ಕನಸಿನ ಹೊಸ ಕಾಲೇಜಿನಲ್ಲಿ ಸ್ನೇಹಲೋಕದ ಪುಳಕದಲ್ಲಿ.. ಶೈ ಕ್ಷಣಿಕ ಬದುಕಿನ ಒಂದು ಮಗ್ಗುಲಿನಿಂದ ಮತ್ತೊಂದು ಕಡೆಗೆ ಹೊರಳಿಕೊಳ್ಳುವ ಸಮಯ ಕಾಲೇಜ್. ಕಾಲೇಜು ಮೆಟ್ಟಿಲು ಹತ್ತುವುದು ಚಿಗುರುಮೀಸೆಯ ಬಹಳಷ್ಟು ವಿದ್ಯಾರ್ಥಿಗಳಿಗೆ ಸಂತಸದ ಕ್ಷಣವಾಗಿದ್ದರೆ, ಕೆಲವರಿಗೆ ಮಾತ್ರ ಅದೇನೋ ಅತಂಕ. ಹುಡುಗಿಯರಿಗೆ ನಿತ್ಯವೂ ಮೇಕಪ್ ಮಾಡಿಕೊಳ್ಳುವ ಪುಳಕ. ನಗರದ ಬಹುತೇಕ ಕಾಲೇಜುಗಳಲ್ಲಿ ಹೊಸ ದುಂಬಿಗಳ ಝೇಂಕಾರ ಶುರುವಾಗಿದೆ. 10ನೇ ತರಗತಿವರೆಗೆ ಇದ್ದ ಕೆಲ ನಿಯಮಗಳು ಈಗಿಲ್ಲ. ಕೆಲ ಕಾಲೇಜುಗಳನ್ನು ಹೊರತುಪಡಿಸಿದರೆ, ಸಮವಸ್ತ್ರದ ಬೇಲಿ ಇಲ್ಲಿಲ್ಲ. ಹೆಗಲ ಮೇಲೆ ಮಣಭಾರದ ಬ್ಯಾಗ್ ಹೊರುವ ಶಿಕ್ಷೆಯಿಲ್ಲ. ಒಂದೋ ಎರಡೋ‍‍ಪುಸ್ತಕ ಅಥವಾ ನೋಟ್ಸ್ ಇದ್ದರೆ ಆಯಿತು. ಟಿಫಿನ್ ಬಾಕ್ಸ್ ತರುವವರ ಸಂಖ್ಯೆಯೂ ಕಡಿಮೆಯೇ ಎನ್ನುತ್ತಾ ತಮ್ಮ ಕಾಲೇಜಿನ ಮೊದಲ ಅನುಭವಗಳನ್ನು ತೆರೆದಿಟ್ಟಿದ್ದು ಎಂಇಎಸ್ ಕಾಲೇಜಿನ ಚಂದನ್. ‘ಚೆಂದದ ಹುಡುಗಿಯರೂ ಇದಾರೆ ಸಾರ್’ ಅಂತಾ ಕಣ್ಣು ಮಿಟುಕಿಸಿ, ತುಂಟು ನಗೆ ಬೀರಿದ. ಶೇಷಾದ್ರಿಪುರಂ ಕಾಲೇಜಿನ ವೆಂಕಟೇಶ್ ಹಾಗೂ ಆನಂದ್ ಅವರಿನ್ನೂ ಇನ್ನೂ ಹೈಸ್ಕೂಲ್ ಮೂಡ್‌ನಿಂದ ಹೊರಬಂದಂತೆ ಕಾಣಲಿಲ್ಲ. ಶಿಸ್ತಿನ ಸಿಪಾಯಿಗಳಂತೆ ಕಾಲೇಜಿಗೆ ತಪ್ಪದೇ ಹಾಜರಾಗುತ್ತಿರುವ ಇವರಿಗೆ ಸ್ನೇಹಿತರು ಎಂದರೆ ಪ್ರಾಣ. ಪ್ರೌಢಶಾಲೆಯಲ್ಲಿ ಒಂದೇ ತರಗತಿಯಲ್ಲಿ ಕಲಿತಿದ್ದ ಇವರ ಇನ್ನಿತರ ಗೆಳೆಯರು ಇದೀಗ ವಿವಿಧ ಕಾಲೇಜುಗಳಲ್ಲಿ ಹಂಚಿಹೋಗಿದ್ದಾರೆ. ‘ಕಾಲೇಜು ಲೈಫ್ ಒಂಥರಾ ಚೆನ್ನಾಗಿದೆ’ ಎಂದು ವೆಂಕಟೇಶ್ ಮಾತು ಆರಂಭಿಸಿದರು. ‘ಯೂನಿಫಾರ್ಮ್ ಇಲ್ಲ ಅಂದುಕೊಂಡು ಖುಷಿಯಾಗಿದ್ದೆ. ಆದರೆ ಇದೇ ವರ್ಷದಿಂದ ನಮ್ಮ ಕಾಲೇಜಿನಲ್ಲೂ ಸಮವಸ್ತ್ರ ಕಡ್ಡಾಯ ಮಾಡಿದ್ದಾರೆ’ ಎಂದು ಕೊಂಚ ಬೇಸರ ವ್ಯಕ್ತಪಡಿಸಿದರು. ಒಂದು ವಾರದ ಅವಧಿಯಲ್ಲಿ ಸಾಕಷ್ಟು ಹೊಸ ಹುಡುಗರು ಪರಿಚಯವಾಗಿದ್ದರೂ, ತಮ್ಮ ಹಳೆಯ ಗೆಳೆಯರನ್ನು ಹುಡುಕಿಕೊಂಡು ಇವರು ಎಂಇಎಸ್ ಕಾಲೇಜಿಗೂ ಎಡತಾಕುತ್ತಾರೆ. ‘ಹೈಸ್ಕೂಲ್‌ನಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಪಾಠ ಕೇಳಲೇಬೇಕಿತ್ತು. ಇಲ್ಲಿ ಹಾಗಿಲ್ಲ. ಬೆಳಿಗ್ಗೆ 7ಕ್ಕೆ ಶುರುವಾಗುವ ತರಗತಿಗಳು 11.30ಕ್ಕೆ ಬಹುತೇಕ ಮುಗಿಯುತ್ತವೆ. ವಿಶೇಷ ತರಗತಿ ಇದ್ದರೆ ಮಾತ್ರ ಒಂದು ಗಂಟೆ ತಡವಾಗುತ್ತದೆ’ ಎಂಬುದು ಆನಂದ್ ಮಾತು. ಸಮಯದ ವಿಚಾರದಲ್ಲಿ ಕಾಲೇಜ್ ದಿನಗಳೇ ಮೇಲು ಎನ್ನುತ್ತಾರೆ. ವಾಣಿಜ್ಯ ವಿಭಾಗ ತೆಗೆದುಕೊಂಡಿರುವ ಅವರಿಗೆ ಲೆಕ್ಕ ಪರಿಶೋಧಕ (ಸಿ.ಎ) ಆಗುವ ಆಸೆ. ಶಾಲಾ ಸಮಯದ ಹುಡುಗುತನ ಕ್ರಮೇಣ ಮಾಯವಾಗಿ ಜವಾಬ್ದಾರಿ ಹೆಚ್ಚಿಸುವ ಕಾಲೇಜು ಎಂಬ ತಿರುವಿನ ಕಾಲಘಟ್ಟದಲ್ಲಿರುವ ಇವರ ಮೊಗದಲ್ಲಿ ಸಾಧನೆಯ ತುಡಿತಕ್ಕೂ ಕಡಿಮೆಯೇನಿಲ್ಲ. ದ್ವಿತೀಯ ಪಿಯು ಬಳಿಕ ಎದುರಾಗುವ ಸಿಇಟಿ, ನೀಟ್, ಕಾಮೆಡ್‌ ಕೆ ಮೊದಲಾದ ಪ್ರವೇಶ ಪರೀಕ್ಷೆಗಳಿಗೆ ಈಗಿನಿಂದಲೇ ಸಿದ್ಧವಾಗುವ ಅನಿವಾರ್ಯತೆ. ಮಕ್ಕಳಿಗಿಂತ ಪೋಷಕರಿಗೇ ಹೆಚ್ಚು ಆತಂಕ ಮಕ್ಕಳು ಕಾಲೇಜು ಮೆಟ್ಟಿಲೇರುವ ಸಮಯ ಅವರಿಗಿಂತ ಹೆಚ್ಚು ನಮಗೆ ಆತಂಕವಿದೆ. ಶಾಲೆಗಳಲ್ಲಾದರೆ ಶಿಕ್ಷಕರ ನಿಗಾ ಇರುತ್ತಿತ್ತು. ಕಾಲೇಜುಗಳಲ್ಲಿ ಹಾಗಲ್ಲ, ಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ಇರುತ್ತದೆ. ಆ ಸ್ವಾತಂತ್ರ್ಯವನ್ನು ಅವರನ್ನು ಎಲ್ಲಿ ಹಾಳು ಮಾಡಿ ಬಿಡುತ್ತದೆ ಎಂಬ ಚಿಂತೆ ಸದಾ ಕಾಡುತ್ತಿರುತ್ತದೆ. ಹೊಸ ಸ್ನೇಹಿತರು, ಪಠ್ಯಕ್ರಮ ಮತ್ತು ಪರಿಸರಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ ಮತ್ತು ಭವಿಷ್ಯ ರೂಪಿಸುವ ಹಂತವನ್ನು ಯಶಸ್ವಿಯಾಗಿ ಹೇಗೆ ನಿಭಾಯಿಸುತ್ತಾರೆ ಎಂಬ ಸಹಜ ಆತಂಕ ಕಾಡುತ್ತಿದೆ. ಒಂದು ರೀತಿಯಲ್ಲಿ ಸಂತೋಷವೂ ಆಗುತ್ತಿದೆ ಎಂದು ಮಕ್ಕಳನ್ನು ಕಾಲೇಜಿಗೆ ಬಿಡಲು ಬಂದಿದ್ದ ಗಾಯತ್ರಿ ನಗರದ ಮಂಜುಳಾ ಮತ್ತು ಶಿವಕುಮಾರ್‌ ದಂಪತಿ ದುಗುಡ ಹಂಚಿಕೊಂಡರು. ಎಸ್‌ಎಸ್‌ಎಲ್‌ಸಿ ನಂತರ ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ಮುಂದೆ ಒಳ್ಳೆಯ ಪದವಿ ಕೋರ್ಸ್‌ಗೆ ಸೇರಿದರೆ ನಿರಮ್ಮಳರಾಗುತ್ತೇವೆ. ಮಕ್ಕಳಿಗೆ ಅವರ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಒಳ್ಳೆಯ ಸಹಪಾಠಿಗಳ ಸ್ನೇಹ ಮಾಡುವಂತೆ ಕಿವಿಮಾತು ಹೇಳಿದ್ದೇವೆ. 24 ಗಂಟೆ ಅವರ ಮೇಲೆ ಕಣ್ಣಿಡಲು ಸಾಧ್ಯವಿಲ್ಲ. ಸ್ವಯಂಶಿಸ್ತು ಮತ್ತು ನಿಯಂತ್ರಣ ಮುಖ್ಯ ಎಂದು ತಿಳಿ ಹೇಳಲಾಗಿದೆ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.