ಬಹುಮುಖ ಕೌಶಲವಿದ್ದರೆ ಆಗಬಹುದು ಸ್ಟ್ಯಾಕ್‌ ಡೆವಲಪರ್‌ ಕಂಪನಿಗಳು ಈಗ ಒಟ್ಟು ವೆಚ್ಚ ಕುಗ್ಗಿಸಲು ಹಾಗೂ ಸಮಯ ಉಳಿಸಲು ಸಣ್ಣ ತಂಡಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿವೆ. ಹೀಗಾಗಿ ಪೂರ್ಣಪ್ರಮಾಣದ ಸ್ಟ್ಯಾಕ್ ಡೆವಲಪರ್ ಹುದ್ದೆಗಾಗಿ ಕಳೆದ ಒಂದು ವರ್ಷದಿಂದಲೂ ಹೆಚ್ಚಿನ ಬೇಡಿಕೆ ಇದೆ. ಈ ಉದ್ಯೋಗಕ್ಕಾಗಿ ಹೆಚ್ಚಿನ ಬೇಡಿಕೆಯು ಉತ್ಪನ್ನ ಆಧಾರಿತ ಕಂಪನಿಗಳು, ಸ್ಟಾರ್ಟ್‌ಅಪ್ ವಲಯದಲ್ಲಿದೆ. ವಾಸ್ತವವಾಗಿ ಉದ್ಯಮದ ವಲಯಗಳ ಅಂಕಿ–ಅಂಶಗಳ ಪ್ರಕಾರ ಇತ್ತೀಚೆಗೆ ಪೂರ್ಣಪ್ರಮಾಣದ ಸ್ಟ್ಯಾಕ್ ಡೆವಲಪರ್‌ಗಳಿಗೆ ಬೇಡಿಕೆಯು ಶೇ 20ರಷ್ಟು ಹೆಚ್ಚಿದೆ. ಕಂಪನಿಗಳು ಈಗ ಬಹುಕೌಶಲವನ್ನು ಹೊಂದಿರುವ ವೃತ್ತಿಪರರಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಪೂರ್ಣ ಪ್ರಮಾಣದ ಸ್ಟ್ಯಾಕ್‌ ಡೆವಲಪರ್‌ ಎಂದರೆ ಒಬ್ಬ ಎಂಜಿನಿಯರ್‌ ಹಲವು ಹಂತಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಡೇಟಾಬೇಸ್‌, ಸರ್ವರ್‌, ಸಿಸ್ಟಮ್‌ ಎಂಜಿನಿಯರಿಂಗ್‌ ಹಾಗೂ ಗ್ರಾಹಕರ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಒಟ್ಟಾರೆ ಪ್ರಾಜೆಕ್ಟ್‌ ಅನ್ನು ಇದು ಅವಲಂಬಿಸಿರುತ್ತದೆ. ಅಂದರೆ ಗ್ರಾಹಕ ಬಯಸುವ ಉದಾಹರಣೆಗೆ ಮೊಬೈಲ್‌, ವೆಬ್‌ ಅಥವಾ ಅಪ್ಲಿಕೇಶನ್‌ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಪೂರ್ಣ ಪ್ರಮಾಣದ ಸ್ಟ್ಯಾಕ್‌ವೆಬ್ ಡೆವಲಪರ್ ಕೆಲಸ ಏನು? ಪೂರ್ಣ ಪ್ರಮಾಣದ ಸ್ಟ್ಯಾಕ್ ಡೆವಲಪರ್ ಕೆಲಸವೆಂದರೆ ಒಂದು ಉತ್ಪನ್ನವನ್ನು ಎಲ್ಲ ಆಯಾಮಗಳಿಂದಲೂ ಪರಿಶೀಲಿಸಿ, ನಿರ್ವಹಿಸುವುದು. ಅದನ್ನು ಪೂರ್ಣಗೊಳಿಸಿ ಕೊನೆಯ ಹಂತಕ್ಕೆ ಒಯ್ಯುವುದು. ಸ್ಟ್ಯಾಕ್ ಡೆವಲಪರ್ ಎಂಬುದರ ವ್ಯಾಖ್ಯಾನದಂತೆ ನಿರ್ದಿಷ್ಟ ಯೋಜನೆಯನ್ನು ಕಾರ್ಯಗತಗೊಳಿಸಲು ಎಲ್ಲ ರೀತಿಯ ಅಗತ್ಯ ತಂತ್ರಜ್ಞಾನಗಳನ್ನು ಪಡೆಯಬೇಕಾಗುತ್ತದೆ. ಈ ಡೆವಲಪರ್ ಮೂರು ಹಂತದ ಅಪ್ಲಿಕೇಷನ್ ಸಿಸ್ಟಮ್ ಮಾದರಿಯಲ್ಲಿ ಕೆಲಸ ನಿರ್ವಹಿಸಲು ಸಾಮರ್ಥ್ಯ ಹೊಂದಬೇಕಾಗುತ್ತದೆ. ಅಲ್ಲದೆ, ಪೂರಕವಾಗಿ ಆ ಉತ್ಪನ್ನ ಮತ್ತು ಅಪ್ಲಿಕೇಷನ್‌ಗೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿ ಹೊಂದಬೇಕಾಗುತ್ತದೆ. ಮೂರು ಹಂತದ ಮಾದರಿ 1. ಪ್ರೆಸೆಂಟೇಷನ್ : ಇದು, ಅಪ್ಲಿಕೇಷನ್‌ನ ಮುಂಚೂಣಿ ಭಾಗವಾಗಿದ್ದು, ಸಂವಹನದ ಭಾಗವನ್ನು ಕೂಡ ಒಳಗೊಂಡಿದೆ. ಫುಲ್ ಸ್ಟ್ಯಾಕ್ ಡೆವಲಪರ್ ಎಚ್‌ಟಿಎಂಎಲ್‌5, ಸಿಎಸ್‌ಎಸ್‌3 ಮತ್ತು ಜಾವಾಸ್ಕ್ರಿಪ್ಟ್ ಕ್ಷೇತ್ರದಲ್ಲಿ ಪರಿಣತಿ ಹೊಂದಿರಬೇಕಾಗುತ್ತದೆ. ಆ್ಯಂಗುಲರ್ ಮತ್ತು ರಿಯಾಕ್ಟ್ ಜೆಎಸ್ ತಂತ್ರಜ್ಞಾನದ ಅರಿವು ಕೂಡಾ ಅಗತ್ಯ. 2. ಬ್ಯುಸಿನೆಸ್ ಲಾಜಿಕ್ : ಇದು, ಯಾವುದೇ ಅಪ್ಲಿಕೇಷನ್‌ನ ಅಂಕಿ– ಅಂಶ ಮೌಲ್ಯಾಂಕನ ಮಾಡಲಿದೆ. ಡೆವಲಪರ್‌ಗಳು ಈ ಸಂಬಂಧ ಪಿಎಚ್‌ಪಿ, ಪೈಥಾನ್, ಜಾವಾ ಇತ್ಯಾದಿ ಭಾಷೆಗಳ ಅರಿವು ಹೊಂದುವುದು ಅಗತ್ಯ. ಜಾಂಗೊ, ಫ್ಲಾಸ್ಕ್ ಇತ್ಯಾದಿ ಫ್ರೇಮ್‌ವರ್ಕ್‌ಗಳ ಮಾಹಿತಿ ಮಾಡಿಕೊಂಡರೆ ಹೆಚ್ಚುವರಿ ಅನುಕೂಲ. 3. ಡೇಟಾಬೇಸ್: ಅಪ್ಲಿಕೇಷನ್‌ನಲ್ಲಿ ಡೇಟಾಬೇಸ್ ಆಧಾರಿತ ನಿರ್ವಹಣಾ ಭಾಗ. ಡೆವಲಪರ್‌ಗಳಿಗೆ ವಿವಿಧ ತಂತ್ರಜ್ಞಾನಗಳು ಅಂದರೆ ವ್ಯಾಪಕವಾಗಿ ಬಳಕೆಯಾಗುವ ಡಿಬಿಎಂಎಸ್ ತಂತ್ರಜ್ಞಾನಗಳಾದ ಎಂವೈಎಸ್‌ಕ್ಯುಎಲ್‌, ಮೊಂಗೊಡಿಬಿ, ಒರಾಕಲ್‌, ಎಸ್‌ಕ್ಯುಎಲ್‌ ಸರ್ವರ್‌ಗಳ ಅರಿವು ಇರಬೇಕು. ವಾರ್ನಿಷ್‌, ಮೇಮ್‌ಕ್ಯಾಶೆ, ರೇಡಿಸ್‌ ಅರಿವಿದ್ದರೆ ಹೆಚ್ಚಿನ ಅನುಕೂಲ. ತಾಂತ್ರಿಕ ಕೌಶಲಗಳು * ಮೂಲವಿನ್ಯಾಸ ಸಾಮರ್ಥ್ಯ ಮತ್ತು ವಿವಿಧ ಸೇವೆಗಳನ್ನು ನಿಭಾಯಿಸುವ ಹೊಣೆಗಾರಿಕೆ. *ಲಿನಕ್ಸ್‌ನ ಪೂರ್ಣ ಅರಿವು ಸರ್ವರ್‌ಗಳ ನಿರ್ವಹಣೆ ಕಾರ್ಯದಲ್ಲಿ ಹೆಚ್ಚಿನ ನೆರವು ನೀಡಲಿದೆ. *ಜಿಐಟಿಅರಿವು ಇದ್ದಲ್ಲಿ ಅನುಕೂಲ. ಇದು ಹೊಸ ಕೋಡ್ ಪಡೆಯುವ ಕ್ರಮ, ಕೋಡ್ ಅಪ್‌ಡೇಟ್ ಮಾಡುವುದು, ಇತರೆ ಡೆವಲಪರ್‌ಗಳ ಕೋಡ್‌ನಲ್ಲಿ ಬದಲಾವಣೆ ತರುವುದು ಇತ್ಯಾದಿ ಕಾರ್ಯಗಳಿಗೆ ಅನುಕೂಲಕರ. *ವೆಬ್‌ಸೇವೆಗಳು ಅಥವಾ ಎಪಿಐ ಅರಿವು ಕೂಡ ಮುಖ್ಯ. *ಆರ್‌ಇಎಸ್‌ಟಿ, ಎಸ್‌ಒಎಪಿ ಸೇವೆಗಳನ್ನು ಬಳಸಿಕೊಳ್ಳುವ ಜ್ಞಾನ ಕೂಡ ಅಗತ್ಯ. *ಗುಣಮಟ್ಟದ ಯೂನಿಟ್ ಟೆಸ್ಟ್ ಬರೆಯುವ ಸಾಮರ್ಥ್ಯ. *ಪರಿಶೀಲನೆ, ದಾಖಲೆ ಸಂಬಂಧಿತ ಸ್ವಯಂಚಾಲಿತ ಪ್ರಕ್ರಿಯೆ ಮಾಹಿತಿ ಕೂಡ ಅಗತ್ಯ. *ಭದ್ರತಾ ವಿಷಯಗಳ ಕುರಿತು ಜಾಗೃತಿ ಇರಬೇಕು. ಪ್ರತಿಯೊಂದು ಲೇಯರ್ ತನ್ನದೇ ಆದ ವೈಶಿಷ್ಟ್ಯ ಹೊಂದಿರುತ್ತದೆ. *ಅಲ್ಗೊರಿಥಮ್ಸ್ ಮತ್ತು ಡೇಟಾ ನಿರ್ವಹಣೆ ಅರಿವು ಕೂಡ ವೃತ್ತಿಪರ ಫುಲ್ ಸ್ಟ್ಯಾಕ್ ಡೆಲವಪರ್ ಆಗಲು ಅಗತ್ಯ. *ಫುಲ್‌ ಸ್ಟ್ಯಾಕ್‌ ಡೆವಲಪ್‌ಮೆಂಟ್‌ ಮಾಸ್ಟರ್ಸ್‌ ಪ್ರೋಗ್ರಾಂ ತರಬೇತಿ ಪಡೆದರೆ ಪರಿಪೂರ್ಣ ಕೌಶಲಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಕಂಪ್ಯೂಟರ್‌ ಭಾಷೆಯಲ್ಲಿ ಪರಿಣತಿ ಹೊಂದಬೇಕು. ತಂತ್ರಜ್ಞಾನಗಳ ಒಳ– ಹೊರಗನ್ನು ಅರಿತುಕೊಳ್ಳಬೇಕು. ಪ್ರಾಯೋಗಿಕ ಮಾಹಿತಿ ಇರಬೇಕು. ಸ್ಟ್ಯಾಕ್ ಡೆವಲಪರ್‌ಗಳಿಗೆ ಉತ್ತಮ ಭವಿಷ್ಯವಿದ್ದು, ಸ್ಟಾರ್ಟ್‌ಅಪ್ ಮತ್ತು ಕಾರ್ಪೊರೇಟ್ ವಲಯದಲ್ಲಿ ಹೆಚ್ಚಿನ ಅವಕಾಶಗಳು ಇವೆ. ಉದ್ಯಮದ ಇತ್ತೀಚಿನ ವರದಿಗಳ ಅನುಸಾರ, ಬೆಂಗಳೂರು ವಲಯದಲ್ಲಿ ಫುಲ್ ಸ್ಟ್ಯಾಕ್ ಡೆವಲಪರ್‌ಗಳಿಗೆ ವೇತನವು ವಾರ್ಷಿಕ ರೂ 6.5– 14 ಲಕ್ಷದವರೆಗೂ ಇದೆ. ಬೇಡಿಕೆಗೆ ಸರಿಯಾಗಿ ಫುಲ್‌ಸ್ಟ್ಯಾಕ್ ಡೆವಲಪರ್‌ಗಳ ಲಭ್ಯತೆ ಇಲ್ಲ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ಪ್ರೋಗ್ರಾಮಿಂಗ್ ಭಾಷೆಗಳಲ್ಲಿಯೂ ಅಗತ್ಯ ಕೌಶಲವನ್ನು ಹೊಂದುವುದು ಅಗತ್ಯ. (ಲೇಖಕರು ಸಿಟಿಒ ಮತ್ತು ಸಹಸ್ಥಾಪಕ, ಮಸೈ ಸ್ಕೂಲ್) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.