ಆನ್-ಲೈನ್ ಶಿಕ್ಷಣ: ‘ವಿದ್ಯಾವಿನ್’ ಶೈಕ್ಷಣಿಕ ಆಪ್‌ ಅಭಿಯಾನ ಬೆಂಗಳೂರು: ‘ಆನ್‌ಲೈನ್ ಶಿಕ್ಷಣದ ಕಲಿಕಾ ಗುಣಮಟ್ಟ ಅರಿಯುವ ಉದ್ದೇಶದಿಂದ ವಿದ್ಯಾವಿನ್- ಶೈಕ್ಷಣಿಕ ಆಪ್ ವಿದ್ಯಾಸಂಸ್ಥೆ ಕೈಗೆತ್ತಿಕೊಂಡಿರುವ ಅಭಿಯಾನಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬುಧವಾರ ಚಾಲನೆ ನೀಡಿದರು. ‘ಕೋವಿಡ್‌ನಿಂದಾಗಿ ಸಾಂಪ್ರದಾಯಿಕ ತರಗತಿಗಳು ಆರಂಭವಾಗದೇ ಕೇವಲ ಆನ್‌ಲೈನ್ ತರಗತಿಗಳು ನಡೆಯುತ್ತಿರುವ ಈ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಮತ್ತು ಅದರಲ್ಲಿರುವ ಸಾಧ್ಯತೆಗಳ ಕುರಿತು ಅರಿವು ಮೂಡಿಸಲು ವಿದ್ಯಾವಿನ್ ಸಂಸ್ಥೆ ರಾಜ್ಯದಾದ್ಯಂತ ಈ ಅಭಿಯಾನ ಕೈಗೊಂಡಿದೆ’ ಎಂದರು. ‘ಮಿಸ್ಡ್ ಕಾಲ್ (ಟೋಲ್‌ ಫ್ರೀ ನಂಬರ್‌– 18005724920) ನೀಡಿದ ತಕ್ಷಣವೇ ಪ್ರಶ್ನಾವಳಿ ಡೌನ್‌ಲೋಡ್ ಮಾಡುವ ವ್ಯವಸ್ಥೆ ಇದ್ದು, ಇದರಿಂದ ಮಕ್ಕಳ ಕಲಿಕೆಯ ಗುಣಮಟ್ಟ ತಿಳಿಯುವುದರೊಂದಿಗೆ ಪ್ರತಿ ಜಿಲ್ಲೆಯಲ್ಲಿ ಹೆಚ್ಚು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಪ್ರತಿಭಾವಂತ ವಿದ್ಯಾರ್ಥಿಗೆ ಟ್ಯಾಬ್ ಮತ್ತು ಪ್ರತಿ ಜಿಲ್ಲೆಯಲ್ಲಿ ಮೂವರಿಗೆ ಉಚಿತ ಆಪ್ ಆಧಾರಿತ ಶಿಕ್ಷಣ ನೀಡುವ ಯೋಜನೆ, ಹೆಚ್ಚೆಚ್ಚು ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಲು ಪ್ರೇರಣೆಯಾಗಿದೆ’ ಎಂದರು. ಸಂಸ್ಥೆಯ ಅಧ್ಯಕ್ಷ ಕೆ.ಆರ್. ಪ್ರಕಾಶ್ ಮಾತನಾಡಿ, ‘ಈ ಅಭಿಯಾನ ಎರಡು ತಿಂಗಳು ನಡೆಯಲಿದೆ. ಗುಣಮಟ್ಟದ ಪೂರಕ ಶಿಕ್ಷಣ ವ್ಯವಸ್ಥೆಯನ್ನು ಸಂಸ್ಥೆ ಕಲ್ಪಿಸಿಕೊಡಲಿದೆ’ ಎಂದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಲತಾ, ‘ಅಭಿಯಾನದಲ್ಲಿ ಭಾಗವಹಿಸುವ ಮಕ್ಕಳಿಗೆ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುವುದು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.