ಆನ್‌ಲೈನ್‌ ತರಗತಿ: ಸಂಕಷ್ಟ ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದಾಗಿ ರಾಜ್ಯದ ಬಹುತೇಕ ಎಲ್ಲ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಆನ್‌ಲೈನ್‌ ತರಗತಿಗಳನ್ನು ಆರಂಭಿಸಿವೆ. ಆದರೆ ಇಂಟರ್ನೆಟ್‌ ಸೌಲಭ್ಯವೇ ಇಲ್ಲದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದರ ಸಂಪೂರ್ಣ ಲಾಭ ಸಿಗುತ್ತಿಲ್ಲ. ಹಲವು ಕಾಲೇಜುಗಳು ಇದೀಗ ಸಿಇಟಿ, ನೀಟ್‌ ಕೋಚಿಂಗ್‌ ಅನ್ನು ಆನ್‌ಲೈನ್‌ನಲ್ಲೇ ಕೊಡುತ್ತಿದ್ದು, ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಲಾಕ್‌ಡೌನ್ ಇದ್ದರೂ ಮನೆಯಿಂದ ನಾಲ್ಕಾರು ಕಿ.ಮೀ.ದೂರ ಬಂದು ತರಗತಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಮೊಬೈಲ್‌ ಟವರ್‌ಗಳ ಸಿಗ್ನಲ್‌ಗಳು 2ರಿಂದ 3 ಕಿ.ಮೀ. ದೂರಕ್ಕೆ ಹೋಗುವಷ್ಟರಲ್ಲಿ ಸಾಮರ್ಥ್ಯ ಕಳೆದುಕೊಳ್ಳುತ್ತಿರುವುದೇ ಸಮಸ್ಯೆಯ ಮೂಲ. ‘ಸ್ನಾತಕೋತ್ತರ ಹಾಗೂ ಯುಜಿ ಪರೀಕ್ಷೆ ನಡೆಸುವುದಕ್ಕೆ ಮೊದಲು ಕನಿಷ್ಠ 15 ದಿನ ತರಗತಿ ನಡೆಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯ ಸರಿಪಡಿಸುವಂತೆ ಸಲಹೆ ನೀಡಿದ್ದೇನೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ ಅವರು ಹೇಳಿದರು. ಸರ್ಕಾರಿ ಸಿಇಟಿ–ನೀಟ್‌ಗೆ ಸಮಸ್ಯೆ ಇಲ್ಲ ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಿಡಿಎಫ್‌ ರೂಪದಲ್ಲಿ ಅಧ್ಯಾಯಗಳನ್ನು ಡೌನ್‌ಲೋಡ್‌ ಮಾಡುವ ವ್ಯವಸ್ಥೆ ರೂಪಿಸಿದ್ದೇವೆ. ನೆಟ್‌ವರ್ಕ್‌ ಇರುವಲ್ಲಿಗೆ ಬಂದು ಡೌನ್‌ಲೋಡ್ ಮಾಡಿ, ಬಳಿಕ ಆಫ್‌ಲೈನ್‌ನಲ್ಲೇ ಓದಿಕೊಳ್ಳುವ ವ್ಯವಸ್ಥೆ ಇರುವುದರಿಂದ ಸಮಸ್ಯೆ ಇಲ್ಲ. ಎಚ್ಚರಿಕೆಯಿಂದ ಪರೀಕ್ಷೆ ಮಾಡಿದ ಮೇಲಷ್ಟೇ ಸಿಇಟಿ–ನೀಟ್‌ ಆನ್‌ಲೈನ್ ತರಗತಿ ಆರಂಭಿಸಿದ್ದೇವೆ’ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌ ತಿಳಿಸಿದರು. ಸಿಇಟಿ–ನೀಟ್‌ ಕೋಚಿಂಗ್‌ನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಂತಹ ವ್ಯವಸ್ಥೆ ರೂಪಿಸಿದ್ದೇವೆ. ವಿವಿ ಪರೀಕ್ಷೆಗಳಿಗೆ ಮೊದಲು ತರಗತಿಗೆ ಸೂಚಿಸಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.