ಲಾಕ್‌ಡೌನ್: ಮಕ್ಕಳಿಗೆ ತರಗತಿ ಹೊರತಾದ ಕಲಿಕೆ ಕೊರೊನಾ ಹಾವಳಿಯಿಂದಾಗಿ ಮನೆಯೊಳಗೆ ಕೂತು ಮಕ್ಕಳಿಗೂ ಬೇಜಾರು. ಮಕ್ಕಳನ್ನು ಕಲಿಕಾ ಕಾರ್ಯದಲ್ಲಿ ನಿರತರಾಗಿರುವಂತೆ ಮಾಡುವುದೇ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಮಂತ್ರ4ಚೇಂಜ್ ಹೆಸರಿನಲ್ಲಿ ಮಕ್ಕಳಿಗೆ ಕಲೆಯಲ್ಲಿ ಒಲವು ಮೂಡುವಂತೆ ಶ್ರಮಿಸಲು ಮುಂದಾಗಿವೆ ಮಂತ್ರ ಸೋಷಿಯಲ್ ಸರ್ವಿಸಸ್ ಹಾಗೂ ತ್ವರಿತ ಫೌಂಡೇಶನ್. ಮಕ್ಕಳ ಅಭಿವ್ಯಕ್ತಿಗೆ ಕಲೆ ಪ್ರಮುಖ ಮಾಧ್ಯಮ. ಔಪಚಾರಿಕ ಶಿಕ್ಷಣವಿಲ್ಲದಿರುವ ಈ ದಿನಗಳಲ್ಲಿ ಸಂಗೀತ, ನೃತ್ಯ, ಪೇಟಿಂಗ್ ಮುಂತಾದ ಅನೌಪಚಾರಿಕ ಶಿಕ್ಷಣದಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸ್ವಯಂಸೇವಕರ ನೆರವು ಬೇಕಾಗಿದೆ ಎನ್ನುತ್ತಾರೆ ತ್ವರಿತ ಫೌಂಡೇಶನ್ ಸಂಸ್ಥಾಪಕಿ ಪ್ರಿಯಾಂಕಾ ಕೆ.ಮೋಹನ್ ಹಾಗೂ ಮಂತ್ರ ಸೋಷಿಯಲ್ ಸರ್ವಿಸಸ್ ಸಹ ಸಂಸ್ಥಾಪಕಿ ಖುಷ್ಬೂ ಅವಸ್ಥಿ. ಈಗ ಎರಡೂ ಸಂಸ್ಥೆಗಳು ಸೇರಿಕೊಂಡು, ಕರ್ನಾಟಕ, ಪಂಜಾಬ್ ಹಾಗೂ ಬಿಹಾರಗಳಲ್ಲಿ, ಚಟುವಟಿಕೆ ಆಧಾರಿತ ಕಲಿಕಾ ವಿಷಯಗಳನ್ನು ಬಡ ಸಮುದಾಯದ ಮಕ್ಕಳಿಗೆ ಒದಗಿಸಲು ಶ್ರಮಿಸುತ್ತಿವೆ. ಮನೆಯಲ್ಲಿ ಲಭ್ಯವಿರುವ ವಸ್ತುಗಳನ್ನೇ ಬಳಸಿಕೊಂಡು ಮಕ್ಕಳು ಹೊಸ ಚಟುವಟಿಕೆಯ ಕಲಿಕೆಯಲ್ಲಿ ತೊಡಗಿಕೊಳ್ಳುವುದು ಇದರ ಉದ್ದೇಶ. ಇದನ್ನು ಪ್ರೇರೇಪಿಸುವ ವಿಡಿಯೊಗಳನ್ನು ವಾಟ್ಸ್ಆ್ಯಪ್ ಮುಂತಾದ ಸಂವಹನ ಮಾಧ್ಯಮಗಳ ಮೂಲಕ ಶಿಕ್ಷಕರು ಹಾಗೂ ಪೋಷಕರಿಗೆ ರವಾನಿಸಲಾಗುತ್ತದೆ. ಮಕ್ಕಳು ಏನನ್ನು ಕಲಿತರು ಎಂಬುದನ್ನು ತಿಳಿಸಲು ಪೋಷಕರು ಕೂಡ ಅದರ ಫೋಟೋ, ವಿಡಿಯೊಗಳನ್ನು ಹಂಚಿಕೊಳ್ಳಬಹುದಾಗಿದೆ. ಶಿಕ್ಷಕರಿಗೂ ಹೊಸ ವಿಧಾನಗಳ ಅರಿವು ಇಲ್ಲಿ ದೊರೆಯುವಂತಾಗುತ್ತದೆ. ಕಲಾವಿದರು ಅಥವಾ ಕಲಾಪ್ರೇಮಿಗಳು 3ರಿಂದ 16 ವರ್ಷದ ಮಕ್ಕಳಿಗೆ ಸೂಕ್ತವಾಗಬಹುದಾದ ವಿಷಯಗಳನ್ನು ವಿವರಿಸುವ ಸರಳವಾದ ವಿಡಿಯೊ, ಆಡಿಯೊ ಅಥವಾ ಡಾಕ್ಯುಮೆಂಟ್‌ಗಳನ್ನು ಕಳುಹಿಸಿ, ಮಕ್ಕಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ತ್ವರಿತ ಫೌಂಡೇಶನ್‌ಗೆ ಇಮೇಲ್ (@.) ಮಾಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.