ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್‌ ಕುಮಾರ್ ಫೋನ್‌ ಬೆಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಮುಂದೂಡಿರುವುದರಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಸೋಮವರ ರಾಜ್ಯದ ನಾನಾ ಭಾಗದ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಕರೆ ಮಾತನಾಡಿದರು. ಸುಮಾರು 14 ಮಂದಿಗೆ ಫೋನ್‌ ಮಾಡಿದ ಅವರುಪರೀಕ್ಷಾ ಸಿದ್ಧತೆ ಹಾಗೂ ಆರೋಗ್ಯದ ಕುರಿತು ವಿಚಾರಿಸಿದರು. ಶಿಕ್ಷಣ ಇಲಾಖೆ ವತಿಯಿಂದ ದೂರದರ್ಶನ ಮತ್ತು ಆಕಾಶವಾಣಿ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳ ಪೂರ್ವ ಸಿದ್ಧತೆಗೆ ಮಾರ್ಗದರ್ಶಿ ತರಗತಿಗಳನ್ನು ಇಷ್ಟರಲ್ಲಿಯೇ ಬಿತ್ತರಿಸಲಾಗುವುದು ಎಂದರು. ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾಡಬೇಕಾ, ಬೇಡವೇ’ ಎಂದು ಪ್ರತಿಯೊಬ್ಬ ಮಕ್ಕಳನ್ನು ಕೇಳಿದಾಗ, ‘ಪರೀಕ್ಷೆ ಬೇಕು ಸಾರ್, ನಾವು ಬರೆಯುತ್ತೇವೆ’ ಎಂದು ಅವರು ಹೇಳಿದರು. ಸಚಿವರೊಂದಿಗೆ ಮಾತನಾಡಿದ ಮಕ್ಕಳಲ್ಲಿ ನಾನಾ ಸಾಮಾಜಿಕ ಸ್ತರಗಳಿಗೆ ಸೇರಿದವರಿದ್ದರು. ‘ತಮ್ಮೆಲ್ಲರ ಇಚ್ಛೆಯಂತೆ ಯಾವುದೇ ಕಾರಣಕ್ಕೂ ಪರೀಕ್ಷೆ ನಡೆದೇ ನಡೆಯುತ್ತದೆ, ಯಾವುದೇ ವದಂತಿ ಹಾಗೂ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ಚೆನ್ನಾಗಿ ಓದಿಕೊಳ್ಳಿ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.