ಓದು ಕಲಿಸುವ ಸಮಯ ‘ನಮ್ಮ ಮಗು ಯಾವಾಗ್ಲೂ ಬರೀತಲೇ ಇರುತ್ತೆ. ಓದೋದೇ ಇಲ್ಲ’- ಇದು ಬಹಳ ಪೋಷಕರ ಮನದಾಳದ ನೋವು. ಹೌದು ಇತ್ತೀಚಿನ ಮಕ್ಕಳು ಬರವಣಿಗೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ಆದರೆ ಓದು ಎಂದರೆ ಅವರಿಗೆ ಒಂದು ರೀತಿಯ ಅಲರ್ಜಿ ಇದ್ದಂತೆ. ಬಹುತೇಕ ಮಕ್ಕಳು ತಮ್ಮ ತರಗತಿಯ ಪಠ್ಯವನ್ನು ಓದಲು ಹಿಂಜರಿಯುತ್ತಿರುವುದನ್ನು ಕಾಣಬಹುದು. ಇದಕ್ಕೆ ಕಾರಣಗಳು ಸ್ಪಷ್ಟ. ಪಠ್ಯದೊಂದಿಗಿನ ಅಂದರೆ ಅಕ್ಷರ/ಪದಗಳೊಂದಿಗಿನ ಸೀಮಿತ ಅನುಭವ, ಮಾತು ಮತ್ತು ಶ್ರವಣ ಸಮಸ್ಯೆಗಳು ಓದಿನ ಅನಾಸಕ್ತಿಗೆ ಕಾರಣವಾಗಿರಬಹುದು. ಇವುಗಳ ಜೊತೆಗೆ ಧ್ವನ್ಯಾಂಗಗಳ(ಗಂಟಲು, ತುಟಿ, ನಾಲಿಗೆಯಂತಹ ಅಂಗಗಳಿಂದ ಧ್ವನಿ ಉತ್ಪತ್ತಿಯಾಗುವುದು) ಪದಗಳಸ್ಪಷ್ಟತೆ ಇಲ್ಲದಿರುವುದೂ ಓದಿನ ಹಿನ್ನಡೆಗೆ ಕಾರಣವಾಗಿರುತ್ತದೆ. ಅಂದರೆ ಯಾವ ಅಕ್ಷರವನ್ನು ಹೇಗೆ ಉಚ್ಛರಿಸಬೇಕು? ಅಕ್ಷರಗಳ ಗುಚ್ಛವನ್ನು ಹೇಗೆ ಸಂಯೋಜಿಸಿಕೊಳ್ಳಬೇಕು? ಪದಗಳ ಜೋಡಣೆ ಹೇಗೆ ಮಾಡಿಕೊಳ್ಳಬೇಕು? ಧ್ವನಿ ಏರಿಳಿತದ ತಂತ್ರಗಾರಿಕೆ ಹೇಗೆ? ಎಂಬ ಮೂಲ ಸಂಗತಿಗಳು ಗೊತ್ತಿಲ್ಲದಿದ್ದಾಗ ಮಗು ಓದಿನ ಬಗ್ಗೆ ಸಹಜವಾಗಿ ನಿರಾಸಕ್ತಿ ಹೊಂದುತ್ತದೆ. ಓದುವಿಕೆ ಎಂದರೆ? ಓದುವಿಕೆ ಎಂದರೆ ಕೈಬರಹ ಅಥವಾ ಮುದ್ರಿತ ರೂಪದ ಅಕ್ಷರ/ಪದಗಳಿಗೆ ಧ್ವನಿ ರೂಪ ನೀಡುವುದು. ಓದುವಿಕೆಯು ಅಕ್ಷರ/ಪದಗಳ ಗುರುತಿಸುವಿಕೆ, ಗ್ರಹಿಕೆ, ನಿರರ್ಗಳತೆ ಮತ್ತು ಪ್ರೇರಣೆಯನ್ನು ಒಳಗೊಂಡ ಬಹುಮುಖಿ ಪ್ರಕ್ರಿಯೆಯಾಗಿದೆ. ಓದುವಿಕೆ ಕೇವಲ ಒಮ್ಮುಖ ಪ್ರಕ್ರಿಯೆಯಲ್ಲ. ಅದೊಂದು ಸಂಕೀರ್ಣ ಪ್ರಕ್ರಿಯೆ. ಓದುವಿಕೆಗೆ ಮಾತನಾಡುವ ಕೌಶಲ ಬೇಕಾಗುತ್ತದೆ. ಕೈಬರಹ ಅಥವಾ ಮುದ್ರಿತ ರೂಪದ ಅಕ್ಷರ/ಪದಗಳಿಗೆ ಉಚ್ಚಾರಣೆ ನೀಡುವುದು. ಓದುವಿಕೆ ಒಂದು ಉತ್ಪಾದಕ ಕೌಶಲ. ಇಲ್ಲಿ ಮಾಹಿತಿಯನ್ನು ವೈಯಕ್ತಿಕವಾಗಿ ಸ್ವೀಕರಿಸುತ್ತೇವೆ ಮತ್ತು ಮಾಹಿತಿಯನ್ನು ಸಾಮೂಹಿಕವಾಗಿ ರವಾನಿಸುತ್ತೇವೆ. ‌ಓದು ಯಾಕೆ ಮುಖ್ಯ? ಓದು ಒಂದು ಜೀವನಾವಶ್ಯಕ ಕೌಶಲ. ಹಾಗಂತ ಓದಲು ಬಾರದವರೆಲ್ಲ ದಡ್ಡರಲ್ಲ. ಓದಲು ಬಾರದ ಅನೇಕರು ವಿಶ್ವವಿಖ್ಯಾತರಾದ ಉದಾಹರಣೆಗಳಿವೆ. ಆದಾಗ್ಯೂ ವೈಯಕ್ತಿಕ ಕಲಿಕೆಯ ಭಾಗವಾಗಿ ಓದುಗಾರಿಕೆ ತುಂಬಾ ಮಹತ್ವ ಪಡೆದಿದೆ. ಭಾಷಾ ಕೌಶಲವನ್ನು ಅಭಿವೃದ್ದಿಪಡಿಸಿಕೊಳ್ಳಲು ಓದುವಿಕೆ ತುಂಬಾ ಅಗತ್ಯವಾಗಿದೆ. ಸ್ವಯಂ ಚಿತ್ರಣ ಅಭಿವೃದ್ಧಿಪಡಿಸಿಕೊಳ್ಳಲು ಓದುವಿಕೆ ಮೂಲಭೂತ ಕೌಶಲವಾಗಿದೆ. ಭವಿಷ್ಯದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಓದು ತುಂಬಾ ಮುಖ್ಯ. ಮಗು ಓದಲು ಕಲಿಯುವ ವಯಸ್ಸು ಪ್ರತಿ ಮಗುವಿನ ಗ್ರಹಿಸುವ ಸಾಮರ್ಥ್ಯ ಬೇರೆ ಬೇರೆಯಾಗಿರುವುದರಿಂದ ಓದು ಕಲಿಯುವ ವಯಸ್ಸೂ ಸಹ ಮಗುವಿನಿಂದ ಮಗುವಿಗೆ ಭಿನ್ನವಾಗಿ-ರುತ್ತದೆ. ಹಾಗಾಗಿ ಪ್ರತಿ ಮಗುವೂ ತನ್ನದೇ ಆದ ವೇಗದಲ್ಲಿ ಓದುವ ಕೌಶಲವನ್ನು ಅಭಿವೃದ್ದಿಪಡಿಸಿಕೊಳ್ಳುತ್ತದೆ. ಕೆಲವು ಮಕ್ಕಳು ಇತರರಿಗಿಂತ ವೇಗವಾಗಿ ಓದಲು ಕಲಿಯುತ್ತಾರೆ. ಮಗು ಸಾಮಾನ್ಯವಾಗಿ ಎರಡನೇ ವಯಸ್ಸಿಗೆ ಕೆಲವು ಪದಗಳನ್ನು ಮಾತನಾಡುವ ಕೌಶಲ ಕಲಿತಿರುತ್ತದೆ. ಪಾಲಕರು ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಶಿಶುವಿಹಾರ ಅಥವಾ ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಕೆಲವು ಅಕ್ಷರಗಳನ್ನು ಗುರುತಿಸುವ ಕೌಶಲ ಇರುತ್ತದೆ. ಆದರೆ ಸ್ಪಷ್ಟವಾಗಿ ಓದಲು ಸಾಧ್ಯವಾಗುವುದಿಲ್ಲ. ಒಂದು ಅಥವಾ ಎರಡನೇ ತರಗತಿಯಲ್ಲಿ ಬಹುತೇಕ ಮಕ್ಕಳು ಅಕ್ಷರ/ಪದಗಳನ್ನು ಧ್ವನಿಸುತ್ತಾರೆ. ಇದು ಓದಿನ ಮೊದಲ ಹಾಗೂ ಯಾಂತ್ರಿಕ ಹಂತ ಎನ್ನಬಹುದು. ಇಲ್ಲಿಂದ ಮಗು ಹಂತ ಹಂತವಾಗಿ ಪದ, ಪದಪುಂಜ ಹಾಗೂ ವಾಕ್ಯಗಳನ್ನು ಓದಿ ಅರ್ಥ ಗ್ರಹಿಸಲು ಪ್ರಾರಂಭಿಸುತ್ತದೆ. ಓದಲು ತೊಂದರೆ ಏಕೆ? ಓದು ವೈವಿಧ್ಯಮಯ ಭಾಷಾ ಚಟುವಟಿಕೆಯಾಗಿದೆ. ಕೆಲವು ಮಕ್ಕಳಿಗೆ ಓದು ತುಂಬಾ ಸವಾಲಾಗಿರುತ್ತದೆ. ಹಾಗಂತ ಅವರು ದಡ್ಡರೆಂದಲ್ಲ. ಅವರ ಓದಿನ ನ್ಯೂನತೆಗೆ ಅನೇಕ ಕಾರಣಗಳಿರುತ್ತವೆ. ಮನೆ ಭಾಷೆ ಹಾಗೂ ಶಾಲಾ ಭಾಷೆ ಬೇರೆ ಬೇರೆಯಾಗಿರುವುದು, ಉಚ್ಚಾರ ದೋಷ, ಅಕ್ಷರ ಗುರುತಿಸಲು ತೊಂದರೆ, ಅಕ್ಷರಗಳಿಗೆ ಶಬ್ದ ಹೊಂದಿಸುವಲ್ಲಿ ವಿಫಲತೆ, ಕಾಗುಣಿತಗಳ ಸ್ಪಷ್ಟತೆ ಇಲ್ಲದಿರುವುದು, ಗ್ರಹಿಸುವ ಸಾಮರ್ಥ್ಯದ ಕೊರತೆ, ನಿರರ್ಗಳತೆ ಇಲ್ಲದಿರುವುದು, ಮನೆಯಲ್ಲಿ ಪೂರಕ ವಾತಾವರಣ ಇಲ್ಲದಿರುವುದು ಸೇರಿದಂತೆ ಮುಂತಾದ ಕಾರಣಗಳಿಗಾಗಿ ಕೆಲವು ಮಕ್ಕಳು ಓದುವ ಪ್ರಕ್ರಿಯೆಯಲ್ಲಿ ಹಿಂದೆ ಬೀಳುತ್ತಾರೆ. ಓದು ಕಲಿಕೆಗೆ ಹೀಗಿರಲಿ ಸಹಾಯ.. ಮಕ್ಕಳು ಓದು ಕಲಿಯಲು ಪಾಲಕರ ಸಹಾಯ ತುಂಬಾ ಅತ್ಯಗತ್ಯ. ಇದಕ್ಕೆ ಪಾಲಕರು ಸಾಕ್ಷರರು ಆಗಿರಬೇಕೆಂದೇನಿಲ್ಲ. ಸಾಮಾನ್ಯ ಜ್ಞಾನ ಇದ್ದರೆ ಸಾಕು. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಅಭಿವೃದ್ದಿಗೊಳಿಸಬಹುದು. ಅದು ಹೇಗೆ? ಇಲ್ಲಿದೆ ಟಿಪ್ಸ್‌. *ಪ್ರಾರಂಭದಲ್ಲಿ ಮಕ್ಕಳಿಗೆ ಕೆಲವು ಸರಳ ಚಿತ್ರಗಳನ್ನು ತೋರಿಸಿ ಹೆಸರಿಸಲು ಹೇಳಿ. ನಂತರ ಅಕ್ಷರಗಳನ್ನು ತಿಳಿಸಿ. *ಮೂಲ ಅಕ್ಷರಗಳಿಂದ ಸರಳ ಪದಗಳನ್ನು ರಚಿಸಿ ಓದಲು ತಿಳಿಸಿ. ನಂತರ ಸಂಕೀರ್ಣ ಪದಗಳಿರಲಿ. *ಮಕ್ಕಳಿಗೆ ಓದಲು ಹೇಳುವ ಮೊದಲು ಪಾಲಕರು ಪುಸ್ತಕ ಹಿಡಿದು ಕೂತರೆ, ಮಕ್ಕಳು ಓದಲು ಪ್ರಾರಂಭಿಸುತ್ತಾರೆ. *ಮಕ್ಕಳಿಗೆ ಓದುವ ವಿವಿಧ ಆಟಗಳನ್ನು ಆಡಿಸಿರಿ. ಕೆಲಸ ಮಾಡುವಾಗ, ರಸ್ತೆಯಲ್ಲಿ ನಡೆಯುವಾಗ, ಮಗು ಗಮನಿಸುವ ನಕ್ಷೆ, ಸೂಚನಾ ಫಲಕ, ಅಂಗಡಿಗಳ ನಾಮಫಲಕ ಹೀಗೆ ವಿವಿಧ ಫಲಕಗಳನ್ನು ಓದಲು ಪ್ರೇರೇಪಿಸಿ. *ಮಗುವಿನೊಡನೆ ಪಠ್ಯದಲ್ಲಿನ ಪ್ರಾಸಬದ್ಧ ಪದ ಹುಡುಕುವ ಆಟ ಆಡಿರಿ. *ವಿವಿಧ ಸ್ವರೂಪದ ಕೈಬರಹಗಳನ್ನು ನೀಡಿ ಓದಲು ಪ್ರೇರೇಪಿಸಿ. *ಕಾರ್ಟೂನ್/ಕಾಮಿಕ್ಸ್‌ನಂತಹ ಕಥೆ ಪುಸ್ತಕಗಳನ್ನು ತಂದು ಕೊಟ್ಟು ಓದಲು ತಿಳಿಸಿ. *ಮಗುವಿನ ಓದುವ ಸಾಮರ್ಥ್ಯ ಬೆಳೆದಂತೆಲ್ಲಾ ವಿವಿಧ ಕಥೆ, ಕಾವ್ಯ, ಕಿರು ನಾಟಕ, ಜೀವನಚರಿತ್ರೆಗಳನ್ನು ಓದಿಸುವ ಮೂಲಕ ಹೆಚ್ಚುವರಿ ಓದಿನ ಪ್ರೋತ್ಸಾಹ ನೀಡಿ. *ಮಕ್ಕಳಲ್ಲಿ ಉಚ್ಚಾರ ದೋಷವಿದ್ದರೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿ. *ದ್ವಂದ್ವ ಓದಿನ ಸಮಸ್ಯೆ(ಡಿಸ್ಲೆಕ್ಸಿಯಾ) ಇರುವ ಮಕ್ಕಳಿಗೆ ಅಕ್ಷರ/ಪದಗಳ ಸ್ಪಷ್ಟತೆ ಮೂಡಿಸಿ. *ವಾಕ್ಯಗಳನ್ನು ಸರಾಗವಾಗಿ ಹಾಗೂ ಧ್ವನಿಯ ಏರಿಳಿತದೊಂದಿಗೆ ಓದಲು ಉತ್ತೇಜಿಸಿ. *ಧ್ವನಿಯ ಏರಿಳಿತಕ್ಕೆ ವಿವಿಧ ಲೇಖನ ಚಿಹ್ನೆಗಳ ಪರಿಚಯ ಮಾಡಿಸಿ, ಅವುಗಳ ಬಳಕೆಯ ವಿಧಾನ ತಿಳಿಸಿ. *ಸಾಧ್ಯವಾದರೆ ಶಾಲೆಯ ಭಾಷೆಯನ್ನು ಮನೆಯಲ್ಲಿ ಅನುಸರಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.