ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಬೇಡಿಕೆ ಆಸ್ಪತ್ರೆ ನಿರ್ವಹಣೆಯು ಆಡಳಿತ ನಿರ್ವಹಣಾ ಅಧ್ಯಯನದ ಇತ್ತೀಚಿನ ಪರಿಕಲ್ಪನೆಗಳಲ್ಲಿ ಒಂದಾದರೂ ಆರೋಗ್ಯ ಕ್ಷೇತ್ರದಲ್ಲಿ ಒಂದು ಅತಿ ಮುಖ್ಯವಾದ ಹಾಗೂ ಲಾಭದಾಯಕ ವೃತ್ತಿ ಜೀವನವಾಗಿ ಮಾರ್ಪಟ್ಟಿದೆ.ಈ ರೀತಿಯ ಕಾರ್ಪೊರೇಟ್ ಆಸ್ಪತ್ರೆಗಳನ್ನು ನಿರ್ವಹಿಸಲು ಸಮರ್ಥ ಹಾಗೂ ಕೌಶಲಗಳನ್ನು ಹೊಂದಿದ ಆಡಳಿತಾಧಿಕಾರಿಗಳ ಅವಶ್ಯಕತೆಯಿದೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯು ಆರೋಗ್ಯ ನಿರ್ವಹಣೆ ಅಥವಾ ಆಡಳಿತ ಜಗತ್ತಿನ ಮೊದಲ ಹತ್ತು ಮಿಲೇನಿಯಂ ಉದ್ಯಮಗಳಲ್ಲಿ ಒಂದು ಎಂಬುದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ಒಂದು ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಸಂಸ್ಥೆ ಸೂಕ್ತ ತರಬೇತಿ ನೀಡುವುದರ ಮೂಲಕ ಒಬ್ಬ ಸಮರ್ಥ, ಪ್ರತಿಭೆಯುಳ್ಳ ಹಾಗೂ ಉದ್ಯಮಕ್ಕೆ ಬೇಕಾಗಿರುವ ಕೌಶಲಗಳನ್ನು ಹೊಂದಿರುವ ಒಬ್ಬ ಪ್ರಬಂಧಕನನ್ನು ರೂಪಿಸಬಲ್ಲದು. ಎಂಥವರಿಗೆ ಸೂಕ್ತ? ಒಂದು ಆಸ್ಪತ್ರೆಯ ಭೌತಿಕ ಹಾಗೂ ಹಣಕಾಸಿನ ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸುವುದು ಹಾಗೂ ರೋಗಿಗಳ ಸ್ವಾಸ್ಥ್ಯದ ಬಗ್ಗೆ ಕಾಳಜಿ ವಹಿಸುವುದಲ್ಲದೇ, ಆಸ್ಪತ್ರೆಗೆ ಲಾಭ ತಂದು ಕೊಡುವ ಕೌಶಲಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಈ ಕ್ಷೇತ್ರ ಸೂಕ್ತವಾಗಿದೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಮರ್ಪಕವಾದ ಮಾಹಿತಿ, ಆಟೊಮೇಟೆಡ್ ಡಯಾಗ್ನಸ್ಟಿಕ್ ಹಾಗೂ ಟ್ರೀಟ್‌ಮೆಂಟ್ (ಸ್ವಯಂಚಾಲಿತ ರೋಗ ಪತ್ತೆ ಮತ್ತು ಚಿಕಿತ್ಸೆ) ಸಾಧನಗಳ ಬಳಕೆ, ಮಾಹಿತಿ ಪರಿಷ್ಕರಣೆ, ತಂತ್ರಜ್ಞಾನದ ತಿಳಿವಳಿಕೆ, ಸರ್ಕಾರದ ಕಾನೂನು ಮತ್ತು ನಿಯಮಗಳು ಹಾಗೂ ನಿಯಂತ್ರಣಗಳ ಬಗ್ಗೆ ಇತ್ತೀಚಿನ ಮಾಹಿತಿ, ಆರೋಗ್ಯ ವಿಮೆಯಲ್ಲಿ ಆಗಿರುವ ಬದಲಾವಣೆಗಳು ಹಾಗೂ ಹಣಕಾಸು ಒದಗಿಸುವ ಮತ್ತು ಕ್ರೋಢೀಕರಿಸುವ ಆಯ್ಕೆಗಳ ಬಗ್ಗೆ ಮಾಹಿತಿ ಇರುವುದು ಅತ್ಯವಶ್ಯಕ. ಬೇಕಾಗಿರುವ ಕೌಶಲಗಳು ಮಾಡುವ ಕೆಲಸದಲ್ಲಿ ಹೊಸತನ, ಜವಾಬ್ದಾರಿ, ಸ್ವ-ಪ್ರೇರಣೆ ಹಾಗೂ ಮನುಕುಲದ ಒಳಿತಿಗಾಗಿ ಹಗಲಿರುಳೂ ಹೋರಾಡುವ, ಸೇವೆ ಮಾಡುವ ಮನೋಧರ್ಮ, ಆಸ್ಪತ್ರೆಗಳಲ್ಲೆ ಸಾಕಷ್ಟು ಕಾಲ ಕಾರ್ಯ ನಿರ್ವಹಿಸುವ ಕಾರ್ಯಕ್ಷಮತೆ, ನಾಯಕತ್ವಗುಣ, ಅತ್ಯುತ್ತಮ ಸಂವಹನ ಕೌಶಲಗಳು, ವ್ಯವಹಾರ ಚಾತುರ್ಯ ಇರಬೇಕು. ಸಂದರ್ಭಕ್ಕೆ ಹೊಂದಿಕೊಳ್ಳುವ, ಸೂಕ್ತ ಸಮಯಕ್ಕೆ ಸರಿಯಾದ ತ್ವರಿತ ನಿರ್ಧಾರ ತೆಗೆದುಕೊಳ್ಳುವ, ತಾಳ್ಮೆ, ಒತ್ತಡ ನಿರ್ವಹಣೆ, ಸಂಘಟನಾಶಕ್ತಿ, ಕಾಲಕಾಲಕ್ಕೆ ಬೇಕಾಗಿರುವ ಕಂಪ್ಯೂಟರ್ ಹಾಗೂ ಅಂತರ್ಜಾಲ ಬಳಕೆಯ ಕೌಶಲಗಳು ಆಸ್ಪತ್ರೆ ನಿರ್ವಾಹಣಾಧಿಕಾರಿ ಆಗ ಬಯಸುವವರಿಗೆ ಅಗತ್ಯ. ಈ ಪದವಿಯು ಮೂರು ವರ್ಷದ ಕೋರ್ಸ್ ಆಗಿರುತ್ತದೆ. ಮೂರು ವರ್ಷಗಳ ಬ್ಯಾಚುಲರ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ / ಅಡ್ಮಿನಿಸ್ಟ್ರೇಷನ್ ಕೋರ್ಸ್‌ಗೆ ಸೇರ ಬಯಸುವವರು ಇತರ ಪದವಿ ಕೋರ್ಸ್‌ಗಳಿಗೆ ಇದ್ದಂತೆ ಪಿಯುಸಿಯಲ್ಲಿ ಕನಿಷ್ಠ ಶೇ 50ರಷ್ಟು ಅಂಕ ಗಳಿಸಿರಬೇಕು. ಸ್ನಾತಕೋತ್ತರ ಕೋರ್ಸ್‌ಗೆ ಸೇರುವವರು ಯಾವುದೇ ಪದವಿ ಪಡೆದಿರಬೇಕು. ಆದರೆ ಆಯ್ಕೆಯ ಮಾನದಂಡ ಬೇರೆ ಬೇರೆಯಾಗಿರುತ್ತದೆ. ಲಭ್ಯವಿರುವ ಕೋರ್ಸ್‌ಗಳು ಎಂ.ಬಿಎ. ಇನ್ ಹಾಸ್ಟಿಟಲ್ ಮ್ಯಾನೇಜ್‌ಮೆಂಟ್ ಆ್ಯಂಡ್‌ ಅಡ್ಮಿನಿಸ್ಟ್ರೇಷನ್‌ ಮಾಸ್ಟರ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಪೋಸ್ಟ್ ಗ್ರಾಜುಯೇಷನ್ ಡಿಪ್ಲೋಮಾ ಇನ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ / ಅಡ್ಮಿನಿಸ್ಟ್ರೇಷನ್ ಪೋಸ್ಟ್ ಗ್ರಾಜುಯೇಷನ್ ಡಿಪ್ಲೋಮಾ ಇನ್‌ ಹಾಸ್ಪಿಟಲ್ ಆ್ಯಂಡ್ ಹೆಲ್ತ್ ಮ್ಯಾನೇಜ್‌ಮೆಂಟ್ ಇದಲ್ಲದೆ ದೇಶದ ಹಲವಾರು ಸಂಸ್ಥೆಗಳಲ್ಲಿ ಅಲ್ಪಾವಧಿಯ ಡಿಪ್ಲೋಮಾ, ಸರ್ಟಿಫಿಕೇಟ್ ಹಾಗೂ ದೂರ ಶಿಕ್ಷಣ ಕೋರ್ಸ್‌ಗಳು ಲಭ್ಯವಿವೆ. ಕೆಲವು ಸಂಸ್ಥೆಗಳಲ್ಲಿ ಆಗಸ್ಟ್‌ವರೆಗೂ ಪ್ರವೇಶಾವಕಾಶವಿದ್ದು, ಕೋರ್ಸ್‌ಗಳ ಮೇಲೆ ಆಸಕ್ತಿ ಇರುವವರು ಸೇರಿಕೊಳ್ಳಬಹುದು. ಅಲ್ಪಾವಧಿ ಕೋರ್ಸ್‌ಗಳಿಗಂತೂ ಯಾವುದೇ ಸಮಯದ ಮಿತಿಯಿಲ್ಲ. ವಿದ್ಯಾರ್ಥಿಗಳಿಗೆ ಮೂಲ ಮ್ಯಾನೇಜ್‌ಮೆಂಟ್ ತತ್ವಗಳು, ಮ್ಯಾನೇಜ್‌ಮೆಂಟ್ ಕೌಶಲಗಳು, ಅಕೌಂಟಿಂಗ್, ವ್ಯಾಪಾರದ ಸಂವಹನಗಳ ಜೊತೆಗೆ ಆಸ್ಪತ್ರೆ ನಿರ್ವಹಣೆಗೆ ಬೇಕಾಗಿರುವ ವಿಶೇಷ ಜ್ಞಾನ, ಆರೋಗ್ಯ ಸೇವೆಗಳಲ್ಲಿ ಜಾಗತಿಕ ಗುಣಮಟ್ಟವನ್ನು ಹೇಗೆ ಕಾಪಾಡಿಕೊಳ್ಳಬೇಕು, ಸೇವೆಗಳ ಸರಬರಾಜನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಎರಡು ವರ್ಷದ ತರಬೇತಿ ನೀಡಲಾಗುವುದು. ಎಲ್ಲಿ ಉದ್ಯೋಗಗಳನ್ನು ನಿರೀಕ್ಷಿಸಬಹುದು? ಹೊರರೋಗಿಗಳಿಗೆ ಚಿಕಿತ್ಸೆ ನೀಡುವ ಕ್ಲಿನಿಕ್‌ಗಳಲ್ಲಿ, ಆಸ್ಪತ್ರೆಗಳಲ್ಲಿ, ಹಾಸ್ಪೈಸ್, ಮಾದಕ ವ್ಯಸನ ಮುಕ್ತ ಚಿಕಿತ್ಸಾ ಕೇಂದ್ರಗಳಲ್ಲಿ ಹೊಸದಾಗಿ ಪದವಿ ಮುಗಿಸಿದ ವಿದ್ಯಾರ್ಥಿಗಳು ಸಹಾಯಕ ಆಸ್ಪತ್ರೆ ನಿರ್ವಹಣಾಧಿಕಾರಿಯಾಗಿ ಅಥವಾ ಸಲಹೆಗಾರರಾಗಿ ಕೆಲಸಕ್ಕೆ ಸೇರಿಕೊಳ್ಳಬಹುದು. ತಮ್ಮ ಕೌಶಲ ಹಾಗೂ ಅನುಭವದ ಮೇಲೆ ಸಂಸ್ಥೆಯ ಸಿ.ಇ.ಒ. ಹುದ್ದೆಯನ್ನೂ ಗಿಟ್ಟಿಸಬಹುದು. ಶಿಕ್ಷಣ ಹಾಗೂ ಬೋಧನೆಯಲ್ಲಿ ಆಸಕ್ತಿ ಇದ್ದವರು, ಸಂಸ್ಥೆಗಳಲ್ಲಿ ಬೋಧಕರಾಗಿ ಸೇವೆ ಸಲ್ಲಿಸಬಹುದು. ನರ್ಸಿಂಗ್ ಹೋಮ್‌ಗಳಲ್ಲಿ, ಖಾಸಗಿ / ಸರ್ಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ವಿಮೆ ಕಂಪನಿಗಳಲ್ಲಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಹೆಲ್ತ್‌ಕೇರ್ ಸಂಸ್ಥೆಗಳಲ್ಲಿ, ಸಾರ್ವಜನಿಕ ಆರೋಗ್ಯ ವಿಭಾಗಗಳಲ್ಲಿ, ಫಾರ್ಮಾಸ್ಯುಟಿಕಲ್ಸ್ ಹಾಗೂ ಆಸ್ಪತ್ರೆ ಪೂರೈಕೆ ಕಂಪನಿಗಳಲ್ಲಿ ಕೆಲಸ ನಿರೀಕ್ಷಿಸಬಹುದು. (ಲೇಖಕರು ಸಹಾಯಕ ಪ್ರಾಧ್ಯಾಪಕರು, ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.