ಉತ್ತಮ ಅಂಕಗಳಿಗೆ ಒಳ್ಳೆಯ ಅಭ್ಯಾಸ ಕ್ರಮ ಓದಿನ ಕುರಿತ ಒಳ್ಳೆಯ ಹವ್ಯಾಸಗಳು ವಿದ್ಯಾರ್ಥಿಗೆ ಯಾವತ್ತೂ ಒಳ್ಳೆಯ ಅಂಕಗಳನ್ನು ಗಳಿಸಲು ನೆರವಾಗಬಲ್ಲವು. ಆದರೆ ಬಹುತೇಕ ವಿದ್ಯಾರ್ಥಿಗಳು ಮಾಡುವ ತಪ್ಪೆಂದರೆ ಈ ಹವ್ಯಾಸವನ್ನು ರೂಢಿಸಿಕೊಳ್ಳಲು ಹಾಗೂ ಸರಿಯಾದ ನಿಟ್ಟಿನಲ್ಲಿ ಬಳಸಿಕೊಳ್ಳಲು ವಿಫಲರಾಗುವುದು. ವಿದ್ಯಾರ್ಥಿಗಳು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ ಯಾವುದೂ ತಕ್ಷಣವೇ ಫಲ ಕೊಡಲಾರದು. ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಂಡು ಅದನ್ನು ಪಾಲಿಸುವ ಗುರಿಯನ್ನೂ ಇಟ್ಟುಕೊಳ್ಳಬೇಕು. ಅಂದರೆ ಮಾತ್ರ ನೀವು ಶೈಕ್ಷಣಿಕ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಬಹುದು. ಹಾಗಂತ ಒಳ್ಳೆಯ ಅಧ್ಯಯನದ ಹವ್ಯಾಸಗಳು ಹೀಗೆಯೇ ಇರುತ್ತವೆ ಎಂದು ಪಟ್ಟಿ ಮಾಡಲು ಸಾಧ್ಯವಿಲ್ಲ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಸರಳವಾಗಿ ಹೇಳುವುದಾದರೆ ನಾವು ರೂಢಿಸಿಕೊಂಡ ಕಲೆ ಎನ್ನಬಹುದು. ಓದಿನ ಅಭ್ಯಾಸಗಳು ಅಥವಾ ಹವ್ಯಾಸಗಳು ಏಕಾಗ್ರತೆ, ಸ್ಮರಣ ಶಕ್ತಿ, ಸಂಘಟನೆ ಹಾಗೂ ಸಮಯದ ಹೊಂದಾಣಿಕೆಯನ್ನು ಅವಲಂಬಿಸಿವೆ. ಕೆಲವು ವಿದ್ಯಾರ್ಥಿಗಳು ನಿತ್ಯ ಅಧ್ಯಯನಕ್ಕೆ ಬಹಳಷ್ಟು ಸಮಯವನ್ನು ವ್ಯಯಿಸಬಹುದು. ಆದರೂ ಕೂಡ ನಿರೀಕ್ಷಿತ ಅಂಕ ಗಳಿಸಲು ವಿಫಲರಾಗುತ್ತಾರೆ. ಇನ್ನು ಕೆಲವರು ದಿನಕ್ಕೆ 1–2 ಗಂಟೆ ಕಾಲ ಓದಿದರೂ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿ ಒಳ್ಳೆಯ ಗ್ರೇಡ್‌ ಗಳಿಸುತ್ತಾರೆ. ಇದು ಯಾಕೆಂದು ವಿಶ್ಲೇಷಣೆ ಮಾಡಿದರೆ ಅವರ ಓದಿನ ರೀತಿಯನ್ನು, ಅಭ್ಯಾಸದ ಕ್ರಮವನ್ನು ಒಂದೆರಡು ದಿನಗಳಲ್ಲಿ ಸಾಧಿಸುವುದು ಸುಲಭವಲ್ಲ ಎಂಬುದು ಗೊತ್ತಾಗುತ್ತದೆ. ಈ ಕ್ರಮವನ್ನು ವಾರಗಟ್ಟಲೆ ಅಲ್ಲ, ಕೆಲವೊಮ್ಮೆ ತಿಂಗಳುಗಳ ಕಾಲ ಪುನರಾವರ್ತಿಸಬೇಕಾಗುತ್ತದೆ. ಕೆಲವರಾದರೂ ಗಮನಿಸಿರಬಹುದು, ಆರಂಭಿಕ ವರ್ಷಗಳಲ್ಲಿ ಸಾಧಾರಣ ಎಂಬಂತಿರುವ ಕೆಲವು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಶಿಕ್ಷಣ, ಉದ್ಯೋಗದ ಬಗ್ಗೆ ಖಚಿತ ನಿಲುವನ್ನು ತಳೆದ ನಂತರ ಉತ್ತಮ ಅಂಕಗಳನ್ನು ಗಳಿಸಿ ಸಾಧನೆ ಮಾಡುತ್ತಾರೆ. ಇದಕ್ಕೆ ಕಾರಣ ಅವರ ಅಭ್ಯಾಸ ಕ್ರಮ. ಮೊದಲು ಚೆನ್ನಾಗಿ ಓದಲು ಆರಂಭಿಸಿ. ಓದುವ ಹವ್ಯಾಸ ತನ್ನಿಂದ ತಾನೇ ರೂಢಿಯಾಗುತ್ತದೆ. ಓದಲು ಒಳ್ಳೆಯ ಟೇಬಲ್‌ ಮತ್ತು ಕುರ್ಚಿಯ ವ್ಯವಸ್ಥೆ ಮಾಡಿಕೊಳ್ಳಿ. ಇದು ದೈಹಿಕ ಶ್ರಮವನ್ನು, ಅದರಲ್ಲೂ ಬೆನ್ನು ನೋವಿನಂತಹ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಟೇಬಲ್‌ ಮೇಲೆ ಅಧ್ಯಯನ ಸಾಮಗ್ರಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಕೊಳ್ಳಿ. ನಿತ್ಯವೂ ಸರಿಯಾದ ಯೋಜನೆ ಹಾಕಿಕೊಳ್ಳಿ. ಅಂದರೆ ಶಾಲೆಯ ನಂತರ ಕೆಲವು ಪಠ್ಯೇತರ ಅಥವಾ ಪೂರಕ ಚಟುವಟಿಕೆಗಳು ಇರಬಹುದು. ಅದಕ್ಕೆ ಸರಿಯಾಗಿ ನಿಮ್ಮ ಸಮಯವನ್ನು ಹೊಂದಿಸಿಕೊಳ್ಳುವ ಅವಶ್ಯಕತೆ ಇರುತ್ತದೆ. ಇದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಸರಿಯಾದ ಕ್ರಮವೆಂದರೆ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದು ತಾಸನ್ನಾದರೂ ಓದಿಗೆ ಮೀಸಲಿಡಬೇಕು. ಸೀನಿಯರ್‌ ವಿದ್ಯಾರ್ಥಿಗಳಾದರೆ ಹೆಚ್ಚು ಸಮಯ ಬೇಕು. ನಿಮ್ಮಷ್ಟಕ್ಕೇ ನೀವು ಓದುವುದನ್ನು ರೂಢಿಸಿಕೊಳ್ಳಿ. ಇದು ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಹಾಯಕ. ಅಂದರೆ ನಿಮ್ಮ ಬೌದ್ಧಿಕ ಸಾಮರ್ಥ್ಯವನ್ನು ಪೂರ್ತಿಯಾಗಿ ಬಳಸಿಕೊಳ್ಳಬಹುದು. ಅರ್ಥವಾಗದಿದ್ದರೆ ಶಿಕ್ಷಕರು, ಪೋಷಕರಿಂದ ಸಲಹೆ ಪಡೆಯಬಹುದು. ಒಂದು ವೇಳಾಪಟ್ಟಿ ಹಾಕಿಕೊಳ್ಳಿ. ಕೆಲವು ವಿದ್ಯಾರ್ಥಿಗಳು ಆರಂಭದಲ್ಲಿ ವೇಳಾಪಟ್ಟಿ ಹಾಕಿಕೊಂಡರೂ ಅದನ್ನು ಅನುಸರಿಸುವಲ್ಲಿ ಹಿಂದೆ ಬೀಳುತ್ತಾರೆ. ಪ್ರತಿಯೊಂದು ಚಾಪ್ಟರ್‌ಗೆ ಕಡಿಮೆ ಅವಧಿಯನ್ನು ಗುರುತು ಹಾಕಿಕೊಳ್ಳಿ. ದೀರ್ಘವಾದರೆ ಅದರಂತೆ ಓದುವುದು ಕಷ್ಟ. ನಿತ್ಯ ಒಂದೇ ವಿಷಯವನ್ನು ಓದಿದರೆ ಏಕತಾನತೆಯಿಂದ ಬೇಸರವಾಗಬಹುದು. ಆಸಕ್ತಿ ಕುಂದಬಹುದು. ಹೀಗಾಗಿ ಬೇರೆ ಬೇರೆ ವಿಷಯ ಓದಿ. ಸಂಜೆ ಆಟ, ಇತರ ಮನರಂಜನೆಗೂ ಕೆಲವು ಸಮಯ ಮೀಸಲಿಡಿ. ಇದರಿಂದ ಮನಸ್ಸಿಗೆ ಒಂದಿಷ್ಟು ವಿಶ್ರಾಂತಿ ಸಿಗುತ್ತದೆ. ಮತ್ತೆ ಓದಲು ಹುಮ್ಮಸ್ಸು ಬರುತ್ತದೆ. ಸುಲಭವಾದ ವಿಷಯವನ್ನು ಮೊದಲು ಓದಿ. ಓದಿದ ನಂತರ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಅಭ್ಯಾಸ ಮಾಡಿ. ಪೋಷಕರಿಗೆ ಅಥವಾ ಶಿಕ್ಷಕರಿಗೆ ತೋರಿಸಿ. ಕಷ್ಟಕರ ವಿಷಯವನ್ನು ಅಂದರೆ ಗಣಿತ, ವಿಜ್ಞಾನವನ್ನು ನಿತ್ಯ ಓದಿ. ಯಾವುದು ಕಷ್ಟವೋ ಅದನ್ನು ಮತ್ತೆ ಮತ್ತೆ ಓದಿದರೆ ನೆನಪಿನಲ್ಲಿ ಉಳಿಯುತ್ತದೆ. ಪೋಷಕರೂ ಮಕ್ಕಳ ಈ ಪ್ರಯತ್ನವನ್ನು ಬೆಂಬಲಿಸಬೇಕು. ಸಣ್ಣಪುಟ್ಟ ಸಾಧನೆಯನ್ನೂ ಶ್ಲಾಘಿಸುವ ರೂಢಿ ಇಟ್ಟುಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.