಷೆಗಳಲ್ಲಿ ಸ್ಪರ್ಧೆ ಸಾಮಾನ್ಯ. ಚೆನ್ನಾಗಿ ಓದಿಕೊಂಡರೆ ಯಾವುದೂ ಕಷ್ಟ ಎಂದು ಎನಿಸುವುದಿಲ್ಲ. ** ಅಪ್ಪ–ಅಮ್ಮನಿಗೆ ಹೆಚ್ಚು ಖುಷಿಯಾಗಿದೆ ಕನಕಪುರ ರಸ್ತೆಯಲ್ಲಿರುವ ದೀಕ್ಷಾ ಸೆಂಟರ್‌ ಫಾರ್ ಲರ್ನಿಂಗ್‌ನಲ್ಲಿ ಓದಿಕೊಂಡೆ, ಬೋಧಕ ಸಿಬ್ಬಂದಿ ಪರೀಕ್ಷೆಗಾಗಿ ಎಲ್ಲ ರೀತಿಯಲ್ಲೂ ಸಹಕಾರ ನೀಡಿದ್ದಾರೆ. ರ‍್ಯಾಂಕ್ ಪಡೆಯುವುದಕ್ಕೆ ದೀಕ್ಷಾ ಪಾತ್ರವೇ ಹೆಚ್ಚಾಗಿದೆ. ಊರು ಮೈಸೂರು, ಎಂಜಿನಿಯರಿಂಗ್ ಪದವಿ ಪ್ರವೇಶಿಸು ವುದಕ್ಕಾಗಿಯೇ ಬೆಂಗಳೂರಿಗೆ ಬಂದೆ. ಎರಡು ವರ್ಷ ಕಷ್ಟಪಟ್ಟು ಓದಿದ್ದಕ್ಕೆ ಉತ್ತಮ ರ‍್ಯಾಂಕ್ ಬಂದಿದೆ. ಈ ಎರಡು ವರ್ಷಗಳಲ್ಲಿ ಯಾವ ಸಂದರ್ಭದಲ್ಲೂ ನನಗೆ ಒತ್ತಡ ಆಗುತ್ತಿದೆ ಎಂದು ಅನಿಸಲಿಲ್ಲ. ನನ್ನ ಪೋಷಕರ ಸಹಕಾರ ಮತ್ತು ಪ್ರೋತ್ಸಾಹವೇ ಇದಕ್ಕೆ ಕಾರಣ. ನನ್ನ ಈ ಸಾಧನೆಗೆ ನನಗಿಂತ ನನ್ನ ಪೋಷಕರೇ ಹೆಚ್ಚು ಸಂತಸ ಪಟ್ಟಿದ್ದಾರೆ. ವಿದ್ಯಾರ್ಥಿನಿಲಯದಲ್ಲಿ ಓದುತ್ತಿರುವುದರಿಂದ ಮೊಬೈಲ್, ಫೇಸ್‌ಬುಕ್‌ಗೆ, ಟಿಕ್‌ಟಾಕ್‌ಗಳಿಗೆಲ್ಲಾ ನಿಷೇಧ ಇರುತ್ತದೆ. ಹೀಗಾಗಿ ಓದಿಕೊಳ್ಳುವುದಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಸದಾ ಓದಿನಲ್ಲಿ ಮಗ್ನರಾಗಿರುವುದು ಕೂಡ ನನ್ನ ಪ್ರಕಾರ ಒಳ್ಳೆಯದಲ್ಲ. ಹೀಗಾಗಿ ವಿವಿಧ ಆಟಗಳನ್ನು ಆಡುತ್ತಿದ್ದೆ. ಯಾವುದಾದರೂ ಒಂದು ಐಐಟಿಯಲ್ಲಿ ಸೀಟು ಸಿಕ್ಕರೆ ಸಾಕು. ಮದ್ರಾಸ್ ಐಐಟಿಯಲ್ಲಿ ಸೀಟು ದೊರೆತರೆ ಖುಷಿಯಾಗುತ್ತದೆ. ಹೊರದೇಶಗಳಲ್ಲಿನ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಆಸೆ ಇಲ್ಲ. ಇಲ್ಲೇ ಏನಾದರೂ ಸಾಧನೆ ಮಾಡಿ ಸ್ವಂತ ಉದ್ದಿಮೆ ಸ್ಥಾಪಿಸಿ ಇನ್ನಷ್ಟು ಜನರಿಗೆ ಕೆಲಸ ಕೊಡಿಸುವ ಉದ್ದೇಶವಿದೆ. ವಿದ್ಯಾಸಂಸ್ಥೆಯ ಕೌಶಲ ನಾನು ಜೆಇಇ ಮೈನ್ಸ್ ಅಡ್ವಾನ್ಸ್‌ಡ್‌ಗಾಗಿ ಸಿದ್ಧತೆ ನಡೆಸುತ್ತಿದ್ದೆ. ಕಾಮೆಡೆ–ಕೆ ಪರೀಕ್ಷೆಯಲ್ಲಿ ನನಗೆ 7ನೇ ರ‍್ಯಾಂಕ್‌ ಬರುವುದಕ್ಕೆ ಅದೇ ಕಾರಣವಾಯಿತು. ನಾನು ಓದುತ್ತಿರುವ ಶ್ರೀಚೈತನ್ಯ ವಿದ್ಯಾಸಂಸ್ಥೆಯವರು ಪರೀಕ್ಷೆ ಎದುರಿಸಲು ಬೇಕಾದ ಎಲ್ಲ ಕೌಶಲಗಳನ್ನೂ ಕಲಿಸಿದ್ದಾರೆ. ನಿತ್ಯ 5 ಗಂಟೆ ಓದುತ್ತಿದ್ದೆ. ನನ್ನ ಈ ಸಾಧನೆಗೆ ಪೋಷಕರ ಬೆಂಬಲ ಹೆಚ್ಚಾಗಿದೆ. ನನ್ನ ತಂದೆ ಮುತ್ತು ಕೃಷ್ಣನ್ ಅವರು ಮಾರ್ಗದರ್ಶನ ನೀಡಿದ್ದಾರೆ. ಪರಿಶ್ರಮ ಪಟ್ಟು ಓದಿದರೆ ರ‍್ಯಾಂಕ್ ತಾನಾಗಿಯೇ ಒಲಿಯುತ್ತದೆ ಎಂಬುದು ನನ್ನ ಭಾವನೆ. ಮದ್ರಾಸ್‌ ಐಐಟಿ ಸೇರಬೇಕೆಂಬುದು ನನ್ನ ಗುರಿ ಮತ್ತು ಆಸೆ. ನಾನು ಪಡೆದಿರುವ ಈ ರ‍್ಯಾಂಕ್ ಅದಕ್ಕೆ ನೆರವಾಗಬಹುದು ಎಂಬ ಭರವಸೆ ಇದೆ. -ಎಂ. ಅಲೋಕ್ ಕೃಷ್ಣ 7ನೇ ರ‍್ಯಾಂಕ್ ** ಹಾಡುಗಳನ್ನು ಕೇಳುತ್ತೇನೆ ಕಾಮೆಡ್‌ ಕೆ ಪರೀಕ್ಷೆ ಎದುರಿಸುವ ಉದ್ದೇಶ ಇರಲಿಲ್ಲ. ನಾನು ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದೆ. ಆ ತಯಾರಿಯೇ ಕಾಮೆಡ್‌ ಕೆ ಪರೀಕ್ಷೆ ಎದುರಿಸುವುದಕ್ಕೆ ಪ್ರೇರಣೆ ತುಂಬಿ ಉತ್ತಮ ರ‍್ಯಾಂಕ್ ಗಳಿಸುವುದಕ್ಕೆ ನೆರವಾಯಿತು. ನಿತ್ಯ 2ರಿಂದ 3 ಗಂಟೆ ಓದುತ್ತಿದ್ದೆ. ನನಗೆ ಮೊದಲಿನಿಂದಲೂ ಫೇಸ್‌ಬುಕ್‌, ಟ್ವಿಟರ್‌, ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮಗಳ ಮೇಲೆ ಆಸಕ್ತಿ ಇಲ್ಲ. ಹೀಗಾಗಿ ಓದುವುದಕ್ಕೆ ಯಾವುದೇ ತೊಂದರೆ ಇರಲಿಲ್ಲ. ನನ್ನ ಶೈಕ್ಷಣಿಕ ಪ್ರಗತಿಗೆ, ಸಾಧನೆಗೆ ನನ್ನ ಪೋಷಕರೇ ಕಾರಣ. ಒತ್ತಡ ಆಗದಂತೆ ನೋಡಿಕೊಳ್ಳುವುದಕ್ಕೆ ಸಂಗೀತ ಆಲಿಸುತ್ತೇನೆ. ಖರಗಪುರ ಐಐಟಿಯಲ್ಲಿ ಸೀಟು ಪಡೆಯಬೇಕೆಂಬ ಆಸೆ ಇದೆ. ಇಲ್ಲದಿದ್ದರೆ ಬಿಟ್ಸ್ ಪಿಲಾನಿಗೆ ಸೇರುವ ಆಸೆ ಇದೆ. -ಶಬರಿ ಎಸ್‌. ನಾಯರ್‌ 10ನೇ ರ‍್ಯಾಂಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.