ಭಾರತಮಾತೆಗೆ ಅರ್ಪಣೆಯಾದ ಅಕ್ಕ ಮಾರ್ಗರೆಟ್ ಎಲಿಜಬೆತ್ ನೊಬೆಲ್ ಐರ್ಲೆಂಡ್ ಮೂಲದರು; ಭಾರತಕ್ಕೆ ಅರ್ಪಿತವಾದ ಸ್ವಾಮಿ ವಿವೇಕಾನಂದರ ಶಿಷ್ಯೆ, ಭಾರತೀಯರ ನೆಚ್ಚಿನ ದೀದಿ-ಅಕ್ಕ: ನಿವೇದಿತಾ. ವಿವೇಕಾನಂದರ ಶಿಷ್ಯಳಾಗಿ ನವಭಾರತದ ನಿರ್ಮಾಣಕಾರ್ಯದಲ್ಲಿ ಶ್ರಮಿಸಿದ ಈ ಐರಿಶ್ ಮಹಿಳೆಯ ಬದುಕು ವಿವೇಕಾನಂದರ ಚಿಂತನೆಗಳಿಗೆ ಜೀವಂತ ಭಾಷ್ಯ. ಐರಿಶ್ ಸ್ವಭಾವ ಅವಳಲ್ಲಿ ರಕ್ತಗತವಾಗಿತ್ತು. ಆತ್ಮಾಭಿಮಾನ, ಬಿಡದೆ ಹೋರಾಡುವ ಛಲ, ಮನವರಿಕೆಯಾಗದ ಹೊರತು ಯಾವುದನ್ನೂ ಒಪ್ಪಿಕೊಳ್ಳದ ಮನೋಭಾವ- ಇವಳ ವ್ಯಕ್ತಿತ್ವದ ಪ್ರಮುಖ ಅಂಶಗಳು. ಸ್ವಾಮಿ ವಿವೇಕಾನಂದರನ್ನು ಕುರಿತು ಮಹರ್ಷಿ ಅರವಿಂದರು, ‘ನೀನು ಭಾರತವನ್ನು ಅಧ್ಯಯನ ಮಾಡಬೇಕು ಎಂದಿದ್ದರೆ ವಿವೇಕಾನಂದರನ್ನು ಅಧ್ಯಯನ ಮಾಡು’ ಎಂದಿದ್ದರಂತೆ. ಅಂತೆಯೇ ವಿವೇಕಾನಂದರನ್ನು ಅಧ್ಯಯನ ಮಾಡಬೇಕಾದರೆ ಅವರ ಸಿಂಹ-ಸಿಂಹಿಣಿ ಶಿಷ್ಯವೃಂದವನ್ನು ಅಧ್ಯಯನ ಮಾಡಬೇಕು ನಾವು. ವಿವೇಕಾನಂದರು ಎಂದೂ ದುರ್ಬಲರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಲಿಲ್ಲ, ಅಳ್ಳೆದೆಯವರಿಂದ ಬಹಳ ದೂರವೇ ಉಳಿಯುತ್ತಿದ್ದರು ಅವರು. ತಮ್ಮ ಶಿಷ್ಯರಿಂದಂತೂ ಅವರು ಅಮಿತ ಬಲ, ಪರಾಕ್ರಮ, ಪುರುಷತ್ವವನ್ನು ಬಯಸುತ್ತಿದ್ದರು. ನಿವೇದಿತಾ ವಿವೇಕಾನಂದರ ‘ಮಾನಸಪುತ್ರಿ’ ಎಂದೇ ಹೇಳಬೇಕು. ವಿವೇಕಾನಂದ ಮತ್ತು ಅವರ ಆಧ್ಯಾತ್ಮಿಕ ಪುತ್ರಿಯ ನಡುವಣ ಪ್ರೀತಿ, ವಾತ್ಸಲ್ಯ, ಸಂಘರ್ಷ, ಸಮರ್ಪಣೆ – ಇವುಗಳ ಸುತ್ತ ಬೆಳೆದದ್ದು ಸೇವೆ-ಸಾಧನೆಗಳ ಯಶೋಗಾಥೆ. ಬದುಕಿಗೂ ಬಗ್ಗದೆ, ಸಾವಿಗೂ ಜಗ್ಗದೆ ಭಾರತಕ್ಕೆ ಅರ್ಪಿತವಾದ ಗುರು-ಶಿಷ್ಯರು ಇವರು. ನಿವೇದಿತಾಳನ್ನು ವಿವೇಕಾನಂದರು ಭಾರತಕ್ಕೆ ತಂದಾಗ ಅವಳೇನು ಕೂಸಲ್ಲ; ಪ್ರಬುದ್ಧೆ, ವಿದ್ಯಾವಂತೆ – ಮಿಗಿಲಾಗಿ ತಾರುಣ್ಯದ ಬಲ. ಆದರೆ ಸತ್ಯಾನ್ವೇಷಣೆಯ ಹಂಬಲ ಅವಳನ್ನು ಸ್ವಾಮಿ ವಿವೇಕಾನಂದರ ಪದತಲದಲ್ಲಿ ಕುಳ್ಳಿರಿಸಿತು. ಅವಳ ಬೆಳವಣಿಗೆ ಸಂಘರ್ಷಮಯವಾಗಿತ್ತು. ಹರಿತ ಪ್ರಶ್ನೆ–ಮೊನಚು ಉತ್ತರ; ಗುರುಶಿಷ್ಯರಿಬ್ಬರು ನೊಂದರು, ಬೆಂದರು, ಪರಿಪಕ್ವವಾದರು. ಸ್ವಾಮಿ ವಿವೇಕಾನಂದರ ನಿರ್ಯಾಣಾನಂತರ ಭಾರತದ ಯುವಕರಿಗೆ ನಿವೇದಿತೆ ’ಅಕ್ಕ ನಿವೇದಿತಾ’ ಆದಳು. ಕ್ರಾಂತಿಗೂ ಕಿಡಿಯಾದಳು. ಪ್ಲೇಗು, ಬರಗಾಲ ಎದುರಾದಾಗ ಸಾಮಾನ್ಯರ ಗುಡಿಸಲಲ್ಲಿ ಕುಳಿತು ಸಾವನ್ನು ಬರಮಾಡಿಕೊಂಡಳು. ಪೊರಕೆ ಹಿಡಿದು ಕೋಲ್ಕತ್ತದ ರಸ್ತೆ ಗುಡಿಸಿದಳು, ಕಸದ ರಾಶಿಗಳಿಗೆ ಕೈ ಹಚ್ಚಿ ದೂರ ಒಗೆದಳು. ಇವಳ ತ್ಯಾಗ-ಸೇವೆಯ ವೈಶಾಲ್ಯ ಕಂಡ ಭಾರತ ಗೌರವದಿಂದ ತಲೆ ಬಾಗಿತು; ಅತ್ತ ಬ್ರಿಟಿಷ್ ಸರ್ಕಾರ ಬೆಚ್ಚಿತ್ತು. ಸ್ವಾಮಿ ವಿವೇಕಾನಂದರ ಮತ್ತೊಬ್ಬ ಶಿಷ್ಯೆ ಜೋಸೆಷಿನ್ ಮೆಕ್‌ಲಾಡ್ ಒಮ್ಮೆ ಸ್ವಾಮೀಜಿಯವರನ್ನು ಪ್ರಶ್ನಿಸಿದ್ದಳಂತೆ: ‘ಸ್ವಾಮೀಜಿ ನಿಮಗಾಗಿ ನಾನೇನು ಮಾಡಬಹುದು, ಹೇಳಿ?’ ಅದಕ್ಕೆ ಸ್ವಾಮೀಜಿಯವರ ಉತ್ತರ: ‘ಭಾರತವನ್ನು ಪ್ರೀತಿಸು.’ ನಿವೇದಿತಾ ಕೋಲ್ಕತ್ತದಲ್ಲಿ ಇಳಿದ ದಿನದಿಂದ ಕಡೆಗೆ ಡಾರ್ಜಿಲಿಂಗಿನಲ್ಲಿ 1911ರ ಅಕ್ಟೋಬರ್‌ನಲ್ಲಿ ಕೊನೆಯುಸಿರೆಳೆಯುವರೆಗೂ ಮಾಡಿದ್ದು ಅದನ್ನೇ. ಭಾರತವನ್ನು ಪ್ರೀತಿಸಿದಳು. ಎಷ್ಟು ಆಳವಾಗಿ ಪ್ರೀತಿಸಿದಳೆಂದರೆ ಕಡೆಗೆ ಬಂಗಾಳಿ ಯುವಕರು ಕ್ರಾಂತಿಯ ಹಾದಿ ಹಿಡಿಯುವಂತೆ ಸ್ಫೂರ್ತಿ ನೀಡುವಷ್ಟರ ಮಟ್ಟಿಗೆ ಆಕೆ ಭಾರತವನ್ನು ಪ್ರೀತಿಸಿದಳು. ಬ್ರಿಟಿಷರ ದಮನಕಾರಿ ಪ್ರವೃತ್ತಿಯಿಂದ ರೋಸಿಹೋದ ನಿವೇದಿತಾ ಹೇಳಿದಳು, ‘ಐರ‍್ಲೆಂಡಿನಲ್ಲಿ ಒಂದು ಮಾತಿದೆ - ‘ಬಾಂಬುಗಳನ್ನು ಬಳಸಿದ ಹೊರತು ಇಂಗ್ಲೆಂಡ್ ಬಗ್ಗುವುದಿಲ್ಲ.’ ಐರ‍್ಲೆಂಡಿನಲ್ಲಿ ಹುತಾತ್ಮರಾದವರನ್ನು ಆರಾಧಿಸುತ್ತೇವೆ. ಈ ತಲೆಮಾರಿನಲ್ಲಿ ಹುತಾತ್ಮರಾದವರು ನಿಮ್ಮಲ್ಲಿ ಯಾರಿದ್ದಾರೆ?’ ‘ದೇಶಕ್ಕಾಗಿ ಪ್ರಾಣವನ್ನರ್ಪಿಸಲು ಸಿದ್ಧ’ – ಎಂದು ಮುಂದೆ ಬಂದವರ ಕಣ್ಣಲ್ಲಿ ಕಣ್ಣಿಟ್ಟು ಕೇಳಿದಳು, ‘ನಿನಗೆ ಪಿಸ್ತೂಲು ಬಳಸಲು ಬರುತ್ತದೆಯೆ? ಗುಂಡು ಹಾರಿಸಬಲ್ಲೆಯಾ? ಬರುವುದಿಲ್ಲವೆ! ಹೋಗಿ ಕಲಿತುಕೊಂಡು ಬಾ!’ ದೇಶೀಯ ಒಳಜಗಳಗಳನ್ನು ಕಂಡರಾಗದು ಇವಳಿಗೆ. ನಮ್ಮನ್ನು ನಾವು ಹರಿದು ಚಿಂದಿ ಮಾಡಿಕೊಳ್ಳಲು ಇದು ಸಮಯವಲ್ಲ, ಒಗ್ಗಟ್ಟಾಗಿ ನಿಂತು ಹೋರಾಡಿ ಎಂದು ಕರೆಯಿತ್ತಳು ನಿವೇದಿತಾ. ಅರವಿಂದ ಘೋಷ್, ಜಗದೀಶಚಂದ್ರಬೋಸ್, ಅವನೀಂದ್ರನಾಥ ಠಾಗೋರ್, ಭೂಪೇಂದ್ರನಾಥ್ ದತ್ತ ಅವರಂತಹ ಮೇಧಾವಿಗಳನ್ನು ಮತ್ತು ಬಾರೀಂದ್ರ ಘೋಷ್, ಉಲ್ಲಾಸ್ಕರ ದತ್ ಅವರಂತಹ ಕ್ರಾಂತಿಕಾರಿಗಳನ್ನು ಸಲಹಿ ಪೋಷಿಸಿದವಳು ನಿವೇದಿತಾ. ’ಭಾರತಮಾತೆ’ ಇವಳ ಆರಾಧ್ಯ ದೈವ. ತನ್ನ ಇಷ್ಟದೈವದ ಸೇವೆಗಾಗಿ ಜೀವನವನ್ನು ನಿವೇದಿಸಿದಳು ನಿವೇದಿತಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.