ಭೂ ವಿಜ್ಞಾನದಲ್ಲಿ ಅವಕಾಶ ಹೇಗೆ? ಭೂ ವಿಜ್ಞಾನ (ಅರ್ಥ ಸೈನ್ಸ್‌ – ಜಿಯಾಲಜಿ) ದಲ್ಲಿ ಪದವಿ ಮುಗಿಸಿದವರಿಗೆ ಅಥವಾ ಸ್ನಾತಕೋತ್ತರ ವಿಭಾಗದಲ್ಲಿ ಈ ವಿಷಯವನ್ನು ಓದಿದವರಿಗೆ ಹಲವು ಉದ್ಯೋಗಾವಕಾಶಗಳು ಕಾಯುತ್ತಿವೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಿಯುಸಿ ಮುಗಿಸಿದ ನಂತರ ಸಾಂಪ್ರದಾಯಿಕ ಕೋರ್ಸ್‌ಗಳ ಜೊತೆಗೆ (ಪಿಸಿಎಂ, ಸಿಬಿಝೆಡ್) ಪದವಿ ಮುಗಿಸಿ ಸ್ನಾತಕೋತ್ತರ ಅದಕ್ಕಿಂತ ಹೆಚ್ಚಿನ ಸಂಶೋಧನೆ, ಅಧ್ಯಯನ ಕೈಗೊಳ್ಳಲು ಭೂ ವಿಜ್ಞಾನ ವಿಷಯದಲ್ಲಿ ಅನೇಕ ಅವಕಾಶಗಳಿವೆ. ವೈದ್ಯಕೀಯ ಅಥವಾ ತಾಂತ್ರಿಕ ಶಿಕ್ಷಣ ಕೈತಪ್ಪಿತಲ್ಲ ಎಂದು ಕೊರಗುವ ಮಾತಿಲ್ಲ. ಎಂ.ಎಸ್‌ಸಿ., ಪಿಎಚ್.ಡಿ. ಮಾಡಿದವರು ಉದ್ಯೋಗಾವಕಾಶಗಳಿಗೆ ಹೊರ ರಾಜ್ಯ ಅಥವಾ ವಿದೇಶಗಳಿಗೆ ತೆರಳಬಹುದು. ಕಬ್ಬಿಣ, ಚಿನ್ನ ಮೊದಲಾದ ಅದಿರಿನ ನಿಕ್ಷೇಪಗಳಲ್ಲಿ, ಸಿಮೆಂಟ್‌ನ ಉದ್ಯಮಗಳಲ್ಲಿ ಭೂ ವಿಜ್ಞಾನಿಯಾಗಿ ಮತ್ತು ಭೂ ಜಲಶಾಸ್ತ್ರ (ಹೈಡ್ರೊ ಜಿಯಾಲಜಿ) ಅಧ್ಯಯನ ಮಾಡಿ ಜಲಸಂಶೋಧನ, ಜಲ ಮರುಪೂರಣ, ಮಳೆ ನೀರು ಸಂಗ್ರಹ ತಜ್ಞರಾಗಿ ಕೆಲಸ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮಳೆ ನೀರು ಸಂರಕ್ಷಣೆ ಹಳ್ಳಿ ಮತ್ತು ನಗರಗಳಲ್ಲಿ ಪ್ರಾಮುಖ್ಯ ಪಡೆದಿರುವುದರಿಂದ ಈ ವಲಯದಲ್ಲಿ ಸಾಕಷ್ಟು ಅವಕಾಶಗಳಿವೆ. ಭೂ ವಿಜ್ಞಾನದಲ್ಲಿ ಹಲವು ವಿಶೇಷ ಶಾಖೆಗಳಿವೆ. ಇದು ಎಲ್ಲಾ ವಿಭಾಗ (ಜಿಯೊಫಿಸಿಕ್ಸ್‌, ಜಿಯೊಕೆಮೆಸ್ಟ್ರಿ, ಪೆಲೆಂಟೊಲಜಿ ಇತ್ಯಾದಿ) ದ ವಿಷಯಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಅನ್ವಯಿಕ ಭೂ ವಿಜ್ಞಾನ (ಅಪ್ಲೈಡ್‌ ಜಿಯಾಲಜಿ) ಅಭ್ಯಸಿಸಿದವರು ಮುಂದೆ ಸಂಶೋಧನೆ ಅಥವಾ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಭೂ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಬಹುದು. ಇದಕ್ಕಾಗಿ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಹೈಡ್ರೊ ಜಿಯಾಲಜಿ: ಜಲಮಂಡಳಿ, ಕೇಂದ್ರ, ರಾಜ್ಯ ಸರ್ಕಾರದ ಅಧೀನದ ಜಿಲ್ಲಾ ಪಂಚಾಂತ್ ಎಂಜನಿಯರಿಂಗ್ ವಿಭಾಗಗಳಲ್ಲಿ ಭೂ ಜಲವಿಜ್ಞಾನಿಯಾಗಿ ಕಾರ್ಯನಿರ್ವಹಿಸಬಹುದು. ಜಲಾನಯನ ಇಲಾಖೆಗಳಲ್ಲಿ ಪ್ರಾಜೆಕ್ಟ್ ಸೈಂಟಿಸ್ಟ್, ಮಳೆ ನೀರು ಸಂಗ್ರಹ ತಜ್ಞರಾಗಿ ಕೆಲಸ ಮಾಡಬಹುದು. ಮಿನರಲ್‌ ಪ್ರೊಸೆಸಿಂಗ್‌: ಗಣಿ ಮತ್ತು ಗ್ರಾನೈಟ್ ಕ್ವಾರಿಗಳಲ್ಲಿ ಭೂ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಬಹುದು. ಮೀಟಿರಿಯೊಲಜಿ: ಹವಮಾನ ಇಲಾಖೆಯಲ್ಲಿ ಸುನಾಮಿ ಭೂಕಂಪನ ಮುಂತಾದ ಪ್ರಕೃತಿ ವಿಕೋಪಗಳ ಪರಿಣಾಮ, ನಿರ್ವಹಣೆ ವಿಭಾಗದಲ್ಲಿ ಹವಾಮಾನ ತಜ್ಞರಾಗಿ ಉದ್ಯೋಗಕ್ಕೆ ಸೇರಿಕೊಳ್ಳಬಹುದು. ಪೆಟ್ರೊಲೊಜಿ: ಇದು ಶಿಲೆಗಳ ಬಗ್ಗೆ ಉನ್ನತ ಅಧ್ಯಯನ ಸಂಶೋಧನೆ ಕೈಗೊಳ್ಳಲು ಅನುಕೂಲವಾಗಿದೆ. ವಿದೇಶಗಳಲ್ಲಿ ಬೇಡಿಕೆ ಜಾಸ್ತಿ. ರಿಮೋಟ್‌ ಸೆನ್ಸಿಂಗ್‌ ಅಪ್ಲಿಕೇಶನ್ಸ್‌: ಇತ್ತೀಚೆಗೆ ಈ ವಿಭಾಗಕ್ಕೆ ಬೇಡಿಕೆ ಹೆಚ್ಚುತ್ತಿದೆ. ಉಪಗ್ರಹಗಳ ಛಾಯಾಚಿತ್ರ ಅಧ್ಯಯನ, ಭೂಮಿಯ ಮೇಲ್ಮೈ ಲಕ್ಷಣಗಳನ್ನು ಇದರ ಸಹಾಯದಿಂದ ಅಭ್ಯಸಿಸಿ ನಕ್ಷೆ ತಯಾರಿಸುವುದು. ಇದಕ್ಕೆ ಗಣಕ ಯಂತ್ರದ ತಂತ್ರಾಂಶಗಳ ಜ್ಞಾನ ಅವಶ್ಯಕ. ಇದನ್ನು ಅಭ್ಯಸಿಸಿದವರು ಇಸ್ರೊ, ನಾಸಾ, ಕೆಎಸ್ಆರ್ ಸ್ಯಾಕ್ ( ) ಗಳಲ್ಲಿ ಕಾರ್ಯನಿರ್ವಹಿಸಬಹುದು. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಇದರ ಶಾಖೆಗಳಿವೆ. ಪೆಲೆಂಟೊಲಜಿ: ಇದು ಪಳಿಯುಳಿಕೆಗಳ ಅಧ್ಯಯನ. ಭೂಮಿಯ ಕಾಲಮಾನ, ಅಲ್ಲಿಂದ ಇಲ್ಲಿಯವರೆಗೆ ಆಗಿರುವ ಭೂಮಿಯ ಮೇಲ್ಮೈ ಲಕ್ಷಣಗಳು, ಭೂ ಇತಿಹಾಸನ್ನು ಅರಿಯಬಹುದು. ಮರೈನ್‌ ಜಿಯಾಲಜಿ: ಸಾಗರ ಭೂ ವಿಜ್ಞಾನ ಅಧ್ಯಯನ ಅಭ್ಯಸಿಸಿದವರಿಗೆ ಸಾಗರದ ಬಗ್ಗೆ ಉನ್ನತ ಅಧ್ಯಯನ, ಸಂಶೋಧನೆ ಕೈಗೊಳ್ಳಲು ಅವಕಾಶವಿದೆ. ಭಾರತ ಸರ್ಕಾರದ ಒಎನ್‌ಜಿಸಿಯಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ. (ಲೇಖಕ ಚಿತ್ರದುರ್ಗದಲ್ಲಿ ಭೂ ವಿಜ್ಞಾನಿ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.