‘ಮೂಲ ವಿಜ್ಞಾನ’ದಲ್ಲಿ ಇಂಟಿಗ್ರೇಟೆಡ್‌ ಎಂಎಸ್‌ಸಿ ಕೇಂದ್ರ ಸರ್ಕಾರ ಮೂಲ ವಿಜ್ಞಾನದಲ್ಲಿ ಅತ್ಯುತ್ತಮ ಸಂಶೋಧಕ ಸಮೂಹ ನಿರ್ಮಾಣಕ್ಕಾಗಿ 2007ರಲ್ಲಿ ಎರಡು ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿತು. ಅವುಗಳೆಂದರೆ, ಒಡಿಶಾದ ಭುವನೇಶ್ವರದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ರಿಸರ್ಚ್ () ಮತ್ತು ಮುಂಬೈನಲ್ಲಿರುವ ಆಟೊಮಿಕ್ ಎನರ್ಜಿ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಬೇಸಿಕ್ ಸೈನ್ಸ್ (). ಈ ಸಂಸ್ಥೆಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಗಳೊಂದಿಗೆ ಐದು ವರ್ಷಗಳ ಅವಧಿಯಲ್ಲಿ ಸಂಯೋಜಿತ (ಇಂಟಿಗ್ರೇಟೆಡ್‌) ಎಂಎಸ್‌ಸಿ ಪದವಿ ಕಲಿಯಲು ಅವಕಾಶವಿದೆ. ಈ ಶಿಕ್ಷಣ ಸಂಸ್ಥೆಗಳು ಪ್ರಸಕ್ತ ಸಾಲಿನ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಮೇ 18 ಕೊನೆಯ ದಿನವಾಗಿದೆ. ಶೈಕ್ಷಣಿಕ ಅರ್ಹತೆ 2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ಹಾಗೂ ಪ್ರಸಕ್ತ (2021–22) ಸಾಲಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯಲ್ಲಿ ಶೇ 60ರಷ್ಟು ಅಂಕ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಶೇ 55ರಷ್ಟು ಅಂಕವನ್ನು ಪಡೆದಿರಬೇಕು. ಸಾಮಾನ್ಯ ವರ್ಗದ ‌ಅಭ್ಯರ್ಥಿಗಳು 1ನೇ ಆಗಸ್ಟ್‌, 2002ರ ನಂತರ ಜನಿಸಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಪ್ರವೇಶ ಪ್ರಕ್ರಿಯೆ ಎನ್‌ಐಎಸ್ಇಆರ್ ಮತ್ತು ಸಿಇಬಿಎಸ್‌ಗಳ ಪ್ರವೇಶಕ್ಕಾಗಿ ನ್ಯಾಷನಲ್ ಎಂಟ್ರೆನ್ಸ್ ಸ್ಕ್ರೀನಿಂಗ್‌ ಟೆಸ್ಟ್ () ಎಂಬ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಭೌತಶಾಸ್ತ್ರ, ಜೀವಶಾಸ್ತ್ರ, ರಾಸಾಯನ ಶಾಸ್ತ್ರ ಮತ್ತುಗಣಿತಶಾಸ್ತ್ರ ಪ್ರತಿ ವಿಭಾಗದಲ್ಲಿ 50 ಪ್ರಶ್ನೆಗಳಿರುತ್ತವೆ. ಒಟ್ಟು 200 ಅಂಕಗಳ ಒಂದು ಪತ್ರಿಕೆಯಿರುತ್ತದೆ. ಕಂಪ್ಯೂಟರ್ ಆಧಾರಿತ ಬಹು ಆಯ್ಕೆ ಮಾದರಿಯ ಈ ಪರೀಕ್ಷೆಯು 3 ಗಂಟೆ 30 ನಿಮಿಷದ ಕಾಲವಧಿಯದ್ದಾಗಿದೆ. ಈ ವರ್ಷದ ಪ್ರವೇಶ ಪರೀಕ್ಷೆ ಜೂನ್ 18ರಂದು, ದೇಶದಾದ್ಯಂತ 115 ಪರೀಕ್ಷೆ ಕೇಂದ್ರಗಳಲ್ಲಿ ನಡೆಯಲಿದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಮತ್ತು ಮೈಸೂರಿನ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಎರಡೂ ಸಂಸ್ಥೆಗಳಲ್ಲಿರುವ ಕೋರ್ಸ್‌ಗಳ ಪ್ರವೇಶಕ್ಕೆ 257 ಅಭ್ಯರ್ಥಿಗಳಿಗಷ್ಟೇ ಅವಕಾಶ. ಇವುಗಳಲ್ಲಿ ಶೇ 27 ಸ್ಥಾನಗಳು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ, ಶೇ 15ರಷ್ಟು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಹಾಗೂ ಶೇ 7.5ರಷ್ಟು ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ‌ ಮೀಸಲಿಡಲಾಗಿದೆ. ಪರೀಕ್ಷಾ ಸಿದ್ಧತೆ ಸಿಬಿಎಸ್‌ಸಿ ಪರೀಕ್ಷೆ ಮಂಡಳಿಯ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯಕ್ರಮವನ್ನು ಆಧರಿಸಿ ಪ್ರವೇಶ ಪರೀಕ್ಷೆ ನಡೆಯುತ್ತದೆ. ‘ – 22 ’ ನಲ್ಲಿ ಪ್ರವೇಶ ಪರೀಕ್ಷೆ ಪಠ್ಯಕ್ರಮ ಹಾಗೂ ಕಳೆದ ಐದು ವರ್ಷದ ಹಿಂದಿನ ಪ್ರಶ್ನೆ ಪತ್ರಿಕೆಗಳಿವೆ. ಈ ಪರೀಕ್ಷೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳಾದ ಜೆಇಇ / ಎನ್ಇಇಟಿ ಪರೀಕ್ಷಗಳಿಗಿಂತ ಸ್ವಲ್ಪ ಭಿನ್ನವಾಗಿದ್ದು, ವಿದ್ಯಾರ್ಥಿಗಳಲ್ಲಿರುವ ಮೂಲ ವಿಜ್ಞಾನದ ಬಗೆಗಿನ ಆಳವಾದ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ. ಪ್ರವೇಶ ಪರೀಕ್ಷೆಯಲ್ಲಿ ನಾಲ್ಕು ವಿಭಾಗಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಮೂರು ವಿಭಾಗದ ಅಂಕಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮೂರು ವಿಷಯಗಳಲ್ಲಿ ಹೆಚ್ಚು ಅಂಕಗಳಿಸಲು ಪ್ರಯತ್ನಿಸಬೇಕು. ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು ಅಧಿಕೃತ ಪಠ್ಯಕ್ರಮಕ್ಕೆ ಅನುಗುಣವಾಗಿ ಪ್ರೌಢಶಾಲಾ ಹಂತದ ವಿಜ್ಞಾನ ವಿಷಯ ಹಾಗೂ ಸಿಬಿಎಸ್‌ಸಿಯ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಪುಸ್ತಕಗಳನ್ನು ಅಭ್ಯಸಿಸಬೇಕು. ಈ ಪ್ರವೇಶ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಹೆಚ್ಚು ತರಬೇತಿ ಕೇಂದ್ರಗಳು ಲಭ್ಯವಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ಲಭ್ಯವಿರುವ ಡಿಜಿಟಲ್‌ ಮಾಹಿತಿಯ ಜೊತೆಗೆ, ಹಿಂದಿನ ಪ್ರಶ್ನೆ ಪತ್ರಿಕೆಗಳು ಹಾಗೂ ಅಧ್ಯಯನ ಸಾಮಗ್ರಿಗಳನ್ನುಬಳಸಿಕೊಂಡು ಪ್ರವೇಶ ಪರೀಕ್ಷೆಗೆ ಸ್ವಯಂ ಸಿದ್ಧತೆ ಮಾಡಿಕೊಳ್ಳಬೇಕು. ಕೋರ್ಸ್‌, ಪ್ರವೇಶ ಪರೀಕ್ಷೆ ಕುರಿತ ಹೆಚ್ಚಿನ ಮಾಹಿತಿಗೆ ://../ ಜಾಲತಾಣ ನೋಡಿ. ಇಂಟಿಗ್ರೇಟೆಡ್‌ ಪದವಿಯ ವೈಶಿಷ್ಟ್ಯ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿರುವ ವಿವಿಗಳಲ್ಲೂ ಇದೇ ರೀತಿಯ ಇಂಟಿಗ್ರೇಟೆಡ್‌ ಪದವಿ ಕೋರ್ಸ್ ಇದೆ. ಆದರೆ,ಎನ್.ಇ.ಎಸ್.ಟಿ. ಪ್ರವೇಶ ಪರೀಕ್ಷೆಯ ಮೂಲಕ ನೈಸರ್‌, ಸೈಬ್ಸ್‌ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಕ್ಕೆ ಆಯ್ಕೆಯಾದವರಿಗೆ, ಆರಂಭದಿಂದ ಕೋರ್ಸ್‌ ಪೂರ್ಣಗೊಳಿಸುವವರೆಗೂ ಉಚಿತ ಶಿಕ್ಷಣ ನೀಡಲಾಗುತ್ತದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರದ ಆಟೊಮಿಕ್ ಎನರ್ಜಿ ವಿಭಾಗದ ‘ದಿಶಾ’ ಕಾರ್ಯಕ್ರಮದ ಅಡಿಯಲ್ಲಿ ₹60,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅದರೊಂದಿಗೆ ಪ್ರತಿ ವರ್ಷ ₹20,000 ಸಮ್ಮರ್ ಇಂಟರ್ನ್‌ಶಿಫ್ ಸಹಾಯಧನ ನೀಡಲಾಗುತ್ತದೆ. ಇದು ಇಂಟಿಗ್ರೇಟೆಡ್ ಪದವಿಯ ವೈಶಿಷ್ಟ್ಯ. ಅಂತರರಾಷ್ಟ್ರೀಯ ಗುಣಮಟ್ಟದ ಬೋಧನಾ ಮತ್ತು ಸಂಶೋಧನಾ ಸೌಲಭ್ಯವಿರುವ ಈ ಸಂಸ್ಥೆಗಳಲ್ಲಿಹೆಚ್ಚು ಅಂಕಗಳೊಂದಿಗೆ ಕೋರ್ಸ್ ಪೂರೈಸಿದವರಿಗೆ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಲ್ಲಿ ನೇರ ಉದ್ಯೋಗಾವಕಾಶ ದೊರೆಯುತ್ತದೆ. ಜೊತೆಗೆ, ಸರ್ಕಾರಿ ಹಾಗೂ ಖಾಸಗಿ ವಲಯದಲ್ಲೂ ಉತ್ತಮ ಉದ್ಯೋಗಾವಕಾಶವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.