ನೆಲದ ಕಥನ ಕಟ್ಟಿಕೊಟ್ಟ ವಿದೇಶಿಗರು ಪ್ರವಾಸವೆನ್ನುವುದು ಅನುಭವಗಳ ಆಗರವಷ್ಟೆ ಅಲ್ಲ, ಸದಾ ನಿಮ್ಮೊಳಗೆ ಉತ್ಸಾಹ ಉಕ್ಕಿಸುವ ಚೈತನ್ಯದ ಸಾರ. ನಾನಾ ಊರು, ಭಿನ್ನ ಭಾಷೆ, ಸಂಸ್ಕೃತಿಯುನ್ನು ರೂಢಿಸಿಕೊಂಡಿರುವ ಜನರೊಂದಿಗೆ ಬೆರೆಯಲು ಇದಕ್ಕಿಂತ ದೊಡ್ಡ ಅವಕಾಶವಿಲ್ಲ. ಅಧ್ಯಯನಕ್ಕಾಗಿಯೇ ನಮ್ಮ ದೇಶಕ್ಕೆ ಪ್ರವಾಸ ಮಾಡಿದ ದೊಡ್ಡ ದಂಡೇ ಇದೆ. ಇವರೆಲ್ಲರೂ ಬರೆದ ಕಥನಗಳಿಂದ ಆಯಾ ಕಾಲಘಟ್ಟವನ್ನು ಅರಿಯಲು ಸಹಾಯವಾಗಿದೆ. ಕ್ರಮಬದ್ಧ ಇತಿಹಾಸ ರಚನೆಯಲ್ಲಿ ಈ ಕಥನಗಳು ನೆರವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಇಂದು ವಿಶ್ವ ಪ್ರವಾಸೋದ್ಯಮ ದಿನ. ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರನ್ನು ನೆನೆಯೋಣ. ಮೆಗಾಸ್ತಾನಿಸ್‌ ಮೌರ್ಯ ಸಾಮ್ರಾಜ್ಯದ ದೊರೆ ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಗ್ರೀಕ್‌ ರಾಯಭಾರಿ. ಭಾರತದಲ್ಲಿ ಕಂಡು ಕೇಳಿದ ಸಂಗತಿಗಳನ್ನು ಕ್ರೋಡೀಕರಿಸಿ ‘ಇಂಡಿಕಾ’ ಕೃತಿಯನ್ನು ರಚಿಸಿದರು. ಇದು, ಮೌರ್ಯರ ಕಾಲದ ಜನಜೀವನವನ್ನು ತಿಳಿಸುತ್ತದೆ. ಯುದ್ಧ ಕಾಲದಲ್ಲಿ ಸಾಗುವಳಿಯಾದ ಭೂಮಿಯನ್ನು ಶತ್ರುಸೈನ್ಯಗಳು ಯಾವ ಕಾರಣಕ್ಕೂ ನಾಶ ಮಾಡುವುದಿಲ್ಲ. ಕಟಾವಿಗೆ ಬಂದ ಬೆಳೆ ಹಾಗೂ ಮರಗಳನ್ನ ಕತ್ತರಿಸುವ ದುಷ್ಕೃತ್ಯ ಮಾಡುವುದಿಲ್ಲ. ಹಿಂದೂಸ್ತಾನದ ಗಜದಳಕ್ಕೆ ಅಲೆಕ್ಸಾಂಡರ್‌ ಕೂಡ ಹೆದರಿದ್ದ. ನಂಬಿಕೆಯೇ ಭಾರತೀಯ ವ್ಯವಹಾರಿಕ ಬದುಕಿನ ಜೀವಾಳ ಎಂಬ ಅಪರೂಪದ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಹ್ಯೂ ಯೆನ್‌ ತ್ಸಾಂಗ್‌ ಗುಪ್ತರ ಕಾಲದ ಅರಸ ಹರ್ಷವರ್ಧನನ ಆಸ್ಥಾನಕ್ಕೆ ಬಂದ ಚೀನಾದ ಹ್ಯೂ ಯೆನ್‌ ತ್ಸಾಂಗ್‌ ನಳಂದ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ, ಪಾಳಿ, ಪ್ರಾಕೃತ ಭಾಷೆಗಳನ್ನು ಕಲಿತು ಬೌದ್ಧಧರ್ಮ ಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ಕ್ರಿ.ಶ. 634ರಲ್ಲಿ ಭಾರತಕ್ಕೆ ಬಂದ ಅವರು, ಮಹಾಯಾನ ಪಂಥದ ಪಂಡಿತ ಮತ್ತು ಅಧ್ಯಾಪಕನಾಗಿ ಕಾರ್ಯ ನಿರ್ವಹಿಸಿದ್ದರು.ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಪ್ರವಾಸ ಮಾಡಿ ಕಾಂಚಿ, ಬನವಾಸಿ, ನಾಸಿಕ್‌ಗಳಿಗೆ ಭೇಟಿ ನೀಡಿದ್ದರು. ಕರ್ನಾಟಕ ಬಾದಾಮಿ ಚಾಲುಕ್ಯರು ಹರ್ಷವರ್ಧನನ ಸೈನ್ಯವನ್ನು ಹಿಮ್ಮೆಟ್ಟಿದ ಬಗ್ಗೆ ಹಾಗೂ ಕನ್ನಡಿಗರ ಸತ್ಯ ಸಂಧತೆ ಮತ್ತು ಸನ್ನಡತೆಗಳನ್ನು ತನ್ನ ಕೃತಿ ಸಿ–ಮು–ಕಿಯಲ್ಲಿ ಕೊಂಡಾಡಿದ್ದಾರೆ. ಟಾಲಮಿ ಗ್ರೀಕ್ ಭೂಗೋಳಶಾಸ್ತ್ರಜ್ಞ ಟಾಲಮಿ ( ಕ್ರಿ .ಶ.130) ಕರ್ನಾಟಕದ ಬನವಾಸಿ , ಬಾದಾಮಿ , ಪಟ್ಟದಕಲ್ಲಿನ ಬಗ್ಗೆ ತನ್ನ ‘ಭೂವಿವರಣೆ’ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ‘ಪೆರಿಪ್ಲಸ್ ಆಫ್ ದಿ ಎರಿತ್ರಿಯನ್ ಸೀ’ ದಕ್ಷಿಣ ಭಾರತದ ತೀರ ಪ್ರದೇಶ, ವಿದೇಶಗಳೊಡನೆ ಇಲ್ಲಿನ ಜನರು ಹೊಂದಿದ್ದ ಸಂಪರ್ಕದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಬ್ದುಲ್‌ ರಜಾಕ್‌ ಅಬ್ದುಲ್‌ ರಜಾಕ್‌ 1442 ರಿಂದ 1445ರ ವರೆಗೆ ಭಾರತದ ಕಲ್ಲಿಕೋಟೆ, ಪರ್ಷಿಯಾದ ಟಿಮುರಿಡ್‌ ರಾಜವಂಶದ ಆಡಳಿತಗಾರ ಶಾರುಖ್‌ನ ರಾಯಭಾರಿಯಾಗಿದ್ದರು. ‘ಮಾಟ್ಲಾ–ಉಸ್‌–ಸದೈನ್‌ ವಾಮಜ್ಮಾ–ಉಲ್‌–ಬಹ್ರೇನ್‌ (ಎರಡು ಶುಭ ನಕ್ಷತ್ರ ಪುಂಜಗಳ ಉದಯ ಮತ್ತು ಎರಡು ಸಾಗರಗಳ ಸಮಾಗಮ) ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಈ ಕೃತಿಯು ಸುಮಾರು 450 ಪುಟಗಳನ್ನು ಒಳಗೊಂಡಿದೆ. ಅಥಾನಾಸಿಯಸ್ ಮೊದಲ ರಷ್ಯಾದ ಪ್ರವಾಸಿಗ. ಮೂರನೇ ಮಹಮ್ಮದ್‌ ಆಳ್ವಿಕೆಯಡಿ ಬಹಮನಿ ಸಾಮ್ರಾಜ್ಯದ ಪರಿಸ್ಥಿತಿಗಳನ್ನು ಅವರು ತಮ್ಮ ‘ವಾಯೇಜ್ ಟು ಇಂಡಿಯಾ‘ ಪುಸ್ತಕದಲ್ಲಿ ವಿವರಿಸಿದ್ದಾರೆ. ಫಾಹಿಯಾನ್‌ ಗುಪ್ತರ ಕಾಲದ ದೊರೆಇಮ್ಮಡಿ ಚಂದ್ರಗುಪ್ತನ ಆಸ್ಥಾನಕ್ಕೆ ಚೀನಾದ ಪ್ರವಾಸಿ ಫಾಯಿಯಾನ್‌ ಕ್ರಿ.ಶ 4ನೇ ಶತಮಾನದಲ್ಲಿ ಭೇಟಿ ನೀಡಿದ್ದರು. ಪ್ರವಾಸ ಕಥನ ಪೊ–ಕೊ–ಕಿ ಯಲ್ಲಿ ಫಾಹಿಯಾನ್‌ ಅಂದಿನ ಜನಜೀವನದ ಮಹತ್ವದ ಬಗ್ಗೆ ರಾಜರ ಆಳ್ವಿಕೆಯ ಬಗ್ಗೆ ಹೇಳಿದ್ದರು. ನಿಕೊಲೋ ಕೊಂಟಿ ವಿಜಯನಗರ ಸಾಮ್ರಾಜ್ಯದ ಅರಸ ಒಂದನೇ ದೇವರಾಯನ ಆಸ್ಥಾನಕ್ಕೆ 1420ರಲ್ಲಿ ಇಟಲಿಯ ನಿಕೊಲೋ ಕೋಂಟಿ ಭೇಟಿ ನೀಡಿದ್ದರು. ಇವರ ಪ್ರವಾಸಾನುಭವಗಳಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸ್ವಾರಸ್ಯವಾಗಿ ವರ್ಣಿಸಲಾಗಿದೆ. ಕೋಂಟಿ ವಿಜಯನಗರಕ್ಕೆ ಭೇಟಿ ನೀಡಿದಾಗ, 90 ಸಾವಿರ ಜನ ಯುದ್ಧಕ್ಕೆ ಸಜ್ಜಾಗಿರುತ್ತಾರೆಂದೂ ದೊರೆ ಬಹಳ ಬಲಶಾಲಿ ಎಂಬುದಾಗಿ ವರ್ಣಿಸಿದ್ದಾರೆ. ವೆನಿಸ್‌ನ ಮಾರ್ಕೊ ಪೋಲೋ ಭಾರತಕ್ಕೆ ಭೇಟಿ ನೀಡಿದ ಯೂರೋಪಿನ ಪ್ರವಾಸಿಗರಲ್ಲಿ ಮೊದಲಿಗ ವೆನಿಸ್‌ನ ಮಾರ್ಕೊ ಪೋಲೋ . ದಕ್ಷಿಣ ಭಾರತೀಯರೂ ಅಂದು ಸಮುದ್ರಯಾನದಲ್ಲಿ ಬಹಳ ಆಸಕ್ತರಾಗಿದ್ದರೆಂಬ ಅಂಶ ಇವನ ಕಥನದಲ್ಲಿ ಕಂಡುಬರುತ್ತದೆ. ನಂತರ ಬಂದ ಯೂರೋಪಿನ ಪಾದ್ರಿಗಳಲ್ಲಿ ದಖನ್ ಮತ್ತು ಪಶ್ಚಿಮ ಕರಾವಳಿ ಸಂದರ್ಶಿಸಿದವರಲ್ಲಿ ಸಂತ ಥಾಮಸ್, ಸಂತ ಒಡೋರಿಕ್ , ಸಂತ ಜೋರ್ಡೊನ ಪ್ರಮುಖರು . ಈ ಕೈಸ್ತ ಪಾದ್ರಿಗಳು ಹಿಂದೂಗಳ ಆಚಾರ - ವಿಚಾರಗಳ ಬಗ್ಗೆ ಟೀಕೆ ವಿಮರ್ಶನೆಗಳನ್ನು ಬರೆದಿದ್ದಾರೆ. ಸುಲೇಮಾನ್ ಕ್ರಿ.ಶ‌. ಒಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಭಾರತಕ್ಕೆ ಭೇಟಿ ನೀಡಿದ ಅರಬ್ ವಿದ್ವಾಂಸ ಸುಲೇಮಾನ್ ರಾಷ್ಟ್ರಕೂಟ ಅರಸರ ಇತಿಹಾಸ ರಚನೆಗೆ ನಂಬಲರ್ಹವಾದ ಮಾಹಿತಿ ನೀಡಿದ್ದಾರೆ. ಮತ್ತೊಬ್ಬ ಅರಬ್ ಪ್ರವಾಸಿಯೆಂದರೆ ಅಲ್ - ಮಸೂದಿ. ಅವರು ರಾಷ್ಟ್ರಕೂಟರ ವೈಭವವನ್ನು ವರ್ಣಿಸಿದ್ದಾರೆ . ಪ್ರವಾಸಿಗಳಲ್ಲೆಲ್ಲಾ ಪ್ರಸಿದ್ಧರಾದವರು ಟಾಂಜಿಯರ್‌ನ (ಮೊರಾಕೊ ದೇಶ ) ಇಬನ್ ಬಟೂಟ , ಹೊಯ್ಸಳರ ಮೂರನೇ ಬಲ್ಲಾಳನ ರಾಜ್ಯದಲ್ಲಿ ದೆಹಲಿ ಸುಲ್ತಾನ ಮಹಮದ್‌ಬಿನ್‌ ತುಗಲಕ್‌ ನಡೆಸಿದ ದೌರ್ಜನ್ಯದ ಬಗ್ಗೆ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.