ಸಿ.ಎಸ್‌ಗೂ ಸಿ.ಎಯಷ್ಟೇ ಮಹತ್ವ ಸರ್, ನಾನು ಅಂತಿಮ ಬಿ.ಕಾಂ. ಓದುತ್ತಿದ್ದು ಸಿ.ಎಸ್‌. ಮಾಡಬೇಕೆಂದಿದ್ದೇನೆ. ಅದಕ್ಕೆ ಇರುವ ಸ್ಕೋಪ್‌, ಉದ್ಯೋಗಾವಕಾಶ ಮತ್ತು ಸಂಪೂರ್ಣ ತಯಾರಿಯನ್ನು ಹೇಗೆ ಮಾಡಬೇಕೆಂದು ತಿಳಿಸಿಕೊಡಿ. -ಸುನಿ, ಊರು ಬೇಡ ಸುನಿ, ಸಿ.ಎಸ್. ಅಥವಾ ಕಂಪನಿ ಸೆಕ್ರೆಟರಿ ಶಿಕ್ಷಣವು ಸಿ.ಎ. ಮತ್ತು ಸಿ.ಎಮ್.ಎ.ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಷ್ಟೇ ಪ್ರಾಮುಖ್ಯತೆ‌ ಪಡೆದುಕೊಳ್ಳುವ ಪರೀಕ್ಷೆಯಾಗಿದ್ದು ವಾಣಿಜ್ಯ ವಿಭಾಗದ ಅನೇಕ ವಿದ್ಯಾರ್ಥಿಗಳು ಪ್ರಯತ್ನಿಸುತ್ತಾರೆ. ಆದರೆ ಇದಕ್ಕೆ ವಾಣಿಜ್ಯ ವಿಭಾಗ ಮಾತ್ರವಲ್ಲದೆ ಯಾವುದೇ ವಿಭಾಗದ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆಯಬಹುದು. ಏನಿದು ಕಂಪನಿ ಸೆಕ್ರೆಟರಿ? ಕಂಪನಿ ಸೆಕ್ರೆಟರಿ ಕೋರ್ಸ್‌ ಅನ್ನು "ದ ‌ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ" () ಸಂಸ್ಥೆಯು ನಡೆಸಿಕೊಡುತ್ತದೆ.ಸಿ.ಎಸ್. ಪರೀಕ್ಷೆ ತೇರ್ಗಡೆ ಆದ‌ ನಂತರ ಕಂಪನಿ ಸೆಕ್ರೆಟರಿ ಆಗಿ ಕಂಪನಿಯ ಆಡಳಿತ, ಕಾನೂನು,ಶಾಸನ ಮತ್ತು ಕಾಂಪ್ಲಯೆನ್ಸ್ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಬಹುದು.ಸಿ.ಎ. ಮತ್ತು ಸಿ.ಎಮ್.ಎ. ಕೋರ್ಸ್‌ಗಳು ವಾಣಿಜ್ಯ, ಅಕೌಂಟ್, ಆಡಿಟ್ ಮತ್ತು ಖರ್ಚು–ವೆಚ್ಚಗಳ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಿದರೆ ಸಿ.ಎಸ್. ಕೋರ್ಸ್‌ ಕಂಪನಿಗಳಿಗೆ ಸಂಬಂಧಿಸಿದ ಕಾನೂನು ಮತ್ತು ಆಡಳಿತಾತ್ಮಕ ಕೆಲಸಗಳನ್ನು ನೋಡಿಕೊಳ್ಳುವ ಉದ್ಯೋಗಗಳನ್ನು ನೋಡಿಕೊಳ್ಳುತ್ತದೆ. ಶೈಕ್ಷಣಿಕ ಅರ್ಹತೆ ಮತ್ತು ಪರೀಕ್ಷಾ ಹಂತಗಳು ಸಿ.ಎಸ್. ಪರೀಕ್ಷೆಯು ಮೂರು ಹಂತದ ಪರೀಕ್ಷೆ ಆಗಿದ್ದು, ಫೌಂಡೇಷನ್ ಪ್ರೋಗ್ರಾಮ್, ಎಕ್ಸಿಕ್ಯುಟಿವ್ ಪ್ರೋಗ್ರಾಮ್, ಪ್ರೊಫೆಷನಲ್ ಪ್ರೋಗ್ರಾಮ್‌ಗಳೆಂದು ಅವುಗಳನ್ನು ಕರೆಯುಲಾಗುತ್ತದೆ. ಈ ಮೂರು ಹಂತಗಳಿಗೂ ತನ್ನದೇ ಆದ ಶೈಕ್ಷಣಿಕ ಅರ್ಹತೆಗಳಾಗಿರಬೇಕು‌‌‌. ಫೌಂಡೇಷನ್ ಪ್ರೋಗ್ರಾಮ್: ಫೌಂಡೇಷನ್ ಪ್ರೋಗ್ರಾಂ ಅನ್ನು 10 + 2 (ದ್ವೀತಿಯ ಪಿ.ಯು.ಸಿ.) ಪಾಸ್ ಆದವರು ಓದಲು ಅರ್ಹತೆ ಹೊಂದಿರುತ್ತಾರೆ. ಲಲಿತಕಲೆಗಳನ್ನು ಹೊರತುಪಡಿಸಿ ಕಲೆ, ವಿಜ್ಞಾನ ಅಥವಾ ವಾಣಿಜ್ಯ ವಿಭಾಗ ಅಥವಾ ಪದವಿಪೂರ್ವ ಶಿಕ್ಷಣಕ್ಕೆ ಸಮಾನವಾದ ಶೈಕ್ಷಣಿಕ ಅರ್ಹತೆ ಹೊಂದಿರುವ ಯಾವುದೇ ವಿದ್ಯಾರ್ಥಿಗಳು ಪಡೆಯಬಹುದು. ಎಕ್ಸಿಕ್ಯುಟಿವ್ ಪ್ರೋಗ್ರಾಮ್: ದ್ವೀತಿಯ ಪಿ.ಯು.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿ.ಎಸ್. ಫೌಂಡೇಷನ್ ಪ್ರೋಗ್ರಾಂ ಪಾಸ್ ಆಗಿರುವ ಅಥವಾ ಲಲಿತ ಕಲೆಯನ್ನು ಹೊರತುಪಡಿಸಿ ಯಾವುದೇ ವಿಭಾಗದಲ್ಲಿ ಪದವಿ ಪಡೆದವರು ಎಕ್ಸಿಕ್ಯುಟಿವ್ ಪ್ರೋಗ್ರಾಮ್‌ಗೆ ನೋಂದಣಿ ಮಾಡಿಕೊಳ್ಳಬಹುದು. ಪ್ರೊಫೆಷನಲ್ ಪ್ರೋಗ್ರಾಮ್: ಎಕ್ಸಿಕ್ಯುಟಿವ್ ಪ್ರೋಗ್ರಾಮ್ ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣರಾಗಿರುವ ಯಾವುದೇ ಪದವಿಧರರು (ಲಲಿತಕಲೆಯನ್ನು ಹೊರತುಪಡಿಸಿ) ನೋಂದಣಿ ಮಾಡಿಕೊಳ‍್ಳಬಹುದು. ಪ್ರತಿ ಹಂತದಲ್ಲೂ ಬೇರೆ ಬೇರೆ ವಿಷಯಗಳನ್ನು ಓದಿ ತೇರ್ಗಡೆ ಹೊಂದಬೇಕು. ಆ ವಿಷಯಗಳು ಯಾವವು, ಯಾವಾಗ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂಬುದರ ವಿವರಗಳಿಗೆ ಮತ್ತು ಅವುಗಳಿಗೆ ನೋಂದಣಿ ಮಾಡಿಕೊಳ್ಳಲು .. ವೆಬ್‌ಸೈಟ್‌ ಅನ್ನು ಪರಿಶೀಲಿಸಿ. ಖರ್ಚು: ಸರ್ಕಾರ ನಿಗದಿಪಡಿಸಿರುವಂತೆ ಫೌಂಡೇಷನ್ ಪ್ರೋಗ್ರಾಮ್‌ಗೆ 4500 ರೂಪಾಯಿ, ಎಕ್ಸಿಕ್ಯುಟಿವ್ ಪ್ರೋಗ್ರಾಮ್‌ಗೆ ಸುಮಾರು 8000– 12000 ರೂಪಾಯಿ ಹಾಗೂ ಪ್ರೊಫೆಷನಲ್ ಪ್ರೋಗ್ರಾಮ್‌ಗೆ 1200 ರೂಪಾಯಿ ಶುಲ್ಕ ತಗಲುತ್ತದೆ. ಇದು ಕನಿಷ್ಠ ಶುಲ್ಕವಾಗಿದ್ದು ಉತ್ತಮ ಸಂಸ್ಥೆಗಳಿಂದ ತರಬೇತಿ ಪಡೆಯುವುದಾದರೆ ಅದಕ್ಕೆ ಪ್ರತ್ಯೇಕವಾಗಿ ಆಯಾ ಸಂಸ್ಥೆ ನಿಗದಿಪಡಿಸಿರುವ ಶುಲ್ಕವನ್ನು ನೀಡಬೇಕಾಗುತ್ತದೆ. ಸರ್ಕಾರಿ ನಿಯಮಗಳ ಪ್ರಕಾರ ಕಂಪನಿಗಳು ಕಂಪನಿ ಸೆಕ್ರೆಟರಿಗಳನ್ನು ನೇಮಕಾತಿ ಮಾಡಿಕೊಳ್ಳುವುದು ಕಡ್ಡಾಯವಾಗಿರುವುದರಿಂದ ಕಂಪನಿ ಸೆಕ್ರೆಟರಿ ಕೋರ್ಸ್‌ನ ನಂತರದ ಅವಕಾಶಗಳು ಹಿಂದಿಗಿಂತ ಜಾಸ್ತಿ ಆಗುತ್ತಿವೆ. ಖಾಸಗಿ ಕಂಪನಿಗಳಲ್ಲಿ ಕಂಪನಿ ಸೆಕ್ರೆಟರಿ ಆಗಿ ಕಾರ್ಯ ನಿರ್ವಹಿಸುವ ಅವಕಾಶಗಳಿರುತ್ತವೆ. ಕಂಪನಿಯ ಆಡಳಿತ, ಕಾನೂನು, ಶಾಸನ ಮತ್ತು ಕಾಂಪ್ಲಯೆನ್ಸ್ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಕಂಪನಿ ಸೆಕ್ರೆಟರಿ ಪರೀಕ್ಷೆಯ ಜೊತೆಗೆ ದೂರ ಶಿಕ್ಷಣದಲ್ಲಿ ಎಲ್.ಎಲ್.ಬಿ. ಓದಿದರೆ ಹೆಚ್ಚು ಅವಕಾಶಗಳು ಲಭಿಸುತ್ತವೆ ಮತ್ತು ಮಾಡುವ ಕೆಲಸಗಳಿಗೂ ಪೂರಕವಾಗಿರುತ್ತದೆ. ಸರ್‌, ನಾನು ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿ.ಇ. ಮಾಡುತ್ತಿದ್ದು, 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ನನಗೆ ಈ ವಿಷಯದಲ್ಲಿ ಆಸಕ್ತಿ ಇಲ್ಲ. ಆದರೆ ಎಂಜಿನಿಯರಿಂಗ್‌ನಲ್ಲಿ ಉದ್ಯೋಗ ಸಿಗಬಹುದು ಅಂತ ಈ ಓದಿನಲ್ಲಿ ನಾಲ್ಕು ವರ್ಷ ಕಳೆದಿದ್ದೇನೆ. ನನಗೆ ಯುಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿ ಇದೆ. ಇಂತಹ ಗೊಂದಲಗಳ ಮಧ್ಯೆ ನನ್ನ ಔದ್ಯೋಗಿಕ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದು ಗೊತ್ತಾಗುತ್ತಿಲ್ಲ. ನನಗೆ ಸಹಾಯ ಮಾಡಿ. -ರಾಧಾ ಎಂ.ಆರ್‌., ಊರು ಬೇಡ ರಾಧಾ, ಈ ಹಂತಗಳಲ್ಲಿ ವೃತ್ತಿ ಯೋಜನೆಗೆ ಸಂಬಂಧಿಸಿದ ದ್ವಂದ್ವಗಳು ಸರ್ವೆ ಸಾಮಾನ್ಯ. ಹಾಗಾಗಿ ಈ ದ್ವಂದ್ವಗಳ ಬಗ್ಗೆ ಜಾಸ್ತಿ ಆಲೋಚನೆ ಮಾಡದೆ ಈ ದ್ವಂದ್ವವನ್ನು ಪರಿಹರಿಸುವ ಬಗ್ಗೆ ಆಲೋಚನೆ ಮಾಡಿ. ನಿಮಗೆ ಎಂಜಿನಿಯರಿಂಗ್ ವಿಷಯದ ಮೇಲೆ ಯಾಕೆ ಆಸಕ್ತಿ ಇಲ್ಲ? ಯು.ಪಿ.ಎಸ್.ಸಿ. ಅಥವಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿ ಯಾವ ಕಾರಣಕ್ಕಾಗಿ ಇದೆ. ಯು.ಪಿ.ಎಸ್.ಸಿ. ಪರೀಕ್ಷೆಯಲ್ಲೂ ಪ್ರತ್ಯೇಕವಾಗಿ ಯಾವ ಪರೀಕ್ಷೆ ಬರೆಯಲು ಇಚ್ಛಿಸುತ್ತೀರಿ ಮತ್ತು ಕಾರಣವೇನು? ಈ ಪ್ರಶ್ನೆಗಳಿಗೆ ಯೋಚಿಸಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ. ಇದರ ಜೊತೆಗೆ ನಿಮ್ಮ ಆಸಕ್ತಿ ಯಾವುದು, ಯಾವ ಚಟುವಟಿಕೆಗಳು ನಿಮಗೆ ಖುಷಿ ನೀಡುತ್ತವೆ ಮತ್ತು ನಿಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತದೆ ಎಂದು ತಿಳಿದುಕೊಳ್ಳಿ. ಇದಾದ ನಂತರ ನಿಮ್ಮ ಈ ವ್ಯಕ್ತಿತ್ವಕ್ಕೆ ಯಾವ ವೃತ್ತಿ ಆಯ್ಕೆ ಸರಿ ಹೊಂದುತ್ತದೆ ಎಂದು ತಿಳಿಯಲು ಪ್ರಯತ್ನಿಸಿ. ಆ ಪ್ರಕಾರ ನಿಮ್ಮ ಮುಂದಿನ ನಡೆಯನ್ನು ನಿರ್ಧರಿಸಿ. ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಪದವಿಯನ್ನು ಒಳ್ಳೆಯ ಓದು ಮತ್ತು ಅಂಕದೊಂದಿಗೆ ಪೂರೈಸಿ. ಹೆಚ್ಚಿನ ಎಲ್ಲ ಯು.ಪಿ.ಎಸ್.ಸಿ. ಮತ್ತು ಕೆ.ಪಿ.ಎಸ್.ಸಿ. ಪರೀಕ್ಷೆಗಳಿಗೆ ಶೇ 55 ಅಂಕದೊಂದಿಗೆ ಪದವಿ ತೇರ್ಗಡೆ ಆಗಬೇಕಿರುತ್ತದೆ. ಪದವಿ ಆಧಾರದ ಮೇಲೆ ಬರೆಯಬಹುದಾದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿದು ನಿಮ್ಮ ಆಸಕ್ತಿ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಪದವಿಯ ನಂತರ ಯಾವುದೇ ವೈಯಕ್ತಿಕ ಜವಾಬ್ದಾರಿಗಳಿರದಿದ್ದರೆ ಮನೆಯಲ್ಲಿ ವೈಯಕ್ತಿಕವಾಗಿ ಅಥವಾ ಕೋಚಿಂಗ್ ಸೆಂಟರ್‌ಗಳ ಸಹಾಯದಿಂದ ಪರೀಕ್ಷಾ ತಯಾರಿ ನಡೆಸಿ. ಒಂದು ವೇಳೆ ಹಣಕಾಸಿನ ಜವಾಬ್ದಾರಿಗಳಿದ್ದರೆ ಕೆಲಸ ಮಾಡುತ್ತ ಸಮಯ ಹೊಂದಿಸಿಕೊಂಡು ಸಂಜೆ ಮತ್ತು ಬೆಳಗಿನ ಸಮಯದಲ್ಲಿ ಪರೀಕ್ಷಾ ತಯಾರಿ ನಡೆಸಬಹುದು. ಶುಭಾಶಯ. ನಾನು ಬಿ.ಎ. (ಇಂಗ್ಲಿಷ್‌ ಮೇಜರ್‌) ಮುಗಿಸಿ ಪ್ರಸ್ತುತ ಎರಡನೇ ವಷ೯ದಲ್ಲಿ ಬಿ.ಎಡ್‌. ಓದುತ್ತಿದ್ದೇನೆ. ಇದೇ ಡಿಸೆಂಬರ್‌ನಲ್ಲಿ ಮುಗಿಯುವುದು. ನನಗೆ ಯಾವುದೇ ಖಾಸಗಿ ಶಾಲೆಯಲ್ಲೂ ಕೆಲಸ ಮಾಡಲು ಇಷ್ಟವಿಲ್ಲ. ಬದಲಾಗಿ ಕೇಂದ್ರೀಯ ವಿದ್ಯಾಲಯ ಅಥವ ಮೊರಾಜಿ೯ ಶಾಲೆಯಲ್ಲಿ ಶಿಕ್ಷಕಿಯಾಗಲು ಹೇಗೆ ತಯಾರಿ ನಡೆಸಬೇಕೆಂದು ತಿಳಿಸಿ. -ಸನಾ, ಚಿತ್ರದುಗ೯ ಸನಾ, ಕೇಂದ್ರಿಯ ವಿದ್ಯಾಲಯ ಮತ್ತು ಮೊರಾರ್ಜಿ ಶಾಲೆಗಳಲ್ಲಿ ಪದವಿ ಶಿಕ್ಷಕ/ ಶಿಕ್ಷಕಿಯರಾಗಲು () ಪದವಿಯೊಂದಿಗೆ ಬಿ.ಎಡ್. ಶಿಕ್ಷಣವಾಗಿರಬೇಕಿದ್ದು ನೇಮಕಾತಿಗಳು ಅವಶ್ಯತೆಯ ಅನುಗುಣವಾಗಿ ಆಗುತ್ತಿರುತ್ತವೆ. ಪದವಿಯಲ್ಲಿ ಶೇ 50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮುಖಾಂತರ ಆಯ್ಕೆ ಮಾಡಲಾಗುತ್ತದೆ. ಕೆ.ವಿ.ಎಸ್. ನ ಸ್ಪರ್ಧಾತ್ಮಕ ಪರಿಕ್ಷೆಯು ಸಾಮಾನ್ಯ ಇಂಗ್ಲಿಷ್ ಮತ್ತು ಹಿಂದಿ ಹಾಗೂ ಸಾಮಾನ್ಯ ಜ್ಞಾನ, ತಾರ್ಕಿಕ ಆಲೋಚನೆ ಮತ್ತು ಕಲಿಕಾ ಪಕ್ರಿಯೆಗಳ ಬಗ್ಗೆ ಇರುತ್ತದೆ. ಈ ಪರೀಕ್ಷೆಯ ತೇರ್ಗಡೆಯ ನಂತರ ವೈಯಕ್ತಿಕ ಸಂದರ್ಶನ ಇರುತ್ತದೆ. ಈ ಹಿಂದಿನ ವರ್ಷದ ಕೆ.ವಿ.ಎಸ್. ಪ್ರಶ್ನೆ ಪತ್ರಿಕೆಗಳನ್ನು ಕೂಲಂಕಷವಾಗಿ ಗಮನಿಸಿ ಪ್ರಶ್ನೆಗಳ ರೂಪುರೇಷೆಗಳನ್ನು ಗಮನಿಸಿ. ಪ್ರಶ್ನೆಗಳನ್ನು ಯಾವ ಹಂತದಲ್ಲಿ ಕೇಳಲಾಗಿದೆ ಎಂದು ನೋಡಿ. ಅಂದರೆ ಕೇವಲ ಮಾಹಿತಿ ಆಧಾರದಲ್ಲೋ ಅಥವಾ ಆಳವಾದ ಚಿಂತನೆಗಳ ಆಧಾರದಲ್ಲೊ ಎಂದು ನೋಡಿಕೊಂಡು ಆ ಪ್ರಕಾರವಾಗಿ ಓದಿಕೊಳ್ಳಿ. ರೆನ್ ಮತ್ತು ಮಾರ್ಟಿನ್ ಅವರ ಇಂಗ್ಲಿಷ್ ವ್ಯಾಕರಣ ಪುಸ್ತಕ, ಆರ್.ಎಸ್. ಅಗರವಾಲ್ ಅವರ ತಾರ್ಕಿಕ ಆಲೋಚನೆ, ಪಿಯರ್ಸನ್ ಎಜುಕೇಶನ್ ಅವರ ಕಲಿಕಾ ಪಕ್ರಿಯೆಗಳು, ಸಾಮಾನ್ಯ ಜ್ಞಾನಕ್ಕಾಗಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಸಿಕ ಪತ್ರಿಕೆ, ದಿನಪತ್ರಿಕೆ ಇತ್ಯಾದಿಗಳನ್ನು ಓದಬಹುದು. ಶುಭಾಶಯ. (ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.